ಸಾರ್ವಜನಿಕವಾಗಿ ನಗ್ನರಾಗುವುದು, ಹಲ್ಲು ಉದುರೋದು; ಜಗತ್ತಿನ ಹೆಚ್ಚಿನ ಜನರಿಗೆ ನಿದ್ರೆಯಲ್ಲಿ ಕಾಡುವ 5 ಕನಸುಗಳು
ಮಲಗಿರುವಾಗ ಬೀಳುವ ಕನಸುಗಳಿಗೆ ಆಳವಾದ ಅರ್ಥಗಳಿವೆ ಎಂದು ಕೆಲವರು ನಂಬುತ್ತಾರೆ. ಜಗತ್ತಿನ ಹೆಚ್ಚಿನ ಜನರಿಗೆ ನಿದ್ರೆಯಲ್ಲಿ ಒಂದೇ ರೀತಿಯ ಕನಸುಗಳು ಕಾಡುತ್ತವೆಯಂತೆ. ಹಾಗಾದರೆ ಅವುಗಳು ಯಾವವು? ಅವುಗಳ ಅರ್ಥವೇನು ಇಲ್ಲಿದೆ ಓದಿ.
ಪ್ರತಿಯೊಬ್ಬ ವ್ಯಕ್ತಿಗೂ ಕನಸು ಬೀಳುತ್ತದೆ. ಅವುಗಳಲ್ಲಿ ಕೆಲವು ತಮಾಷೆಯ ವಿಷಯವಾದರೆ, ಇನ್ನೂ ಕೆಲವು ದುಃಸ್ವಪ್ನ ಅಥವಾ ನಿಗೂಢವಾಗಿರುತ್ತದೆ. ನಿಜ ಜೀವನದಲ್ಲೇ ಆ ಘಟನೆ ನಡೆಯುತ್ತಿದೆ ಎನ್ನುವಷ್ಟು ನೈಜವಾಗಿರುತ್ತದೆ. ಕೆಲವೊಮ್ಮೆ ನಿಮಗೆ ಹೀಗೆ ಅನಿಸಿರಬಹುದು. ಬಹಳ ದಿನಗಳಿಂದ ಕನಸೇ ಬೀಳುತ್ತಿಲ್ಲ ಎನಿಸಿರಬಹುದು. ಸತ್ಯವೇನೆಂದರೆ ಪ್ರತಿ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಕನಸು ಬೀಳುತ್ತದೆ. ಇದು ನಿಮಗೆ ಆಶ್ಚರ್ಯವನ್ನುಂಟು ಮಾಡಿದರೂ ಕೂಡಾ ಸತ್ಯ. ಪ್ರತಿ ರಾತ್ರಿ ನೀವು ಕಾಣುವ ಹೆಚ್ಚಿನ ಕನಸುಗಳು ಮರೆತು ಹೋಗುತ್ತವೆ. ಆದರೆ ಕನಸುಗಳನ್ನು ನೆನಪು ಮಾಡಿಕೊಂಡಾಗ ಕನಸಿನ ಕೆಲವು ಭಾಗಗಳು ನೆನಪಾಗುತ್ತವೆ. ಅವು ನಮ್ಮ ಮಿದುಳಿನಲ್ಲಿ ದಿನವಿಡೀ ಸಂಗ್ರಹವಾದ ಸಂಗತಿಗಳಿರಬಹುದು ಅಥವಾ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳಿರಬಹುದು ಎಂದು ನ್ಯೂರೋಸೈನ್ಸ್‌ನ ಪ್ರಾಂಟಾಯರ್ಸ್‌ನಲ್ಲಿ ಇತ್ತೀಚೆಗೆ ವಿವರಿಸಿದೆ.
ಆದರೂ ನೀವು ಮಲಗಿರುವಾಗ ಬೀಳುವ ಕನಸುಗಳಿಗೆ ಆಳವಾದ ಅರ್ಥಗಳಿವೆ ಎಂದು ಕೆಲವರು ನಂಬುತ್ತಾರೆ. ಜಗತ್ತಿನ ಹೆಚ್ಚಿನ ಜನರಿಗೆ ನಿದ್ರೆಯಲ್ಲಿ ಒಂದೇ ರೀತಿಯ ಕನಸುಗಳು ಕಾಡುತ್ತವೆಯಂತೆ. ಹಾಗಾದರೆ ಅವುಗಳು ಯಾವುವು? ಅವುಗಳ ಅರ್ಥವೇನು ಎಂದು ತಿಳಿಯೋಣ.
ಕನಸುಗಳಲ್ಲಿ ಹಲವು ಬಗೆಗಳಿವೆ. ಅವು ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುತ್ತವೆ. ಸಂಶೋಧನೆಗಳ ಪ್ರಕಾರ 65 ಪ್ರತಿಶತದಷ್ಟು ಕನಸುಗಳು ನಾವು ಎಚ್ಚರವಿದ್ದಾಗ ನಮಗೆ ಆಗಿರುವ ಅನುಭವಗಳೇ ಆಗಿವೆ. ಕನಸುಗಳ ವಿವಿಧ ಪ್ರಕಾರಗಳು ಹೀಗಿವೆ...
ಮರುಕಳಿಸುವ ಕನಸು: ಒಂದೇ ಕನಸನ್ನು ಪದೇ ಪದೇ ಕಾಣುವುದಕ್ಕೆ ಮರುಕಳಿಸುವ ಕನಸುಗಳು ಎಂದು ಹೇಳಲಾಗುತ್ತದೆ. ಅದು ನಾವು ಪದೇ ಪದೇ ಮಾಡುವ ಕೆಲಸ ಅಥವಾ ನಮ್ಮ ನಡವಳಿಕೆಯ ಮೇಲೆ ಆಧಾರಿತವಾಗಿರುತ್ತದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಹಗಲುಗನಸು: ಕೆಲವು ಸಂಶೋಧನೆಗಳ ಪ್ರಕಾರ ನಮ್ಮ ಮಿದುಳಿನ ಕೆಲವು ಭಾಗ ನಿದ್ರೆಗೆ ಜಾರಲ್ಪಟ್ಟು ಉಳಿದವು ಎಚ್ಚರವಾಗಿರುವ ಸ್ಥಿತಿಯಲ್ಲಿದ್ದಾಗ ಹಗಲುಗನಸು ಸಂಭವಿಸುತ್ತದೆ. ಹಗಲುಗನಸು ಕಾಣುವ ಮೊದಲು ನಮ್ಮ ಮಿದುಳಿನ ಮುಂಭಾಗವು ಅತ್ಯಂತ ಗಾಢ ನಿದ್ದಗೆ ಜಾರಿರುತ್ತದೆ ಎಂದು ನ್ಯೂಜಿಲ್ಯಾಂಡ್‌ನ ಮನಃಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.
ಮಿಥ್ಯ ಎಚ್ಚರ: ಇದೊಂದು ಕನಸಿನ ಸ್ಥಿತಿಯಾಗಿದೆ. ಕೆಲಸಗಳನ್ನು ಮಾಡುವುದು ಸೇರಿದಂತೆ ಎಲ್ಲವನ್ನೂ ನೀವು ಕನಸಿನಲ್ಲಿ ಮಾಡುತ್ತಿರುತ್ತೀರಾದರೂ ಅದು ನಿಮಗೆ ನೈಜವೆಂದು ಅನಿಸುತ್ತದೆ. ಈ ರೀತಿಯ ಕನಸುಗಳು ನಿದ್ರೆಯ ಪಾರ್ಶ್ವವಾಯು ಸಮಯದಲ್ಲಾಗುತ್ತದೆ. ಇದೂ ಕೂಡಾ ಕನಸಿನ ಒಂದು ಸ್ಥಿತಿಯಾಗಿದೆ.
ಸ್ಪಷ್ಟವಾದ ಕನಸುಗಳು: ಇದರಲ್ಲಿ ನೀವು ಕನಸಿನಲ್ಲಿಯೇ ಎಚ್ಚರಗೊಳ್ಳುತ್ತೀರಿ. ನೀವು ಬಯಸಿದಂತೆ ನಿಮ್ಮ ಕನಸನ್ನು ನಿಯಂತ್ರಿಸಬಹುದಾಗಿದೆ ಮತ್ತು ಭಾವನೆಗಳನ್ನು ಕನಸಿನಲ್ಲಿಯೇ ಹೊರಹಾಕಲೂಬಹುದಾಗಿದೆ. ಇದು ಆರ್‌ಇಎಮ್ ನಿದ್ದೆ ಅಂದರೆ ರ್‍ಯಾಪಿಡ್ ಐ ಮೂಮೆಂಟ್ ನಿದ್ರೆಯ ಸಮಯದಲ್ಲಿ ಸಂಭವಿಸುತ್ತದೆ. ಇದು ಮಿದುಳಿನ ಮುಂಭಾಗವು ಚಟುವಟಿಕೆಯಿಂದಿರುವಾಗಿನ ಸ್ಥಿತಿಯಾಗಿದೆ.
ದುಃಸ್ವಪ್ನಗಳು: ಇದು ನಕಾರಾತ್ಮಕ ಭಾವನೆಗಳನ್ನು ಒಳಗೊಂಡಿರುವ ಅತಿ ಭಯಾನಕ ಕನಸುಗಳಾಗಿವೆ. ಇವುಗಳಲ್ಲಿ ಸಾಮಾನ್ಯವಾಗಿ ಬೀಳುವುದು, ದಾಳಿ ಮಾಡುವುದು ಮತ್ತು ಬೆನ್ನಟ್ಟುವುದಾಗಿದೆ. ಆದರೆ ಮಹಿಳೆಯರಲ್ಲಿ ಇವುಗಳ ಜೊತೆಗೆ ಹಲ್ಲು ಬೀಳುವುದು, ಸಂಬಂಧಗಳು ಮುರಿದು ಬಿದ್ದಂತೆ ಮುಂತಾದ ಅಹಿತವೆನಿಸುವ ಕನಸುಗಳು ಬೀಳುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಈ ರೀತಿಯ ಕನಸು ಬೀಳಲು ನಿಜ ಜೀವನದಲ್ಲಿ ಎದುರಿಸಿದ ಕಷ್ಟಗಳು ಮತ್ತು ಬಗೆಹರಿಯದ ಸಮಸ್ಯೆಗಳೇ ಕಾರಣವಾಗಿವೆ.
ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಗೆ ಕಾಡುವ ಕನಸುಗಳು
1) ಬೀಳುವುದು
2022ರ ಅಮೆರಿಕಾ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನ ಅತಿ ಹೆಚ್ಚು ಜನರನ್ನು ಕಾಡುವ ಕನಸೆಂದರೆ ಅದು ಬೀಳುವುದು ಎಂದು ಹೇಳಿದೆ. ಇದು ಪುರಷ ಮತ್ತು ಮಹಿಳೆ ಇಬ್ಬರಲ್ಲೂ ಕಾಣಸಿಗುವ ದುಃಸ್ವಪ್ನ ಎಂದು ಹೇಳಲಾಗಿದೆ. ಈ ರೀತಿಯ ಕನಸುಗಳು ಹೆಚ್ಚಿನ ಭರವಸೆ ಹೊಂದಿದ್ದ ವಿಷಯಗಳು ನಿರಾಶೆಯನ್ನುಂಟು ಮಾಡಿದಾಗ ಸಂಭವಿಸುತ್ತವೆ. ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಈ ಕನಸು ಸಾಮಾನ್ಯವಾಗಿದೆ.
2) ಬೆನ್ನಟ್ಟುವುದು
ಇದು ಅತಿ ಹೆಚ್ಚು ಜನರನ್ನು ಕಾಡುವ ಎರಡನೇ ಕನಸಾಗಿದೆ. ಈ ಕನಸನ್ನು ಮಹಿಳೆಯರು ಕಾಣುವುದು ಹೆಚ್ಚು. ಇದಕ್ಕೆ ಕಾರಣ ಯಾವುದಾದರೂ ಒಂದು ಅಹಿತ ಘಟನೆಯಲ್ಲಿ ತಪ್ಪಿಸಿಕೊಂಡಿದ್ದರೆ ಅಥವಾ ತೀವ್ರವಾದ ಆತಂಕದ ಭಾವನೆ ಎದುರಿಸುತ್ತಿದ್ದರೆ ಈ ರೀತಿಯ ಕನಸು ಬೀಳುವುದು ಸಾಮಾನ್ಯವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ.
3) ಹಲ್ಲು ಉದುರೋದು
ಹಲ್ಲು ಉದುರಿದಂತೆ ಅಥವಾ ದಂತ ಪಂಕ್ತಿಯಲ್ಲಿ ಹಲ್ಲುಗಳಿಲ್ಲದಿರುವುದು ಇವು ಅತಿ ಹೆಚ್ಚು ಕಾಡುವ ಕನಸುಗಳಲ್ಲೊಂದಾಗಿದೆ. ಈ ಕನಸು ನೈಜ ಜೀವನದಲ್ಲಿ ಹಲ್ಲು ಕಳೆದುಕೊಂಡಿರುವ ಅಥವಾ ಹಾಲು ಹಲ್ಲು ಉದುರಿದ ನೆನಪಾಗಿರಬಹುದು. ಇಲ್ಲವೇ ಹಲ್ಲು ನೋವು ಅಥವಾ ವಸಡಿನ ಕಾಯಿಲೆಗೆ ಸಂಬಂಧಿಸಿರಬಹುದು. ಇಷ್ಟೇ ಅಲ್ಲದೇ ಬಾಯಿಯ ಭಾಗವನ್ನು ಒಳಗೊಂಡಿರುವ ಕನಸು ನಿಜ ಜೀವನದಲ್ಲಿ ಮಾತಿನಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಸೂಚಿಸಬಹುದು.
4) ಸಾರ್ವಜನಿಕವಾಗಿ ನಗ್ನರಾಗುವುದು
ಈ ಕನಸು ಮುಜುಗರ ಅಥವಾ ದುರ್ಬಲ ಭಾವನೆಯನ್ನುಂಟು ಮಾಡುವ ಕನಸಾಗಿದೆ. ಸಾರ್ವಜನಿಕವಾಗಿ ನಗ್ನರಾಗುವುದು ಈ ಕನಸಿನ ಅತಿ ದೊಡ್ಡ ಅಂಶವೆಂದರೆ ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೆ ಎಂಬ ಕಾಳಜಿಯಾಗಿರಬಹುದು. ಈ ಕನಸಿನ ಇನ್ನೊಂದು ಅರ್ಥವೆಂದರೆ ನಿಜ ಜೀವನದಲ್ಲಿ ನೀವು ಸಾರ್ವಜನಿಕವಾಗಿ ದುರ್ಬಲವಾಗಬಹುದು, ಮುಜುಗರಕ್ಕೊಳಗಾಗಬಹುದು ಅಥವಾ ಎಕ್ಸ್‌ಪೋಸ್ ಆಗಬಹುದು ಎಂಬುದಾಗಿದೆ.
5) ವಂಚನೆ
ವಂಚನೆಗೊಳಗಾಗುವ ಅಥವಾ ವಂಚಿಸುವ ಕನಸು ಕೂಡಾ ಪ್ರಪಂಚದಲ್ಲಿ ಅತಿ ಹೆಚ್ಚು ಜನರನ್ನು ಕಾಡುವ ಕನಸುಗಳಲ್ಲೊಂದಾಗಿದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಯಾರಿಂದಾದರೂ ಮೋಸ ಹೋಗಿದ್ದರೆ ಅಥವಾ ನಂಬಿಕೆ ಕಳೆದುಕೊಂಡಿದ್ದರೆ ಈ ಕನಸು ಅದರ ಸೂಚನೆಯಾಗಿರಬಹುದು. ನೀವು ಕನಸಿನಲ್ಲಿ ನಿಮ್ಮ ಸಂಗಾತಿಗೆ ಮೋಸ ಮಾಡುತ್ತಿದ್ದರೆ ನಿಜ ಜೀವನದಲ್ಲಿ ಯಾವುದೋ ಒಂದು ಸಂಬಂಧ ನಿಮ್ಮಿಂದ ದೂರವಾಗುತ್ತಿದೆ ಎಂಬುದಾಗಿದೆ.
ವಿಭಾಗ