ಸಂತಾನ ಪ್ರಾಪ್ತಿ ಜೊತೆಗೆ ಸರ್ಪದೋಷ ನಿವಾರಣೆಯಾಗುವ ನಂಬಿಕೆ; ಕೇರಳದ ಹರಿಪಾದ್ ನಲ್ಲಿರುವ ನಾಗರಾಜ ದೇವಾಲಯದ ಮಹಿಮೆ ತಿಳಿಯಿರಿ
Nagaraja Temple: ಕೇರಳದ ಹರಿಪಾದ್ ನಲ್ಲಿರುವ ನಾಗರಾಜ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಪ್ರಾಪ್ತಿ ಜೊತೆಗೆ ಸರ್ಪದೋಷ ನಿವಾರಣೆಯಾಗುತ್ತೆ ಎಂಬುದು ಭಕ್ತರ ನಂಬಿಕೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಜನ್ಮ ಕುಂಡಲಿಯಲ್ಲಿ ಸರ್ಪದೋಷವಿದ್ದಲ್ಲಿ ಸಂತಾನಪ್ರಾಪ್ತಿಗೆ ತೊಂದರೆಗಳು ಎದುರಾಗಬಹುದು. ಆದರೆ ಇದರಿಂದ ಪರಿಹಾರ ಪಡೆಯಲು ಸಾಕಷ್ಟು ಮಂದಿ ಭಕ್ತರು ಕೇರಳದಲ್ಲಿನ ಹರಿಪಾದ್ ಎಂಬ ಸ್ಥಳದಲ್ಲಿ ಇರುವ ನಾಗರಾಜನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇಗುಲವು ಮನ್ನಾರಾಸಲ ನಾಗರಾಜ ದೇವಸ್ಥಾನವೆಂದು ಪ್ರಸಿದ್ಧಿಯಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯಾತ್ರಾಸ್ಥಳವಾಗಿದೆ. ಸಂತಾನ ದೋಷ ಇರುವವರಿಗೆ ಅರಿಶಿಣದಿಂದ ತಯಾರಿಸಿದ ಪೇಸ್ಟನ್ನು ಪ್ರಸಾದವನ್ನಾಗಿ ನೀಡಲಾಗುತ್ತದೆ. ಇದರಿಂದ ಸಂತಾನ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ನಿರೀಕ್ಷಿತ ಫಲವನ್ನು ಪಡೆದ ದಂಪತಿ ತಮ್ಮ ಹರಕೆಯನ್ನು ತೀರಿಸಲು ಸತತವಾಗಿ ಈ ದೇವಾಲಕ್ಕೆ ಭೇಟಿನೀಡುತ್ತಾರೆ. ಭಾರತದ ವಿಶಾಲವಾದ ದೇವಾಲಯದಲ್ಲಿ ಇದು ಒಂದಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಈ ದೇಶವು ಪರಶುರಾಮ ನಿರ್ಮಿಸಿದ ದೇವಾಲಯವಾಗಿದೆ.
ದೇವರ ನಾಡು ಕೇರಳ ಮತ್ತು ನಾಗ ದೇವಾಲಯದ ಬಗ್ಗೆ ಪುರಾಣಗಳು ಏನು ಹೇಳುತ್ತವೆ
ತನ್ನ ಪ್ರತಿಜ್ಞೆಯಂತೆ ಪರಶುರಾಮನು ಅಸಂಖ್ಯಾತ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಆದರ ಪಾಪದಿಂದ ಬಿಡುಗಡೆ ಹೊಂದಲು ದಾರಿಕಾಣದೆ ಋಷಿ ಮುನಿಗಳನ್ನು ಭೇಟಿಮಾಡುತ್ತಾನೆ. ಕೇವಲ ಭೂದಾನದಿಂದ ಮಾತ್ರ ಈ ಪಾಪದಿಂದ ನಿವೃತ್ತಿ ದೊರೆಯುತ್ತದೆ ಎಂದು ಋಷಿ ಮುನಿಗಳು ತಿಳಿಸುತ್ತಾರೆ. ಪರಶುರಾಮನು ಅಲ್ಪ ಪ್ರಮಾಣದ ಭೂಮಿಯನ್ನು ನೀಡುವಂತೆ ವರುಣನನ್ನು ಕೇಳುತ್ತಾನೆ. ಅದರಂತೆ ವರುಣನು ಭೂಮಿಯೊಂದನ್ನು ಪರಶುರಾಮನಿಗೆ ನೀಡುತ್ತಾನೆ. ಘೋರ ತಪಸ್ಸನ್ನು ಮಾಡಿ ಪರಶನುರಾಮನು ಶಿವನಿಂದ ಶತೃಮರ್ಧನಕ್ಕಾಗಿ ಕೊಡಲಿಯನ್ನು ಪಡೆದಿರುತ್ತಾನೆ. ಶಿವನ ಆಶೀರ್ವಾದದ ಫಲವಾಗಿ ದೊರೆತ ಕೊಡಲಿಯನ್ನು ಸಮುದ್ರಕ್ಕೆ ಎಸೆಯುತ್ತಾನೆ. ಸಮುದ್ರದಿಂದ ಪಡೆದ ಭೂಮಿಯನ್ನು ವಿಧಿನಿಯಮಗಳ ಅನುಸಾರ ಯೋಗ್ಯರಿಗೆ ದಾನವಾಗಿ ನೀಡುತ್ತಾನೆ. ಈ ಪ್ರದೇಶವೇ ಭಾರತದಲ್ಲಿ ಇರುವ ಕೇರಳ. ಇದರಿಂದಲೇ ಕೇರಳವನ್ನು ದೇವರನಾಡು ಎಂದು ಕರೆಯಲಾಗುತ್ತದೆ.
ಕೇರಳ ಅತ್ಯಂತ ವಿಷಕಾರಿ ಹಾವುಗಳಿಂದ ತುಂಬಿತ್ತು. ಈ ವಿಷಪೂರಿತ ಹಾವುಗಳಿಂದ ರಕ್ಷಣೆ ಪಡೆಯಲು ಅಲ್ಲಿ ನಾಗಪೂಜೆಯನ್ನು ಆರಂಭಿಸಲಾಯಿತು. ಸರ್ಪಗಳ ಜ್ವಾಲೆಯ ವಿಷವನ್ನು ಮಣ್ಣಿನಲ್ಲಿ ಹರಡಿದರೆ ಮಾತ್ರ ಪೂಜೆಯ ನಿಜವಾದ ಉದ್ದೇಶವು ನೆರವೇರುವಂತಿರುತ್ತದೆ. ಕೊನೆಗೆ ನಾಗರಾಜನನ್ನು ಒಲಿಸಿಕೊಳ್ಳಲು ಸ್ವಯಂ ಪರಶುರಾಮನು ತನ್ನ ಶಿಷ್ಯರೊಂದಿಗೆ ನಿರ್ಜನವಾದ ಕಾಡನ್ನು ಪ್ರವೇಶಿಸುತ್ತಾನೆ. ಕೊನೆಗೆ ಎಲ್ಲರೂ ಕೇರಳದ ದಕ್ಷಿಣ ಭಾಗವನ್ನು ತಲುಪುತ್ತಾರೆ. ಅದು ದೊಡ್ಡ ಸಮುದ್ರ ತೀರವಾಗಿರುತ್ತದೆ. ತನ್ನ ತಪಸ್ಸಿಗಾಗಿ ಇದೆ ಸೂಕ್ತವಾದ ಸ್ಥಳ ಎಂಬ ಭಾವನೆ ಎಲ್ಲರಲ್ಲಿಯೂ ಮೂಡುತ್ತದೆ. ತನ್ನ ಪಾಲಿನ ಕರ್ತವ್ಯಪಾಲನೆಗೆ ಸೂಕ್ತವಾದ ಸರಿಯಾದ ಸ್ಥಳವನ್ನು ಕಂಡು ಅವರಿಗೆ ಸಂತೋಷ ಮತ್ತು ತೃಪ್ತಿ ಉಂಟಾಗುತ್ತದೆ. ಆ ನಂತರ ಪರಶುರಾಮನು ತನ್ನ ತಪಸ್ಸಿಗಾಗಿ ತೀರ್ಥಸ್ಥಳವನ್ನು ನಿರ್ಮಿಸುತ್ತಾನೆ.
ಪರಶುರಾಮನ ಘೋರತಪಸ್ಸಿಗೆ ಮೆಚ್ಚಿದ ನಾಗದೇವನು ಪ್ರತ್ಯಕ್ಷನಾಗುತ್ತಾನೆ. ನಾಗ ದೇವರಲ್ಲಿದ್ದ ಶಕ್ತಿಯನ್ನು ಅರಿತ ಪರಶುರಾಮ, ನಾಗದೇವನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಉದ್ದೇಶವನ್ನು ಸಾಕಾರಗೊಳಿಸುವಂತೆ ಪ್ರಾರ್ಥಿಸಿಸುತ್ತಾರೆ. ನಾಗ ದೇವರು ಪರಶುರಾಮರ ಕೋರಿಕೆಯಂತೆ ಅದೇ ಪ್ರದೇಶದಲ್ಲಿ ನೆಲೆಸುತ್ತಾರೆ. ಆ ದಿನದಿಂದ ಈ ಪ್ರದೇಶವನ್ನು ನಾಗದೇವರು ಕಾಪಾಡತ್ತಿದ್ದರೆಂದು ಎಲ್ಲರ ನಂಬಿಕೆಯಾಗಿದೆ.
ಪರಿಪಾದ್ ಸ್ಥಳದ ಕುರಿತ ಕಥೆಯನ್ನೂ ತಿಳಿಯಿರಿ
ಈ ಸ್ಥಳಕ್ಕೆ ಸಂಬಂಧಿಸಿದ ಕತೆಯೊಂದಿದೆ. ವಾಸುದೇವ ಮತ್ತು ಶ್ರೀದೇವಿ ಎಂಬ ದಂಪತಿಗೆ ಸಂತಾನವಿರಲಿಲ್ಲ. ಹಿರಿಯರ ಆದೇಶದಂತೆ ತಮ್ಮ ದುಃಖದಿಂದ ಪಾರಾಗಲು ನಾಗದೇವರನ್ನು ಪೂಜಿಸುತ್ತಾರೆ. ದಿಢೀರ್ ತೊಂದರೆಗೆ ಒಳಗಾದ ಸರ್ಪಗಳಿಗೆ ವಾಸುದೇವ ಮತ್ತು ಶ್ರೀದೇವಿಯರು ಜೇನು ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದ ತುಪ್ಪವನ್ನು ಸುರಿಯುತ್ತಾರೆ. ಸರ್ಪಗಳ ದೇಹವನ್ನು ಶ್ರೀಗಂಧದ ಲೇಪನದಿಂದ ತಂಪು ಮಾಡುತ್ತಾರೆ. ಪಂಚಗವ್ಯದೊಂದಿಗೆ ಅಭಿಷೇಕವನ್ನು ಮಾಡುತ್ತಾರೆ. ಈ ಕಾರಣದಿಂದಾಗಿ ನಾಗದೇವನು ಅಲ್ಲಿ ಬಂದು ಪೂಜೆ ಸಲ್ಲಿಸುವ ದಂಪತಿಗೆ ಸಂತಾನವನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಇದು ನಿಜವೂ ಆಗಿದೆ. ಇಂದಿಗೂ ಈ ಕ್ಷೇತ್ರದಲ್ಲಿ ನಡೆಯುವ ಪವಾಡಗಳು ದೇವರಲ್ಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.
