ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Surya Temple: ಕಾಶಿಯಲ್ಲಿ ಮಾಘ ಮಾಸದ ಪುಣ್ಯಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿದರೆ ದೊರೆಯಲಿದೆ ಪುಣ್ಯ

Surya Temple: ಕಾಶಿಯಲ್ಲಿ ಮಾಘ ಮಾಸದ ಪುಣ್ಯಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿದರೆ ದೊರೆಯಲಿದೆ ಪುಣ್ಯ

Surya Temple in Kashi: ಕಾಶಿಗೆ ಹೋದ ಜನರು ಅಲ್ಲಿ ವಿಶ್ವನಾಥನ ದರ್ಶನ ಮಾತ್ರವಲ್ಲದೆ ಲೋಲಾರ್ಕ ಎಂಬ ಹೆಸರಿನಿಂದ ನೆಲೆಸಿರುವ ಸೂರ್ಯನ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡಬೇಕು. ಕಾಶಿಯಲ್ಲಿ ಮಾಘ ಮಾಸದ ಸ್ನಾನ ಮಾಡಿ ಸೂರ್ಯನನ್ನು ಆರಾಧಿಸಿದರೆ ನಿಮಗೆ ಬಹಳ ಪುಣ್ಯ ದೊರೆಯಲಿದೆ.

ಕಾಶಿಯಲ್ಲಿ ಮಾಘ ಮಾಸದ ಪುಣ್ಯಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿದರೆ ದೊರೆಯಲಿದೆ ಪುಣ್ಯ
ಕಾಶಿಯಲ್ಲಿ ಮಾಘ ಮಾಸದ ಪುಣ್ಯಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿದರೆ ದೊರೆಯಲಿದೆ ಪುಣ್ಯ (PC: Unsplash)

Surya Temple in Kashi: ಪ್ರತಿಯೊಬ್ಬರ ಮನದಲ್ಲೂ ಒಮ್ಮೆ ಕಾಶಿಗೆ ತೆರಳಬೇಕೆಂಬ ಆಸೆ ಇರುತ್ತದೆ. ಮುಖ್ಯವಾಗಿ ಕಾಶಿಯಲ್ಲಿ ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡಿದರೆ ವಿಶೇಷ ಫಲಗಳು ಲಭಿಸುತ್ತದೆ. ಆದರೆ ಕಾಶಿಗೆ ಭೇಟಿ ನೀಡಿದವರಿಗೆ ಪುಣ್ಯ ಫಲಗಳು ದೊರೆಯಬೇಕೆಂಬಲ್ಲಿ ಅಲ್ಲಿರುವ ಸೂರ್ಯ ದೇವನಿಗೆ ನಮಸ್ಕರಿಸಲೇಬೇಕು. ಬಹುತೇಕ ಧಾರ್ಮಿಕ ಕಥೆಗಳು ನಮಗೆ ಸ್ಕಂದಪುರಾಣ, ವಿಷ್ಣುಪುರಾಣ, ಶಿವಪುರಾಣ ಮತ್ತು ಮತ್ಸ್ಯ ಪುರಾಣಗಳಲ್ಲಿ ದೊರೆಯುತ್ತವೆ.

ಅನೇಕ ಧಾರ್ಮಿಕ ಪುರಾಣದಲ್ಲಿ ಕಾಶಿ ಮತ್ತು ಶ್ರೀ ಸೂರ್ಯದೇವನ ನಡುವೆ ಇರುವ ಸಂಬಂಧವನ್ನು ಬಿಂಬಿಸಲಾಗಿದೆ. ನಮಗೆ ತಿಳಿದಂತೆ ಸೂರ್ಯನೆಂದರೆ ತ್ರಿಮೂರ್ತಿಗಳಾದ ಶಿವ, ಬ್ರಹ್ಮ ಮತ್ತು ವಿಷ್ಣುವಿನ ರೂಪಗಳಾಗಿವೆ. ಕಾಶಿಯಲ್ಲಿ ಇಲ್ಲದ ದೇವರುಗಳಿಲ್ಲ. ಕಾಶಿಯು ಎಲ್ಲಾ ದೇವತೆಗಳ ಆವಾಸಸ್ಥಾನವಾಗಿದೆ. ಅಪರೂಪಕ್ಕೆ ಸಿಗುವ ಯಮನ ದೇವಾಲಯವು ಇಲ್ಲಿದೆ. ಆದರೆ ಮುಖ್ಯವಾದ ದೇವರೆಂದರೆ ವಿಶ್ವನಾಥ. ಸಾಮಾನ್ಯವಾಗಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ ನಂತರ ಜನರು ಮರಳಿ ಬರುತ್ತಾರೆ. ಆದರೆ ಲೋಲಾರ್ಕ ಎಂಬ ಹೆಸರಿನಿಂದ ನೆಲೆಸಿರುವ ಸೂರ್ಯನನ್ನು ಪೂಜಿಸಲೇಬೇಕು.

ಒಮ್ಮೆ ಶಿವನಿಗೆ ಕಾಶಿಯಲ್ಲಿ ಇರುವ ರೀತಿ ನೀತಿ ಮತ್ತು ಜನರ ಜೀವನದ ಬಗ್ಗೆ ತಿಳಿಯಬೇಕೆಂದು ಮನಸಾಯಿತು. ಸತ್ಯ, ನಿಷ್ಠೆ, ದಾನ, ಧರ್ಮಗಳಿಗೆ ಹೆಸರಾದ ಕಾಶಿಯಲ್ಲಿ ಧರ್ಮ ನೆಲೆಸಿದೆಯೋ ಇಲ್ಲವೋ ಎಂಬುದೇ ಒಂದು ಪ್ರಶ್ನೆಯಾಗಿತ್ತು. ಕನಿಕರಕ್ಕೆ ಮತ್ತು ಪರೋಪಕಾರಕ್ಕೆ ಮತ್ತೊಂದು ಹೆಸರೇ ಕಾಶಿ. ಇವೆಲ್ಲವನ್ನು ತಿಳಿಯಲು ಶಿವನು ಸೂರ್ಯನನ್ನು ಕುರಿತು ಕಾಶಿಗೆ ತೆರಳಿ ಅಲ್ಲಿರುವ ದಿನನಿತ್ಯದ ಕರ್ಮ ವೃತ್ತಾಂತವನ್ನು ತಿಳಿಸು ಎಂದು ಹೇಳುತ್ತಾನೆ. ಆ ವೇಳೆ ಕಾಶಿಯ ರಾಜನಾಗಿ ಧರ್ಮಮೂರ್ತಿಯು ಜನರ ಯೋಗಕ್ಷೇಮವನ್ನು ಕಾಪಾಡುತ್ತಿರುತ್ತಾನೆ. ಸತ್ಯಸಂಧನಾದ ಅವನ ಕಾಲದಲ್ಲಿ ಕಾಶಿಯು ಸುಭೀಕ್ಷವಾಗಿ ಇರುತ್ತದೆ. ಜನಾನುರಾಗಿಯಾಗಿ ಬಾಳುತ್ತಿರುತ್ತಾನೆ. ಆದರೆ, ಶಿವನ್ನು ಸೂರ್ಯನನ್ನು ಕುರಿತು ಆ ರಾಜನ ನಿಜವಾದ ಮನಸ್ಸನ್ನು ಅರಿಯಲು ಕಾಶಿಯಲ್ಲಿ ಯಾರಿಗೂ ತಿಳಿಯದಂತೆ, ಅಸಹಜ ವಾತಾವರಣವನ್ನು ಸೃಷ್ಟಿಸಲು ಹೇಳುತ್ತಾನೆ. ಆದರೆ ಅದೇ ವೇಳೆಯಲ್ಲಿ ರಾಜನಿಗೆ ಯಾವುದೇ ರೀತಿ ಹಾನಿಯಾಗಬಾರದು ಎಂದು ಸೂಚಿಸುತ್ತಾನೆ.

ಶಿವನ ಆದೇಶದಂತೆ ಸೂರ್ಯ ದೇವನು ತನ್ನ ನಿಜರೂಪವನ್ನು ಬದಲಿಸಿಕೊಳ್ಳುತ್ತಾನೆ. ಆನಂತರ ಕಾಶಿಗೆ ತಲುಪಿದ ಸೂರ್ಯನು, ಅನೇಕ ರೀತಿಯ ಮಾರುವೇಷಗಳಿಂದ ಅರಸನನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಆದರೆ ಪ್ರತಿ ಬಾರಿಯೂ ಅರಸನು ಸೂರ್ಯನು ಕೇಳಿದ ವಸ್ತುವನ್ನು ಕಾಣಿಕೆಯ ರೂಪದಲ್ಲಿ ನೀಡುತ್ತಾನೆ. ಸೂರ್ಯನು ಎಷ್ಟೇ ಪ್ರಯತ್ನಿಸಿದರೂ ರಾಜನನ್ನು ಧರ್ಮ ಭ್ರಷ್ಟನನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸೋಲೊಪ್ಪಿಕೊಂಡ ಸೂರ್ಯನು ಶಿವನ ಬಗ್ಗೆ ಭಯ ಪಡುತ್ತಾನೆ. ಮತ್ತೆ ಮರಳಲು ಭಯ ಪಟ್ಟು ಕಾಶಿಯಲ್ಲಿಯೇ ಉಳಿದುಬಿಡುತ್ತಾನೆ. ಕಾಶಿಯನ್ನು ಸಂಪೂರ್ಣವಾಗಿ ನೋಡುವ ಆಸೆಯೂ ಸಹ ಸೂರ್ಯನಿಗಿರುತ್ತದೆ. ಆದ್ದರಿಂದ ಸೂರ್ಯನು ಗಂಗಾ ಮತ್ತು ಅಸೀ ನದಿಗಳ ಸಂಗಮದ ಬಳಿ ವಾಸವಾಗುತ್ತಾನೆ. ಇಂದಿಗೂ ಶಿವನನ್ನು ಪೂಜಿಸಿದ ಸ್ಥಳದಲ್ಲೇ ನೆಲೆಸಿರುವ ಸೂರ್ಯನನ್ನು ಪೂಜಿಸದೆ ಹೋದಲ್ಲಿ ಅಂತವರಿಗೆ ದರಿದ್ರ ಉಂಟಾಗುತ್ತದೆ. ಅಲ್ಲದೆ ಚರ್ಮಕ್ಕೆ ಸಂಬಂಧಪಟ್ಟ ರೋಗ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಸೂರ್ಯನನ್ನು ಲೋಲಾರ್ಕ ಹೆಸರಿನಿಂದ ಕರೆಯುತ್ತಾರೆ.

ರಾಜನ ಹೆಸರನ್ನು ಕೆಲವು ಗ್ರಂಥಗಳಲ್ಲಿ ದೇವದಾಸ, ಇನ್ನೂ ಕೆಲವು ಗ್ರಂಥಗಳಲ್ಲಿ ಧರ್ಮ ದಾಸ ಎಂದು ಹೇಳಲಾಗಿದೆ. ಕಾಶಿಯಲ್ಲಿ ಅರುಣಾದಿತ್ಯ, ದ್ರೌಪದಾದಿತ್ಯ, ಗಂಗಾದಿತ್ಯ, ಕೇಶವಾದಿತ್ಯ, ಖಕೋಲಕಾದಿತ್ಯ, ಅಲೋಕಾದಿತ್ಯ, ಮಯ್ಯೂಖಾದಿತ್ಯ, ಸಾಂಬಾದಿತ್ಯ, ಉತ್ತರಾರ್ಕಾದಿತ್ಯ, ವಿಮಲಾದಿತ್ಯ, ವೃದ್ಧಾದಿತ್ಯ, ಯಮಾದಿತ್ಯ ಎಂಬ ವಿವಿದ ಹೆಸರಿನ ಸೂರ್ಯನ ದೇವಾಲಯಗಳಿವೆ. ಅಲ್ಲಿರುವ ಪ್ರತಿಯೊಂದು ದೇವಾಲಯಗಳಿಗೂ ಒಂದೊಂದು ಕತೆ ಇದೆ.