ಝೆನ್ ಕಥೆಗಳು: ಬೌದ್ಧ ಸನ್ಯಾಸಿ ತೋಳಿನಲ್ಲಿ ಯುವತಿ... ಮತ್ತೊಮ್ಮೆ ಮಗದೊಮ್ಮೆ ಯೋಚಿಸುವಂತೆ ಮಾಡುವ 4 ಝೆನ್ ಕಥೆಗಳನ್ನು ಓದಿ
Zen stories: ಝೆನ್ ಕಥೆಗಳು ಸರಳವಾಗಿ ಕಂಡರೂ ಆಳವಾದ ಅರ್ಥವನ್ನು ಹೊಂದಿರುತ್ತವೆ. ಇವು ನಮ್ಮನ್ನು ಮತ್ತೊಮ್ಮೆ, ಮಗದೊಮ್ಮೆ ಯೋಚಿಸುವಂತೆ ಮಾಡುತ್ತವೆ. ಇಲ್ಲಿ ನದಿಯಲ್ಲಿ ಸಿಕ್ಕ ಯುವತಿ, ಬಟ್ಟಲು, ಕಲಿಯಲು ಬೇಕಾದ ಸಮಯ, ಸುಂದರವಾದ ಪಟ್ಟಣ ಎಂಬ ನಾಲ್ಕು ಝೆನ್ ಕಥೆಗಳಿವೆ.

Zen stories: ಬೌದ್ಧ ಸನ್ಯಾಸಿಗಳಿಗೆ ಸಂಬಂಧಿಸಿದ ಝೆನ್ ಕಥೆಗಳು ಸಾಕಷ್ಟು ಅರ್ಥಗಳನ್ನು ಹೊಂದಿರುತ್ತವೆ. ಝೆನ್ ಕಥೆಗಳು ಸಾಮಾನ್ಯವಾಗಿ ಪುಟ್ಟದಾಗಿರುತ್ತವೆ. ಸರಳ ಸಂಭಾಷಣೆ, ಪ್ರಶ್ನೆ, ಹೇಳಿಕೆಗಳ ರೂಪದಲ್ಲಿ ಇರುತ್ತವೆ. ಝೆನ್ ಕಥೆಗಳು ಮೇಲ್ನೋಟಕ್ಕೆ ಸರಳವಾಗಿ ಕಾಣಿಸಬಹುದು. ಆದರೆ, ಅವು ಗುಪ್ತ ಅರ್ಥಗಳನ್ನು ಹೊಂದಿರುತ್ತವೆ. ಸಾಮಾನ್ಯ ಸಂಭಾಷಣೆಯಂತೆ ತೋರುವ ವಾಕ್ಯಗಳು ಕೂಡ ಆಳವಾದ ಅರ್ಥವನ್ನು ಹೊಂದಿರುತ್ತವೆ. ಇಲ್ಲಿ ಕೆಲವು ಝೆನ್ ಕಥೆಗಳನ್ನು ನೀಡಲಾಗಿದೆ.
ಝೆನ್ ಕಥೆ: ನದಿಯಲ್ಲಿ ಸಿಕ್ಕ ಯುವತಿ
ಹಿರಿಯ ಬೌದ್ಧ ಸನ್ಯಾಸಿ ಮತ್ತು ಕಿರಿಯ ಸನ್ಯಾಸಿಗಳು ಜತೆಯಾಗಿ ಪ್ರಯಾಣಿಸುತ್ತಿದ್ದರು. ಒಂದು ಕಡೆ ಅವರು ನದಿ ದಾಟಬೇಕಿತ್ತು. ಈ ಸನ್ಯಾಸಿಗಳು ನದಿಯನ್ನು ದಾಟಲು ಪ್ರಯತ್ನಿಸುವಾಗ ಅಲ್ಲೊಬ್ಬಳು ಯುವತಿ ನದಿ ದಾಟಲು ಪ್ರಯತ್ನಿಸುತ್ತಿದ್ದಳು. ಆದರೆ, ಆಕೆಗೆ ನದಿ ದಾಟಲು ಭಯವಾಗಿ ಈ ಸನ್ಯಾಸಿಗಳ ಬಳಿ "ನನಗೆ ನದಿ ದಾಟಲು ಸಹಾಯ ಮಾಡಿ" ಎಂದು ಕೇಳಿದಳು.
ಕಿರಿಯ ಸನ್ಯಾಸಿಗಳಿಬ್ಬರು ಮುಖ ಮುಖ ನೋಡಿಕೊಂಡರು. ಹೆಣ್ಣನ್ನು ಮುಟ್ಟಬಾರದು ಎಂದು ನಿಯಮವಿತ್ತು. ಹೀಗಾಗಿ, ಅವರು ಆಕೆಗೆ ಸಹಾಯ ಮಾಡಲು ಹಿಂಜರಿದರು.
ಈ ಸಮಯದಲ್ಲಿ ಹಿರಿಯ ಸನ್ಯಾಸಿ ಏನೂ ಮಾತನಾಡದೆ ಆ ಯುವತಿಯನ್ನು ತೋಳಿನಲ್ಲಿ ಎತ್ತಿಕೊಂಡು ನದಿ ದಾಟಿಸಿದರು. ಸನ್ಯಾಸಿಗಳು ತಮ್ಮ ಪ್ರಯಾಣ ಮುಂದುವರೆಸಿದರು.
ಈ ಕಿರಿಯ ಭಿಕ್ಷುಗಳಿಗೆ ತಮ್ಮ ಕಣ್ಣುಗಳನ್ನು ನಂಬಲಾಗಿಲ್ಲ. ನಾವು ನೋಡಿದ್ದು ನಿಜವೇ ಎಂದು ಸಂದೇಹವಾಗುತ್ತಿತ್ತು. ಹಿರಿಯ ಸನ್ಯಾಸಿ ಯುವತಿಯನ್ನು ಮುಟ್ಟಿದ್ದು ಮಾತ್ರವಲ್ಲ ತೋಳಿನಲ್ಲಿ ಎತ್ತಿಕೊಂಡಿದ್ದಾರೆ. ಈ ರೀತಿ ಮಾಡಬಹುದೇ? ಎಂದೆಲ್ಲ ಅವರ ಮನಸ್ಸಿನಲ್ಲಿ ಹಲವು ಆಲೋಚನೆಗಳು ಬರುತ್ತಿದ್ದವು.
ಕೊನೆಗೆ ಒಬ್ಬ ಸನ್ಯಾಸಿ ಕೇಳಿಯೇ ಬಿಟ್ಟ. "ಸನ್ಯಾಸಿಗಳಾಗಿ ನಾವು ಮಹಿಳೆಯರನ್ನು ಮುಟ್ಟಲು ಅನುಮತಿ ಇಲ್ಲ. ಆದರೆ, ನೀವು ಆಕೆಯನ್ನು ಹೊತ್ತುಕೊಂಡು ಬಂದಿರಿ. ಇದು ಸರಿಯಾ?" ಎಂದು ಪ್ರಶ್ನಿಸಿದ.
ಅದಕ್ಕೆ ಆ ಹಿರಿಯ ಸನ್ಯಾಸಿ ಶಾಂತವಾಗಿ ಹೀಗೆ ಉತ್ತರಿಸಿದರು. "ನಾನು ಆಕೆಯನ್ನು ಅಲ್ಲಿ ನದಿಯ ಬದಿಯಲ್ಲೇ ಬಿಟ್ಟುಬಂದೆ. ನೀವು ಇನ್ನೂ ಆಕೆಯನ್ನು ಏಕೆ ಹೊತ್ತುಕೊಂಡಿದ್ದೀರಿ?".
****
ಝೆನ್ ಕಥೆ: ಬಟ್ಟಲು
ಒಬ್ಬ ಸನ್ಯಾಸಿ ಜೋಶುವಿಗೆ "ನಾನು ಈಗಷ್ಟೇ ಈ ಮಠಕ್ಕೆ ಬಂದಿದ್ದೇನೆ. ದಯವಿಟ್ಟು ನನಗೆ ಕಲಿಸಿಕೊಡಿ" ಎಂದು ಹೇಳಿದನು.
ಅದಕ್ಕೆ ಸನ್ಯಾಸಿಯು "ನೀನು ಅನ್ನದ ಗಂಜಿ ತಿಂದು ಆಯ್ತಾ?"
ಸನ್ಯಾಸಿಯು "ಹೌದು, ಈಗಷ್ಟೇ ತಿಂದೆ" ಎಂದನು.
ಜೋಶು ಹೇಳಿದನು: “ಹಾಗಾದರೆ ನೀನು ನಿನ್ನ ಬಟ್ಟಲನ್ನು ತೊಳೆಯುವುದು ಉತ್ತಮ.”
ಆ ಕ್ಷಣದಲ್ಲಿ ಸನ್ಯಾಸಿಗೆ ಜ್ಞಾನೋದಯವಾಯಿತು.
****
ಝೆನ್ ಕಥೆ: ಕಲಿಯಲು ಬೇಕಾದ ಸಮಯ
ಒಬ್ಬ ಮಾರ್ಷಲ್ ಆರ್ಟ್ ವಿದ್ಯಾರ್ಥಿ ತನ್ನ ಗುರುವಿನ ಬಳಿಗೆ ಹೋಗಿ, "ನಾನು ನಿಮ್ಮ ಸಮರ ಕಲೆಯನ್ನು ಅಧ್ಯಯನ ಮಾಡಲು ಬಂದಿದ್ದೇನೆ. ನನಗೆ ಮಾರ್ಷಲ್ ಆರ್ಟ್ ಕಲಿಯಲು ಎಷ್ಟು ವರ್ಷ ಬೇಕಾಗಬಹುದು?" ಎಂದು ಕೇಳಿದ.
"ಹತ್ತು ವರ್ಷಗಳು ಬೇಕಾಗಬಹುದು" ಎಂದು ಗುರುಗಳು ಹೇಳಿದರು.
"ನನಗೆ ಅದಕ್ಕಿಂತ ಬೇಗ ಕಲಿಯಬೇಕು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುವೆ. ಪ್ರತಿದಿನ ಅಭ್ಯಾಸ ಮಾಡುವೆ. ದಿನಕ್ಕೆ ಹತ್ತು ಅಥವಾ ಅದಕ್ಕಿಂತ ಹೆಚ್ಚು ಗಂಟೆ ಪ್ರ್ಯಾಕ್ಟೀಸ್ ಮಾಡುವೆ. ಹಾಗಾದರೆ, ನನಗೆ ಸಮರ ಕಲೆ ಕಲಿಯಲು ಎಷ್ಟು ಸಮಯ ಬೇಕಾಗಬಹುದು" ಎಂದು ಕೇಳಿದನು.
ಅದಕ್ಕೆ ಗುರುಗಳು ತುಸು ಯೋಚಿಸಿ "20 ವರ್ಷಗಳು" ಎಂದರು.
***
ಝೆನ್ ಕಥೆ: ಸುಂದರವಾದ ಪಟ್ಟಣ
ಇಬ್ಬರು ವ್ಯಕ್ತಿಗಳು ಝೆನ್ ಗುರುವಿನ ಬಳಿ ಬರುತ್ತಾರೆ. "ನಾನು ಆ ಹೊಸ ಪಟ್ಟಣಕ್ಕೆ ಹೋಗಬೇಕೆಂದಿದ್ದೇನೆ. ಆ ನಗರ ಹೇಗಿದೆ?" ಎಂದು ಒಬ್ಬ ಕೇಳುತ್ತಾನೆ.
ಅದಕ್ಕೆ ಝೆನ್ ಗುರು "ನೀವು ಈ ಹಿಂದೆ ಇದ್ದ ಪಟ್ಟಣ ಹೇಗಿತ್ತು?" ಎಂದು ಕೇಳುತ್ತಾರೆ.
“ಅದು ಭಯಾನಕವಾಗಿತ್ತು. ಎಲ್ಲರೂ ದ್ವೇಷಿಸುತ್ತಿದ್ದರು. ನಾನು ಆ ಪಟ್ಟಣವನ್ನು ದ್ವೇಷಿಸುತ್ತಿದ್ದೆ” ಎಂದು ಹೇಳುತ್ತಾನೆ.
ಅದಕ್ಕೆ ಝೆನ್ ಗುರು "ನೀವು ಮುಂದೆ ಹೋಗಲಿರುವ ಪಟ್ಟಣ ಕೂಡ ಅದೇ ರೀತಿ ಇರುತ್ತದೆ. ನೀವು ಅಲ್ಲಿಗೆ ಹೋಗಬಾರದು ಎನ್ನುವುದು ನನ್ನ ಅಭಿಪ್ರಾಯ" ಎಂದು ಹೇಳುತ್ತಾರೆ.
ಮೊದಲ ವ್ಯಕ್ತಿ ಹೊರಟು ಹೋಗುತ್ತಾನೆ. ಈ ಸಮಯದಲ್ಲಿ ಎರಡನೇ ವ್ಯಕ್ತಿಯು ಅದೇ ಪ್ರಶ್ನೆ ಕೇಳುತ್ತಾನೆ.
"ನಾನು ಆ ಪಟ್ಟಣಕ್ಕೆ ಹೋಗಬೇಕೆಂದುಕೊಂಡಿದ್ದೇನೆ. ಆ ಪಟ್ಟಣ ಹೇಗಿದೆ?" ಎಂದು ಕೇಳುತ್ತಾನೆ. (ಈತ ಕೇಳಿದ್ದು ಮೊದಲ ವ್ಯಕ್ತಿ ಕೇಳಿದ ಅದೇ ಪಟ್ಟಣದ ಕುರಿತು).
"ನೀವು ಈ ಹಿಂದೆ ಇದ್ದ ಪಟ್ಟಣ ಹೇಗಿತ್ತು?" ಎಂದು ಝೆನ್ ಗುರು ಈತನಲ್ಲಿಯೂ ಪ್ರಶ್ನಿಸುತ್ತಾರೆ.
“ಅದು ಅದ್ಭುತವಾಗಿತ್ತು. ಎಲ್ಲರೂ ಸ್ನೇಹಪರರಾಗಿದ್ದರು ಮತ್ತು ನಾನು ಸಂತೋಷವಾಗಿದ್ದೆ. ಈಗ ಸುಮ್ಮನೆ ಬದಲಾವಣೆಗಾಗಿ ಹೊಸ ಪಟ್ಟಣಕ್ಕೆ ಹೋಗಲು ಬಯಸಿರುವೆ" ಎಂದು ಆ ವ್ಯಕ್ತಿ ಹೇಳುತ್ತಾನೆ.
ಅದಕ್ಕೆ ಝೆನ್ ಗುರು "“ನೀವು ಹೋಗಬೇಕಾಗಿರುವ ಪಟ್ಟಣವೂ ತುಂಬಾ ಸುಂದರವಾಗಿದೆ. ನೀವು ಅಲ್ಲಿ ಖುಷಿಯಾಗಿರಬಲ್ಲಿರಿ" ಎಂದು ಹೇಳುತ್ತಾರೆ.
