ಸ್ವಪ್ನಶಾಸ್ತ್ರ: ನೀವು ಆಹಾರ ತಯಾರಿಸುತ್ತಿರುವಂತೆ ಕನಸು ಕಂಡರೆ ಏನರ್ಥ; ಆಹಾರ ಸೇವನೆಯನ್ನು ನೋಡಬಾರದೇ
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಕನಸುಗಳು ಬೀಳುತ್ತಲೇ ಇರುತ್ತವೆ. ಆದರೆ ಯಾವ ಕನಸು ಬಿದ್ದರೆ ಏನು ಅರ್ಥ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಕಡಿಮೆ. ಆಹಾರ ತಯಾರಿಸುತ್ತಿರುವಂತೆ ಕನಸು ಕಾಣುವುದರ ಅರ್ಥ ತಿಳಿಯಿರಿ.

ಆಹಾರ ತಯಾರಿಸುತ್ತಿರುವಂತೆ ಕನಸು ಕಂಡರೆ ಏನು ಅರ್ಥ ಎಂಬುದನ್ನು ಇಲ್ಲಿ ತಿಳಿಯಿರಿ
ಕನಸಿನಲ್ಲಿ ಆಹಾರ ತಯಾರಿಸುವುದನ್ನು ನೋಡುವುದರಿಂದ ವಿವಿಧ ರೀತಿಯ ಫಲಗಳು ಅಥವಾ ಅರ್ಥಗಳು ದೊರೆಯುತ್ತವೆ. ಕನಸಿನಲ್ಲಿ ಆಹಾರ ತಯಾರಿಸುವುದನ್ನು ನೋಡಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಆಹಾರ ತಿನ್ನುವುದನ್ನು ನೋಡಬಾರದು. ಉರಿಯುತ್ತಿರುವ ಒಲೆಯನ್ನು ನೋಡಬಹುದು. ಆದರೆ ಅಡುಗೆ ಆದ ನಂತರ ಆರಿಸಿದ ಒಲೆಯಿಂದ ಹೊಗೆ ಬರುವುದನ್ನು ನೋಡಬಾರದು. ಒಂದು ವೇಳೆ ಇಂತಹ ಕನಸು ಕಂಡರೆ ಮನಸ್ಸಿಗೆ ಬೇಸರ ಉಂಟಾಗುವ ವರ್ತಮಾನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತದೆ. ಆದರೆ ಕನಸುಗಳು ನಮ್ಮ ಮನಸ್ಥಿತಿಯನ್ನು ಸಹ ಆಧರಿಸುತ್ತಿರುತ್ತದೆ. ಯಾವ ಕನಸಿಗೆ ಏನರ್ಥ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
- ಹಳೆಯ ಮನೆಯಲ್ಲಿ ಹೊಸ ಪದಾರ್ಥಗಳ ಸಹಾಯದಿಂದ ಆಹಾರವನ್ನು ತಯಾರಿಸುವುದನ್ನು ನೋಡಿದಲ್ಲಿ ಸ್ವಂತ ಮನೆ ಅಥವಾ ಸ್ವಂತ ಜಮೀನನ್ನು ಕೊಳ್ಳುವ ಯೋಚನೆಯು ಸಫಲವಾಗುತ್ತದೆ.
- ಮನೆಯಲ್ಲಿ ತಯಾರಿಸಿದ ಆಹಾರವನ್ನು ತೆಗೆದುಕೊಂಡು ಮನೆಯ ಹೊರಗೆ ಸೇವಿಸುವ ಕನಸು ಬಿದ್ದಲ್ಲಿ ಇರುವ ವಾಸ್ತು ಸ್ಥಳವನ್ನು ಬದಲಾಯಿಸುವ ಸೂಚನೆಯಾಗಿರುತ್ತದೆ.
- ಆಹಾರವನ್ನು ತಯಾರಿಸಿದವರೇ ಆಹಾರ ಸೇವಿಸಿದರೆ ಅದು ಅವರಿಗೆ ಉಂಟಾಗುವ ಅನಾರೋಗ್ಯವನ್ನು ಸೂಚಿಸುತ್ತದೆ.
- ಅನಾರೋಗ್ಯ ಇದ್ದವರಿಗೆ ಕನಸಿನಲ್ಲಿ ಅವರು ತಯಾರಿಸಿದ ಆಹಾರವನ್ನು ಬೇರೆಯವರು ತಿನಿಸಿದಲ್ಲಿ ಇರುವ ಆರೋಗ್ಯದ ಸಮಸ್ಯೆಯು ಆತ್ಮೀಯರ ಸಹಾಯದಿಂದ ಪರಿಹಾರ ಗೊಳ್ಳುತ್ತದೆ.
- ಆಹಾರದಿಂದ ತುಂಬಿರುವ ಪಾತ್ರೆಯನ್ನು ತೆರೆದಾಗ ಆ ಪಾತ್ರೆಯಲ್ಲಿ ಯಾವುದೇ ಆಹಾರ ಇರುವುದಿಲ್ಲ. ಇಂತಹ ಕನಸನ್ನು ಕಂಡಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಮತ್ತು ಹಣಕಾಸಿನ ಕೊರತೆಯೂ ಕಂಡುಬರುತ್ತದೆ.
- ಯಾವುದೇ ಆಹಾರವಿಲ್ಲದ ಪಾತ್ರೆಯನ್ನು ತೆರೆದಾಗ ಅದರಲ್ಲಿ ಆಹಾರ ವಿರುವ ಕನಸಾಗುತ್ತದೆ. ಆಗ ಜೀವನದಲ್ಲಿನ ಕಷ್ಟ ನಷ್ಟಗಳು ದೂರವಾಗುತ್ತವೆ. ಉತ್ತಮ ಹಣಕಾಸಿನ ನೆರವು ದೊರೆಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.
- ಕುಟುಂಬದ ಹಿರಿಯರು ಮನೆ ಮಂದಿಗೆ ಆಹಾರವನ್ನು ತಿನಿಸುವ ಕನಸು ಬೀಳುತ್ತದೆ. ಇದರ ಅರ್ಥ ಕುಟುಂಬದ ಕಷ್ಟ ನಷ್ಟಗಳು ಪರಿಹಾರಗೊಳ್ಳುತ್ತದೆ. ಮಾತ್ರವಲ್ಲದೆ ಕುಟುಂಬದ ಕಿರಿಯರ ಆರೋಗ್ಯದಲ್ಲಿನ ಸಮಸ್ಯೆಯೂ ದೂರವಾಗುತ್ತದೆ.
- ಕುಟುಂಬದ ಹಿರಿಯರಿಗೆ ಕುಟುಂಬದ ಕಿರಿಯರು ಕನಸಿನಲ್ಲಿ ಆಹಾರವನ್ನು ತಿನ್ನಿಸುತ್ತಾರೆ. ಇದರ ಅರ್ಥವೆಂದರೆ ಕುಟುಂಬದಲ್ಲಿನ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ ಅಥವಾ ಕುಟುಂಬದ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಹಿರಿಯರ ಮಾತಿಗೆ ಗೌರವ ಸಿಗದೇ ಹೋಗುತ್ತದೆ.
- ಕನಸಿನಲ್ಲಿ ದಿನನಿತ್ಯ ಬಳಸುವ ವಾಹನದಲ್ಲಿ ಆಹಾರ ಸಮೇತ ಮನೆಯಿಂದ ಉದ್ಯೋಗ ಸ್ಥಾನಕ್ಕೆ ಹೋದಲ್ಲಿ ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
- ಕನಸಿನಲ್ಲಿ ದಿನನಿತ್ಯ ಬಳಸುವ ವಾಹನದಲ್ಲಿ ಆಹಾರ ಅಥವ ಅವರಿಗೆ ಇಷ್ಟವಾದ ವಸ್ತುವನ್ನು ತರುವುದನ್ನು ಮರೆತು ಉದ್ಯೋಗ ಸ್ಥಳದಿಂದ ಮನೆಗೆ ಬಂದಲ್ಲಿ ಉದ್ಯೋಗದಲ್ಲಿ ತೊಂದರೆ ಉಂಟಾಗುತ್ತದೆ ಅಥವಾ ಉದ್ಯೋಗವನ್ನು ಬದಲಿಸಬೇಕಾಗುತ್ತದೆ.
- ಮನೆ ಮಂದಿಗಾಗಿ ತಯಾರಿಸಿದ ಆಹಾರವನ್ನು ಬೀದಿಯಲ್ಲಿ ಸಾಗುವ ಪ್ರಾಣಿಗಳು ತಿಂದಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವು ಪರರ ಪಾಲಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರೊಂದಿಗೆ ಮನಸ್ತಾಪವು ಉಂಟಾಗುತ್ತದೆ.
- ಮನೆ ಮಂದಿಗಾಗಿ ತಯಾರಿಸಿದ ಆಹಾರವನ್ನು ಮನೆಯಲ್ಲಿ ಸಾಕಿರುವ ಪ್ರಾಣಿಗಳಿಗೆ ತಿನ್ನಿಸಿದಲ್ಲಿ ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಹಣಕಾಸಿನ ತೊಂದರೆಯೂ ದೂರವಾಗುತ್ತದೆ.
- ಮನೆಯಲ್ಲಿ ತಯಾರಿಸಿದ ಆಹಾರವನ್ನು ಬೀದಿಯಲ್ಲಿ ಸಾಗುವ ಪ್ರಾಣಿಗಳಿಗೆ ನೀಡಿ ಉಳಿದ ಆಹಾರವನ್ನು ಮನೆಯ ಒಳಗೆ ತೆಗೆದುಕೊಂಡು ಹೋದಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ಇಲ್ಲವೇ ಬೇರೆಯವರಿಗೆ ನೀಡಿದ್ದ ಹಣವು ಮರಳಿ ಕೈಸೇರುತ್ತದೆ.
- ಮನೆಯಲ್ಲಿ ತಯಾರಿಸಿದ ಆಹಾರವನ್ನು ಹರಿವ ನದಿಗೆ ಹಾಕಿದಲ್ಲಿ ಜೀವನದಲ್ಲಿನ ಕಷ್ಟ ನಷ್ಟಗಳು ದೂರವಾಗಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
- ಕನಸಿನಲ್ಲಿ ಹೆಣ್ಣು ಮಕ್ಕಳು ಆಹಾರವನ್ನು ತಯಾರಿಸುವುದನ್ನು ಕಂಡಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಅದರಿಂದ ಶುಭಫಲಗಳೇ ದೊರೆಯುತ್ತವೆ.
- ಕನಸಿನಲ್ಲಿ ವಯೋವೃದ್ಧರು ಮಕ್ಕಳು ತಿನ್ನುವ ಆಹಾರವನ್ನು ಸೇವಿಸಿದರೆ ಅವರಿಗೆ ದೈಹಿಕ ದೌರ್ಬಲ್ಯ ಉಂಟಾಗುತ್ತದೆ.
- ಮಕ್ಕಳು ತಿನ್ನುವ ಆಹಾರವನ್ನು ಕನಸಿನಲ್ಲಿ ನವಿವಾಹಿತರು ಸೇವಿಸಿದಲ್ಲಿ ಆ ಕುಟುಂಬದಲ್ಲಿ ಗರ್ಭಿಣಿಯರು ಇದ್ದಲ್ಲಿ ಸುಖ ಪ್ರಸವವಾಗುತ್ತದೆ.
(ಬರಹ: ಎಚ್ ಸತೀಶ್, ಜ್ಯೋತಿಷಿ)
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.