ಕುಂಭ ರಾಶಿಯಲ್ಲಿ ರವಿಯ ಸಂಚಾರ: ಮೇಷ ರಾಶಿಗೆ ಆರೋಗ್ಯ, ವೃಷಭಕ್ಕೆ ಧನಲಾಭ, ಮಿಥುನ, ಕಟಕ ರಾಶಿಯವರ ಮೇಲೂ ಇದೆ ಪರಿಣಾಮ
ಸದ್ಯದಲ್ಲೇ ಸೂರ್ಯನು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲಾಗಲಿದೆ. ರವಿ ಸಂಚಾರದಿಂದ ಮೇಷದಿಂದ ಕಟಕ ರಾಶಿವರೆಗೆ ಏನೆಲ್ಲಾ ಪರಿಣಾಮಗಳಾಗಲಿವೆ ನೋಡಿ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಫೆ 12 ರಂದು ರಾತ್ರಿ ಸುಮಾರು 9 ಗಂಟೆಗೆ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ ತಿಂಗಳ 14 ರವರೆಗೂ ಕುಂಭರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯ ಅಧಿಪತಿಯು ಶನಿ. ಶನಿಗೆ ಈ ರಾಶಿಯು ಸ್ವಕ್ಷೇತ್ರ ಮತ್ತು ಮೂಲತ್ರಿಕೋನ ರಾಶಿಯಾಗುತ್ತದೆ. ರವಿ ಮತ್ತು ಶನಿ ಗ್ರಹಗಳು ಪರಸ್ಪರ ಶತ್ರುಗಳಾಗುತ್ತಾರೆ. ರವಿಯನ್ನು ರಾಜಗ್ರಹ ಎಂದು ಕರೆಯುತ್ತೇವೆ. ಅಂದರೆ ರವಿಯು ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತದೆ. ಒಂದು ಕುಟುಂಬದ ಹಿರಿಯ ವ್ಯಕ್ತಿಯನ್ನು ಸೂಚಿಸುತ್ತಾನೆ. ಸಮಾಜದ ಗಣ್ಯವ್ಯಕ್ತಿಗಳನ್ನು ಸಹ ರವಿಯಿಂದ ತಿಳಿಯಬಹುದು. ಆದರೆ ಶನಿಯು ಕುಂಭದಲ್ಲಿ ಇರುವ ಕಾರಣ ರವಿಗಿಂತಲೂ ಶನಿಯ ಶಕ್ತಿಯೇ ಹೆಚ್ಚಾಗುತ್ತದೆ. ಅಂದರೆ ಕುಂಭದಲ್ಲಿ ರವಿ ಚಲಿಸುತ್ತಿರುವವರೆಗೂ ಹಿರಿಯ ಅಧಿಕಾರಿಗಳು, ಮನೆಗೆ ಹಿರಿಯರು, ತಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತಮ ಅವಕಾಶ ಮತ್ತು ಉತ್ತಮ ಪ್ರಯತ್ನಗಳ ನಡುವೆಯೂ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ನಿಧಾನತೆ ಕಂಡುಬರುತ್ತದೆ. ಪ್ರತಿಯೊಂದು ರಾಶಿಗಳ ಭವಿಷ್ಯದಲ್ಲಿ ವ್ಯತ್ಯಾಸವು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಶಿಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಈ ಬರಹದಲ್ಲಿ ವಿವರ ಇದೆ. ಕುಂಭ ರಾಶಿಯಲ್ಲಿ ರವಿಯ ಸಂಚಾರದಿಂದ ಮೇಷದಿಂದ ಕಟಕ ರಾಶಿವರೆಗೆ ಏನೆಲ್ಲಾ ಪರಿಣಾಮ ಆಗಲಿದೆ ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ
ಕೌಟುಂಬಿಕ ಜೀವನದಲ್ಲಿ ನಿಧಾನಗತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವುದರಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳು ಕೈಗೂಡಲಿವೆ. ನಿಮ್ಮ ತಂದೆ ಮತ್ತು ಹಿರಿಯ ಸೋದರ ಅಥವಾ ಸೋದರಿಯ ನಡುವೆ ಮನಸ್ತಾಪವಿರುತ್ತದೆ. ಉದ್ಯೋಗದ ಸಲುವಾಗಿ ಕುಟುಂಬದವರಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಬೇರೆಯವರ ಸಲುವಾಗಿ ಗಳಿಸಿದ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸದಾಕಾಲ ಚುರುಕುತನದಿಂದ ವರ್ತಿಸುವಿರಿ. ವಿದ್ಯಾರ್ಥಿಗಳು ನಿಧಾನಗತಿಯಲ್ಲಿ ತಮ್ಮ ಗುರಿಯನ್ನು ತಲುಪುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆಯನ್ನು ನೀಡುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಸೂಚನೆಗಳಿವೆ. ವಿದೇಶಕ್ಕೆ ತೆರಳುವ ಆಸೆ ಇದ್ದಲ್ಲಿ ಅದು ಕೈಗೂಡಬಹುದು. ಹೊಸ ವಾಹನಕೊಳ್ಳುವಿರಿ. ಆರೋಗ್ಯದ ವಿಚಾರದಲ್ಲಿ ವಾಯುದೋಷದ ಬಗ್ಗೆ ಎಚ್ಚರ ಇರಬೇಕು. ಆತ್ಮೀಯರ ವಿವಾದಗಳನ್ನು ಸಂಧಾನದ ಮೂಲಕ ಪರಿಹರಿಸುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ.
ವೃಷಭ ರಾಶಿ
ಎಲ್ಲರೂ ಮೆಚ್ಚುವ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬದ ಹಿರಿಯರ ಸಹಕಾರ ದೊರೆಯುತ್ತದೆ. ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಏರುಪೇರು ಕಂಡು ಬರುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡು ಬರುತ್ತದೆ. ದುಡುಕುತನದ ಮಾತುಕತೆಯಿಂದ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವಿರಿ. ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ತೋರುವುದು ಒಳ್ಳೆಯದು. ದೊರೆಯುವ ಅವಕಾಶಗಳನ್ನು ಸರಿಯಾದ ಮಾದರಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿ. ದುಡುಕಿನಿಂದ ಮಾತನಾಡುವುದು ಒಳ್ಳೆಯದಲ್ಲ. ಕುಟುಂಬದಲ್ಲಿ ಪರಸ್ಪರ ಸೌಹಾರ್ದ ನೆಲೆಸಿರುತ್ತದೆ. ದಾಂಪತ್ಯದಲ್ಲಿ ನೆಲೆಸಿದ್ದ ಬೇಸರವು ದೂರವಾಗುತ್ತದೆ. ಮನೆಯನ್ನು ಕೊಳ್ಳುವ ಅಥವಾ ಕಟ್ಟುವ ಯೋಚನೆಯು ನಿಧಾನಗತಿಯಲ್ಲಿ ನೆರವೇರುತ್ತದೆ. ನಿಮ್ಮ ತಾಯಿಯವರ ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಗೃಹಿಣಿಯರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ನಿರೀಕ್ಷಿತ ಧನಲಾಭವಿರುತ್ತದೆ. ಹಣವನ್ನು ಉಳಿಸಲು ವಿಫಲರಾಗುವಿರಿ. ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ.
ಮಿಥುನ ರಾಶಿ
ಜೀವನದಲ್ಲಿ ಉತ್ಸಾಹದಿಂದ ಇರುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವುದಿಲ್ಲ. ಕೆಲಸದ ನಡುವೆ ವಿಶ್ರಾಂತಿಯನ್ನು ಬಯಸುವಿರಿ. ವಿದೇಶದಲ್ಲಿ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ತೆರಳುವ ಅವಕಾಶ ದೊರಕುತ್ತದೆ. ಮನೆ ಕೆಲಸಗಳಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಸಂತೋಷದಿಂದ ಬಾಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಒಳ್ಳೆಯ ಕೆಲಸ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಯಾವುದೇ ವಿಚಾರದಲ್ಲಿಯೂ ಧೃಡವಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನಾವಶ್ಯಕವಾದ ಖರ್ಚುವೆಚ್ಚಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಮಾನಸಿಕ ಒತ್ತಡಾದ ಸಮಸ್ಯೆಯು ನಿಮ್ಮನ್ನು ಬಹುವಾಗಿ ಕಾಡುತ್ತದೆ. ಉತ್ತಮ ಅವಕಾಶ ದೊರೆತು ಉದ್ಯೋಗವನ್ನು ಬದಲಿಸುವಿರಿ. ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ಮಾನಸಿಕ ಒತ್ತಡವಿರುತ್ತದೆ. ಸಮಾಜಸೇವೆ ಮಾಡುವ ಅವಕಾಶವು ನಿಮಗೆ ದೊರೆಯಲಿದೆ. ಕಲಾವಿದರಿಗೆ ಮೇಲ್ಮಟ್ಟದ ಗೌರವ ಮತ್ತು ಅವಕಾಶ ದೊರೆಯುತ್ತದೆ. ಸಭೆ ಸಮಾರಂಭಗಳಲ್ಲಿ ಗೌರವಯುತ ಸ್ಥಾನವು ಲಭಿಸುತ್ತದೆ. ಲೋಹದ ವಸ್ತುವಿನಿಂದ ತೊಂದರೆಯಾಗುವ ಸಾಧ್ಯತೆಗಳಿವೆ ಎಚ್ಚರಿಕೆ ಇರಲಿ. ನಿಮಗೆ ಇಷ್ಟವೆನಿಸುವ ದುಬಾರಿ ವಸ್ತುವೊಂದು ಕಳುವಾಗಬಹುದು ಜಾಗ್ರತೆಯಿಂದ ಇರಿ.
ಕಟಕ ರಾಶಿ
ನಿರೀಕ್ಷೆಯಂತೆ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಆದರೆ ಸರಳವಾದ ವಿಚಾರಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಸೇವಾವೃತ್ತಿಯಲ್ಲಿ ಹೆಚ್ಚಿನ ಆದಾಯವಿರುತ್ತದೆ. ಆದಾಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿಶ್ಚಿತ ಧನಲಾಭ ಇರುತ್ತದೆ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಡೆಯುವ ಕಾರಣ ಸುಖ ಸಂತೋಷದಿಂದ ಎಲ್ಲರೊಳನೆ ಬಾಳುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮೊದಲಿಗರಾಗುತ್ತಾರೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ವಯೋವೃದ್ದರ ಆರೋಗ್ಯದಲ್ಲಿ ಏಳುಬೀಳು ಕಂಡುಬರುತ್ತದೆ. ಅನವಶ್ಯಕ ಖರ್ಚುವೆಚ್ಚಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡುವಿರಿ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ವಾದ ವಿವಾದಗಳು ಇರಬಹುದು. ಅತಿಯಾದ ಆತುರ ತೊಂದರೆಗೆ ಕಾರಣವಾಗುತ್ತದೆ. ನಿಮ್ಮ ಮಾತಿನಿಂದ ಬೇರೆಯವರಿಗೆ ಬೇಸರ ಉಂಟಾಗುತ್ತದೆ. ಗಂಟಲಿಗೆ ಸಂಬಂಧಿಸಿದ ದೋಷ ಇರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
