Swapnashastra: ಪದೇ ಪದೆ ಹಾವಿಗೆ ಸಂಬಂಧಿಸಿದ ಕನಸು ಕಾಣುತ್ತಿದ್ದೀರಾ? ಅದಕ್ಕೆ ಸ್ವಪ್ನ ಶಾಸ್ತ್ರ ಹೇಳುವುದೇನು? ಮಾಹಿತಿ ಇಲ್ಲಿದೆ
Swapnashastra: ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ನೋಡುವ ಸಂಗತಿಗಳು ನಮ್ಮ ನಿಜ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಅದೇ ರೀತಿ ನೀವು ಪದೇ ಪದೆ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದರೆ ಅದರ ಅರ್ಥವೇನು? ಸ್ವಪ್ನಶಾಸ್ತ್ರ ಹೇಳುವುದೇನು ನೋಡೋಣ.
Swapnashastra: ಕನಸು (Dream) ಎಲ್ಲರಿಗೂ ಬೀಳುತ್ತದೆ. ಅದೊಂದು ಸಹಜ ಕ್ರಿಯೆ. ಎಲ್ಲಾ ಕನಸುಗಳು ಒಂದೇ ರೀತಿಯಾಗಿರುವುದಿಲ್ಲ, ಬೇರೆ ಬೇರೆಯಾಗಿರುತ್ತವೆ. ನಮ್ಮ ಸ್ಮೃತಿಪಟಲದಲ್ಲಿ ಹಾದು ಹೋಗುವ ಕನಸುಗಳಲ್ಲಿ ಕೆಲವು ಸುಂದರವಾಗಿರುತ್ತದೆ, ನಗೆಯುಕ್ಕಿಸುತ್ತವೆ. ಕೆಲವು ಕನಸುಗಳು ಭಯಾನಕವಾಗಿದ್ದು ನಿದ್ದೆಗೆಡಿಸಿದರೆ, ನೈಜ ಘಟನೆಯೇ ನಡೆಯುತ್ತಿದೆ, ನಾವು ಅದರಲ್ಲಿಯೇ ಜೀವಿಸುತ್ತಿದ್ದೇವೆ ಎಂಬಷ್ಟು ಗಾಢವಾಗಿರುತ್ತದೆ.
ಅಸ್ಪಷ್ಟ ಕನಸುಗಳು ದಿನವಿಡೀ ಯೋಚಿಸುವಂತೆ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕನಸುಗಳಿಗೆ ಅರ್ಥವಿದೆ. ಅದು ಭೂತಕಾಲದಲ್ಲಿ ನಡೆದ ಘಟನೆ ಮತ್ತು ಭವಿಷ್ಯದ ಸಂಗತಿಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಕನಸುಗಳಿಗೂ, ನಿಜ ಜೀವನಕ್ಕೂ ಸಂಬಂಧವಿದೆ, ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ಕನಸುಗಳು ಶುಭ ಫಲವನ್ನು ನೀಡಿದರೆ, ಉಳಿದವು ಅಶುಭ ಫಲವನ್ನು ನೀಡುತ್ತವೆ.
ಕೆಲವರಿಗೆ ಪದೇ ಪದೇ ಹಾವಿನ ಕನಸು ಬೀಳುತ್ತದೆ. ಹಾವು ಹಿಡಿದಂತೆ, ಹಾವು ಹುತ್ತವನ್ನು ಸೇರಿದಂತೆ ಹೀಗೆ ಮುಂತಾದ ಕನಸು ಬೀಳುತ್ತದೆ. ಅವೆಲ್ಲದಕ್ಕೂ ಅರ್ಥವಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬರೀ ಹಾವು ಕಾಣುವುದಕ್ಕು, ಹಾವಿನ ಚಲನವಲನಗಳು ಕಾಣುವುದಕ್ಕೂ ಬೇರೆ ಬೇರೆ ಅರ್ಥವಿದೆ. ನಿಮಗೂ ಆ ರೀತಿಯ ಹಾವಿನ ಕನಸು ಬೀಳುತ್ತಿದ್ದರೆ, ಅದರ ಅರ್ಥ ಹುಡುಕುತ್ತಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದು ಶುಭವೊ ಅಥವಾ ಅಶುಭವೋ ತಿಳಿಯಲು ಮುಂದೆ ಓದಿ.
ಕನಸಿನಲ್ಲಿ ಹಾವು ಹಿಡಿಯುವುದು
ಯಾರೋ ಹಾವು ಹಿಡಿಯುತ್ತಿರುವ ಕನಸು ನಿಮಗೆ ಬಿದ್ದಿದ್ದರೆ ಅದು ಶುಭ ಸಂಕೇತವಾಗಿದೆ. ಅದರ ಅರ್ಥ, ನಿಮಗೆ ಸಂಪತ್ತು ಒಲಿದುಬರುವ ಸಾಧ್ಯತೆಯಿದೆ. ನಿಮ್ಮ ತೊಂದರೆಗಳೆಲ್ಲಾ ದೂರ ಹೋಗು ಸಾಧ್ಯತೆಯಿದೆ.
ಹಾವನ್ನು ಕೊಲ್ಲುವ ಕನಸು
ನೀವು ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದನ್ನು ನೋಡಿದ್ದರೆ, ಅದರ ಅರ್ಥ ನಿಮಗೆ ಶುಭವಾಗಲಿದೆ ಎಂದು. ಶತ್ರುವಿನ ಮೇಲೆ ಶೀಘ್ರದಲ್ಲಿಯೇ ವಿಜಯಶಾಲಿಯಾಗಬಹುದು ಎಂಬುದನ್ನು ಅದು ಸೂಚಿಸುತ್ತದೆ.
ಕನಸಿನಲ್ಲಿ ಹಾವು ಮತ್ತು ಮುಂಗುಸಿಯ ಜಗಳ ಕಂಡರೆ
ನಿಮಗೆ ಹಾವು ಮತ್ತು ಮುಂಗುಸಿ ಜಗಳವಾಡುತ್ತಿದ್ದಂತೆ ಕನಸು ಬಿದ್ದಿದ್ದರೆ, ಅದರ ಅರ್ಥ ನೀವು ಕೆಲವು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದಾಗಿದೆ. ಶೀಘ್ರದಲ್ಲೇ ನ್ಯಾಯಾಲಯದಿಂದ ನೋಟೀಸ್ ಸಹ ಪಡೆಯಬಹುದು.
ಇದನ್ನೂ ಓದಿ: ಕನಸಿನಲ್ಲಿಈ 5 ಪ್ರಾಣಿಗಳನ್ನು ಕಂಡರೆ ಏನು ಅರ್ಥ?
ಹಾವು ಕಚ್ಚಿದ ಕನಸು
ನಿಮಗೆ ಹಾವು ಕಚ್ಚಿದ ಕನಸು ಬಿದ್ದಿದ್ದರೆ, ಭವಿಷ್ಯದಲ್ಲಿ ನೀವು ದೊಡ್ಡ ತೊಂದರೆಗಳಿಗೆ ಸಿಲುಕುತ್ತೀರ ಎಂದು ಶಾಸ್ತ್ರ ಹೇಳುತ್ತದೆ. ಮುಂಬರುವ ದಿನಗಳಲ್ಲಿ ನೀವು ಆರೋಗ್ಯ, ಉದ್ಯೋಗ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಹಾವು ಹುತ್ತದೊಳಗೆ ಹೋಗುವ ಕನಸು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಾವು ಹುತ್ತದೊಳಗೆ ಹೋಗುವಂತಹ ಕನಸು ಕಂಡಿದ್ದರೆ, ಅದು ನಿಮಗೆ ಒಳ್ಳೆಯದನ್ನು ಮಾಡುತ್ತದೆ ಎಂದಾಗಿದೆ. ಭವಿಷ್ಯದಲ್ಲಿ ನೀವು ಸಂಪತ್ತನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ.
ಹಾವಿನ ಕನಸು ಬಿದ್ದ ತಕ್ಷಣ ಹೆದರಿ ಹೌಹಾರಬೇಕೆಂದಿಲ್ಲ. ಪ್ರತಿಯೊಂದು ಘಟನೆಗೂ ಅದರದೇ ಆದ ಅರ್ಥವಿದೆ ಎಂಬುದನ್ನು ಅರಿಯಿರಿ. ಕನಸುಗಳನ್ನು ಸರಿಯಾಗಿ ಗಮನಿಸಿ, ಅದರ ಅರ್ಥ ತಿಳಿದುಕೊಳ್ಳಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.