12 ಜ್ಯೋತಿರ್ಲಿಂಗಗಳಲ್ಲೊಂದು ರಾಮೇಶ್ವರಂ ದೇವಾಲಯ; ಶ್ರೀ ರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ ಈ ಪುಣ್ಯ ಸ್ಥಳದ ಐತಿಹ್ಯದ ಬಗ್ಗೆ ತಿಳಿಯಿರಿ
Rameshwaram Temple: ತಮಿಳುನಾಡಿನ ರಾಮೇಶ್ವರಂ ದೇವಾಲಯಕ್ಕೆ ತನ್ನದೇ ಐತಿಹ್ಯವಿದೆ. ಶ್ರೀರಾಮನು ರಾವಣನನ್ನು ಕೊಂದ ನಂತರ ಬ್ರಾಹ್ಮಣ ಹತ್ಯಾ ದೋಷದಿಂದ ಪಾರಾಗಲು ಅಗಸ್ತ್ಯ ಋಷಿಗಳ ಅಣತಿಯಂತೆ ರಾಮೇಶ್ವರಂನಲ್ಲಿ ಶಿವಲಿಂಗವನ್ನು ಸ್ಥಾಪಿಸಲು ನಿರ್ಧರಿಸಿದ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.
Rameshwaram Temple: ಹಿಂದೂಗಳು ಅನೇಕ ದೇವರುಗಳನ್ನು ಪೂಜಿಸುತ್ತಾರೆ. ಈ ದೇವರುಗಳಲ್ಲಿ ಬ್ರಹ್ಮ, ವಿಷ್ಣು, ಶಿವನಿಗೆ ವಿಶೇಷ ಸ್ಥಾನಮಾನವಿದೆ. ಬ್ರಹ್ಮ ದೇವನ ದೇವಾಲಯಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಆದರೆ, ವಿಷ್ಣು ಹಾಗೂ ಶಿವನಿಗೆ ಸಂಬಂಧಪಟ್ಟ ದೇಗುಲಗಳೇ ಹೆಚ್ಚು ಇವೆ.
ಈಶ್ವರನೆಂದರೆ ಶಕ್ತಿ, ನಂಬಿ ಬಂದ ಭಕ್ತರ ಕೈಬಿಡುವುದಿಲ್ಲ ಅನ್ನೋ ನಂಬಿಕೆ ಹಿಂದೂಗಳದ್ದು. ಶಿವನ 12 ಜ್ಯೋತಿರ್ಲಿಂಗಗಳು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಭಾರತದಲ್ಲಿ 12 ಜ್ಯೋತಿರ್ಲಿಂಗ ದೇವಾಲಯಗಳಿದ್ದು, ಶಿವನು ತನ್ನ ಭಕ್ತರಿಗೆ ವರವನ್ನು ಕರುಣಿಸಲು ಅವತಾರವನ್ನು ಎತ್ತಿದ್ದಾನೆ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗುತ್ತದೆ. ಈ 12 ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರಂ ದೇವಾಲಯವೂ ಒಂದು.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಜಗದೊಡೆಯ ಈಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡಿನ ರಾಮೇಶ್ವರಂ ದೇವಾಲಯದ ಬಗ್ಗೆ ನಿಮಗೆ ತಿಳಿದಿದೆಯೇ? ಹಿಂದೂಗಳ ಪವಿತ್ರ ಸ್ಥಳಗಳಲ್ಲೊಂದಾದ ಈ ದೇಗುಲವು ರಾಮನಾಥಪುರಂನ ಪಂಬನ್ ದ್ವೀಪದಲ್ಲಿದೆ. ಈ ದೇವಸ್ಥಾನವನ್ನು ರಾಮನಾಥಸ್ವಾಮಿ ದೇವಾಲಯ ಎಂದೂ ಕರೆಯಲಾಗುತ್ತದೆ. ಶ್ರೀ ರಾಮಚಂದ್ರ ಶಿವನಿಗಾಗಿ ಯಾಕೆ ಈ ಸ್ಥಳದಲ್ಲಿ ಪ್ರಾರ್ಥಿಸಿದ, ಈ ಬಗ್ಗೆ ಇಲ್ಲಿದೆ ಮಾಹಿತಿ.
ರಾಮೇಶ್ವರಂ ದೇಗುಲದ ಕುತೂಹಲಕಾರಿ ಸಂಗತಿ ಇಲ್ಲಿದೆ
ರಾಮಾಯಣದಲ್ಲಿ ಶ್ರೀರಾಮಚಂದ್ರನು ಸಹೋದರ ಲಕ್ಷ್ಮಣ, ಹನುಮಂತ ಹಾಗೂ ಕಪಿ ಸೈನ್ಯದ ಸಹಿತ ಲಂಕೆಗೆ ದಾಳಿಯಿಟ್ಟಿದ್ದ. ಈ ವೇಳೆ ನಡೆದ ಘೋರ ಯುದ್ಧದಲ್ಲಿ ರಾವಣನು ರಾಮನಿಂದ ಕೊಲ್ಲಲ್ಪಟ್ಟ. ಲಂಕಾದ ರಾವಣನು ಬ್ರಾಹ್ಮಣನಾಗಿದ್ದ. ಆದರೆ, ಕ್ಷತ್ರಿಯನಾದ ರಾಮನು ಬ್ರಾಹ್ಮಣನಾದ ರಾವಣನು ಕೊಂದಿದ್ದ. ಹಿಂದೂ ನಂಬಿಕೆಗಳ ಪ್ರಕಾರ, ಬ್ರಾಹ್ಮಣನನ್ನು ಕೊಲ್ಲುವುದರಿಂದ ಬ್ರಹ್ಮಹತ್ಯಾ ದೋಷ ದೋಷವುಂಟಾಗುತ್ತದೆಯಂತೆ. ಹೀಗಾಗಿ ರಾಮನು ತನ್ನ ದೋಷ ಪರಿಹಾರಕ್ಕಾಗಿ ಈಶ್ವರನನ್ನು ಪ್ರಾರ್ಥಿಸಿದ. ಅಲ್ಲದೆ, ರಾವಣನು ಮಹಾನ್ ಶೈವ ಭಕ್ತನಾಗಿದ್ದ ಕೂಡ.
ಬ್ರಾಹ್ಮಣ ಹತ್ಯಾ ದೋಷದಿಂದ ಪಾರಾಗಲು ಋಷಿ ಅಗಸ್ತ್ಯರ ಅಣತಿಯಂತೆ ಶ್ರೀರಾಮನು ರಾಮೇಶ್ವರಂನಲ್ಲಿ ಶಿವಲಿಂಗವನ್ನು ಸ್ಥಾಪಿಸಲು ನಿರ್ಧರಿಸಿದ. ಕೈಲಾಸದಿಂದ ಶಿವಲಿಂಗವನ್ನು ತರುವಂತೆ ಹನುಮಂತನಿಗೆ ರಾಮ ಸೂಚಿಸಿದ. ಶಿವಲಿಂಗವನ್ನು ತರಲು ಕೈಲಾಸಕ್ಕೆ ಹೋದ ಹನುಮಂತನಿಗೆ ಇದನ್ನು ತರಲು ಬಹಳ ಸಮಯ ತೆಗೆದುಕೊಂಡಿತು. ಹೀಗಾಗಿ ಶ್ರೀರಾಮನ ಸತಿ ಸೀತೆಯು ರಾಮಲಿಂಗಂನಲ್ಲೇ ಇದ್ದ ಮರಳಿನಲ್ಲಿ ಪುಟ್ಟ ಶಿವಲಿಂಗವನ್ನು ರಚಿಸಿದಳು. ಆ ವೇಳೆಗೆ ಹನುಮಂತನು ಕೈಲಾಸದಿಂದ ಶಿವಲಿಂಗವನ್ನು ಹೊತ್ತು ತಂದ. ಹೀಗೆ ಪುಟ್ಟ ಲಿಂಗದ ಪಕ್ಕದಲ್ಲಿ ಶ್ರೀರಾಮನು ಹನುಮಂತನು ನೀಡಿದ ಕಪ್ಪು ಕಲ್ಲಿನ ದೊಡ್ಡ ಶಿವಲಿಂಗವನ್ನು ಸ್ಥಾಪಿಸಿದನು. ಇದು ಜ್ಯೋತಿರ್ಲಿಂಗದ ದೇವಾಲಯವೆಂದು ನಂಬಲಾಗಿದೆ. ಹೀಗಾಗಿ ರಾಮೇಶ್ವರಂ ದೇವಾಲಯದಲ್ಲಿ ಎರಡು ಲಿಂಗಗಳನ್ನು ನೀವು ನೋಡಬಹುದು. ಒಂದು ರಾಮಲಿಂಗ, ಇದು ಸೀತಾದೇವಿಯಿಂದ ರಚಿಸಲ್ಪಟ್ಟಿದೆ ಮತ್ತು ಇನ್ನೊಂದು ಹನುಮಂತ ತಂದ ವಿಶ್ವಲಿಂಗ.
ಪರಾಕ್ರಮಬಾಹುವಿನಿಂದ ದೇಗುಲ ವಿಸ್ತರಣೆ
ರಾಮೇಶ್ವರಂನಲ್ಲಿರುವ ಹಳೆಯ ದೇವಾಲಯವು 12ನೇ ಶತಮಾನದಲ್ಲಿ ಶ್ರೀಲಂಕಾದ ರಾಜ ಪರಾಕ್ರಮಬಾಹುವಿನಿಂದ ವಿಸ್ತರಿಸಲ್ಪಟ್ಟಿದೆ ಎಂದು ನಂಬಲಾಗಿದೆ. ದೇವಾಲಯದೊಳಗೆ ಕಂಡುಬರುವ ಶಾಸನದ ಪ್ರಕಾರ, ನಂತರದ ಕಾಲಮಾನದಲ್ಲಿ ಪಾಂಡ್ಯರು, ಮಧುರೈನ ನಾಯಕ್ ಆಡಳಿತಗಾರರು ಮತ್ತು ರಮಾನಂದರ ರಾಜರು ವಿಸ್ತರಿಸಿದರು ಎನ್ನಲಾಗಿದೆ.
ರಾಮನ ಬತ್ತಳಿಕೆಯಲ್ಲಿ 22 ಬಾಣಗಳಿದ್ದವು ಎಂದು ನಂಬಲಾಗಿದೆ. ರಾಮನಾಥಸ್ವಾಮಿ ದೇವಾಲಯ ಇನ್ನೊಂದು ಕುತೂಹಲಕಾರಿ ಅಂಶ ಎಂದರೆ, ದೇಗುಲದ ಕಾರಿಡಾರ್‌ನಲ್ಲಿ 22 ಬಾವಿಗಳಿದ್ದು, ಇವು ಔಷಧೀಯ ಗುಣಗಳನ್ನು ಹೊಂದಿವೆ ಎಂದು ನಂಬಲಾಗಿದೆ. ಪ್ರತಿ ಬಾವಿಯ ನೀರಿನ ರುಚಿಗಳು ಬದಲಾಗುತ್ತವೆ.
ದೇವಾಲಯವನ್ನು ಪ್ರವೇಶಿಸುವ ಮೊದಲು, ಭಕ್ತರು ತೀರ್ಥಗಳಲ್ಲಿ ಸ್ನಾನ ಮಾಡುತ್ತಾರೆ. ಪವಿತ್ರವಾದ ನೀರಿನಿಂದ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.
ವಿಭಾಗ