ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ದೇವಾಲಯದಲ್ಲಿದೆ ಮೊದಲ ಜ್ಯೋತಿರ್ಲಿಂಗ; ಸೋಮನಾಥ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಕಲ ರೋಗಗಳು ಗುಣವಾಗುತ್ತಂತೆ

ಈ ದೇವಾಲಯದಲ್ಲಿದೆ ಮೊದಲ ಜ್ಯೋತಿರ್ಲಿಂಗ; ಸೋಮನಾಥ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಕಲ ರೋಗಗಳು ಗುಣವಾಗುತ್ತಂತೆ

Somanth Jyotirlinga: ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಸೋಮನಾಥದ ಜ್ಯೋತಿಲಿಂಗವೂ ಒಂದು. ಆರೋಗ್ಯ ಸಂಬಂಧಿತ ರೋಗಗಳನ್ನು ಗುಣಪಡಿಸುವ ಸೋಮನಾಥ ಜ್ಯೋತಿರ್ಲಿಂಗವು ಚಂದ್ರನಿಂದ ಸ್ಥಾಪಿಸಿಲ್ಪಟ್ಟಿದೆ. ಸೋಮನಾಥ ದೇವಾಲಯದ ಸ್ವಾರಸ್ಯಕರ ಸಂಗತಿಗಳನ್ನು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ತಿಳಿಸಿಕೊಟ್ಟಿದ್ದಾರೆ.

ಸೋಮನಾಥ ದೇವಾಲಯ; ಮೊದಲ ಜ್ಯೋತಿರ್ಲಿಂಗ ಕ್ಷೇತ್ರದ ಇತಿಹಾಸ ಮತ್ತು ವೈಶಿಷ್ಟ್ಯ
ಸೋಮನಾಥ ದೇವಾಲಯ; ಮೊದಲ ಜ್ಯೋತಿರ್ಲಿಂಗ ಕ್ಷೇತ್ರದ ಇತಿಹಾಸ ಮತ್ತು ವೈಶಿಷ್ಟ್ಯ (pinterest)

ಸೋಮನಾಥ ದೇವಾಲಯವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲ ಮತ್ತು ಅಷ್ಟೇ ವಿಶಿಷ್ಟವಾದ ಜ್ಯೋತಿರ್ಲಿಂಗ ಇರುವ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಚಂದ್ರನು ಸ್ಥಾಪಿಸಿದ್ದರಿಂದ ಸೋಮನಾಥ ಕ್ಷೇತ್ರ ಎಂಬ ಹೆಸರು ಬಂದಿದೆ. ಈ ಕ್ಷೇತ್ರ ದರ್ಶನದಿಂದ ಮಾನಸಿಕ ಸಮಸ್ಯೆಗಳು, ಚಂದ್ರನಿಗೆ ಸಂಬಂಧಿಸಿದ ಗ್ರಹದೋಷಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಸೋಮನಾಥ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಉತ್ತಮ ಆರೋಗ್ಯ ಸಿದ್ಧಿಸಲಿದೆ. ಈ ಪುಣ್ಯಕ್ಷೇತ್ರದ ಹಿಂದಿರುವ ಕಥೆ ಮತ್ತು ಸ್ವಾರಸ್ಯಕರ ಸಂಗತಿಗಳನ್ನು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.

ಎಲ್ಲಿದೆ ಸೋಮನಾಥ ಮಂದಿರ?

ಗುಜರಾತ್ ರಾಜ್ಯದ ಅರಬ್ಬೀ ಸಮುದ್ರ ತೀರದಲ್ಲಿ ಪ್ರಸಿದ್ಧ ಸೋಮನಾಥ ಮಂದಿರವಿದೆ. ಇದನ್ನು ಮೊದಲು ಪ್ರಭಾಸಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ ಈ ಸ್ಥಳವನ್ನು ಭಾಸ್ಕರತೀರ್ಥ ಮತ್ತು ಅರ್ಕತೀರ್ಥ ಎಂದೂ ಕರೆಯುತ್ತಿದ್ದರು. ಸೋಮನಾಥ ಕ್ಷೇತ್ರದ ಬಗ್ಗೆ ಮತ್ಸ್ಯ, ವಾಮನ, ಗರುಡ, ಶಿವ ಮೊದಲಾದವರ ಪುರಾಣಗಳಲ್ಲಿ ಉಲ್ಲೇಖವಿರುವುದನ್ನು ಕಾಣಬಹುದು. ಅತ್ಯಂತ ಪ್ರಾಚೀನ ದೇವಾಲಯವಾದ ಇದನ್ನು ಮಹಮ್ಮದೀಯ ರಾಜರು ಧ್ವಂಸಗೊಳಿಸಿದ್ದರು. ಹಾಗೆ ನಾಶವಾದಾಗಲೆಲ್ಲಾ ಅದನ್ನು ಪುನರ್‌ ನಿರ್ಮಿಸಲಾಯಿತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಪ್ರಾಚೀನ ದೇವಾಲಯದ ಹಿಂದಿನ ವೈಭವವನ್ನು ಪುನಃಸ್ಥಾಪಿಸಲು, ಪುನರ್‌ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. 1951ರಲ್ಲಿ ನಮ್ಮ ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ಪುನರ್ ನಿರ್ಮಾಣಗೊಂಡ ಈ ದೇವಾಲಯವನ್ನು ಉದ್ಘಾಟಿಸಿದರು. ಇಲ್ಲಿನ ಸೋಮನಾಥನನ್ನು ಪೂಜಿಸುವುದರಿಂದ ಕ್ಷಯ, ಕುಷ್ಠ, ಇತರೆ ರೋಗಗಳು ನಿವಾರಣೆಯಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ.

ಚಂದ್ರನಿಗೆ ಶಾಪ ಕೊಟ್ಟವರು ಯಾರು? ಮತ್ತು ಏಕೆ?

ಪ್ರಜಾಪತಿ ದಕ್ಷನಿಗೆ 27 ಹೆಣ್ಣು ಮಕ್ಕಳಿದ್ದರು. ಅವರಿಗೆ 27 ನಕ್ಷತ್ರಗಳ ಹೆಸರನ್ನು ನೀಡಿದನು. ದಕ್ಷನು ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ಮದುವೆ ಮಾಡಿಕೊಟ್ಟನು. ಅವರೆಲ್ಲರ ನಡುವೆ ರೋಹಿಣಿ ಅಂದರೆ ಚಂದ್ರನಿಗೆ ಬಹಳಷ್ಟು ಪ್ರೀತಿ ಇತ್ತು. ಉಳಿದ 26 ಮಂದಿಗೆ ಚಂದ್ರ ರೋಹಿಣಿಯನ್ನು ತಮಗಿಂತ ಹೆಚ್ಚಾಗಿ ಪ್ರೀತಿಸುವುದು ಸಹಿಸಲು ಕಷ್ಟವಾಯಿತು. ಆಗ ಅವರೆಲ್ಲರೂ ಒಂದು ದಿನ ತಮ್ಮ ತಂದೆ ದಕ್ಷ ಪ್ರಜಾಪತಿಯ ಬಳಿಗೆ ಬಂದು ತಮ್ಮ ದುಃಖವನ್ನು ಹೇಳಿಕೊಂಡರು. ಹೆಣ್ಣು ಮಕ್ಕಳ ಕಷ್ಟ ತಿಳಿದು ದಕ್ಷನು ಚಂದ್ರನನ್ನು ಕರೆದು ಛೀಮಾರಿ ಹಾಕಿದನು. ಎಲ್ಲ ಪತ್ನಿಯರನ್ನು ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದನು. ಆದರೆ ಚಂದ್ರನು ಆ ಮಾತನ್ನು ಪಾಲಿಸದೆ ರೋಹಿಣಿಯನ್ನು ಮಾತ್ರ ಅತ್ಯಂತ ಪ್ರೀತಿಯಿಂದ ನೋಡುತ್ತಾ ಇತರ ಹೆಂಡತಿಯರಿಂದ ದೂರವಾದನು.

ತನ್ನ ಹೆಣ್ಣುಮಕ್ಕಳಿಂದ ಇದನ್ನು ತಿಳಿದ ದಕ್ಷನು ಕೋಪಗೊಂಡು ಚಂದ್ರನಿಗೆ ‘ನೀನು ಕುಷ್ಠರೋಗದಿಂದ ಬಳಲು’ ಎಂದು ಶಾಪವಿತ್ತನು. ಶಾಪಗ್ರಸ್ತ ಚಂದ್ರನ ಬೆಳಕು ಕ್ಷೀಣಿಸತೊಡಗಿತು. ಇದರಿಂದ ಭೂಮಂಡಲದಲ್ಲಿ ಅನೇಕರು ಅಕಾಲಿಕವಾಗಿ ಮರಣ ಹೊಂದಿದರು. ಆ ಭೀಕರ ಪರಿಣಾಮಗಳಿಂದ ತಮ್ಮನ್ನು ರಕ್ಷಿಸುವಂತೆ ಅವರೆಲ್ಲರೂ ಬ್ರಹ್ಮ ದೇವನ ಮೊರೆ ಹೋದರು. ಅವರ ಈ ಕಷ್ಟವನ್ನು ಅರ್ಥಮಾಡಿಕೊಂಡ ಬ್ರಹ್ಮನು, ಚಂದ್ರನಿಗೆ ಪವಿತ್ರವಾದ ಪ್ರಭಾಸಕ್ಷೇತ್ರದ ಬಳಿ ಹೋಗಿ ಶಿವನ ತಪಸ್ಸು ಮಾಡಲು ತಿಳಿಸಿದನು. ಅದರಂತೆಯೇ ಚಂದ್ರನು ಪ್ರಭಾಸಕ್ಷೇತ್ರಕ್ಕೆ ತೆರಳಿ ಅಲ್ಲಿ ಕಠಿಣವಾದ ತಪಸ್ಸನ್ನು ಮಾಡಿದನು. ತ್ರಯಂಬಕಂ ಮಂತ್ರವನ್ನು ಪಠಿಸುತ್ತಾ ಶಿವನ ತಪಸ್ಸು ಮಾಡಿದನು. ಚಂದ್ರನ ಈ ಘೋರ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಚಂದ್ರನ ಮೇಲೆ ಕರುಣೆ ತೋರಿ ವರವನ್ನು ನೀಡಿದನು. ಕುಷ್ಠರೋಗದಿಂದ ಬಳಲುತ್ತಿದ್ದ ಚಂದ್ರನನ್ನು ಮುಕ್ತಗೊಳಿಸಿದನು. ಪರಮೇಶ್ವರನು ಚಂದ್ರನಿಗೆ ಆಶೀರ್ವದಿಸಿ, ‘ನೀನು ಕೃಷ್ಣ ಪಕ್ಷದಲ್ಲಿ ಕ್ಷೀಣನಾಗುವೆ, ಆದರೆ ಶುಕ್ಲ ಪಕ್ಷದಲ್ಲಿ ನಿನ್ನ ತೇಜಸ್ಸು ಹೆಚ್ಚಾಗುತ್ತದೆ’ ಎಂದು ಹರಸಿದನು. ಈ ರೀತಿಯಾಗಿ ಚಂದ್ರನು ಶಾಪದಿಂದ ಮುಕ್ತನಾದನು.

ಚಂದ್ರನಿಗೆ ಶಾಪ ವಿಮೋಚನೆಯಾದ ನಂತರ ದೇವತೆಗಳು, ಋಷಿಗಳು, ಪರಮೇಶ್ವರ, ಪಾರ್ವತಿಯರನ್ನು ಚಂದ್ರನು ಪ್ರಭಾಸ ಕ್ಷೇತ್ರದಲ್ಲಿ ಉಳಿಯಲು ಬೇಡಿಕೊಂಡನು. ಅದಕ್ಕೆ ಸಮ್ಮತಿಸಿದ ಪರಮೇಶ್ವರನು ಚಂದ್ರನ ಇನ್ನೊಂದು ಹೆಸರಾದ ಸೋಮನಾಥ ಎಂಬ ಹೆಸರಿನಿಂದ ಜ್ಯೋತಿರ್ಲಿಂಗವಾಗಿ ಬೆಳಗಿದನು. ಅಂದಿನಿಂದ ಈ ಕ್ಷೇತ್ರಕ್ಕೆ ಸೋಮನಾಥ ಕ್ಷೇತ್ರ ಎಂಬ ಹೆಸರು ಬಂದಿತು.

ಕೃತಯುಗದಲ್ಲಿ ಈ ದೇವಾಲಯವು ಚಿನ್ನದ ದೇವಾಲಯವಾಗಿತ್ತು ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ರಾವಣಾಸುರನು ಬೆಳ್ಳಿಯಿಂದ ಇದನ್ನು ನಿರ್ಮಿಸಿದನು ಮತ್ತು ದ್ವಾಪರಯುಗದಲ್ಲಿ ಭಗವಂತನು ಮರದಿಂದ ಈ ದೇವಾಲಯವನ್ನು ನಿರ್ಮಿಸಿದನು. ಕಲಿಯುಗದಲ್ಲಿ ಈ ದೇವಾಲಯವು ಅನೇಕ ಆಕ್ರಮಣಗಳಿಗೆ ಒಳಗಾದ ಕಾರಣ, ಅದರ ಹೆಚ್ಚಿನ ಶಿಲ್ಪಕಲಾ ಸಂಪತ್ತು ನಾಶವಾಯಿತು.

ಸೋಮನಾಥ ಜ್ಯೋತಿರ್ಲಿಂಗದ ವೈಶಿಷ್ಟ್ಯ

ಶಿವನ ಇತರ ಜ್ಯೋತಿರ್ಲಿಂಗಗಳಿಗೆ ಹೋಲಿಸಿದರೆ ಇದು ತುಂಬಾ ದೊಡ್ಡ ಶಿವಲಿಂಗವಾಗಿದೆ. ಇಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸುವಂತಿಲ್ಲ. ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆ ಲಿಂಗವನ್ನು ಪೂಜಿಸಿದವರಿಗೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಹಾಗೂ ಸಕಲ ಪಾಪಗಳು ನಿವಾರಣೆಯಾಗುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಸೋಮನಾಥನ ಕೃಪೆಯಿಂದ ಭಯಂಕರ ರೋಗಗಳೂ ದೂರವಾಗುತ್ತವೆ. ಬಡತನ, ದುಃಖಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಸೋಮನಾಥ ದೇವಾಲಯದ ಸುತ್ತಮುತ್ತಲಿನ ಅನೇಕ ದೇವಾಲಯಗಳನ್ನು ಶಿವ ಪುರಾಣದಲ್ಲಿ ವಿವರಿಸಲಾಗಿದೆ. ಈ ತ್ರಿವೇಣಿ ಸಂಗಮವು ಸರಸ್ವತಿ, ಕಪಿಲಾ ಮತ್ತು ಹಿರಣ್ಯ ನದಿಗಳ ಸಂಗಮವಾಗಿದೆ. ಚಂದ್ರನು ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ತಪಸ್ಸು ಮಾಡಿದನು. ಆದ್ದರಿಂದ ಈ ತ್ರಿವೇಣಿ ಸಂಗಮವು ಅತ್ಯಂತ ಮಹಿಮೆಯುಳ್ಳದ್ದಾಗಿದ್ದು, ಭಯಾನಕ ರೋಗಗಳನ್ನು ಸಹ ಗುಣಪಡಿಸುತ್ತದೆ ಎಂದು ಭಕ್ತರು ನಂಬುತ್ತಾರೆ. ಇದಲ್ಲದೆ, ಈ ಸೋಮನಾಥ ಕ್ಷೇತ್ರದಲ್ಲಿ ಪರಶುರಾಮ ಧ್ಯಾನ ಮಾಡಿದ ಸ್ಥಳವಿದೆ ಮತ್ತು ಇಲ್ಲಿ ಆದಿ ಶಂಕರಾಚಾರ್ಯರು ಶಾರದ ಮಠವನ್ನು ಸ್ಥಾಪಿಸಿದ್ದಾರೆ.

ಶ್ರೀಕೃಷ್ಣನು ಮರಣ ಹೊಂದಿದ ಸ್ಥಳವೂ ಇಲ್ಲೇ ಇದೆ

ಸೋಮನಾಥ ಮಂದಿರದ ಸಮೀಪವೇ ಭಾಲ್ಕಾ ತೀರ್ಥವು ಇದೆ. ಭಾಲ್ಕಾ ತೀರ್ಥವು ಶ್ರೀಕೃಷ್ಣ ಪರಮಾತ್ಮನು ಮರಣ ಹೊಂದಿದ ಸ್ಥಳವೆಂದು ಪ್ರಸಿದ್ಧಿ ಪಡೆದಿದೆ. ಶ್ರೀಕೃಷ್ಣನು ಇಲ್ಲಿ ಮರದ ಬಳಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾಗ ಜರುಡ ಎಂಬ ಬೇಡನು ಹೊಡೆದ ಬಾಣದಿಂದ ಕೃಷ್ಣನು ಸಾಯುತ್ತಾನೆ. ಆ ಸ್ಥಳದಲ್ಲಿ ಈಗ ದೇವಾಲಯವಿದೆ. ಅಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಕಾಣಬಹುದಾಗಿದೆ. ಅಲ್ಲಿ ಬೇಡನ ವಿಗ್ರವನ್ನು ಸಹ ಕಾಣಬಹುದಾಗಿದೆ. ಕೃಷ್ಣನ ಪಾದವನ್ನು ಜಿಂಕೆಯ ಕಣ್ಣು ಎಂದು ತಪ್ಪಾಗಿ ಭಾವಿಸಿ ಬೇಡನು ಬಾಣವನ್ನು ಬಿಟ್ಟನು. ಇನ್ನೊಂದು ಕಥೆಯ ಪ್ರಕಾರ ಬಾಣದಿಂದ ಹೊಡೆದ ನಂತರ ಶ್ರೀಕೃಷ್ಣನು ಪ್ರಭಾಸ ತೀರಕ್ಕೆ ಅಂದರೆ ಸೋಮನಾಥಕ್ಕೆ ತೆರಳಿ ಅಲ್ಲಿ ತ್ರಿವೇಣಿ ಸಂಗಮಕ್ಕೆ ಹೋದನು. ಅಲ್ಲಿ ತನ್ನ ಕೃಷ್ಣಾವತಾರವನ್ನು ಸಮಾಪ್ತಿಗೊಳಿಸಿದನು. ನಂತರ ಅರ್ಜುನನು ಸಂಸ್ಕಾರವನ್ನು ಮಾಡಿದನು ಎಂದು ನಂಬಲಾಗಿದೆ. ಸೋಮನಾಥದಲ್ಲಿ ಪಾಂಡವರ ಗುಹೆಗಳೂ ಇವೆ. ವನವಾಸದ ಸಮಯದಲ್ಲಿ ಪಾಂಡವರು ಇಲ್ಲಿದ್ದರು ಎಂದು ಪುರಾಣಗಳು ಹೇಳುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.