ಶ್ರೀಶೈಲದಲ್ಲಿ ಯುಗಾದಿ ಮಹೋತ್ಸವ: ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು
2025ರ ಮಾರ್ಚ್ 27 ರಿಂದ 31 ರವರಿಗೆ ಶ್ರೀಶೈಲಂನಲ್ಲಿ ಯುಗಾದಿ ಮಹೋತ್ಸವ ನಡೆಯಲಿದೆ. ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕಾಗಿ ಕರ್ನಾಟಕ, ಮಹಾರಾಷ್ಟ್ರದಿಂದ ಭಕ್ತರ ದಂಡೇ ಆಗಮಿಸುತ್ತಿದ್ದಾರೆ.

ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದ ಮಂದಿಯ ಪಾದಯಾತ್ರೆ ಆರಂಭವಾಗುವುದು ಶ್ರೀಶೈಲದ ಕಡೆಗೆ. 2025ರ ಮಾರ್ಚ್ 27 ರಿಂದ 31 ರವರಿಗೆ ಶ್ರೀಶೈಲದಲ್ಲಿ ಯುಗಾದಿ ಮಹೋತ್ಸವ ನಡೆಯುತ್ತದೆ. ಹೀಗಾಗಿ ಈ ಉತ್ಸವದಲ್ಲಿ ಭಾಗವಹಿಸಲು ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರ್ಗಿ, ಬೆಳಗಾವಿ, ಗದಗ ಹಾಗೂ ರಾಯಚೂರು ಭಕ್ತರು ಹೆಚ್ಚಾಗಿ ಪಾದಯಾತ್ರೆ ಮಾಡುತ್ತಾರೆ. ವಿಶೇಷವಾಗಿ ಕರ್ನಾಟಕದ ಗಡಿ ದಾಟಿ ಆಂಧ್ರದ ನಲ್ಲಮಲ್ಲ ಕಾಡಿನ ಮೂಲಕ ಪಾದಯಾತ್ರೆ ಕೈಗೊಂಡು ಶ್ರೀಶೈಲವನ್ನು ತಲುಪುತ್ತಾರೆ. ಶ್ರೀಶೈಲ ಯುಗಾದಿ ಮಹೋತ್ಸವದಲ್ಲಿ ಭಾಗವಹಿಸಿ, ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಕರ್ನಾಟಕದ ಭಕ್ತರು ಮಾತ್ರವಲ್ಲದೆ, ಮಹಾರಾಷ್ಟ್ರದ ಭಕ್ತರು ಕೂಡ ಈ ಸಂದರ್ಭದಲ್ಲಿ ಶ್ರೀಶೈಲಕ್ಕೆ ಆಗಮಿಸುತ್ತಾರೆ. ಇನ್ನ ಶ್ರೀಶೈಲಂ ದೇವಸ್ಥಾನ ಮತ್ತು ಜಿಲ್ಲಾಡಳಿತಗಳು ನಲ್ಲಮಲ್ಲ ಕಾಡಿನಲ್ಲಿ ನಡೆದು ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿವೆ. ಅರಣ್ಯ ಪ್ರದೇಶದಲ್ಲಿ ಆಶ್ರಯ ನೀಡಲು ತಾತ್ಕಾಲಿಕ ಶೆಡ್ ಗಳನ್ನು ಸಹ ನಿರ್ಮಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕೆಲವು ಭಕ್ತರು ಪಾದಯಾತ್ರಿಗಳಿಗೆ ಆತಿಥ್ಯವನ್ನು ನೀಡುತ್ತಿದ್ದಾರೆ. ಉಚಿತ ಆಹಾರ ಹಾಗೂ ವೈದ್ಯಕೀಯ ಸೇವೆಗಳನ್ನು ಕೂಡ ಒದಗಿಸುತ್ತಿದ್ದಾರೆ.
ಪ್ರತಿ ವರ್ಷ ಶ್ರೀಶೈಲದ ಯುಗಾದಿ ಉತ್ಸವದ ಸಮಯದಲ್ಲಿ ಭಕ್ತರು ದಂಡೇ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯ ದರ್ಶಕ್ಕೆ ಹರಿದು ಬರುತ್ತಿದೆ. ದೇವಾಲಯದಲ್ಲೂ ಕೂಡ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಮಹಾ ಶಿವರಾತ್ರಿ ಬ್ರಹ್ಮೋತ್ಸವಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಯುಗಾದಿ ಸಮಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರು ಶ್ರೀಶೈಲಕ್ಕೆ ಬರುವುದು ವಿಶೇಷ. ಕೆಲವು ಭಕ್ತರು ತಮ್ಮ ಹೊಲ ಗದ್ದೆ, ತೋಟಗಳಲ್ಲಿ ಬೆಳೆದ ಒಂದಷ್ಟು ಪಾಲು ಫಸಲನ್ನು ತಂದು ಭ್ರಮರಾಂಬ ದೇವರಿಗೆ ಅರ್ಪಿಸುತ್ತಾರೆ.
ಶ್ರೀಶೈಲ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ ಶ್ರೀನಿವಾಸ ರಾವ್ ಮಾತನಾಡಿ, ಶ್ರೀಶೈಲಂಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ನೂರಾರು ಕಿಲೋಮೀಟರ್ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಭಕ್ತರನ್ನು ಸ್ವೀಕರಿಸಲು ಕೈಲಾಸ ದ್ವಾರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಶಕ್ತಿಪೀಠ ಎಂದು ಪ್ರಸಿದ್ಧವಾಗಿದೆ.
