ನವದುರ್ಗೆಯರ ನಿವಾಸ ಶ್ರೀ ಇಂದ್ರಾಕ್ಷಿ ಮಹಾ ಯಂತ್ರ: ಮನೆಯಲ್ಲಿ ಈ ಯಂತ್ರದ ಅನುಷ್ಠಾನವಿದ್ದರೆ ಸುಖ, ನೆಮ್ಮದಿ, ಸಮೃದ್ಧಿ
ಈ ಯಂತ್ರವನ್ನು ದುರ್ಗಾಷ್ಟೋತ್ತರವನ್ನು ಜಪಿಸುತ್ತ ಕುಂಕುಮದಿಂದ ಪೂಜಿಸಬೇಕು. ಆ ಕುಂಕುಮವನ್ನು ಧರಿಸಿದಲ್ಲಿ ಭಯವು ದೂರವಾಗುತ್ತದೆ. ಸತತವಾಗಿ 48 ದಿನಗಳ ಕಾಲ ಈ ಯಂತ್ರವನ್ನು ಶಾಸ್ತ್ರೋಕ್ತವಾಗಿ ಪೂಜಿಸಿದಲ್ಲಿ ವಾಸವಿರುವ ಮನೆಯಲ್ಲಿನ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ. (ಬರಹ: ಸತೀಶ್ ಎಸ್., ಜ್ಯೋತಿಷಿ)

ಇಂದ್ರಾಕ್ಷಿ ಮಹಾಯಂತ್ರವು ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ಯಂತ್ರವಾಗಿದೆ. ಈ ಯಂತ್ರವು ದುರ್ಗಾಯಂತ್ರದ ಪ್ರತಿರೂಪ. ಇದರಲ್ಲಿ ಬಳಸುವ ಮಂತ್ರ ಭಾಗವೂ ವಿಶಿಷ್ಟವಾದುದು. ಈ ಯಂತ್ರದಲ್ಲಿ ಬಳಸುವ ರೇಖಾಚಿತ್ರಗಳು ವಿಶೇಷವಾಗಿರುತ್ತವೆ. ಇಂದ್ರಾಕ್ಷಿ ಯಂತ್ರವನ್ನು ಮೂರು ಅಥವಾ ನಾಲ್ಕು ರೀತಿಯಲ್ಲಿ ತಯಾರಿಸಬಹುದಾಗಿದೆ. ಪ್ರತಿ ಯಂತ್ರದಲ್ಲಿಯೂ ನವದುರ್ಗೆಯರು ನೆಲೆಸಿರುತ್ತಾರೆ. ಆದ್ದರಿಂದ ಇಂದ್ರಾಕ್ಷಿ ಯಂತ್ರವನ್ನು ಧರಿಸುವುದು ಅಥವಾ ಬಳಿಯಲ್ಲಿ ಇರಿಸಿಕೊಳ್ಳುವುದು ಸರಿಯಾದ ಕ್ರಮವಾಗುವುದಿಲ್ಲ.
ಇಂದ್ರಾಕ್ಷಿ ಯಂತ್ರವನ್ನು ದೇವರಕೋಣೆಯಲ್ಲಿ ಇರಿಸಿ ಪೂಜಿಸಬೇಕು. ಪೂಜಾಗೃಹದ ಮಧ್ಯಭಾಗದಲ್ಲಿ ಇದನ್ನು ಸ್ಥಾಪಿಸಬೇಕು. ಪೂಜಾಗೃಹ ಇಲ್ಲದಿದ್ದರೆ ಪೂರ್ವದಿಕ್ಕಿನ ಮಧ್ಯಭಾಗದಲ್ಲಿ ಇದನ್ನು ಸ್ಥಾಪಿಸಬೇಕು. ಪ್ರತಿದಿನವೂ ಸಾಧ್ಯವಾಗದ ಪಕ್ಷದಲ್ಲಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಇದನ್ನು ಪೂಜಿಸಬೇಕು. ಮೊಸರು ಅಥವಾ ನಿಂಬೆಹಣ್ಣಿನಿಂದ ತಯಾರಿಸಿದ ಅನ್ನದ ನೈವೇದ್ಯ ಮಾಡಬೇಕು.
ಸೂರ್ಯ ಮುಳುಗಿದ ನಂತರ ಈ ಯಂತ್ರವನ್ನು ಪೂಜಿಸಬಾರದು. ಈ ಯಂತ್ರಕ್ಕೆ ನಿಂಬೆಹಣ್ಣನ್ನಾಗಲಿ ಅಥವಾ ಕುಂಬಳಕಾಯಿಯನ್ನಾಗಲಿ ನಿವಾಳಿಸಿ ಮನೆಯ ಹೊರಗೆ ಒಡೆಯಬಾರದು ಅಥವಾ ನಿಂಬೆಹಣ್ಣನ್ನು ಕಾಲಿನಿಂದ ತುಳಿಯಬಾರದು.
ಇಂದ್ರಾಕ್ಷಿ ಯಂತ್ರದಲ್ಲಿ ಪಂಚಭುಜಾಕೃತಿ
ಈ ಯಂತ್ರವನ್ನು ತಾಮ್ರ ಅಥವಾ ಹಿತ್ತಾಳೆಯ ತಗಡಿನಲ್ಲಿ ತಯಾರಿಸುತ್ತಾರೆ. ಹಿತ್ತಾಳೆಯ ತಗಡಿನಲ್ಲಿ ತಯಾರಿಸಿದ ಯಂತ್ರದಿಂದ ಉತ್ತಮ ಫಲಗಳನ್ನು ಪಡೆಯಬಹುದು. ಈ ಯಂತ್ರವು ಚೌಕಾಕಾರದಲ್ಲಿ ಇರುತ್ತದೆ. ಇದರ ಮಧ್ಯಭಾಗದಲ್ಲಿ ಬಿಂದು ಇರುತ್ತದೆ. ಇದು ನಮ್ಮಲ್ಲಿ ಏಕಾಗ್ರತೆಯನ್ನು ಉಂಟುಮಾಡುತ್ತದೆ. ಈ ಯಂತ್ರದಲ್ಲಿ ದುರ್ಗಾಮಾತೆ, ಸರಸ್ವತಿ, ಮಹಾಲಕ್ಷ್ಮಿ ಮತ್ತು ಗಾಯತ್ರಿ ಮಾತೆಯ ಪ್ರತಿಬಿಂಬವು ಇರುತ್ತದೆ, ಇಲ್ಲವಾದಲ್ಲಿ ಆ ದೇವರುಗಳಿಗೆ ಸಂಬಂಧಿಸಿದ ಮೂಲಮಂತ್ರಗಳು ಇರುತ್ತವೆ. ಈ ಯಂತ್ರದಲ್ಲಿ ಮೂರು ಪಂಚಭುಜಾಕೃತಿಗಳು ಇರುತ್ತವೆ. ಬಿಂದುವನ್ನು ಈ ಆಕೃತಿಗಳು ಆವರಿಸಿರುತ್ತವೆ. ಇದರಲ್ಲಿ ಅಷ್ಟದಳವಿರುವ ಪದ್ಮವಿರುತ್ತದೆ.
ಇದರಲ್ಲಿ ಇಂದ್ರಾಕ್ಷಿಯ ಮೂಲ ಮಂತ್ರಾಕ್ಷರಗಳು ಇರುತ್ತವೆ. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳಲ್ಲಿ ಇರುವ ಭಯದ ಗುಣವು ದೂರವಾಗುತ್ತದೆ. ಮನೆಯಲ್ಲಿದ್ದವರಿಗೆ ಅಷ್ಟದಿಗ್ಬಂಧನದ ಸುರಕ್ಷಿತ ಭಾವದ ಅನುಭವ ದೊರೆಯುತ್ತದೆ. ಈ ಯಂತ್ರದಲ್ಲಿನ ಪ್ರತಿಯೊಂದು ಮೂಲೆಯಲ್ಲಿಯೂ 'ಓಂ' ಅಥವಾ 'ಶ್ರೀ' ಕಾರ ಇರುತ್ತದೆ. ಸರಳ ಮಾದರಿಯಲ್ಲಿ ತಯಾರಿಸಿರುವ ಇಂದ್ರಾಕ್ಷಿ ಯಂತ್ರದಲ್ಲಿ ಮೂಲ ಮಂತ್ರಗಳು ಇರುವುದಿಲ್ಲ. ಆದರೆ ಎಂಟು ದಿಕ್ಕುಗಳನ್ನು ಪ್ರತಿಬಿಂಬಿಸುವ ಎರಡು ವರ್ಗಗಳು ಒಂದರ ಮೇಲೊಂದು ಇರುತ್ತದೆ.
ಒಟ್ಟು ನಾಲ್ಕು ಅಥವಾ ಐದು ವರ್ಗಗಳು ಇದರಲ್ಲಿ ಇರುತ್ತವೆ. ಇದರ ಮಧ್ಯಭಾಗದಲ್ಲಿ ಶ್ರೀಕಾರವಿರುತ್ತದೆ. 'ಶ್ರೀ' ಎಂಬ ಅಕ್ಷರವು ದುರ್ಗಾಮಾತೆ ಮತ್ತು ಲಕ್ಷ್ಮಿ ಮಾತೆಯರನ್ನು ಸೂಚಿಸುತ್ತದೆ. ಇದನ್ನು ಹಿತ್ತಾಳೆಯ ತಗಡಿನಲ್ಲಿ ರಚಿಸಿರುತ್ತಾರೆ. ಈ ಯಂತ್ರವನ್ನು ಸರಳವಾಗಿ ಪೂಜಿಸಿದರೆ ಶುಭ ಫಲಗಳು ದೊರೆಯುತ್ತವೆ. ವಿಶೇಷವಾದ ನಿರ್ಬಂಧಗಳು ಇರುವುದಿಲ್ಲ.
ಇಂದ್ರಾಕ್ಷಿ ಯಂತ್ರದ ಪೂಜಾ ವಿಧಾನ
ಈ ಯಂತ್ರವನ್ನು ಸ್ಥಾಪಿಸಿದ ಮೊದಲ ಬಾರಿ ಗುರುವಾರದಂದು ಈ ಯಂತ್ರವನ್ನು ಪೂಜಿಸಬೇಕು. ಕೆಂಪು ಅಥವಾ ಬಿಳಿ ಬಣ್ಣದ ಹೂಗಳಿಂದ ಈ ಯಂತ್ರವನ್ನು ಪೂಜಿಸುವುದು ಹೆಚ್ಚು ಫಲಕಾರಿಯಾಗಿರುತ್ತದೆ. ದಿನನಿತ್ಯದ ಪೂಜೆಯಂತೆ ಈ ಯಂತ್ರಕ್ಕೆ ಷೋಡಶೋಪಚಾರದ ಪೂಜೆಯನ್ನು ಮಾಡಬಹುದು.
ಈ ಯಂತ್ರವನ್ನು ದುರ್ಗಾಷ್ಟೋತ್ತರವನ್ನು ಜಪಿಸುತ್ತ ಕುಂಕುಮದಿಂದ ಪೂಜಿಸಬೇಕು. ಆ ಕುಂಕುಮವನ್ನು ಧರಿಸಿದಲ್ಲಿ ಮನದಲ್ಲಿನ ಭಯವು ದೂರವಾಗುತ್ತದೆ. ಮಕ್ಕಳಿಗೆ ಅಥವಾ ದೊಡ್ಡವರಿಗೆ ಕಣ್ ದೃಷ್ಟಿ ಇದ್ದಲ್ಲಿ ಇಂದ್ರಾಕ್ಷಿ ಯಂತ್ರದ ಪೂಜೆಯು ಉಪಯುಕ್ತವಾಗುತ್ತದೆ. ಸತತವಾಗಿ 48 ದಿನಗಳ ಕಾಲ ಈ ಯಂತ್ರವನ್ನು ಶಾಸ್ತ್ರೋಕ್ತವಾಗಿ ಪೂಜಿಸಿದಲ್ಲಿ ವಾಸವಿರುವ ಮನೆಯಲ್ಲಿನ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ. ಈ ಮಂತ್ರವನ್ನು ಪೂಜಿಸಿದ ದಿನದಂದು 10 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಅವರಿಗೆ ಇಷ್ಟವೆನಿಸುವ ತಿಂಡಿ ತಿನಿಸು ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ನೀಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ.

ವಿಭಾಗ