ಮಹಾಕುಂಭಕ್ಕೆ ಹೊರಟಿದ್ದೀರಾ? ಇವಿಷ್ಟು ಸಿದ್ಧತೆಗಳೊಂದಿಗೆ ಹೊರಟರೆ ದಿಕ್ಕು ಕಾಣದೇ ಅಲೆದಾಡುವುದು ತಪ್ಪುತ್ತದೆ; ಶ್ರೀನಿಧಿ ಡಿಎಸ್ ಬರಹ
ಮಹಾಕುಂಭ ಮೇಳವು ಭಾರತದಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ.ಕುಂಭ ಮೇಳದ ಬಗ್ಗೆ ಈಗಾಗಲೇ ಬಹಳಷ್ಟು ಬರಹಗಳನ್ನ ನೀವು ಓದಿರಬಹುದು. ನೀವು ಅಲ್ಲಿಗೆ ಹೋದ ಮೇಲೆ ಏನು ಮಾಡಬೇಕು ಎನ್ನುವುದರ ಬಗ್ಗೆ ಶ್ರೀನಿಧಿ ಡಿಎಸ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಮಹಾಕುಂಭ ಮೇಳವು ಭಾರತದಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಹಿಂದೂ ಹಬ್ಬವಾಗಿದೆ. ಈ ಬಾರಿ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಲಕ್ಷೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕುಂಭ ಮೇಳದ ಬಗ್ಗೆ ಈಗಾಗಲೇ ಬಹಳಷ್ಟು ಬರಹಗಳನ್ನ ನೀವು ಓದಿರಬಹುದು. ನೀವು ಅಲ್ಲಿಗೆ ಹೋದ ಮೇಲೆ ಏನು ಮಾಡಬೇಕು ಎನ್ನುವುದರ ಬಗ್ಗೆ ಶ್ರೀನಿಧಿ ಡಿಎಸ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
ಮಹಾ ಕುಂಭಕ್ಕೆ ಹೊರಟಿದ್ದೀರಾ?
ಕುಂಭ ಮೇಳದ ಬಗ್ಗೆ ಈಗಾಗಲೇ ಬಹಳಷ್ಟು ಬರಹಗಳನ್ನ ನೀವು ಓದಿರಬಹುದು. ಕರ್ನಾಟಕದಿಂದ ಹೇಗೆ ಹೋಗಬೇಕು ರೈಲು ವಿಮಾನದ ವಿವರಗಳನ್ನು ಮತ್ತು ಅಲ್ಲಿ ಉಳಿದುಕೊಳ್ಳಲು ಏನು ಮಾಡಬೇಕು ಎನ್ನುವುದರ ಬಗ್ಗೆ ತುಂಬ ಮಂದಿ ಬರೆದಿದ್ದಾರೆ. ಗೂಗಲ್ ಜಾಲಾಡಿದರೂ ಬಹಳ ವಿಚಾರಗಳು ತಿಳಿಯುತ್ತವೆ. ಉಚಿತ ಉಳಿದುಕೊಳ್ಳುವ ವ್ಯವಸ್ಥೆಯಿಂದ ಹಿಡಿದು ದಿನಕ್ಕೆ ಒಂದೆರಡು ಲಕ್ಷಗಳವರೆಗಿನ ವಸತಿ ವ್ಯವಸ್ಥೆಗಳ ಬಗ್ಗೆ ವಿವರಗಳನ್ನ ನೋಡಿರುತ್ತೀರಿ. ಮತ್ತು ನಿಮ್ಮಲ್ಲಿ ಬಹಳಷ್ಟು ಮಂದಿ ಈಗಾಗಲೇ ಪ್ರಯಾಣ ಮತ್ತು ವಸತಿಯ ವ್ಯವಸ್ಥೆಯನ್ನ ಮಾಡಿಕೊಂಡಿರಬಹುದು.
ಹೀಗಾಗಿ ಈ ಬರಹ-ನೀವು ಅಲ್ಲಿಗೆ ಹೋದ ಮೇಲೆ ಏನು ಮಾಡಬೇಕು ಎನ್ನುವುದರ ಬಗ್ಗೆ. ಆರು ವರ್ಷಗಳ ಹಿಂದಿನ ಕುಂಭಕ್ಕೆ ಹೋದ ನನ್ನ ಸೀಮಿತ ಅನುಭವದ ಆಧಾರದಲ್ಲಿ ಇದನ್ನ ಬರೆದಿದ್ದೇನೆ. ಈ ಬಾರಿಯ ಕುಂಭಮೇಳಕ್ಕೆ ಹೊರಟಿರುವ ಆಸಕ್ತರು ಇದನ್ನ ಓದಿಕೊಳ್ಳಿ.
1. ಕುಂಭ ಮೇಳ ನಡೆಯುವುದು, ಗಂಗಾ ನದಿಯ ಬಯಲಿನಲ್ಲಿ. ಆದರೆ- ನಮ್ಮ ಬೆಂಗಳೂರಿನ ಪ್ಯಾಲೇಸ್ ಗ್ರೌಂಡೋ/ ಅಥವಾ ಬೇರೆ ಯಾವುದೋ ಊರಿನ ಬಯಲುಗಳಲ್ಲೋ ನಡೆಯುವ ಜಾತ್ರೆಯ ಹಾಗಲ್ಲ. ಪ್ರಯಾಗದಲ್ಲಿ ವಿಸ್ತಾರವಾಗಿ ಹರಿಯುವ ಗಂಗಾ ನದಿಯ ನೀರು ಮಳೆಗಾಲ ಕಳೆದ ಮೇಲೆ ಇಳಿಯಲು ಶುರುವಾಗುತ್ತದೆ. ಹಾಗೆ ಇಳಿದ ಜಾಗದಲ್ಲಿ- ಕೇವಲ ಕುಂಭಮೇಳದ ಉದ್ದೇಶಕ್ಕಾಗಿಯೇ ಕಟ್ಟಲ್ಪಡುವ Make-shift ನಗರ ಇದು. ಮುಂದಿನ ಮಳೆಗಾಲದಲ್ಲಿ ಬಂದು ನೋಡಿದರೆ, ಇದೇ ಜಾಗದಲ್ಲಿ ಗಂಗೆ ಹರಿಯುತ್ತಿರುತ್ತಾಳೆ- ಕೋಟಿ ಕೋಟಿ ಜನರು ಬಂದು ಹೋದ ಯಾವ ಸುಳಿವೂ ಕಾಣದ ಹಾಗೆ.
2. ಹೀಗೆ ಕಟ್ಟಿರುವ ನಗರದ ಒಟ್ಟು ವಿಸ್ತೀರ್ಣ- ನಲವತ್ತು ಚದರ ಕಿಲೋಮೀಟರುಗಳು. ನಾವು ಏನೇ ಮಾಡಿದರೂ ಒಂದೋ ಎರಡೋ ದಿನಗಳ ಕಾಲ ಕುಂಭ ಮೇಳಕ್ಕೆ ಹೋದರೆ- ಅದನ್ನ ಪೂರ್ತಿಯಾಗಿ ನೋಡುವುದು ಸಾಧ್ಯವೇ ಇಲ್ಲ! ಏಕೆಂದರೆ ಇಷ್ಟು ಅಗಾಧ ಜಾಗವನ್ನು ಓಡಾಡಲು ತಿಂಗಳಿದ್ದರೂ ಸಾಲದು. ಗಂಗೆಯ ಮಣ್ಣಿನ ಮೇಲೆ ಸುಮ್ಮನೇ ಟೆಂಪರರಿಯಾಗಿ ಕಬ್ಬಿಣದ ಪಟ್ಟಿಗಳನ್ನ ಹೊಡೆದು ಮಾಡಿರೋ ರಸ್ತೆಯೇ ಈ ಸಲ ಸುಮಾರು 400 ಕಿಲೋಮೀಟರ್ ಇದೆಯಂತೆ! ಹಾಗಿದ್ದಾಗ- ನೀವು ಏನನ್ನ ನೋಡಬೇಕು- ಹೇಗೆ ನೋಡಬೇಕು ಎನ್ನುವುದನ್ನ ಮೊದಲೇ ಪಟ್ಟಿ ಮಾಡಿಕೊಂಡು ಹೋಗದೇ ಇದ್ದರೆ- ಕುರುಡರು ಆನೆ ಮುಟ್ಟಿದ ಕಥೆಯಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಕುಂಭ ನಗರಿಯ ಒಳಗೆ ನೀವು ನಡೆದೇ ಓಡಾಡಬೇಕು! ಇದಕ್ಕೆ ಬೇರೆ ಪರ್ಯಾಯ ವ್ಯವಸ್ಥೆ ಇಲ್ಲ! ಜನಸಂದಣಿ ಹಾಗಿರುವುದರಿಂದ- ನಗರದಿಂದಲೇ ಇಲ್ಲಿಗೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಇರುತ್ತದೆ.
3. ಇಲ್ಲಿ ಮೊದಲಿಗೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಿರುವುದು, ಸೆಕ್ಟರ್‌ಗಳ ಬಗ್ಗೆ. ಗಂಗೆಯ ಘಾಟುಗಳ ಸುತ್ತಮುತ್ತ ಕಟ್ಟಿರುವ ಈ ಕುಂಭನಗರದಲ್ಲಿ- ಈ ಬಾರಿ ಒಟ್ಟೂ 25 ಸೆಕ್ಟರುಗಳು ಇದ್ದಾವೆ. ಈ ಸೆಕ್ಟರ್‌ಗಳು ಎಲ್ಲಿವೆ ಮತ್ತು ಅವುಗಳು ಯಾವ ಸ್ಥಳದಲ್ಲಿ ಇದಾವೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ವಿಷಯ. ಈ ಸೆಕ್ಟರುಗಳನ್ನ ಪರಸ್ಪರ ಸಂಪರ್ಕ ಮಾಡಲು ನದಿಯಲ್ಲಿ 30 Pontoon Bridge ಗಳನ್ನ ನಿರ್ಮಿಸಲಾಗಿದೆ. ಈ ಬ್ರಿಡ್ಜ್ ಗಳು ಇದಾವಲ್ಲ- ಇವುಗಳಿಗೂ ನಂಬರ್ ಗಳನ್ನ ಕೊಡಲಾಗಿರುತ್ತದೆ- ಮತ್ತು ಸೆಕ್ಟರ್ ನಂಬರ್ ಗಳು- ಬ್ರಿಡ್ಜ್ ನಂಬರ್ ಗಳನ್ನ ತಿಳಿದುಕೊಳ್ಳುವುದು ಕುಂಭ ಮೇಳದಲ್ಲಿ ಓಡಾಡಲು ಬೇಕಾದ ಮೊದಲ ತಯಾರಿ! ಉದಾಹರಣೆ ಬ್ರಿಡ್ಜ್ ನಂಬರ್ 3, ಸೆಕ್ಟರ್ 5 ಅನ್ನು ಸಂಪರ್ಕಿಸುತ್ತದೆ ಎಂದಾದರೆ, ಅಲ್ಲಿಂದ ವಾಪಸ್ ಬರಲು ಬ್ರಿಡ್ಜ್ 6 ಅನ್ನು ಬಳಸಬೇಕಿರಬಹುದು. ಹೋಗುವುದಕ್ಕೆ ಮತ್ತು ಬರುವುದಕ್ಕೆ ಬೇರೆ ಬೇರೆ ಬ್ರಿಡ್ಜ್ ಅನ್ನು ಬಳಸಬೇಕಿರುತ್ತದೆ. ಕಾಲ್ತುಳಿತ ಆಗಬಾರದು ಎಂಬ ಕಾರಣಕ್ಕೆ- ಒಂದೇ ಸೇತುವೆಯಲ್ಲಿ ಹೋಗುವುದಕ್ಕೂ ಬರುವುದಕ್ಕೂ ಅವಕಾಶ ಇರುವುದು ಕಡಿಮೆ.
4. ಈ ಬ್ರಿಡ್ಜ್‌ಗಳಲ್ಲಿ ನೀವು ಒಮ್ಮೆ ಯಡವಟ್ಟು ಮಾಡಿಕೊಂಡರೂ ಕೂಡ ಆಮೇಲೆ ಹತ್ತಾರು ಕಿಲೋಮೀಟರುಗಟ್ಟಲೆ ಸುತ್ತುಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಪ್ಪಯ್ಯ ಅಂದರೂ ಪೊಲೀಸರು ನಿಮ್ಮನ್ನ ಹೋದ ಸೇತುವೆಯಲ್ಲೇ ವಾಪಸ್ ಬರೋದಕ್ಕೆ ಬಿಡೋದೇ ಇಲ್ಲ. ನದಿಯ ಎರಡೂ ದಡಗಳಲ್ಲಿ ಅಖಾಡಾಗಳು, ಬೇರೆ ಬೇರೆ ಸಂತರ ಮಹಂತರ ದೇಗುಲಗಳು ಇರುತ್ತವೆ. ಅಖಂಡ ಭಜನೆ, ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳು- ಎಲ್ಲವೂ ಅಹೋರಾತ್ರಿ ನಡೆಯುತ್ತಿರುತ್ತವೆ. ತೀರಾ ದಾರಿ ತಪ್ಪಿಕೊಂಡರೂ ದೊಡ್ಡ ಸಮಸ್ಯೆ ಏನೂ ಆಗಲಾರದು, ಅದು ಬೇರೆ ವಿಷಯ.
5. ಇನ್ನು ನಾಗಾ ಸಾಧುಗಳ ಅಖಾಡಾಗಳು. ಹೆಚ್ಚಿನ ಮಂದಿ ಕುಂಭ ಮೇಳಕ್ಕೆ ಹೋಗುವುದು ಈ ಅಘೋರಿಗಳನ್ನ, ನಾಗಾ ಸಾಧುಗಳನ್ನ ನೋಡಲು. ಇವರು ಎಲ್ಲಿ ಉಳಿದುಕೊಂಡಿದ್ದಾರೆ- ಅವರ ಅಖಾಡಾಗಳು ಎಲ್ಲಿವೆ ಎಂಬುದನ್ನ ಮೊದಲೇ ತಿಳಿದುಕೊಳ್ಳಿ. ಈ ಬಾರಿ ಅರ್ಧಕ್ಕರ್ಧ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಅಲ್ಲೇ ಇರೋದ್ರಿಂದ- ನಿಮಗೆ ಎಷ್ಟರ ಮಟ್ಟಿಗೆ ಆ ನೂಕುನುಗ್ಗಲಿನಲ್ಲಿ ಪ್ರಯೋಜನವಾಗುವುದೋ, ತಿಳಿಯದು. ಅತಿಯಾದ ಜನರ ಕಿರಿಕಿರಿಯ ಕಾರಣಕ್ಕೆ ಸಾಧುಗಳು ರೇಗಬಹುದು, ಬೈಯಬಹುದು. ಇದಕ್ಕೂ ಸಿದ್ದರಾಗಿ ಹೋಗಿ. ಯಾರಾದರೂ ಈಗಾಗಲೇ ಹೋದವರು ಇದ್ದರೆ ಸಾಧುಗಳ ಅಖಾಡಾ ಇರುವ ಸೆಕ್ಟರ್‌ಗಳ ಸಂಖ್ಯೆಯನ್ನ ಇಲ್ಲೇ ತಿಳಿಸಿದರೂ ಅನುಕೂಲ.
6. ಇಷ್ಟೆಲ್ಲ ಓದಿದ ಮೇಲೆ ನಿಮಗೆ ಅರ್ಥವಾಗಿರಬಹುದು- ಕುಂಭಮೇಳದಲ್ಲಿ ನಡಿಗೆ ಕಡಿಮೆ ಮಾಡಲು ಸಾಧ್ಯವಿಲ್ಲ! ನದಿಗಳ ಮೇಲಿನ ಓಡಾಟ- ಸುತ್ತು ಬಳಸಿದ ನಡಿಗೆಯ ಕಾರಣಕ್ಕೆ ಆದಷ್ಟೂ ಓಡಾಡಲೇ ಬೇಕಾಗುತ್ತದೆ. ಇನ್ನು ನೀವು ಛಾಯಾಚಿತ್ರಗ್ರಾಹಕರಾಗಿದ್ದರೆ, ಕುಂಭವನ್ನು ಆದಷ್ಟೂ ಕಣ್ತುಂಬಿಕೊಳ್ಳಬೇಕೆಂಬ ಬಯಕೆ ಉಳ್ಳವರಾಗಿದ್ದರೆ- ದಿನಕ್ಕೆ ಹೆಚ್ಚೂ ಕಡಿಮೆ ಹದಿನೈದು- ಇಪ್ಪತ್ತು ಕಿಲೋಮೀಟರ್‌ಗಳಷ್ಟು ನಡೆಯುವುದು ಕಡ್ಡಾಯ! ಕಳೆದ ಬಾರಿ ನಮ್ಮ ತಂಡ ಮೂರು ದಿನಗಳಲ್ಲಿ ಎಂಬತ್ತು ಕಿಲೋಮೀಟರ್ ಓಡಾಡಿದ್ದೆವು. ಹೀಗಾಗಿ ಇದಕ್ಕೆ ತಯಾರಾಗಿಯೇ ಹೊರಡಿ.
7. ಹವಾಮಾನಕ್ಕೆ ವಿಷಯಕ್ಕೆ ಬಂದರೆ, ಜನವರಿ ಫೆಬ್ರವರಿ ತಿಂಗಳಲ್ಲಿ ಪ್ರಯಾಗದಲ್ಲಿ ಅತಿಯಾದ ಚಳಿ. ಹವಾಮಾನ ಅಪ್ಲಿಕೇಶನ್‍ಗಳಲ್ಲಿ ಕಾಣುವ ಟೆಂಪರೇಚರ್‌ಗೂ, ಅಲ್ಲಿನ ಅನುಭವಕ್ಕೂ ಅಜಗಜಾಂತರ. ಗಂಗೆಯಿಂದ ಬಹಳ ತಂಪಾದ ಗಾಳಿ ಬೀಸಿ ಬರುವ ಕಾರಣಕ್ಕಾಗಿ 5 ಡಿಗ್ರಿಯ ತಾಪಮಾನ, ಸೊನ್ನೆಗಿಂತ ಕಡಿಮೆ ಅನ್ನಿಸುತ್ತದೆ. ಕುಂಭ ನಗರಿಯಲ್ಲಿ ಸ್ವಲ್ಪ ಹೆಚ್ಚೇ ಧೂಳು/ ಚಳಿ ಇರುವ ಕಾರಣ ಒಳ್ಳೆಯ ಜಾಕೆಟ್/Windcheater, ಸ್ವೆಟರು ಟೊಪ್ಪಿ ಗ್ಲೌಸುಗಳು ಕಡ್ಡಾಯ. ಮೂಗು ಮುಚ್ಚಿಕೊಳ್ಳುವ ಬಂದಾನ/ ಬಾಲಾಕ್ಲಾವಾ ಇರಲಿ. ಎಷ್ಟೇ ನಡೆದರೂ ತೊಂದರೆ ಕೊಡದ ಉತ್ತಮ ಶೂಗಳು ಇದ್ದರೆ ಒಳ್ಳೆಯದು.
8. ಇನ್ನು ಊಟ ತಿಂಡಿಗಂತೂ ಯಾವ ಸಮಸ್ಯೆಯೂ ಇಲ್ಲ. ಎಲ್ಲ ಕಡೆ ಉಚಿತ ಅನ್ನದಾಸೋಹ ನಡೆಯುತ್ತಲೇ ಇರುತ್ತವೆ. ಪೂರಿ, ಪರೋಟ, ಅನ್ನ ದಾಲ್ ಮೊದಲಾದ ಥರಹೇವಾರಿ ಆಹಾರವನ್ನು ಹಂಚುವ ಮಂದಿ ಎಲ್ಲೆಡೆ ಇರುತ್ತಾರೆ. ಸಂತರುಗಳ ಟೆಂಟುಗಳ ಪಕ್ಕದಲ್ಲಿ ಅನ್ನದಾನ ಸರ್ವೇಸಾಮಾನ್ಯ. ಕಾಫಿ, ಟೀ, ಬಾದಾಮಿ ಹಾಲು, ಕೇಸರಿ ಹಾಲು ಹಂಚುವವರು ಕೂಡ ಇದ್ದಾರೆ. ಕಳೆದ ಬಾರಿ ಹೆಜ್ಜೆ ಹೆಜ್ಜೆಗೂ ಇಂತಹ ದಾನಿಗಳನ್ನ ನಾನು ಕಂಡಿದ್ದೆ. ಇನ್ನು, ನೂರಾರು ಹೋಟೆಲುಗಳು ತೆರೆದಿದ್ದಾವೆ. ಶುಚಿಯ ಬಗ್ಗೆ ಗಮನಕೊಡುವವರು ನೀವಾಗಿದ್ದರೆ, ಧೂಳು ಕಡಿಮೆ ಇರುವ- ಕೊಂಚ ಉತ್ತಮ ಜಾಗಗಳನ್ನ ಹುಡುಕಿಕೊಳ್ಳಿರಿ.
9. ಶಾಹೀ ಸ್ನಾನದ ದಿನಗಳಲ್ಲಿ ಹೋಗುವುದೇ ಆದರೆ- ನಿಮ್ಮ ಕಲ್ಪನೆಗೂ ಮೀರಿದ ಜನಸಂದಣಿಯಲ್ಲಿ ಓಡಾಡಲು ಸಿದ್ದರಾಗಿ ಹೋಗಿ. ಕಳೆದ ಬಾರಿ ನಾವು ಅಂಥದೇ ಒಂದು ದಿನ ಅಲ್ಲಿದ್ದೆವು ಮತ್ತು ಅಂದು ಅಲ್ಲಿ ಸುಮಾರು ಒಂದು ಕೋಟಿ ಜನ ಇದ್ದರಂತೆ! ಹಾಗಾಗಿ, ಅಂದು ಬೆಲೆಬಾಳುವ ಒಡವೆಗಳು ಮೈ ಮೇಲೆ ಇರುವುದು ಬೇಡ. ಯಾರೋ ಕದ್ದು ಬಿಡುತ್ತಾರೆ ಅಂತಲ್ಲ- ಆ ಜನರ ತಳ್ಳಾಟದ ಮಧ್ಯೆ ಸರ ಬ್ರೇಸ್ಲೇಟುಗಳು ಉದುರಿ ಬಿದ್ದರೂ ತಿಳಿಯಲಾರದು! ತ್ರಿವೇಣೀ ಸಂಗಮದ ಜಾಗಕ್ಕೆ ಕೇವಲ ಸಾಧುಗಳಿಗೆ ಮಾತ್ರವೇ ಪ್ರವೇಶ ಇರುವುದರಿಂದ ಆ ಕಡೆ ಹೋಗಲೇ ಬೇಡಿ. ನದಿ ದಂಡೆಯಲ್ಲಿ ಎಲ್ಲಿ ಜಾಗ ಸಿಗುತ್ತದೋ, ಅಲ್ಲೇ ಸ್ನಾನ ಮಾಡುವುದು ಉತ್ತಮ.
10. ಈ ಬಾರಿ ಸೆಕ್ಯುರಿಟಿ ವ್ಯವಸ್ಥೆಯನ್ನು ಬಹಳ ಉತ್ತಮವಾಗಿ ಮಾಡಿದ್ದಾರೆ ಎನ್ನುವ ವರದಿಗಳನ್ನ ಓದಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರು ಇದ್ದೇ ಇರುತ್ತಾರೆ. ನಿಮ್ಮ ಜೊತೆಗಾರರು ಕಳೆದು ಹೋದರೆ ‘ಖೋಯಾ ಪಾಯಾ ಕೇಂದ್ರಗಳು’ ಅಲ್ಲಲ್ಲಿ ಇದ್ದೇ ಇರುತ್ತವೆ. ಮೊಬೈಲ್ ನೆಟ್ವರ್ಕ್ ಉತ್ತಮಗೊಳಿಸಲು ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ಉಚಿತ ವೈಫೈಗಳೂ ಕೇಂದ್ರಗಳೂ ಇರಲಿವೆ. ಐವತ್ತು ಅರವತ್ತು ಸಾವಿರಕ್ಕೂ ಹೆಚ್ಚು ಶೌಚಾಲಯಗಳ ವ್ಯವಸ್ಥೆಯೂ ಇದೆ. ಇಲ್ಲಿನ ನೈರ್ಮಲ್ಯದ ಬಗ್ಗೆ ಈಗಲೇ ಏನೂ ಹೇಳಲಾಗದು. ಹೀಗಾಗಿ ಹೆಣ್ಣು ಮಕ್ಕಳು Pee safe/ Pee Buddy- ಥರದವನ್ನು ಜೊತೆಗೆ ಇಟ್ಟುಕೊಳ್ಳುವುದು ಒಳಿತು.
11. ಕೇಂದ್ರ ಸರಕಾರ ಮಹಾಕುಂಭಕ್ಕೆ ಬರುವ ಜನರಿಗಾಗಿ ಮೊಬೈಲ್ ಅಪ್ಲಿಕೇಶನ್ ತಯಾರಿಸಿದೆ. ಮಹಾಕುಂಭ ಮೇಳ 2025 (Maha Kumbh Mela 2025) ಅನ್ನುವ ಈ ಅಪ್ಲಿಕೇಶನ್‍ನಲ್ಲಿ ಕುಂಭಮೇಳದ ಕುರಿತ ಬಹಳಷ್ಟು ಮಾಹಿತಿಗಳಿವೆ.
12. ಇನ್ನೂ ವಸತಿ ವ್ಯವಸ್ಥೆ ಮಾಡಿಕೊಳ್ಳದವರು ಇದ್ದರೆ, ಆದಷ್ಟೂ ತ್ರಿವೇಣಿ ಸಂಗಮದ ಆರರಿಂದ ಎಂಟು ಕಿಲೋಮೀಟರ್‌ಗಳ ಒಳಗೆ ಹೋಟೇಲ್/ಟೆಂಟು ಸಿಗುತ್ತದೆಯೋ ನೋಡಿಕೊಳ್ಳಿ. ಏಕೆಂದರೆ ಅಷ್ಟೂ ದೂರವನ್ನು ನೀವು ಹೆಚ್ಚಾಗಿ ನಡೆದೇ ಓಡಾಡಬೇಕು! ನಗರದ ಒಳಗೆ ಹೋಟೇಲ್ ಬುಕ್ ಮಾಡಿಕೊಂಡರೆ ನೀವು ಕುಂಭ ನಗರಿಗೆ ಬಂದು ಮುಟ್ಟಲೇ ತಾಸುಗಟ್ಟಲೇ ಸಮಯ ಬೇಕಾಗುವ ಅಪಾಯ ಇದೆ.
ಇವಿಷ್ಟು ಸಿದ್ಧತೆಗಳೊಂದಿಗೆ ನೀವು ಹೊರಟರೆ ಮಹಾ ಕುಂಭಮೇಳದಲ್ಲಿ ದಿಕ್ಕುಗಾಣದೇ ಓಡಾಡುವುದು ತಪ್ಪುತ್ತದೆ. ಇರುವಷ್ಟು ಸಮಯದಲ್ಲೇ ಕುಂಭದ ಆದಷ್ಟೂ ಅಂಶಗಳನ್ನು ಕಾಣಲು/ಅನುಭವಿಸಲು ಸಾಧ್ಯವಾಗುತ್ತದೆ. ಬದುಕು ಬದಲಿಸುವ, ಜಗತ್ತು ಹೀಗೂ ಇದೆಯೇ ಎಂದು ಅನ್ನಿಸುವಂತೆ ಮಾಡುವ ಈ ಮಹಾಮೇಳವನ್ನು ವರ್ಣಿಸಲು ಪದಗಳೇ ಇಲ್ಲ! ಇಂತಹ ಕುಂಭಮೇಳದ ಸಂಭ್ರಮದಲ್ಲಿ ನಿಮ್ಮನ್ನ ನೀವು ಕಂಡುಕೊಳ್ಳುವಂತಾಗಲಿ! ಒಮ್ಮೆ ನೀವು ಕುಂಭಮೇಳಕ್ಕೆ ಹೋದರೆ, ಬದುಕಿರುವಷ್ಟೂ ಕಾಲ ಮುಂದೆ ನಡೆಯುವ ಕುಂಭಮೇಳಗಳಿಗೆ ಹೋಗುವ ಚಡಪಡಿಕೆ ಆಗಿಯೇ ಆಗುತ್ತದೆ. ಆ ಸೆಳೆತವೇ ಅಂಥದ್ದು.
ಶುಭವಾಗಲಿ! ಹರ ಹರ ಮಹಾದೇವ್!
ಕುಂಭಮೇಳದಲ್ಲಿ ಸಿಗೋಣ

ವಿಭಾಗ