ತಮಿಳುನಾಡು ವೆನ್ನೈಮಲೈನಲ್ಲಿರುವ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನ: ಸೃಷ್ಟಿಕರ್ತ ಬ್ರಹ್ಮ ತನ್ನ ಸಮಸ್ಯೆಗೆ ಮುರುಗನ್ ಬಳಿ ಪರಿಹಾರ ಕೇಳಿದ ಕಥೆ
Tamilnadu Temple: ಭಾರತದಲ್ಲಿ ಬಹಳಷ್ಟು ದೇವಸ್ಥಾನಗಳು ಮಹಿಮೆಗೆ ಹೆಸರಾಗಿವೆ. ತಮಿಳುನಾಡಿನ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನ ಕೂಡಾ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಬ್ರಹ್ಮನು, ಸುಬ್ರಹ್ಮಣ್ಯಸ್ವಾಮಿಯ ಬಳಿ ತನ್ನ ಸಮಸ್ಯೆಗೆ ಪರಿಹಾರ ಕೇಳಿದ ಕಥೆ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ತಮಿಳುನಾಡಿನ ಪ್ರಸಿದ್ದ ದೇವಾಲಯಗಳಲ್ಲಿ ಕರೂರ್ ಜಿಲ್ಲೆಯ ವೆನ್ನೈಮಲೈನಲ್ಲಿರುವ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನ ಕೂಡಾ ಒಂದು. ಇಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯವಿದೆ. ಭಕ್ತರು ಸುಬ್ರಹ್ಮಣ್ಯನನ್ನು ಮುರುಗನ್ ಎಂದು ಕರೆಯುತ್ತಾರೆ.
ಬಾಲಸುಬ್ರಹ್ಮಣ್ಯನಿಗೆ ಶಿವ-ಪಾರ್ವತಿಯರ ಮೇಲೆ ವಿಶೇಷ ಭಕ್ತಿ ಗೌರವವಿರುತ್ತದೆ. ಸುಬ್ರಹ್ಮಣ್ಯನು ಸ್ವಯಂ ಜೋತಿಷಿ. ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜ್ಞಾನಫಲವನ್ನು ಸಂಪಾದಿಸುತ್ತಾನೆ. ಆದ್ದರಿಂದ ಮಕ್ಕಳಿಗೆ ಈ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಮಾಡುವ ಮೂಲಕ ವಿದ್ಯಾಭ್ಯಾಸವನ್ನು ಆರಂಭಿಸಿದಲ್ಲಿ ಶಿಕ್ಷಣದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಸೋದರರ ನಡುವೆ ಏನೇ ಮನಸ್ತಾಪ ಇದ್ದವರು ಇಲ್ಲಿ ಪೂಜೆ ಮಾಡಿಸಿದರೆ ಅದೂ ಕೂಡಾ ದೂರವಾಗುತ್ತದೆ. ಸ್ವತ: ಬ್ರಹ್ಮ ಮತ್ತು ಕಾಮಧೇನು ಈ ಬೆಟ್ಟವನ್ನು ನಿರ್ಮಿಸಿದರೆಂಬ ಬಗ್ಗೆ ಕಥೆಗಳಿವೆ.
ಈ ದೇವಾಲಯದಲ್ಲಿ ಪ್ರತಿದಿನ ಬೆಳಗಿನ ವೇಳೆ 6:30 ರಿಂದ ಪೂಜೆ ಆರಂಭವಾಗುತ್ತವೆ. ಕಾರ್ತಿಕ ಮಾಸದಲ್ಲಿ ವಿಶೇಷ ಸೇವೆ ನಡೆಯುತ್ತದೆ. ಬೆಟ್ಟದ ಮೇಲಿರುವ ಈ ದೇವಾಲಯವನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಸೃಷ್ಟಿಕರ್ತನಾದ ಬ್ರಹ್ಮದೇವ ಮತ್ತು ಕೇಳಿದ್ದನ್ನು ಕರುಣಿಸುವ ಕಾಮಧೇನುವಿನ ನಡುವಿನ ಹೊಂದಾಣಿಕೆ ಮತ್ತು ಕರ್ತವ್ಯಶೀಲತೆಯ ಬಗ್ಗೆ ಕತೆಯೊಂದಿದೆ.
ತನ್ನ ಕರ್ತವ್ಯದ ಬಗ್ಗೆ ಹೆಮ್ಮೆ ಪಡುವ ಬ್ರಹ್ಮ
ಸೃಷ್ಟಿಯು ಬ್ರಹ್ಮನ ಕರ್ತವ್ಯವಾಗಿರುತ್ತದೆ. ಯಾವುದೇ ಲೋಪವಿಲ್ಲದೆ ಬ್ರಹ್ಮನು ತನ್ನ ಕರ್ತವ್ಯ ನಿರ್ವಹಿಸುತ್ತಾನೆ. ತನ್ನ ಕೆಲಸದ ಬಗ್ಗೆ ಬ್ರಹ್ಮನಿಗೆ ಹೆಮ್ಮೆ ಇರುತ್ತದೆ. ಕರ್ತವ್ಯ ನಿರ್ವಹಿಸುವವರಲ್ಲಿ ತಾನೆ ಮೊದಲು. ತನ್ನನ್ನು ಮೀರಿಸುವವರು ಬೇರಾರು ಇಲ್ಲ ಎಂಬ ಗರ್ವವೂ ಬರುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಒಂದೆಡೆ ಸೇರುವ ಪ್ರಸಂಗ ಬರುತ್ತದೆ. ಆಗ ದೇವಾನುದೇವತೆಗಳು, ನಿಮ್ಮಲ್ಲಿ ಮುಖ್ಯರು ಯಾರು ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಆಗ ವಿಷ್ಣು ಮತ್ತು ಪರಮೇಶ್ವರರು ಮುಗುಳ್ನಗೆ ಬೀರುತ್ತಾ ಸುಮ್ಮನಿರುತ್ತಾರೆ. ಆದರೆ ಬ್ರಹ್ಮದೇವನು ನನ್ನಿಂದಲೇ ಪ್ರಂಪಚದ ಆಗುಹೋಗುಗಳು ನಡೆಯುತ್ತವೆ ಎನ್ನುತ್ತಾನೆ. ಆಗ ದೇವೇಂದ್ರನು ವಿಷ್ಣು ಮತ್ತು ಪರಮೇಶ್ವ ರನ ಜವಾಬ್ದಾರಿಯು ಸರಿಸಮನಾದುದು ಎನ್ನುತ್ತಾನೆ. ಆಗ ಬ್ರಹ್ಮನು ನಾನು ಜೀವಿಗಳನ್ನು ಸೃಷ್ಠಿಸದೆ ಹೋದಲ್ಲಿ ವಿಷ್ಣು ಮತ್ತು ಶಿವನಿಗೆ ಕೆಲಸವೇ ಇರುವುದಿಲ್ಲ. ಭೂಲೋಕದಲ್ಲಿ ಅವರ ಬಗ್ಗೆ ಭಯವೂ ಇರುವುದಿಲ್ಲ. ಮಾತ್ರವಲ್ಲದೆ ಅವರಿಗೆ ಪೂಜೆ-ಪುರಸ್ಕಾರಗಳ ಅವಶ್ಯಕತೆಯೂ ಇರುವುದಿಲ್ಲ ಎನ್ನುತ್ತಾನೆ.
ಸುಬ್ರಹ್ಮಣ್ಯನ ಬಳಿ ಪರಿಹಾರ ಕೇಳುವ ಸೃಷ್ಟಿಕರ್ತ
ಬ್ರಹ್ಮನ ಮಾತಿಗೆ ವಿಷ್ಣು ನಕ್ಕು ಸುಮ್ಮನಾದರೂ ಬ್ರಹ್ಮನಿಗೆ ಪಾಠ ಕಲಿಸಬೇಕೆಂದು ಪರಮೇಶ್ವರ ತೀರ್ಮಾನಿಸುತ್ತಾನೆ. ಬ್ರಹ್ಮನನ್ನು ಕುರಿತು ನಿನ್ನ ವಾದವೇ ಸರಿ ಸೃಷ್ಠಿಯೇ ಮೊದಲು ಎನ್ನುತ್ತಾನೆ. ಗರ್ವದಿಂದ ಬ್ರಹ್ಮನು ತನ್ನ ಲೋಕಕ್ಕೆ ಮರಳುತ್ತಾನೆ. ಇತ್ತ ಶಿವನು ತನ್ನ ಜವಾಬ್ದಾರಿ ನಿಲ್ಲಿಸಿ ಸೃಷ್ಠಿಯ ಕೆಲಸವನ್ನು ಹೆಚ್ಚಿಸಿಬಿಡುತ್ತಾನೆ. ಇದರಿಂದ ಬ್ರಹ್ಮನಿಗೆ ತನ್ನ ಕೆಲಸದ ಒತ್ತಡ ಒಮ್ಮೆಲೇ ಹೆಚ್ಚುತ್ತದೆ. ತನ್ನ ಕರ್ತವ್ಯವನ್ನು ನಿಭಾಯಿಸಲು ಸೋತು ಹೋಗುತ್ತಾನೆ. ಕೊನೆಗೆ ತನ್ನ ತಪ್ಪಿನ ಅರಿವಾಗುತ್ತದೆ. ಶಿವನನ್ನು ಕಂಡು ತನ್ನ ಸಮಸ್ಯೆಗೆ ಪರಿಹಾರವನ್ನು ಕೇಳಲು ಕೈಲಾಸಕ್ಕೆ ತೆರಳುತ್ತಾನೆ. ಶಿವನು ಅವನಿಗೆ ನನ್ನಿಂದ ಯಾವುದೆ ರೀತಿಯ ಸಹಾಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವೆನ್ನಮಲೈಗೆ ತೆರಳಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸು. ನಿನ್ನ ಸಮಸ್ಯೆಗೆ ಪರಿಹಾರ ನೀಡಲು ಅವನಿಗೆ ಮಾತ್ರ ಸಾಧ್ಯ ಎನ್ನುತ್ತಾನೆ.
ವಿಧಿ ಇಲ್ಲದೆ ಬ್ರಹ್ಮನು ಸುಬ್ರಹ್ಮಣ್ಯಸ್ವಾಮಿಯನ್ನು ಕಾಣಲು ನಿರ್ಧರಿಸುತ್ತಾನೆ. ಆಗ ಮುರುಗನ ಆಣತಿಯಂತೆ ಕಾಮಧೇನುವು ಬ್ರಹ್ಮನ ಜವಾಬ್ದಾರಿಯನ್ನು ಹಂಚಿಕೊಂಡು ಸೃಷ್ಠಿಕಾರ್ಯದಲ್ಲಿ ನೆರವಾಗುತ್ತದೆ. ಇದನ್ನು ಕಂಡ ಬ್ರಹ್ಮನಿಗೆ ನಾಚಿಕೆಯಾಗುತ್ತದೆ. ತಾನಿಲ್ಲದೆ ಹೋದರೂ ನಡೆಯಬೇಕಾದ ಕೆಲಸಗಳು ನಡೆಯುತ್ತವೆ ಎಂಬ ನಿಜ ತಿಳಿಯಿತು. ಕಾಮಧೇನುವು ತನ್ನ ಬೆಣ್ಣೆಯಿಂದ ಮಾಡಿದ ಬೆಟ್ಟವನ್ನು ಸೃಷ್ಟಿಸುತ್ತದೆ. ಆದ್ದರಿಂದ ಇಲ್ಲಿ ಪೂಜೆ ನೆರವೇರಿಸಿದಲ್ಲಿ ನಮ್ಮ ಕೆಲಸ ಕಾರ್ಯಗಳು ಯಾವುದೇ ತೊಂದರೆ ಅಥವಾ ಅಡಚಣೆ ಇಲ್ಲದೆ ಸಾಗುವುದಲ್ಲದೆ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.
ಜ್ಯೋತಿಷಿ: ಹೆಚ್. ಸತೀಶ್, ಬೆಂಗಳೂರು, ಮೊಬೈಲ್: 8546865832
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope