ಕನ್ನಡ ಸುದ್ದಿ  /  Astrology  /  Thursday Motivation Teacher Regret About Her Attitude Because Not Listening Student Opinion Motivational Story Rsm

Thursday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಇತರರ ಅಭಿಪ್ರಾಯವೂ ಮುಖ್ಯ; ಮಗುವಿನ ಮಾತು ಕೇಳದೆ ಪಶ್ಚಾತಾಪ ಪಟ್ಟ ಶಿಕ್ಷಕಿಯ ಕಥೆ

Thursday Motivation: ಕೆಲವರು ಬೇಗ ಕೋಪಗೊಳ್ಳುತ್ತಾರೆ ಮತ್ತು ಇತರರ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಸಂಪೂರ್ಣವಾಗಿ ಕೇಳುವುದಿಲ್ಲ. ತಮ್ಮದೇ ಸರಿ ಎಂದು ಬೇಗನೆ ನಿರ್ಧಾರಕ್ಕೆ ಬಂದುಬಿಡುತ್ತಾರೆ ಹಾಗೂ ಇತರರ ಮೇಲೆ ಕೋಪಗೊಳ್ಳುತ್ತಾರೆ. ಮಗುವಿನ ಅಭಿಪ್ರಾಯ ಕೇಳದೆ ಪಶ್ಚಾತಾಪ ಪಟ್ಟ ಶಿಕ್ಷಕಿಯ ಕಥೆ ಇದು, ನಿಮ್ಮ ಜೀವನಕ್ಕೂ ಸ್ಪೂರ್ತಿ ಆಗಬಹುದು, ಒಮ್ಮೆ ಓದಿ.

ಗುರುವಾರದ ಸ್ಫೂರ್ತಿಮಾತು
ಗುರುವಾರದ ಸ್ಫೂರ್ತಿಮಾತು (PC: Unsplash)

ಗುರುವಾರದ ಸ್ಫೂರ್ತಿಮಾತು: ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಅಥವಾ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಯುವಾಗ ಎದುರಿಗೆ ಇದ್ದವರ ಅಭಿಪ್ರಾಯವನ್ನೂ ಪರಿಗಣಿಸುವುದು ಮುಖ್ಯವಾಗಿರುತ್ತದೆ. ಆದರೆ ಕೆಲವರು ತಮ್ಮ ಮಾತೇ ನಡೆಯಬೇಕು, ತಮ್ಮ ಮಾತೇ ಅಂತಿಮ ಎಂಬ ಅಹಂನಿಂದ ಮತ್ತೊಬ್ಬರ ಮಾತಿಗೆ ಬೆಲೆ ನೀಡುವುದಿಲ್ಲ.

ಶಿಕ್ಷಕರೊಬ್ಬರು ಶಾಲೆಯಲ್ಲಿ 6 ವರ್ಷದ ಮಕ್ಕಳಿಗೆ ಗಣಿತ ಪಾಠ ಮಾಡುತ್ತಿರುತ್ತಾರೆ. ಒಂದು ಮಗುವನ್ನು ಕುರಿತು 'ನಾನು ನಿನಗೆ 2 ಸೇಬು ಮತ್ತು 2 ಮಾವಿನ ಹಣ್ಣುಗಳನ್ನು ಕೊಡುತ್ತೇನೆ, ಆಗ ನಿನ್ನ ಬಳಿ ಒಟ್ಟು ಎಷ್ಟು ಹಣ್ಣುಗಳು ಇರುತ್ತದೆ ಎಂದು ಕೇಳುತ್ತಾರೆ. ಆಗ ಆ ಮಗು 5 ಎಂಬ ಉತ್ತರ ನೀಡುತ್ತದೆ. ಚೆನ್ನಾಗಿ ಓದುವ ಬುದ್ಧಿವಂತ ಮಗು ಈ ರೀತಿ ಉತ್ತರ ಕೊಟ್ಟಿದ್ದನ್ನು ನೋಡಿ ಶಿಕ್ಷಕಿಗೆ ಆಶ್ಚರ್ಯ ಎನಿಸುತ್ತದೆ.

ಒಂದೊಂದು ಪ್ರಶ್ನೆಗೂ ಎರಡು ಉತ್ತರ ನೀಡುವ ಮಗು

ಆ ಮಗು ನೀಡಿದ ಉತ್ತರದ ಬಗ್ಗೆಯೇ ಆ ಶಿಕ್ಷಕಿ ಯೋಚಿಸುತ್ತಾರೆ. ಅದು ಪುಟ್ಟ ಮಗು ಆದ್ದರಿಂದ ಶಿಕ್ಷಕಿ ಮತ್ತೆ ಅದೇ ಪ್ರಶ್ನೆಯನ್ನು ಪುನರಾವರ್ತಿಸಿ, ಬೆರಳುಗಳಿಂದ ಎಣಿಸಿ ಉತ್ತರ ಹೇಳುವಂತೆ ಸೂಚಿಸುತ್ತಾಳೆ. ಆದರೆ ಮತ್ತೆ ಮಗು ಬೆರಳುಗಳಿಂದ ಎಣಿಸಿ ಕೂಡಾ 5 ಎಂಬ ಉತ್ತರ ನೀಡುತ್ತದೆ. ಮಗುವಿನ ಉತ್ತರ ಕೇಳಿ ಶಿಕ್ಷಕಿಗೆ ಕೋಪ ಬರುತ್ತದೆ. ಆದರೂ ಆಕೆ ಕೋಪವನ್ನು ಹತೋಟಿಯಲ್ಲಿಟ್ಟುಕೊಡುತ್ತಾಳೆ.

ಆ ಮಗುವಿಗೆ ಚಾಕೊಲೇಟ್‌ ಎಂದರೆ ಬಹಳ ಇಷ್ಟ ಎಂದು ತಾಯಿ ಹೇಳಿದ್ದ ಮಾತನ್ನು ನೆನೆದ ಶಿಕ್ಷಕಿ, ಬಹುಶ: ಚಾಕೊಲೇಟ್‌ ಲೆಕ್ಕ ಹೇಳಿದರೆ ಮಗು ಸರಿಯಾಗಿ ಉತ್ತರ ಕೊಡಬಹುದು ಎಂದು ಯೋಚಿಸಿ. ನಾನು ನಿನಗೆ 2 ಬಿಳಿ ಹಾಗೂ 2 ಕಂದು ಬಣ್ಣದ ಚಾಕೊಲೇಟ್‌ ನೀಡುತ್ತೇನೆ. ಆಗ ನಿನ್ನ ಬಳಿ ಒಟ್ಟು ಎಷ್ಟು ಚಾಕೊಲೇಟ್‌ ಇದ್ದಂತೆ ಆಗುತ್ತದೆ ಎಂದು ಪ್ರಶ್ನಿಸುತ್ತಾರೆ. ಆಗ ಆ ಮಗು 4 ಎಂದು ಸರಿಯಾದ ಉತ್ತರ ನೀಡುತ್ತದೆ. ಮಗುವಿನ ಉತ್ತರ ಕೇಳಿ ಶಿಕ್ಷಕಿಗೆ ಸಂತೋಷವಾಗುತ್ತದೆ. ಮತ್ತೆ ಮಗುವನ್ನು ಪರೀಕ್ಷಿಸಲು ಹಣ್ಣುಗಳ ಪ್ರಶ್ನೆ ಕೇಳುತ್ತಾರೆ. ಆ ಮತ್ತೆ ಮಗು 5 ಎಂದೇ ಉತ್ತರ ನೀಡುತ್ತದೆ.

ಮಗುವಿನ ಅಭಿಪ್ರಾಯ ಕೇಳದೆ ಪಶ್ಚಾತಾಪ ಪಟ್ಟ ಶಿಕ್ಷಕಿ

ಈ ಬಾರಿ ಶಿಕ್ಷಕಿಯ ಕೋಪ ಮಿತಿ ಮೀರಿತು. ನಿನಗೆ ಓದಲು ಬರೆಯಲು ಬರುವುದಿಲ್ಲ, ತಪ್ಪು ಉತ್ತರ ಏಕೆ ನೀಡುತ್ತಿದ್ದೀಯ ಎಂದು ಬೈದು ಎರಡು ಏಟುಗಳನ್ನೂ ಕೊಡುತ್ತಾಳೆ. ಶಿಕ್ಷಕಿಯ ವರ್ತನೆ ಕಂಡು ಮಗುವಿಗೆ ಬಹಳ ದುಃಖವಾಗುತ್ತದೆ. 2 ಸೇಬು ಹಾಗೂ 2 ಮಾವಿನ ಹಣ್ಣನ್ನು ಕೊಟ್ಟರೆ ಒಟ್ಟು 4 ಆಗಬೇಕು ಅದು ಹೇಗೆ 5 ಅಗುತ್ತದೆ ಎಂದು ಕೋಪದಿಂದಲೇ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಮಗು, ನನ್ನ ಅಮ್ಮ ನನಗೆ ಆಗಲೇ ಒಂದು ಸೇಬನ್ನು ಕೊಟ್ಟಿದ್ಧಾರೆ, ಅದು ನನ್ನ ಬ್ಯಾಗಿನಲ್ಲಿದೆ. ನೀವು ಕೊಡುವ ಹಣ್ಣುಗಳು ಸೇರಿದರೆ ಒಟ್ಟು 5 ಆಗುತ್ತದೆ ಎಂದು ಉತ್ತರಿಸುತ್ತದೆ. ಮಗುವಿನ ಮಾತಿಗೆ ಶಿಕ್ಷಕಿಗೆ ಏನು ಪ್ರತಿಕ್ರಿಯಿಸಬೇಕೋ ತಿಳಿಯುವುದಿಲ್ಲ.

ಮಕ್ಕಳು ಎಷ್ಟು ಮುಗ್ಧರು, ನಾನು ಮೊದಲೇ ಮಗುವಿಗೆ ಮಾತನಾಡಲು ಬಿಡಬೇಕಿತ್ತು. 5 ಹಣ್ಣುಗಳು ಹೇಗೆ ಆಗುತ್ತದೆ ಎಂದು ಮಗುವಿನ ಅಭಿಪ್ರಾಯ ಕೇಳಬೇಕಿತ್ತು. ಅದನ್ನು ಕೇಳದೆ ಮಗುವಿಗೆ ಹೊಡೆದೆ ಎಂದು ಶಿಕ್ಷಕಿ ತನ್ನ ತಪ್ಪಿಗೆ ತಾನೇ ಪಶ್ಚಾತಾಪ ಪಡುತ್ತಾರೆ. ಆದ್ದರಿಂದ ಯಾರೇ ಆಗಲಿ, ಪ್ರತಿಯೊಂದು ವಿಚಾರಕ್ಕೂ 2 ಮುಖಗಳಿವೆ ಎಂದು ತಿಳಿದುಕೊಳ್ಳಬೇಕು. ಮತ್ತೊಬ್ಬರ ಅಭಿಪ್ರಾಯ ಕೇಳದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು ಎಂಬುದನ್ನು ಗಮನದಲ್ಲಿಡಬೇಕು.

ವಿಭಾಗ