ಶ್ರೀ ವಿಶ್ವಾವಸು ಸಂವತ್ಸರ 1965; ಭಾರತ- ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ; ಭಾರತದ ಬಲವೃದ್ಧಿ, ಹೀಗಿತ್ತು ಆ ವರ್ಷ
ವಿಶ್ವಾವಸು ಸಂವತ್ಸರವನ್ನು ಬರಮಾಡಿಕೊಳ್ಳುವ ಹೊತ್ತು. ಕಾಲಚಕ್ರ ಉರುಳಿದಂತೆ ಭಾರತೀಯ ಕಾಣಗಣನೆ ಮಾನದಂಡ ಪ್ರಕಾರ 60 ಸಂವತ್ಸರಗಳ ಪುನರಾವರ್ತನೆ ರೂಢಿ. ಅದರಂತೆ, ವಿಶ್ವಾವಸು ಸಂವತ್ಸರ 1965ರಲ್ಲಿ ಬಂದಿತ್ತು. ಆ ಸಂದರ್ಭದ ಭಾರತದ ಸನ್ನಿವೇಶ ಗಮನಿಸಲು ಇತಿಹಾಸದ ಪುಟ ತೆರೆದರೆ ಭಾರತ- ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿ ಭಾರತದ ಬಲವೃದ್ಧಿ ಗಮನಸೆಳೆಯುತ್ತದೆ.

ಹಿಂದೂ ಕಾಲಗಣನೆ ಪದ್ಧತಿ ಪ್ರಕಾರ ಯಾದಿಯಂತೆ 60 ಸಂವತ್ಸರಗಳ ಪುನರಾವರ್ತನೆಯಾಗುತ್ತದೆ. ಈಗ 60 ಸಂವತ್ಸರದ ಬಳಿಕ ಶ್ರೀ ವಿಶ್ವಾವಸು ಸಂವತ್ಸರ ಬಂದಿದೆ. 1965ರಲ್ಲಿ ವಿಶ್ವಾವಸು ಸಂವತ್ಸರ ಬಂದಿತ್ತು. ಅಂದು ಪಾಕಿಸ್ತಾನದ ಅತಿಕ್ರಮಣ, ಯುದ್ಧವನ್ನು ಎದುರಿಸಬೇಕಾಗಿ ಬಂದಿತ್ತು. 1947-48ರ ಭಾರತ- ಪಾಕ್ ಯುದ್ಧದ ಬಳಿಕ ಎರಡನೇ ಭಾರಿ ಭಾರತ - ಪಾಕ್ ಯುದ್ಧ 1965ರಲ್ಲಿ ನಡೆಯಿತು. ಭಾರತದ ಇತಿಹಾಸ ಪುಟಗಳನ್ನು ಗಮನಿಸಿದರೆ ಆ ವಿಶ್ವಾವಸು ಸಂವತ್ಸರ ಬಲಶಾಲಿ ಭಾರತವನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಅಂದಿನ ಬಹುಮುಖ್ಯ ವಿದ್ಯಮಾನದ ಕಡೆಗೊಂದು ನೋಟ ಹರಿಸೋಣ.
ಪಾಕಿಸ್ತಾನ ಸಾರಿದ ಸಮರದಲ್ಲಿ ಲಾಹೋರ್‌ಗೆ ನುಗ್ಗಿ ನಡುಕ ಹುಟ್ಟಿಸಿದ ಭಾರತೀಯ ಸೇನೆ
ಭಾರತದ ಮಟ್ಟಿಗೆ 1965ರ ಶ್ರೀ ವಿಶ್ವಾವಸು ಸಂವತ್ಸರ ಹೇಗಿತ್ತು ಎಂದರೆ, 1962ರ ಚೀನಾ ಭಾರತ ಯುದ್ಧದ ನಾಶ ನಷ್ಟಗಳಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಆ ಸಂದರ್ಭದ ಲಾಭ ಪಡೆದುಕೊಂಡು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಬಯಸಿತ್ತು. ಈ ಅವಧಿಯಲ್ಲಿ ಪಾಕಿಸ್ಥಾನ ಮತ್ತು ಚೀನಾ ಗೆಳೆತನ ಹೆಚ್ಚಾಗಿತ್ತು. 1962ರ ಯುದ್ಧದಲ್ಲಿ ಭಾರತ ಸೋಲು ಅನುಭವಿಸಿದ್ದು ಕಂಡ ಪಾಕಿಸ್ತಾನ, ಅಳೆದೂ ತೂಗಿ ಲೆಕ್ಕಾಚಾರ ಹಾಕಿ 1965ರಲ್ಲಿ ಮತ್ತೊಮ್ಮೆ ದಾಳಿ ನಡೆಸಿತು. 1965 ಏಪ್ರಿಲ್ 24ರಂದು ಪಾಕಿಸ್ತಾನದ ಸೇನೆ ಕಛ್‌ನ ರಣ್ ಪ್ರಾಂತ್ಯದಲ್ಲಿ 6 ರಿಂದ 8 ಮೈಲಿ ಅತಿಕ್ರಮಣ ನಡೆಸಿ ಭಾರತದ ಭೂಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದು 1960ರ ಭಾರತ - ಪಾಕಿಸ್ತಾನ ಗಡಿ ಒಪ್ಪಂದ ಹಾಗೂ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿತ್ತು. ಇದೇ ವೇಳೆ ಪಾಕಿಸ್ತಾನ ಸೇನೆ ಆಪರೇಷನ್ ಗಿಬ್ರಾಲ್ಡರ್ ಹೆಸರಿನಲ್ಲಿ ಕಾಶ್ಮೀರ ಭಾಗದಲ್ಲೂ ಅತಿಕ್ರಮಣ ನಡೆಸಿತು.
ಎರಡನೇ ವಿಶ್ವ ಮಹಾಯುದ್ಧದ ಬಳಿಕ ನಡೆದ ಅತಿದೊಡ್ಡ ಟ್ಯಾಂಕ್ ಕದನ
ಭಾರತ- ಪಾಕ್ ಯುದ್ಧ 1965ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಿತು. ಎರಡನೇ ವಿಶ್ವ ಮಹಾಯುದ್ಧದ ಬಳಿಕ ನಡೆದ ಅತಿದೊಡ್ಡ ಟ್ಯಾಂಕ್ ಕದನ ಅದಾಗಿತ್ತು. ಭಾರತದ ಸಶಸ್ತ್ರ ಪಡೆಗಳು ಬದ್ಧತೆ, ಶೌರ್ಯ, ಕ್ಷಿಪ್ರ ಕಾರ್ಯಾಚರಣೆ ಮೂಲಕ ಗಮನಸೆಳೆದವು. ದೇಶ ಮೊದಲು ಎಂಬ ಭಾವವನ್ನು ಜಾಗೃತಗೊಳಿಸಿದ ಭಾರತೀಯ ಯೋಧರು, ಬಹುದೊಡ್ಡ ತ್ಯಾಗ ಬಲಿದಾನದ ಮೂಲಕ ಭಾರತದ ಗಡಿ ರಕ್ಷಣೆ ಮಾಡಿದರು. ಈ ಯುದ್ಧ ಮೂರು ಹಂತಗಳಲ್ಲಿ ನಡೆಯಿತು. ಪಾಕಿಸ್ತಾನ ಮೊದಲು ಕಛ್ ಭಾಗದಲ್ಲಿ ಆಕ್ರಮಣ ಮಾಡಿ ಭೂಭಾಗ ಅತಿಕ್ರಿಮಿಸಿತು. ನಂತರ ಕಾಶ್ಮೀರದ ಭಾಗದಲ್ಲಿ ಒಳನುಸುಳಿತು. ನೇಪಾಳ ಭಾಗದಲ್ಲಿ ಒಳನುಸುಳುವುದಕ್ಕೆ ಪ್ರಯತ್ನಿಸಿತು. ಈ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುವಂತೆ ಭಾರತದ ಸೇನೆಯೂ ಲಾಹೋರ್ ಸಮೀಪದ ತನಕ ಹೋಯಿತು. ಶಖರ್‌ಗಡದಲ್ಲಿ ಪೂನಾ ಹೋರ್ಸ್ ಟ್ಯಾಂಕ್ ರೆಜಿಮೆಂಟ್ ಮುನ್ನಡೆಸಿದ್ದ ಲೆಫ್ಟಿನೆಂಟ್ ಕರ್ನಲ್ ಆದಿ ತಾರಾಪೂರ್ ಹಾಗೂ ಅಸಲ್ ಉತ್ತರ್ ಕದನಲ್ಲಿ 4 ಗ್ರೆನೆಡಿಯರ್ಸ್ ಮುನ್ನಡೆಸಿದ ಸಿಕ್ಯೂಎಂಎಚ್ ಅಬ್ದುಲ್ ಹಮೀದ್ ಅವರ ತಂಡಗಳ ಶೌರ್ಯ ಸಾಹಸಗಳು ಪಾಕಿಸ್ತಾನಿ ಟ್ಯಾಂಕ್‌ಗಳ ನಾಶಕ್ಕೆ ಕಾರಣವಾಯಿತು. ಇಬ್ಬರಿಗೂ ಪರಮ ವೀರ ಚಕ್ರ ಪ್ರಶಸ್ತಿಗಳು ಸಿಕ್ಕಿವೆ. ಹೀಗೆ ಅನೇಕಾನೇಕ ಯೋಧರು ತಮ್ಮದೇ ರೀತಿಯಲ್ಲಿ ಭಾರತದ ಗಡಿ ರಕ್ಷಣೆಯ ಹೋರಾಟ ನಡೆಸಿದ್ದರು. ಆದ್ದರಿಂದ 1965 ರ ಯುದ್ಧವು ಪಾಕಿಸ್ತಾನದ ಕಾರ್ಯತಂತ್ರದ ಉದ್ದೇಶ ಈಡೇರದಂತೆ ತಡೆಯುವಲ್ಲಿ ಸಫಲವಾಯಿತು. ಮತ್ತೊಂದೆಡೆ, ಭಾರತೀಯ ಸೇನೆಗೆ 1962ರ ಸೋಲಿನ ಆಘಾತದಿಂದ ಹೊರಬಂದು ಆತ್ಮವಿಶ್ವಾಸ, ಗೌರವ ಮತ್ತು ಸ್ವಾಭಿಮಾನವನ್ನು ಮರಳಿ ಪಡೆಯಲು ನೆರವಾಯಿತು.
1965ರ ಭಾರತ - ಪಾಕಿಸ್ತಾನ ಕದನದಲ್ಲಿ ಪಾಕಿಸ್ತಾನ 417 ಯುದ್ಧ ಟ್ಯಾಂಕ್‌ಗಳನ್ನು ಕಳೆದುಕೊಂಡಿತು. ಭಾರತದ 123 ಟ್ಯಾಂಕ್‌ಗಳು ನಾಶವಾದವು. ಪಾಕಿಸ್ತಾನದ 73 ಯುದ್ಧ ವಿಮಾನಗಳು ಧರೆಗುರುಳಿವೆ. ಭಾರತದ 35 ಯುದ್ಧ ವಿಮಾನಗಳು ನಾಶವಾದವು. 1965ರ ಸೆಪ್ಟೆಂಬರ್ 27 ರಂದು ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಯುದ್ಧ ಪೂರ್ವದ ಯಥಾ ಸ್ಥಿತಿ ಕಾಪಾಡುವ ಸಲುವಾಗಿ ಪರಸ್ಪರ ಅತಿಕ್ರಮಿಸಿಕೊಂಡ ಭೂಮಿಯನ್ನು ಬಿಟ್ಟುಕೊಟ್ಟವು. ಎಲ್ಲ ಕಡೆ ಪಾಕಿಸ್ತಾನಕ್ಕೆ ಮುಖಭಂಗವಾದಾಗ ಜಮ್ಮು-ಕಾಶ್ಮೀರವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಪ್ರಯತ್ನ ವಿಫಲವಾಗುತ್ತಿದ್ದಂತೆ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಯ ಮೊರೆ ಹೋಯಿತು. ಬ್ರಿಟನ್ ಮತ್ತು ವಿಶ್ವಸಂಸ್ಥೆ ಮಾತುಕತೆ ಹಾಗೂ ಸೋವಿಯತ್ ಯೂನಿಯನ್ ಮಧ್ಯಸ್ಥಿಕೆಯಲ್ಲಿ ತಾಷ್ಕೆಂಟ್ ಒಪ್ಪಂದ (1966ರ ಜನವರಿ 10) ಏರ್ಪಟ್ಟಿತು.
