ಶೀಘ್ರ ವಿವಾಹ ಯೋಗ, ದಾಂಪತ್ಯ ತೊಡಕು ನಿವಾರಣೆಗೆ ಪ್ರಸಿದ್ಧ ದೇಗುಲವಿದು: ಪ್ರಾಣನಾಥೇಶ್ವರ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ
ಶ್ರೀ ಪ್ರಾಣನಾಥೇಶ್ವರ ಮತ್ತು ಮಂಗಳಾಂಬಿಕೆಯ ಅನುಗ್ರಹದಿಂದ ಮಂತ್ರಿಯ ಶವಕ್ಕೆ ಜೀವ ಮರಳಿ ಬರುತ್ತದೆ. ಅಂದಿನಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದಲ್ಲಿ ಗೃಹಿಣಿಯರ ಮಾಂಗಲ್ಯ ರಕ್ಷಣೆಯಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿ ಬಂದಿದೆ. (ಬರಹ: ಸತೀಶ್ ಎಸ್.)

ದಾಂಪತ್ಯ ಜೀವನದಲ್ಲಿನ ತೊಡಕುಗಳ ನಿವಾರಣೆಗಾಗಿ ಶಿವ-ಪಾರ್ವತಿಯರ ಆರಾಧನೆ ಶ್ರೇಷ್ಠ. ಇಂಥ ದೇವಾಲಯವು ತಮಿಳುನಾಡಿನ ಮೈಲಾಂಡದುರೈ ಜಿಲ್ಲೆಯ ತಿರುಮಂಗಲಕುಡಿ ಎಂಬ ಸ್ಥಳದಲ್ಲಿದೆ. ಈ ದೇವಾಲಯದ ಮುಖ್ಯ ದೈವವು ಪರಮೇಶ್ವರನಾದರೂ ಪಾರ್ವತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿರುವ ಶಿವನನ್ನು ಪ್ರಾಣನಾಥೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಶಿವನು ಲಿಂಗರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಶಿವನ ಪತ್ನಿಯಾದ ಪಾರ್ವತಿಯನ್ನು ಮಂಗಳನಾಯಕಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ಈ ದೇವಾಲಯವು ಬಲು ಪ್ರಾಚೀನ ಕಾಲದ್ದಾಗಿದೆ ಎಂದು ತಮಿಳು ಗ್ರಂಥಗಳು ಹೇಳುತ್ತವೆ. ಇಲ್ಲಿನ ಶಾಸನಗಳು ದೇವಾಲಯ ಬೆಳೆದು ಬಂದ ರೀತಿಯನ್ನು ತಿಳಿಸುತ್ತದೆ. ಈ ದೇವಾಲಯವನ್ನು ಚೋಳರು ನಿರ್ಮಿಸಿದರೂ ಅದರ ವಿಸ್ತರಣೆ ಮತ್ತು ಪುನರುಜ್ಜೀವನವನ್ನು ತಂಜಾವೂರಿನ ನಾಯಕರು ಮಾಡಿದರು. ಈ ದೇವಸ್ಥಾನವನ್ನು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಕಟ್ಟಲಾಗಿದೆ. ಇದರಿಂದ ಇದು ವಿಶೇಷವಾದ ಶಕ್ತಿಯನ್ನು ಹೊಂದಿದೆ.
ಈ ದೇವಾಲಯದ ಗೋಪುರದ ಕೆಳಭಾಗದಲ್ಲಿ ನಿಂತರೆ ನಮ್ಮಲ್ಲಿ ಧನಾತ್ಮಕ ಶಕ್ತಿಯು ಪ್ರವೇಶಿಸಿದಂತೆ ಅನುಭವವಾಗುತ್ತದೆ. ಇಲ್ಲಿರುವ ಶಿವನನ್ನು ಮಂಗಳಪುರೀಶ್ವರ ಎಂದೂ ಕರೆಯುವುದುಂಟು. ಇಲ್ಲಿ ಪ್ರಧಾನ ದೇವರ ಕಲ್ಯಾಣೋತ್ಸವವನ್ನು ಹಬ್ಬದ ಮಾದರಿಯಲ್ಲಿ ಆಚರಿಸುತ್ತಾರೆ. ಬ್ರಹೋತ್ಸವವು ಪ್ರುಮುಖ ವಿಧಿಯಾಗಿದೆ. ಅಪರೂಪದ ಮತ್ತು ಕಾಳಿಮಾತೆಗೆ ಸಮರ್ಪಿಸುವ ಕಾಳಿ ಅಟ್ಟಂ ಅನ್ನು ಪ್ರದರ್ಶಿಸುವ ದೇವಾಲಯ ಇದಾಗಿದೆ.
ತಿರುಮಂಗಲಕುಡಿ ದೇಗುಲದ ಹಿಂದಿರುವ ಕಥೆ
ಈ ದೇಗುಲ ನಿರ್ಮಾಣದ ಹಿಂದೆ ಕಥೆಯೊಂದು ಇದೆ. ಚೋಳರಾಜನ ಆಸ್ಥಾನದಲ್ಲಿ ನಂಬಿಕಸ್ಥ ಮಂತ್ರಿಯೊಬ್ಬನಿರುತ್ತಾನೆ. ಇವನಿಗೆ ರಾಜ್ಯದ ಪ್ರಜೆಗಳಿಂದ ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಆ ಮಂತ್ರಿಗೆ ಪಾರ್ವತಿ-ಪರಮೇಶ್ವರರಲ್ಲಿ ಅಪರಿಮಿತ ಭಕ್ತಿ ಮತ್ತು ವಿಶ್ವಾಸ. ರಾಜನಿಗೆ ತಿಳಿಸದೆ ತೆರಿಗೆ ಹಣದಿಂದ ಶಿವ-ಪಾರ್ವತಿಯರ ದೇಗುಲವನ್ನು ನಿರ್ಮಿಸುತ್ತಾನೆ. ಈ ವಿಚಾರವು ರಾಜನಿಗೆ ತಿಳಿಯುತ್ತದೆ. ಕೋಪಗೊಂಡ ರಾಜನು ಮಂತ್ರಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸುತ್ತಾನೆ.
ಆಗ ಮಂತ್ರಿಯ ಪತ್ನಿಯು ತನ್ನ ಮಾಂಗಲ್ಯವನ್ನು ಕಾಪಾಡೆಂದು ಬೇಡುತ್ತಾ ಮಂಗಳಾಂಬಿಕೆಯನ್ನು ಭಯ ಭಕ್ತಿಯಿಂದ ಪೂಜಿಸುತ್ತಾಳೆ. ಆದರೆ ರಾಜನ ಆಜ್ಞೆಯಂತೆ ರಾಜಭಟರು ಮಂತ್ರಿಯನ್ನು ಕೊಲ್ಲುತ್ತಾರೆ. ಅವನ ಶವವನ್ನು ತಿರುಮಂಗಲಕುಡಿಗೆ ತರಲಾಗುತ್ತದೆ. ಶಿವನ ದೇಗುಲದ ಬಳಿ ಆ ಶವವನ್ನು ತರಲಾಗುತ್ತದೆ. ಆ ತಕ್ಷಣ ಶ್ರೀ ಪ್ರಾಣನಾಥೇಶ್ವರ ಮತ್ತು ಮಂಗಳಾಂಬಿಕೆಯ ಅನುಗ್ರಹದಿಂದ ಮಂತ್ರಿಯ ಶವಕ್ಕೆ ಜೀವ ಮರಳಿ ಬರುತ್ತದೆ. ಅಂದಿನಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದಲ್ಲಿ ಗೃಹಿಣಿಯರ ಮಾಂಗಲ್ಯ ರಕ್ಷಣೆಯಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿ ಬಂದಿದೆ.
ಇದು ಸತ್ಯವೆಂದು ಇಂದಿಗೂ ದೃಡವಾಗುತ್ತಿದೆ. ಸಂತನೊಬ್ಬನಿಗೆ ಬ್ರಹ್ಮನ ಶಾಪದಿಂದ ಚರ್ಮರೋಗ ಬರುತ್ತದೆ. ಈ ದೇಗುಲದಲ್ಲಿ ಪೂಜೆ ಸಲ್ಲಿಸುವುದರಿಂದ ಬ್ರಹ್ಮಶಾಪವು ಪರಿಹಾರವಾಗಿ ಉತ್ತಮ ಆರೋಗ್ಯವು ಲಭಿಸುತ್ತದೆ. ಇಲ್ಲಿರುವ ಶ್ರೀಗಣಪತಿಯನ್ನು ಪೂಜಿಸುವುದರಿಂದ ಇದು ಸಾಧ್ಯವಾಯಿತೆಂದು ತಿಳಿದು ಬರುತ್ತದೆ.
ತಿರುಮಂಗಲಕುಡಿ ದೇಗುಲದಲ್ಲಿ ದಿನಕ್ಕೆ 6 ಬಾರಿ ಪೂಜೆ
ಈ ದೇವಾಲಯದಲ್ಲಿ ದಿನ ನಿತ್ಯವೂ 6 ಬಾರಿ ವಿವಿಧ ರೀತಿಯ ಪೂಜೆಗಳು ನಡೆಯುತ್ತವೆ. ಸೋಮವಾರಗಳಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶುಕ್ರವಾರಗಳಂದು ಪಾರ್ವತಿ ದೇವಿಗೆ ವಿಶೇಷ ಪೂಜೆಯನ್ನು ಅರ್ಪಿಸಲಾಗುತ್ತದೆ. ಹುಣ್ಣಿಮೆಯಂದು ಪಾರ್ವತಿಗೆ ಕುಂಕುಮಾರ್ಚನೆ ಸಲ್ಲಿಸಿ ಅದನ್ನು ದಿನನಿತ್ಯ ಧರಿಸಿದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ.
ಪ್ರದೋಷದ ದಿನದಂದು ಸೂರ್ಯಾಸ್ತದ ನಂತರ ಶಿವನ ಪೂಜೆಯನ್ನು ಮಾಡಿದಲ್ಲಿ ವಿರೋಧಿಗಳು ದೂರ ಸರಿಯುತ್ತಾರೆ. ಆತ್ಮೀಯರ ಸಹಕಾರ ದೊರೆಯುತ್ತದೆ. ಅಮಾವಾಸ್ಯೆಯ ದಿನದಂದು ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ. ಇಲ್ಲಿನ ಶಾಲ್ಯಾನ್ನ ಅಭಿಷೇಕದಿಂದ ಕುಟುಂಬದ ದಾರಿದ್ರ್ಯವು ದೂರವಾಗುತ್ತದೆ ಎನ್ನುವ ನಂಬಿಕೆ ಇಂದಿಗೂ ಇದೆ.
ಇದನ್ನೂ ಓದಿ: ಚೋಳರ ಕಾಲದ ಪ್ರಸಿದ್ಧ ಶಿವಾಲಯಗಳಿವು
