ಕುಂಭ ರಾಶಿಯಲ್ಲಿ ರವಿಯ ಸಂಚಾರ: ದೀರ್ಘ ಪ್ರವಾಸ, ದುಡುಕು ಮಾತಿನಿಂದ ವಿರಸ, ಖರ್ಚು ಹೆಚ್ಚಲಿದೆ; ಧನು ರಾಶಿಯಿಂದ ಮೀನದವರೆಗೆ ಪರಿಣಾಮ
ಸದ್ಯದಲ್ಲೇ ಸೂರ್ಯನು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲಾಗಲಿದೆ. ರವಿ ಸಂಚಾರದಿಂದ ಧನು ರಾಶಿಯಿಂದ ಮೀನ ರಾಶಿವರೆಗೆ ಏನೆಲ್ಲಾ ಪರಿಣಾಮ ಬೀರಲಿದೆ ನೋಡಿ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಫೆ 12 ರಂದು ರಾತ್ರಿ ಸುಮಾರು 9 ಗಂಟೆಗೆ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ ತಿಂಗಳ 14 ರವರೆಗೂ ಕುಂಭರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯ ಅಧಿಪತಿಯು ಶನಿ. ಶನಿಗೆ ಈ ರಾಶಿಯು ಸ್ವಕ್ಷೇತ್ರ ಮತ್ತು ಮೂಲತ್ರಿಕೋನ ರಾಶಿಯಾಗುತ್ತದೆ. ರವಿ ಮತ್ತು ಶನಿ ಗ್ರಹಗಳು ಪರಸ್ಪರ ಶತ್ರುಗಳಾಗುತ್ತಾರೆ. ರವಿಯನ್ನು ರಾಜಗ್ರಹ ಎಂದು ಕರೆಯುತ್ತೇವೆ. ಅಂದರೆ ರವಿಯು ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತದೆ. ಒಂದು ಕುಟುಂಬದ ಹಿರಿಯ ವ್ಯಕ್ತಿಯನ್ನು ಸೂಚಿಸುತ್ತಾನೆ. ಸಮಾಜದ ಗಣ್ಯವ್ಯಕ್ತಿಗಳನ್ನು ಸಹ ರವಿಯಿಂದ ತಿಳಿಯಬಹುದು. ಆದರೆ ಶನಿಯು ಕುಂಭದಲ್ಲಿ ಇರುವ ಕಾರಣ ರವಿಗಿಂತಲೂ ಶನಿಯ ಶಕ್ತಿಯೇ ಹೆಚ್ಚಾಗುತ್ತದೆ. ಅಂದರೆ ಕುಂಭದಲ್ಲಿ ರವಿ ಚಲಿಸುತ್ತಿರುವವರೆಗೂ ಹಿರಿಯ ಅಧಿಕಾರಿಗಳು, ಮನೆಗೆ ಹಿರಿಯರು, ತಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತಮ ಅವಕಾಶ ಮತ್ತು ಉತ್ತಮ ಪ್ರಯತ್ನಗಳ ನಡುವೆಯೂ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ನಿಧಾನತೆ ಕಂಡುಬರುತ್ತದೆ. ಪ್ರತಿಯೊಂದು ರಾಶಿಗಳ ಭವಿಷ್ಯದಲ್ಲಿ ವ್ಯತ್ಯಾಸವು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಶಿಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಈ ಬರಹದಲ್ಲಿ ವಿವರ ಇದೆ. ಕುಂಭ ರಾಶಿಯಲ್ಲಿ ರವಿಯ ಸಂಚಾರದಿಂದ ಧನು ರಾಶಿಯಿಂದ ಮೀನ ರಾಶಿವರೆಗೆ ಏನೆಲ್ಲಾ ಪರಿಣಾಮ ಆಗಲಿದೆ ಎನ್ನುವ ವಿವರ ಇಲ್ಲಿದೆ.
ಧನು ರಾಶಿ
ಸತತ ಪ್ರಯತ್ನದ ನಡುವೆಯೂ ಮಧ್ಯಮಗತಿಯ ಪ್ರಗತಿ ಕಂಡು ಬರುತ್ತದೆ. ಯಾವುದೇ ವಿಚಾರವಾದರೂ ಧೃಡ ನಿಲುವು ತೆಗೆದುಕೊಳ್ಳುವುದಿಲ್ಲ. ಅನವಶ್ಯಕವಾಗಿ ಕೋಪದಿಂದ ವರ್ತಿಸುವಿರಿ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಕುಟುಂಬದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ತಂದೆ ಮತ್ತು ಸೋದರ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಕಂಡರೂ ಅದನ್ನು ಉಳಿಸಿಕೊಳ್ಳಲು ವಿಫರಾಗುವಿರಿ. ತೆಗೆದುಕೊಂಡ ತೀರ್ಮಾನಗಳನ್ನು ಸೋಲುವ ವೇಳೆಯಲ್ಲಿ ಬದಲಾಯಿಸುವಿರಿ. ಹಣಕಾಸಿನ ವಿಚಾರದಲ್ಲಿ ಎಲ್ಲರನ್ನೂ ಅನುಮಾನದಿಂದ ನೋಡುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗುವುದಿಲ್ಲ. ದುಡುಕುತನದ ತೀರ್ಮಾನದಿಂದ ಹಣದ ಕೊರತೆ ಎದುರಿಸುವಿರಿ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ದಿನ ಕಳೆದಂತೆ ಕ್ರಮೇಣ ಹೊಸತನಕ್ಕೆ ಹೊಂದಿಕೊಳ್ಳುವಿರಿ. ಆತ್ಮೀಯರ ಸಹಾಯ ಸದಾ ದೊರೆಯುತ್ತದೆ. ದೀರ್ಘಕಾಲದ ಪ್ರವಾಸಕ್ಕೆ ಕುಟುಂಬದ ಸದಸ್ಯರ ಜೊತೆಯಲ್ಲಿ ತೆರಳುವಿರಿ.
ಮಕರ ರಾಶಿ
ನಿತ್ಯದ ಬದುಕಿನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆಯುವಿರಿ. ದುಡುಕಿನ ಮಾತಿನಿಂದ ನೀವಿರುವಲ್ಲಿ ಒತ್ತಡವನ್ನು ಉಂಟುಮಾಡುವಿರಿ. ಕಷ್ಟಪಟ್ಟು ದುಡಿಯಲು ಹಿಂಜರಿಯುವುದಿಲ್ಲ. ಆರಂಭಿಸುವ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಸೋದರ ಮತ್ತು ಸೋದರಿಯರ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ದುಡುಕುತನದ ಮಾತಿನಿಂದ ಬೇರೆಯವರ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಹಣಕಾಸಿನ ಕೊರತೆಯು ಚಿಂತೆಗೆ ಕಾರಣವಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಂಬಿಕೆ ಇರುವುದಿಲ್ಲ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಪ್ರವಾಸದ ವೇಳೆ ನಿಮಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ನಿಮ್ಮ ಮನಸ್ಸಿಗೆ ಇಷ್ಟವಾದ ಪದಾರ್ಥವನ್ನು ಕೊಳ್ಳಲು ತೀರ್ಮಾನಿಸುವಿರಿ. ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ. ಪುಟ್ಟ ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ.
ಕುಂಭ ರಾಶಿ
ಸೋಲು-ಗೆಲುವು ಸರಿಸಮಾನವಾಗಿರುತ್ತದೆ. ನಿಮ್ಮ ಮನಸ್ಸಿನ ವಿಚಾರಗಳನ್ನು ಯಾರಿಗೂ ತಿಳಿಸುವುದಿಲ್ಲ. ಉದ್ಯೋಗವನ್ನು ಬದಲಿಸುವಿರಿ. ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದಯುತ ಸಂಬಂಧ ಇರುವುದಿಲ್ಲ. ಮಾಡುವ ಕೆಲಸ ಕಾರ್ಯಗಳಲ್ಲಿ ಯಾವುದೇ ನಿರೀಕ್ಷೆ ಇರುವುದಿಲ್ಲ. ಸಂಬಂಧಿಕರ ಜೊತೆಯಲ್ಲಿ ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಎದುರಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಮಧ್ಯಮಗತಿಯ ಆದಾಯ ಇರುತ್ತದೆ. ಕೂಡಿಟ್ಟ ಹಣ ಖರ್ಚಾಗುವ ಸೂಚನೆ ಇದೆ. ಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಂಡಲ್ಲಿ ಜೀವನದಲ್ಲಿ ಯಶಸ್ಸು ಮರುಕಳಿಸುತ್ತದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸವು ಹೆಚ್ಚುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ಕಣ್ಣನ ಸೋಂಕು ನಿಮ್ಮನ್ನು ಬಾಧಿಸಲಿದೆ. ನಿಮ್ಮ ಬಹುದಿನದ ಕನಸೊಂದು ನನಸಾಗಲಿದೆ. ಹಣಕಾಸಿನ ವಿವಾದವು ಆತ್ಮೀಯರ ಸಹಾಯದಿಂದ ಬಗೆಹರಿಯುವುದು. ಕುಟುಂಬದಲ್ಲಿನ ಬದಲಾವಣೆಗಳು ನಿಮಗೆ ಅನುಕೂಲಕಾರಿಯಾಗುತ್ತದೆ. ಮಕ್ಕಳ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಏಕಾಂಗಿಯಾಗಿ ಕಾಲಕಳೆಯಲು ಬಯಸುವಿರಿ.
ಮೀನ ರಾಶಿ
ನಿಮ್ಮ ಹೊಂದಾಣಿಕೆಯ ಗುಣವು ಎಲ್ಲರ ಮನಗೆಲ್ಲುತ್ತದೆ. ಉದ್ಯೋಗದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಸಲಹೆಯನ್ನು ಅಪೇಕ್ಷಿಸುವಿರಿ. ಆಪತ್ತಿನ ಸಂದರ್ಭದಲ್ಲಿ ಧೈರ್ಯಗೆಡದೆ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆರಂಭಿಸಿದ ಕೆಲಸ ಕಾರ್ಯಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟವನ್ನು ಗಳಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಬಾಳಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಸ್ವಂತ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ವೈವಾಹಿಕ ಜೀವನದಲ್ಲಿ ಸಂತಸ ತುಂಬಿರುತ್ತದೆ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗುತ್ತದೆ. ವೆಚ್ಚ ನಿಯಂತ್ರಿಸುವಲ್ಲಿ ವಿಫಲರಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹೊಸ ವಾಹನವನ್ನು ಕೊಳ್ಳುವಿರಿ. ಚಿನ್ನ ಬೆಳ್ಳಿಯ ಆಭರಣ ಕೊಳ್ಳುವ ಸಾಧ್ಯತೆಗಳಿವೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
