Sun Transit: ಫೆ 13ಕ್ಕೆ ಕುಂಭ ರಾಶಿ ಪ್ರವೇಶಿಸಲಿರುವ ಸೂರ್ಯ; ದ್ವಾದಶ ರಾಶಿಗಳ ಫಲಾಫಲ ಇಂತಿದೆ
Sun Transit: ಫೆ 13ಕ್ಕೆ ಸೂರ್ಯನು ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ದ್ವಾದಶ ರಾಶಿಯವರ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಉಂಟಾಗಲಿವೆ. ಸೂರ್ಯನ ಸಂಚಾರದಿಂದ ಯಾವ ರಾಶಿಯವರಿಗೆ ಏನು ಫಲ ನೋಡೋಣ.
Sun Transit: ಫೆಬ್ರವರಿ 13, ಮಧ್ಯಾಹ್ನ 3:30ಕ್ಕೆ ರವಿ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ರಾಶಿಯು ಶನಿಯ ರಾಶಿಯಾಗುತ್ತದೆ. ಶನಿಗೆ ಈ ರಾಶಿಯು ಮೂಲ ತ್ರಿಕೋಣ ರಾಶಿಯಾಗುತ್ತದೆ. ಪ್ರಸಕ್ತ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ರವಿ ಮತ್ತು ಶನಿ ಗ್ರಹಗಳು ಪರಸ್ಪರ ಶತ್ರುಗಳಾಗುತ್ತಾರೆ. ರವಿಯನ್ನು ರಾಜಗ್ರಹ ಎಂದು ಕರೆಯುತ್ತೇವೆ. ಅಂದರೆ ರವಿಯು ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತದೆ. ಒಂದು ಕುಟುಂಬದ ಹಿರಿಯ ವ್ಯಕ್ತಿಯನ್ನು ಸೂಚಿಸುತ್ತಾನೆ.
ರಾಜಕೀಯ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಸೂಚಿಸುತ್ತಾನೆ. ಹಾಗೆಯೇ ಶನಿಯು ಮೇಲೆ ಸೂಚಿಸಿರುವ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಾನೆ. ಶನಿಯು ರವಿಯೊಡನೆ ಇರುವ ಕಾರಣ ರವಿಗಿಂತಲೂ ಶನಿಯ ಶಕ್ತಿಯೇ ಹೆಚ್ಚಾಗುತ್ತದೆ. ಅಂದರೆ ಕುಂಭದಲ್ಲಿ ರವಿ ಚಲಿಸುತ್ತಿರುವವರೆಗೂ ಹಿರಿಯ ಅಧಿಕಾರಿಗಳು, ಮನೆಗೆ ಹಿರಿಯರು, ತಂದೆ, ಕೇಂದ್ರ ಸರ್ಕಾರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಮಾಡುವ ಕೆಲಸ ಕಾರ್ಯಗಳು ಸರಿ ಇದ್ದರೂ ತಪ್ಪಿದ್ದರೂ ಆಕ್ಷೇಪಕ್ಕೆ ಗುರಿಯಾಗಬೇಕಾಗುತ್ತದೆ. ಕುಂಭದಲ್ಲಿ ರವಿ ಇರುವ ವೇಳೆ, ಪ್ರತಿಯೊಂದು ರಾಶಿಯು ತನ್ನದೇ ಆದ ಫಲಗಳನ್ನು ಪಡೆಯುತ್ತದೆ. ಆದರೆ ಗೋಚಾರದಲ್ಲಿ ಫಲಗಳು ಕುಂಡಲಿಯಲ್ಲಿರುವ ದಶಾಭುಕ್ತಿಯನ್ನು ಸಹ ಅವಲಂಬಿಸಿರುತ್ತದೆ. ರವಿಯು ಕುಂಭ ರಾಶಿಯಲ್ಲಿ ಮಾರ್ಚ್ ತಿಂಗಳ 14ನೆಯ ದಿನಾಂಕದವರೆಗೆ ಸಂಚರಿಸುತ್ತಾನೆ.
ಮೇಷ
ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿ ಇರುತ್ತದೆ. ಎಂತಹ ಕಷ್ಟಕರ ಸನ್ನಿವೇಶ ಉಂಟಾದರೂ ಬುದ್ಧಿವಂತಿಕೆಯಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಆತಂಕದ ಸನ್ನಿವೇಶವೊಂದು ಎದುರಾಗುತ್ತದೆ. ಉದ್ಯೋಗದ ವಿಚಾರದಲ್ಲಿ ತಂದೆಯೊಡನೆ ಮನಸ್ತಾಪವಿರುತ್ತದೆ. ಹಿರಿಯ ಅಧಿಕಾರಿಗಳು ನೀವು ಮಾಡುವ ಪ್ರತಿ ಕೆಲಸವನ್ನು ಆಕ್ಷೇಪಿಸಬಹುದು. ಆದರೆ ಯಾವುದೇ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸದಲ್ಲಿ ನಿರತರಾಗಬೇಕು. ಪ್ರತಿಯೊಂದು ವಿಚಾರವನ್ನು ಅದರ ಮೂಲದಿಂದ ತಿಳಿದು ನಂತರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಈ ಅವಧಿಯಲ್ಲಿ ಉದ್ಯೋಗವನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಈ ಅವಧಿಯಲ್ಲಿ ಬದಲಾವಣೆಗಳೇ ಇಲ್ಲದೆ ದಿನ ಕಳೆಯಬೇಕಾಗುತ್ತದೆ.
ವೃಷಭ
ಈ ಅವಧಿಯಲ್ಲಿ ನಿಮಗೆ ವಿಶೇಷ ಗೌರವ ಲಭಿಸುತ್ತದೆ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ವಂಶಕ್ಕೆ ಸೇರಿದ ಹಳೆಯ ಮನೆ ನಿಮ್ಮ ಪಾಲಿಗೆ ಬರುತ್ತದೆ. ಅದರ ನವೀಕರಣ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಉದ್ಯೋಗದಲ್ಲಿ ಉತ್ತಮ ವರಮಾನದ ಜೊತೆ ಯಶಸ್ಸು ಸಹ ಮಿಲಿತವಾಗುತ್ತದೆ. ನಾನೊಬ್ಬನೇ ಸರಿ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಸ್ನೇಹ ದೊರೆಯುತ್ತದೆ. ತಂದೆಯ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಸರ್ಕಾರದ ಅಧೀನದಲ್ಲಿ ಆರಂಭಿಸುವ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ತಾಯಿ ಮತ್ತು ಹಿರಿಯ ಸೋದರನ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ.
ಮಿಥುನ
ಎದುರಾಗುವ ವಿವಾದಗಳು ನಿಮಗೆ ವರಪ್ರದವಾಗಲಿವೆ. ತಡವಾದರೂ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ಉದ್ಯೋಗಸ್ಥರು ಅಥವಾ ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಒಬ್ಬಂಟಿಯಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವಿರಿ. ಉತ್ತಮ ಸ್ನೇಹಿತರು ನಿಮ್ಮ ಕೆಲಸ ಕಾರ್ಯಗಳಲ್ಲಿ ಸಹಾಯ ಸಹಕಾರ ನೀಡುತ್ತಾರೆ. ತಂದೆಗೆ ಸಂಬಂಧಪಟ್ಟಂತ ಆಸ್ತಿ ವಿಚಾರದಲ್ಲಿ ವಾದ ವಿವಾದಗಳಿದ್ದರೆ ಸುಲಭವಾಗಿ ಪರಿಹಾರ ಗೊಳ್ಳುತ್ತದೆ. ಅಸಾಮಾನ್ಯ ಧೈರ್ಯ ಇರುವ ಕಾರಣ ಅಪಾಯದ ಕೆಲಸಗಳಿಗೂ ಕೈ ಹಾಕುವಿರಿ. ವಿದೇಶಕ್ಕೆ ತೆರಳುವ ಮನಸ್ಸಿದ್ದರೂ ಈ ಅವಧಿಯಲ್ಲಿ ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ.
ಕಟಕ
ಅನಾರೋಗ್ಯದ ತೊಂದರೆ ಸದಾ ಕಾಡುತ್ತದೆ. ಸೋದರರ ನಡುವಿನ ಅನುಮಾನದ ಸ್ವಭಾವ ವಿವಾದ ಉಂಟುಮಾಡುತ್ತದೆ. ತಂದೆಗೆ ಸಂಬಂಧಪಟ್ಟ ಭೂಮಿ ಅಥವಾ ಹಣದ ವಿಚಾರದಲ್ಲಿ ತೊಂದರೆ ಇರುತ್ತದೆ. ಆದರೆ ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ಉನ್ನತ ಸ್ಥಾನಮಾನ ಗಳಿಸುವಿರಿ. ಮಕ್ಕಳಿಗೆ ಅನಾರೋಗ್ಯವಿರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಹಿರಿಯ ಸೋದರ ಅಥವಾ ಸೋದರಿಗೆ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಬಹುದು. ಆಪತ್ಕಾಲದಲ್ಲಿ ಆತ್ಮೀಯರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದರೆ ಹಣದ ತೊಂದರೆ ಉಂಟಾಗುವುದಿಲ್ಲ.
ಸಿಂಹ
ಎಂತಹ ಸಮಸ್ಯೆ ಎದುರಾದರೂ ಗೌರವ ಮತ್ತು ಸ್ಥಾನ ಮಾನಗಳನ್ನು ಉಳಿಸಿಕೊಳ್ಳುವಿರಿ. ಆತ್ಮೀಯರ ಮದ್ಯೆ ಹಣಕಾಸಿನ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ತಪ್ಪನ್ನು ಎಂದಿಗೂ ಮನ್ನಿಸುವುದಿಲ್ಲ. ಹಿರಿಯ ಸೋದರ ಮತ್ತು ತಂದೆಯ ನಡುವೆ ಅನಾವಶ್ಯಕವಾದ ವಿವಾದಗಳು ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನೆಮ್ಮದಿ ಇರುವುದಿಲ್ಲ. ಬೇರೆಯವರಿಗಾಗಿ ಗಳಿಸಿದ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕುಟುಂಬದವರ ಜೊತೆ ಪಾಲುಗಾರಿಕೆಯ ವ್ಯಾಪಾರ ಮಾಡಿದಲ್ಲಿ ಲಾಭವಿರುತ್ತದೆ. ಎದುರಾಗುವ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ.
ಕನ್ಯಾ
ಆರೋಗ್ಯ ಕಾಪಾಡಿಕೊಳ್ಳಲು ಸುಲಭವಾದ ಹಾದಿ ಕಂಡು ಹಿಡಿಯುವಿರಿ. ಸಾಹಸದ ಬುದ್ದಿ, ತೊಂದರೆಗೆ ಕಾರಣವಾಗಬಹುದು. ಮುಖದಲ್ಲಿ ವಿಶೇಷವಾದ ತೇಜಸ್ಸು ಕಾಣುತ್ತದೆ. ಉದ್ಯೋಗದಲ್ಲಿನ ದೊಡ್ಡ ವಿವಾದವನ್ನು ಪರಿಹರಿಸಿ ಎಲ್ಲರ ಮನ ಗೆಲ್ಲುವಿರಿ. ನಿರೀಕ್ಷೆಗೆ ತಕ್ಕಂತೆ ಸುಲಭವಾಗಿ ಹಣ ಗಳಿಸುವಿರಿ. ಅನಿರೀಕ್ಷಿತ ಧನ ಲಾಭವಿದೆ. ಅಧಿಕ ಆಹಾರ ಸೇವಿಸುವ ಕಾರಣ ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ. ಬೇಡದ ವಿಚಾರಗಳಿಗೆ ಹಣ ಖರ್ಚಾಗುವ ಸಾಧ್ಯತೆಗಳಿವೆ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ. ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ವಿವಾಹವಾಗಲಿದೆ.
ತುಲಾ
ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಬೇರೆಯವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಸ್ತ್ರೀಯರು ಹೆಚ್ಚಿನ ಸಮಸ್ಯೆಗಳನ್ನು ಎದರಿಸಿದರೂ ಕ್ರಮೇಣ ಪರಿಹಾರ ಗಳಿಸುವಿರಿ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಹೆಚ್ಚಿನ ಪ್ರಯತ್ನ ಮಾಡಬೇಕು. ಸುಲಭವಾಗಿ ಸುಲಭವಾಗಿ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಬೇಡದ ವಿಚಾರಗಳಿಗೆ ಯೋಚನೆ ಮಾಡುವಿರಿ. ತಂದೆಯ ಸಹಾಯದಿಂದ ಜೀವನದಲ್ಲಿ ಧನಾತ್ಮಕ ಪ್ರತಿಫಲ ಪಡೆಯುವಿರಿ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಕುಟುಂಬಕ್ಕೆ ಸಂಬಂಧಿಸಿದ ಭೂಮಿ ವಿಚಾರದಲ್ಲಿ ಕಾನೂನಿನ ಸಹಾಯ ಪಡೆಯುವಿರಿ.
ವೃಶ್ಚಿಕ
ಒಮ್ಮೆ ನೋಡಿ ತಿರಸ್ಕರಿಸಿದ ಮನೆಯನ್ನು ಮತ್ತೆ ಕೊಳ್ಳುವ ಮನಸ್ಸಾಗುತ್ತದೆ. ತಂದೆ ಅಥವಾ ತಾಯಿಯ ಸಹಾಯ ಇಷ್ಟಪಡುವುದಿಲ್ಲ. ಪರೋಕ್ಷವಾಗಿ ಕುಟುಂಬದ ಹಿರಿಯರಿಂದ ಸಹಾಯ ದೊರೆಯುತ್ತದೆ. ಮನಸ್ಸಿನಲ್ಲಿ ಬೇಸರವಿರುತ್ತದೆ. ಹಣದ ಕೊರತೆ ಕಾಡುತ್ತದೆ. ಸೋದರಿಯ ಸಹಾಯ ಹೊಸ ಜೀವನಕ್ಕೆ ಕಾರಣವಾಗುತ್ತದೆ. ತಂದೆಯ ಉದ್ಯೋಗಸ್ಥರಾಗಿದ್ದಲ್ಲಿ ಉನ್ನತ ಅಧಿಕಾರ ಲಭ್ಯವಾಗುತ್ತದೆ. ಅತಿ ಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇರಿಸುವಿರಿ. ಕಷ್ಟದ ವೇಳೆಯಲ್ಲಿಯೂ ಸಂತಸದಿಂದ ಬಾಳುವಿರಿ. ತಂದೆಯವರಿಗೆ ಹೊಸ ಮನೆ ಅಥವಾ ಜಮೀನು ದೊರೆಯುತ್ತದೆ. ಕ್ರಮೇಣವಾಗಿ ಸುಖ ಜೀವನ ನಡೆಸುವಿರಿ
ಧನಸ್ಸು
ಧೈರ್ಯ ಮತ್ತುಸಾಹಸದ ಗುಣ ನಿಮ್ಮಲ್ಲಿರುತ್ತದೆ. ಸಾಹಿತಿಗಳು ಅಥವಾ ಕವಿಗಳಿಗೆ ಸಮಾಜದ ಉನ್ನತ ಪ್ರಶಸ್ತಿ ದೊರೆಯುತ್ತದೆ. ತಂದೆ ಮತ್ತು ಸೋದರರ ನಡುವೆ ಇದ್ದ ಮನಸ್ತಾಪ ಮರೆಯಾಗುತ್ತದೆ. ಮಾಡುವ ಪ್ರಯತ್ನಕ್ಕೆ ತಕ್ಕಂತೆ ಲಾಭದಾಯಕ ಫಲಗಳು ದೊರೆಯಲಿದೆ. ಅನಿರೀಕ್ಷಿತ ಧನ ಲಾಭವಿದೆ. ಸೋದರಿ ಅಥವಾ ಸೋದರನ ವಿವಾಹ ನಿಶ್ಚಯವಾಗಬಹುದು. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬಾಳುವಿರಿ. ವಿದ್ಯಾರ್ಥಿಗಳು ವಿಶೇಷ ಸಾಧನೆಗೆ ಪಾತ್ರರಾಗುತ್ತಾರೆ. ಬಂದು ಬಳಗದವರಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ಹಣಕಾಸಿನ ತೊಂದರೆ ಉಂಟಾಗಬಹುದು. ಸಾಹಸ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಮಕರ
ಹಣ ಉಳಿಸಲು ಪ್ರಯತ್ನಿಸಿ. ನಿಮ್ಮ ಸಂಪೂರ್ಣ ಜೀವನ ಆಡುವ ಮಾತಿನ ಮೇಲೆ ನಿಂತಿರುತ್ತದೆ. ವ್ಯಾಪಾರಗಳಲ್ಲಿ ಹೆಚ್ಚಿನ ಹಣ ವಿನಿಯೋಗಿಸದಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ನೆಮ್ಮದಿ ಕೆಡಿಸುತ್ತದೆ. ಬೇಸರ ಕಳೆಯಲು ಕುಟುಂಬದಿಂದ ದೂರವಾಗಿ ಏಕಾಂಗಿಯಾಗಿ ಬಾಳಲು ಬಯಸುವಿರಿ. ಕುಟುಂಬದಲ್ಲಿ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಒಮ್ಮೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ತಂದೆಯಿಂದ ಧನ ಸಹಾಯ ದೊರೆಯುತ್ತದೆ. ಕಾನೂನಿನ ಸಮರದಲ್ಲಿ ಜಯ ಗಳಿಸುವಿರಿ. ಆತ್ಮೀಯರು ನಿಮ್ಮ ಮಾತನ್ನು ವಿರೋಧಿಸಿದಾಗ ಸಹನೆ ಕಳೆದುಕೊಳ್ಳುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಜೊತೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ.
ಕುಂಭ
ಯಾವುದೇ ಕೆಲಸ ಮಾಡಲು ಮನಸಾಗುವುದಿಲ್ಲ. ಒಂದು ರೀತಿಯ ಸೋಮಾರಿತನ ನಿಮ್ಮನ್ನು ಆವರಿಸುತ್ತದೆ. ಉತ್ತಮ ಪ್ರಯತ್ನದ ನಡುವೆ ಕೆಲಸ ಕಾರ್ಯಗಳು ಸಾಗಲಿವೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಅನಾರೋಗ್ಯದಿಂದ ಬಳಲುವಿರಿ. ಉತ್ತಮ ಜ್ಞಾನ ಸಂಪಾದಿಸುವಿ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡದಿದ್ದಾರೆ. ಯಾರನ್ನು ಸುಲಭವಾಗಿ ನಂಬುವುದಿಲ್ಲ. ಮಹತ್ವಾಕಾಂಕ್ಷೆಯ ಕೆಲಸದಲ್ಲಿ ಜಯ ಗಳಿಸುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಸಂಗಾತಿಯೊಂದಿಗೆ ವಿದೇಶಕ್ಕೆ ತೆರಳುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಮಾತಿನ ಮೇಲೆ ಹತೋಟಿ ಇರುವುದಿಲ್ಲ. ದುಡುಕು ಮಾತಿನಿಂದಾಗಿ ವಿರೋಧಿಗಳು ಹೆಚ್ಚುತ್ತಾರೆ
ಮೀನ
ಜನಿಸಿದ ಸ್ಥಳ ಬಿಟ್ಟು ವಿದೇಶದಲ್ಲಿ ನೆಲೆಸುವ ಸಾಧ್ಯತೆಗಳಿವೆ. ಮನಸ್ಸಿನಲ್ಲಿ ಆತಂಕದ ಭಾವನೆ ನೆನೆಸಿರುತ್ತದೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಮನಸ್ಸಿದ್ದರೂ ಬೇರೆಯವರಿಗೆ ಸಹಾಯ ಮಾಡುವಲ್ಲಿ ವಿಫಲರಾಗುವಿರಿ. ಅರಿವಿಲ್ಲದೆ ತಪ್ಪು ಮಾಡಿ ಜನರ ಅವಕೃಪೆಗೆ ಒಳಗಾಗುವಿರಿ. ವಿವಾಹ ಯೋಗವಿದೆ. ನೇರ ನಿಷ್ಠುರದ ಮಾತುಕತೆಯಿಂದ ತೊಂದರೆಗೆ ಒಳಗಾಗುವಿರಿ. ಅನಾವಶ್ಯಕ ವಿಚಾರಗಳಿಗೆ ಹಣ ಖರ್ಚು ಮಾಡುವಿರಿ. ಆತ್ಮೀಯರೇ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಕುಟುಂಬದಲ್ಲಿ ಮಂಗಳ ಕಾರ್ಯ ನಡೆಯಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಮೌನವಾಗಿದ್ದಲ್ಲಿ ಯಶಸ್ಸು ಸುಲಭವಾಗಿ ದೊರೆಯುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).