ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಯುದ್ಧಕಾಂಡ: ಲಂಕೆಯಲ್ಲಿ ನಡೆಯಿತು ಘನಘೋರ ರಾಮ ರಾವಣ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತ -ಶ್ರೀರಾಮನವಮಿ ವಿಶೇಷ

ರಾಮಾಯಣ ಯುದ್ಧಕಾಂಡ: ಲಂಕೆಯಲ್ಲಿ ನಡೆಯಿತು ಘನಘೋರ ರಾಮ ರಾವಣ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತ -ಶ್ರೀರಾಮನವಮಿ ವಿಶೇಷ

ರಾಮಾಯಣದಲ್ಲಿ ಯುದ್ಧಕಾಂಡದ ಮಹತ್ವ: ಶ್ರೀರಾಮಚಂದ್ರ ಮತ್ತು ರಾವಣರ ನಡುವೆ ನಡೆಯುವ ಯುದ್ಧದ ವಿವರಗಳು ಯುದ್ಧಕಾಂಡದಲ್ಲಿದೆ. ರಾವಣ ಸಂಹಾರವಾದ ಮೇಲೆ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪಟ್ಟಾಭಿಷೇಕದ ಸಂಭ್ರಮವನ್ನೂ ಈ ಭಾಗದಲ್ಲಿ ಕಟ್ಟಿಕೊಡಲಾಗಿದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಯುದ್ಧಕಾಂಡ: ಲಂಕೆಯಲ್ಲಿ ನಡೆಯಿತು ಘನಘೋರ ರಾಮ ರಾವಣ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತ
ಯುದ್ಧಕಾಂಡ: ಲಂಕೆಯಲ್ಲಿ ನಡೆಯಿತು ಘನಘೋರ ರಾಮ ರಾವಣ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತ (Image Courtesy: commons.wikimedia.org)

ಯುದ್ಧಕಾಂಡದ ಕಥೆ: ಸೀತೆಯನ್ನು ಹುಡುಕಲು ಆಂಜನೇಯ ಮೊದಲಾದ ವಾನರ ವೀರರು ದಕ್ಷಿಣ ದಿಕ್ಕಿಗೆ ಹೋಗಿರುತ್ತಾರೆ. ಅವರು ಇನ್ನೂ ಬರಲಿಲ್ಲ ಎಂದು ಶ್ರೀರಾಮ-ಲಕ್ಷ್ಮಣರು ಚಡಪಡಿಸುತ್ತಿರುತ್ತಾರೆ. ಹನುಮಂತ ಅದೇ ವೇಳೆಗೆ ಕಿಷ್ಕಿಂಧೆಗೆ ಬರುತ್ತಾನೆ. ಅವನನ್ನು ಕಂಡು ಎಲ್ಲರೂ ಸಂತೋಷಗೊಳ್ಳುತ್ತಾರೆ. ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ ನಂತರ ಅಶೋಕ ವನದಲ್ಲಿ ಸೀತಾದೇವಿಯನ್ನು ನೋಡಿದ್ದು, ಮಾತನಾಡಿಸಿದ್ದು ಮತ್ತು ರಾಮನು ರಾವಣನ ಜೊತೆ ಯುದ್ದ ಮಾಡಿ ತನ್ನನ್ನು ಅಯೋಧ್ಯೆಗೆ ಕರೆದೊಯ್ಯಬೇಕೆಂಬ ಸೀತಾಮಾತೆಯ ಮನದ ಆಶಯವನ್ನು ಹನುಮಂತ ತಿಳಿಸುತ್ತಾನೆ.

ಸೀತಾದೇವಿಯು ನೀಡಿದ ಚೂಡಾಮಣಿಯನ್ನು ರಾಮ-ಲಕ್ಷ್ಮಣರಿಗೆ ತೋರಿಸುತ್ತಾನೆ. ಇದರಿಂದ ಸಂತಸಗೊಂಡ ರಾಮ-ಲಕ್ಷ್ಮಣರು ಲಂಕೆಯ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಾರೆ. ಶ್ರೀರಾಮನು ಸುಗ್ರೀವನ ಸಹಾಯವನ್ನು ಕೇಳಿದಾಗ ಇಡೀ ರಾಜ್ಯದ ಜನರೇ ರಾಮನ ಹಿಂದೆ ಸಹಾಯ ನೀಡಲು ಸಿದ್ದರಾಗಿ ನಿಲ್ಲುತ್ತಾರೆ. ಹನುಮಂತನಿಂದ ಲಂಕೆಗೆ ಇದ್ದ ರಕ್ಷಣೆಯ ತಂತ್ರಗಳ ಬಗ್ಗೆ ರಾಮನು ತಿಳಿದುಕೊಳ್ಳುತ್ತಾನೆ. ಅಂದಿನ ಕಾಲದಲ್ಲಿಯೇ ರಾವಣನ ಕೋಟೆಯಲ್ಲಿ ಸ್ವಯಂ ಚಾಲಿತ ಬಾಗಿಲುಗಳು ಇದ್ದವು ಎಂದು ತಿಳಿದು ಬರುತ್ತದೆ. ಲಂಕೆಯ ಮೇಲೆ ಯುದ್ಧ ಹೂಡಿದರೆ ಲಂಕೆಯನ್ನು ಪ್ರವೇಶಿಸಲು ಸಾಧ್ಯವಾಗದಂತೆ ಸೇತುವೆಯನ್ನು ತೆಗೆಯುತ್ತಾರೆ ಎಂದು ಆಂಜನೇಯನು ತಿಳಿಸುತ್ತಾನೆ. ಶ್ರೀರಾಮನ ಸೇನೆಯು ಮಹೇಂದ್ರ ಗಿರಿಯನ್ನು ತಲುಪುತ್ತದೆ.

ಲಂಕೆಯಲ್ಲಿಯೂ ಯುದ್ಧದ ಚರ್ಚೆ, ವಿಭೀಷಣನ ವಿರೋಧ

ರಾವಣನು ರಾಜಸಭೆಯನ್ನು ಕರೆದು ಹನುಮಂತನಿಂದ ಆದ ತೊಂದರೆಯನ್ನು ವಿವರಿಸುತ್ತಾನೆ. ಎಲ್ಲರೂ ಯುದ್ಧ ಮಾಡುವ ಬಗ್ಗೆ ಮಾತನಾಡಿದರೆ ರಾವಣನ ತಮ್ಮನಾದ ವಿಭೀಷಣನು ಮಾತ್ರಾ ಯುದ್ಧವನ್ನು ವಿರೋಧಿಸುತ್ತಾನೆ. ಆರಂಭದಿಂದಲೂ ಸೀತೆಯ ಅಪಹರಣವನ್ನು ವಿರೋಧಿಸಿದ ವಿಭೀಷಣನು ಸೀತೆಯನ್ನು ರಾಮನಿಗೆ ಒಪ್ಪಿಸಿ ಕ್ಷಮಾಪಣೆ ಕೇಳುವುದು ಒಳ್ಳೆಯದು ಎಂದು ತಿಳಿಸುತ್ತಾನೆ. ಆದರೆ ಇವನ ಸಲಹೆಯನ್ನು ರಾವಣ ಮತ್ತು ಆಸ್ಥಾನದಲ್ಲಿದ್ದ ಎಲ್ಲರೂ ವಿರೋಧಿಸುತ್ತಾರೆ. ಕೊನೆಗೆ ತನ್ನ ನಾಲ್ವರು ಆಪ್ತರೊಡನೆ ವಿಭೀಷನನು ಶ್ರೀ ರಾಮನು ತಂಗಿದ್ದ ನದಿಯ ತೀರಕ್ಕೆ ಬರುತ್ತಾನೆ. ರಾಮ-ಲಕ್ಷ್ಮಣರನ್ನು ಕರೆದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ. ರಾವಣ ಒಳ್ಳೆಯತನಕ್ಕೆ ಬಗ್ಗದೆ ಹೋದಾಗ ನಾವಿಬ್ಬರು ಸಂಬಂಧವನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸುತ್ತಾನೆ. ವಿಭೀಷಣನು ರಾವಣನ ಸೈನ್ಯದ ಸಂಪೂರ್ಣ ವಿವರಗಳನ್ನು ನೀಡುತ್ತಾನೆ.

ಶ್ರೀರಾಮನಿಗೆ ಸಮುದ್ರರಾಜನ ಅಭಯ, ರಾವಣನ ಹಟಮಾರಿತನ

ಸಮುದ್ರವನ್ನು ನೋಡಿ ಚಿಂತಾಕಾಂತನಾದ ಶ್ರೀರಾಮನಿಗೆ ಸಮುದ್ರ ರಾಜನೇ ಪ್ರತ್ಯಕ್ಷನಾಗಿ ನೀನು ಸೇತುವೆ ಕಟ್ಟಲು ಬಳಸುವ ಯಾವುದೇ ವಸ್ತುವಾದರೂ ಅದು ಮುಳುಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ಕೊಡುತ್ತಾನೆ. ದೊಡ್ಡ ಮರಗಳು ಮತ್ತು ಕಲ್ಲುಗಳನ್ನು ತಂದು ಸೇತುವೆಯನ್ನು ಕಟ್ಟಲು ಆರಂಭಿಸುತ್ತಾರೆ. ಶ್ರೀರಾಮ-ಲಕ್ಷ್ಮಣರು ಆಂಜನೇಯ ಮತ್ತು ಅಂಗದ ಸಹಾಯದಿಂದ ವಾಯು ಮಾರ್ಗದಲ್ಲಿ ಲಂಕೆಯನ್ನು ತಲುಪುತ್ತಾರೆ. ಉಳಿದವರು ಸೇತುವೆಯ ಮುಖಾಂತರ ಲಂಕೆಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ.

ರಾಮನ ಸೇನಾ ಬಲವನ್ನು ಕಂಡ ರಾವಣನ ಬೇಹುಗಾರರು ಭಯಪಡುತ್ತಾರೆ. ರಾವಣನನ್ನು ಕುರಿತು ಈ ಯುದ್ಧದಲ್ಲಿ ನಾವು ಸೋಲುವುದು ಖಂಡಿತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾವಣನಿಗೆ ದೇವ ದಾನವರಿಂದ ಸಾವು ಬರದು ಎಂಬ ವರವಿರುತ್ತದೆ. ಅದನ್ನು ನೆನಪಿಸಿದ ಬೇಹುಗಾರರು ನೀವು ಪಡೆದ ವರಕ್ಕೆ ಸಂಬಂಧಿಸಿದಂತೆ ದೇವರು ಅಲ್ಲದ ದಾನವರು ಅಲ್ಲದ ಆದರೆ ಶಕ್ತಿಶಾಲಿಯಾದ ಇವರಿಂದ ನಿನ್ನ ಪ್ರಾಣಹರಣವಾಗಬಹುದು ಎಂದು ತಿಳಿಸುತ್ತಾರೆ. ಆದರೆ ಯಾವುದೇ ವಿಚಾರವನ್ನು ಒಪ್ಪದೇ ರಾವಣನು ಯುದ್ಧ ಮಾಡಲು ಅಣಿಯಾಗುತ್ತಾನೆ.

ಎದ್ದುಬಂದ ಕುಂಭಕರ್ಣ, ಸೋತು ಸಿಟ್ಟಿಗೆದ್ದ ರಾವಣ

ಯುದ್ಧವನ್ನು ಆರಂಭಿಸುವ ಮುನ್ನ ಮತ್ತೊಮ್ಮೆ ಅಂಗದನನ್ನು ಶ್ರೀರಾಮನು ರಾವಣನ ಆಸ್ಥಾನಕ್ಕೆ ರಾಯಭಾರಿಯನ್ನಾಗಿ ಕಳಿಸುತ್ತಾನೆ. ಆದರೆ ಒಳ್ಳೆಯ ಮಾತುಗಳಿಗೆ ಬೆಲೆ ನೀಡದ ರಾವಣನು ಯುದ್ಧವನ್ನು ಆರಂಭಿಸುತ್ತಾನೆ. ಹಗಲು ರಾತ್ರಿ ಎನ್ನದೆ ನಡೆದ ಯುದ್ಧದಲ್ಲಿ ಶ್ರೀರಾಮನ ಸೇನೆಯ ಕೈ ಮೇಲಾಗುತ್ತದೆ ರಾವಣನ ಮಗನಾದ ಇಂದ್ರಜಿತು ಮಾಯಾ ಯುದ್ಧದಲ್ಲಿ ನಿರತನಾಗುತ್ತಾನೆ. ಸೇನೆಯ ಮೇಲೆ ಸರ್ಪಾಸ್ತ್ರವನ್ನು ಪ್ರಯೋಗಿಸಿದಾಗ ಸ್ವತಃ ಗರುಡನೇ ಬಂದು ಎಲ್ಲರನ್ನೂ ಕಾಪಾಡುತ್ತಾನೆ. ಕೊನೆಗೆ ಸ್ವತಃ ರಾವಣನೇ ಯುದ್ಧರಂಗವನ್ನು ಪ್ರವೇಶಿಸುತ್ತಾನೆ.

ರಾಮನು ಬಿಟ್ಟ ಬಾಣವೊಂದಕ್ಕೆ ರಾವಣನ ಕಿರೀಟವು ನೆಲಕ್ಕುರುಳುತ್ತದೆ. ನಿತ್ರಾಣನಾದ ರಾವಣನನ್ನು ಶ್ರೀರಾಮನು ವಿಶ್ರಾಂತಿ ಪಡೆದು ಬರುವಂತೆ ಅರಮನೆಗೆ ಕಳಿಸುತ್ತಾನೆ. ಕುಂಭಕರ್ಣನು ರಾವಣನ ತಮ್ಮ. ತಪ್ಪುತಪ್ಪಾಗಿ ಮಾತನಾಡಿ ಆರು ತಿಂಗಳು ನಿದ್ದೆ ಮಾಡುವ ವರವನ್ನು ಪಡೆದಿದ್ದ. ಆದರೆ ಒಮ್ಮೆ ಎಚ್ಚರಗೊಂಡು ಮಲಗಿದರೆ ಪುನಃ ಆರು ತಿಂಗಳ ಕಾಲ ನಿದ್ದೆ ಮಾಡುತ್ತಿದ್ದ. ಇವನ ಆಹಾರವನ್ನು ಊಹಿಸುವುದೇ ಅಸಾಧ್ಯ. ಆದರೆ ಅವನು ಬಲು ಪರಾಕ್ರಮಿ. ಇವನನ್ನು ಶ್ರೀರಾಮನು ಇಂದ್ರಾಸ್ತ್ರದಿಂದ ಹತ್ಯೆಗೆಯ್ಯುತ್ತಾನೆ.

ಸಂಜೀವಿನಿ ತಂದು ಗೆಲುವಿನ ಮುನ್ನುಡಿ ಬರೆದ ವಾಯುಪುತ್ರ

ಕುಂಭಕರ್ಣನ ಸಾವಿನಿಂದ ಸಿಟ್ಟಾದ ರಾವಣನ ಮಗನಾದ ಇಂದ್ರಜಿತು ರಣರಂಗವನ್ನು ಪ್ರವೇಶಿಸುತ್ತಾನೆ. ಇವನ ಮಾಯ ಯುದ್ಧಕ್ಕೆ ಶ್ರೀ ರಾಮನ ಸೇನೆಯು ತತ್ತರಿಸಿ ಹೋಗುತ್ತದೆ. ಕೊನೆಗೆ ಶ್ರೀ ರಾಮ ಲಕ್ಷ್ಮಣರೇ ಇಂದ್ರಚಿತುವನ್ನು ನೇರವಾಗಿ ಎದುರಿಸುತ್ತಾರೆ. ಆದರೆ ದೀರ್ಘ ಕಾಲದ ಯುದ್ಧದ ನಂತರ ಇಂದ್ರಜಿತು ಬಿಡುವ ಬಾಣ ಒಂದಕ್ಕೆ ರಾಮ ಲಕ್ಷ್ಮಣರು ಪ್ರಜ್ಞಾಶೂನ್ಯರಾಗುತ್ತಾರೆ. ಆಗ ಜಾಂಬವಂತನು ಹನುಮಂತನನ್ನು ಕರೆದು ಸಂಜೀವಿನಿ ಪರ್ವತದಲ್ಲಿರುವ ಕೆಲವು ಮೂಲಿಕೆಗಳನ್ನು ತರಲು ಹೇಳುತ್ತಾನೆ. ಆದರೆ ಅಲ್ಲಿದ್ದ ಸಹಸ್ರಾರು ಮೂಲಿಕೆಗಳನ್ನು ನೋಡಿದ ಹನುಮಂತನು ದಿಗ್ಭ್ರಾಂತನಾಗುತ್ತಾನೆ. ಕೊನೆಗೆ ಇಡೀ ಸಂಜೀವಿನಿ ಪರ್ವತವನ್ನೇ ಯುದ್ದಭೂಮಿಗೆ ಹೊತ್ತು ತರುತ್ತಾನೆ. ಜಾಂಬವಂತನ ಚಿಕಿತ್ಸೆಯು ಫಲಕಾರಿಯಾಗಿ ಶ್ರೀರಾಮ-ಲಕ್ಷ್ಮಣರು ಎಚ್ಚರ ಹೊಂದುತ್ತಾರೆ. ಆನಂತರ ಐಂದ್ರಾಸ್ತ್ರವನ್ನು ಪ್ರಯೋಗಿಸಿ ಲಕ್ಷ್ಮಣನು ಇಂದ್ರಜಿತುವನ್ನು ಕೊಲ್ಲುತ್ತಾನೆ.

ಅಗಸ್ತ್ಯರಿಂದ ಆದಿತ್ಯಹೃದಯ ಬೋಧನೆ

ಸತತ ಹಿನ್ನಡೆಯಿಂದ ಕೋಪಗೊಂಡ ರಾವಣನು ರಣರಂಗಕ್ಕೆ ಬರುತ್ತಾನೆ. ರಾಮನಿಗೆ ಇಂದ್ರನು ತನ್ನ ರಥವನ್ನೇ ಯುದ್ಧ ಮಾಡಲು ನೀಡುತ್ತಾನೆ. ಆದರೆ ರಾವಣನು ಇಂದ್ರನ ಸಾರಥಿಯನ್ನು ಗಾಯಗೊಳಿಸುತ್ತಾನೆ. ರಾಮನನ್ನು ಕೊಲ್ಲಲು ರಾವಣನು ಪ್ರಬಲವಾಗದ ಶೂಲಾಯುಧವನ್ನು ಪ್ರಯೋಗಿಸುತ್ತಾನೆ. ಆದರೆ ಶ್ರೀರಾಮನು ತನ್ನ ಬಳಿ ಇದ್ದ ಶಕ್ತ್ಯಾಯುಧದಿಂದ ಅದನ್ನು ಧ್ವಂಸಗೊಳಿಸುತ್ತಾನೆ. ಆ ವೇಳೆಗೆ ಅಗಸ್ತ್ಯ ಮಹಾಮನಿಗಳು ರಣಭೂಮಿಯನ್ನು ಪ್ರವೇಶಿಸುತ್ತಾರೆ.

ಶ್ರೀರಾಮನಿಗೆ ಮೂರು ಬಾರಿ ಶ್ರೀ ಆದಿತ್ಯಹೃದಯ ಮಂತ್ರವನ್ನು ಬೋಧಿಸುತ್ತಾರೆ. ಸೂರ್ಯದೇವನು ಪ್ರತ್ಯಕ್ಷನಾಗಿ ಶ್ರೀರಾಮನನ್ನು ಕುರಿತು ನೀನು ಈ ಯುದ್ಧದಲ್ಲಿ ಜಯಿಸುವೆ ಎಂದು ಹಾರೈಸುತ್ತಾನೆ. ಶ್ರೀರಾಮನು ವಸಿಷ್ಠರು ನೀಡಿದ್ದ ಬ್ರಹ್ಮಾಸ್ತ್ರದಿಂದ ರಾವಣನ ಸಂಹಾರ ಮಾಡುತ್ತಾನೆ. ಇದನ್ನು ಕೇಳಿದ ವಿಭೀಷಣನು ದುಃಖಕ್ಕೆ ಒಳಗಾಗುತ್ತಾನೆ. ರಾಮನು ವಿಭೀಷಣನಿಗೆ ಸಮಾಧಾನ ಮಾಡಿ, ಲಂಕೆಯ ರಾಜನನ್ನಾಗಿ ಮಾಡುತ್ತಾನೆ.

ರಾವಣನು ಹತನಾದ ವಿಚಾರವನ್ನು ಹನುಮಂತನು ಅಶೋಕವನಕ್ಕೆ ತೆರಳಿ ಸೀತೆಗೆ ತಿಳಿಸುತ್ತಾನೆ. ರಾಮನ ವಿಜಯವನ್ನು ಕೇಳಿ ಸೀತೆಗೆ ಸಂತಸವಾಗುತ್ತದೆ. ಎಲ್ಲರೂ ಒಂದುಗೂಡಿ ಸಂತೋಷದಿಂದ ಅಯೋಧ್ಯೆಯ ಕಡೆ ಪ್ರಯಾಣ ಬೆಳೆಸುತ್ತಾರೆ.