ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಹಣಕಾಸಿನ ಸಮಸ್ಯೆಗೆ ಪರಿಹಾರ, ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ; ನಾಳೆಯ ದಿನ ಭವಿಷ್ಯ

Tomorrow Horoscope: ಹಣಕಾಸಿನ ಸಮಸ್ಯೆಗೆ ಪರಿಹಾರ, ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ; ನಾಳೆಯ ದಿನ ಭವಿಷ್ಯ

16th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (16th April 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ಅಷ್ಟಮಿ 04.07 ವರೆಗು ಇರುತ್ತದೆ ನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಪುಷ್ಯ ನಕ್ಷತ್ರವು ದಿನಪೂರ್ತಿ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 06.06

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: 03.00 ರಿಂದ 04.30 ವರೆಗೆ

ರಾಶಿಫಲ

ಮೇಷ

ಕುಟುಂಬದಲ್ಲಿ ಬಿಗುವಿನ ವಾತಾವರಣವಿರುತ್ತದೆ. ಸಂಗಾತಿಯ ಸಲಹೆ ಪಾಲಿಸಿ ತೊಂದರೆಯಿಂದ ಪಾರಾಗುವಿರಿ. ಹಣಕಾಸಿನ ಕೊರತೆ ಎದುರಾಗದು. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಗೃಹಿಣಿಯರಿಗೆ ವಿಶ್ರಾಂತಿ ಕನಸಿನ ಮಾತಾಗಲಿದೆ. ಮಕ್ಕಳು ಉದ್ಯೋಗದ ಸಲುವಾಗಿ ವಿದೇಶಕ್ಕೆ ಪ್ರಯಾಣ ಮಾಡುವರು. ಸ್ವಂತ ವ್ಯಾಪಾರ ವ್ಯವಹಾರವು ಲಾಭದ ಹಾದಿಯಲಿ ಸಾಗುತ್ತದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕಿತ್ತಳೆ

ವೃಷಭ

ಕುಟುಂಬದವರ ಪ್ರೀತಿ ವಿಶ್ವಾಸ ಸದಾ ನಿಮಗಿರುತ್ತದೆ. ಉದ್ಯೋಗದಲ್ಲಿ ನಕಾರಾತ್ಮಕ ಬದಲಾವಣೆಗಳು ಕಂಡು ಬರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವ ಸಂಭವವಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಒಲವು ತೋರುವುದಿಲ್ಲ. ವಂಶದ ಹಳೆಯ ಮನೆಯನ್ನು ನವೀಕರಣಗೊಳಿಸಲು ತೀರ್ಮಾನ ಮಾಡುವಿರಿ. ಅವಕಾಶ ಇದ್ದರೂ ಹೊಸ ಹಣಕಾಸಿನ ವ್ಯವಹಾರ ಆರಂಭಿಸುವುದಿಲ್ಲ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಹಳದಿ

ಮಿಥುನ

ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಆತ್ಮವಿಶ್ವಾಸದಿಂದ ಯಶಸ್ಸನ್ನು ಸಾಧಿಸುವಿರಿ. ಕುಟುಂಬದ ಜವಾಬ್ದಾರಿಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಹಾದಿಯಲ್ಲಿ ಶುಭ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳು ವಯಸ್ಸಿಗೆ ಮೀರಿದ ಯೋಜನೆ ರೂಪಿಸುತ್ತಾರೆ. ಸ್ವಂತ ಮನೆ ಕೊಳ್ಳುವ ವಿಚಾರದಲ್ಲಿ ಪ್ರಗತಿ ಕಂಡುಬರುತ್ತದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಸಿರು

ಕಟಕ

ಪ್ರತಿ ವಿಚಾರದಲ್ಲೂ ಕುಟುಂಬದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಬದಲಾವಣೆ ನಿಮಗೆ ಅನುಕೂಲಕರವಾಗಿ ಇರಲಿದೆ. ಹೆಚ್ಚಿನ ವೇತನದ ನಿರೀಕ್ಷೆಯಿಂದ ಉದ್ಯೋಗ ಬದಲಾಯಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಮಹಿಳೆಯರು ಗೃಹೋತ್ಪನ್ನಗಳ ಮಾರಾಟದಲ್ಲಿ ಉತ್ತಮ ಆದಾಯ ಗಳಿಸುವರು. ಗೃಹ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರ ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ

ಸಿಂಹ

ಸಂಗಾತಿಯೊಂದಿಗೆ ಅನಾವಶ್ಯಕವಾದ ವಾದ ವಿವಾದ ಉಂಟಾದರೂ ಬಹುಕಾಲ ಉಳಿಯದು. ಉದ್ಯೋಗದಲ್ಲಿ ಹಿರಿ ಅಧಿಕಾರಿಗಳ ಇಚ್ಛೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಲಾಭವಿದೆ. ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಮತ್ತು ಧೈರ್ಯದ ನಡೆ ನುಡಿ ಯಶಸ್ಸಿಗೆ ಕಾರಣವಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ. ತಂದೆಯಿಂದ ಹಣದ ಸಹಾಯ ದೊರೆಯಲಿದೆ. ತಂದೆಯವರ ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ : ನೇರಳೆ

ಕನ್ಯಾ

ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪಲಿದ್ದೀರಿ. ಕುಟುಂಬದಲ್ಲಿ ಪರಸ್ಪರ ಗೌರವ ನಂಬಿಕೆ ಮನೆಮಾಡಿರುತ್ತದೆ. ಸಂಗಾತಿಯಿಂದ ದೊರೆಯುವ ಸಹಕಾರ ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಉದ್ಯೋಗದಲ್ಲಿ ಅಡಚಣೆ ಇರದು. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳವನ್ನು ತೊಡಗಿಸದಿರಿ. ವಿದ್ಯಾರ್ಥಿಗಳು ವಿಶ್ರಾಂತಿ ಮನರಂಜನೆಯನ್ನು ತೊರೆದು ಕಲೆಕೆಯಲ್ಲಿ ಯಶಸ್ಸಿನಿಂದ ಸಾಗುತ್ತಾರೆ. ಸೋದರಿಯ ಕೌಟುಂಬಿಕ ಕಲಹವನ್ನು ಸರಿಪಡಿಸುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಗುಲಾಬಿ ಬಣ್ಣ

ತುಲಾ

ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ನೆಮ್ಮದಿಯ ಜೀವನ ನಡೆಸುವಿರಿ. ಸಮಯವನ್ನು ವ್ಯರ್ಥ ಮಾಡದೆ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಉದ್ಯೋಗಸ್ಥರು ಹಿರಿಯ ಅಧಿಕಾರಿಗಳ ಪ್ರಶಂಸೆ ಪಡೆಯುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ವರಮಾನ ದೊರೆಯುತ್ತದೆ. ವಿದ್ಯಾರ್ಥಿಗಳು ಕೇವಲ ಕಲಿಕೆ ಮಾತ್ರವಲ್ಲದೆ ಜಾಗತಿಕ ವಿಚಾರ ತಿಳಿಯುವಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ವೃಶ್ಚಿಕ

ದುಡುಕಿ ಆಡುವ ಮಾತು ವಿವಾದಕ್ಕೆ ಕಾರಣವಾಗುತ್ತದೆ. ಸಿಡುಕುತನ ಬಿಟ್ಟು ಪ್ರೀತಿಯಿಂದ ವರ್ತಿಸಲು ಪ್ರಯತ್ನಿಸುವಿರಿ. ಯಾವುದೇ ಕೆಲಸವು ನಿಮಗೆ ಅಸಾಧ್ಯವೆನಿಸದು. ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಆಗದು. ಉತ್ತಮ ಆದಾಯವಿರುವ ಕೆಲಸಗಳನ್ನು ಆಯ್ಕೆ ಮಾಡುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಬೆಲೆ ಬಾಳುವ ಒಡವೆ ವಸ್ತ್ರಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ.

ಪರಿಹಾರ : ತಾಯಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬೂದು

ಧನಸ್ಸು

ಉದ್ಯೋಗದಲ್ಲಿ ನಿರೀಕ್ಷಿತ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಆತ್ಮೀಯರ ಸಹಾಯದಿಂದ ಚಿಕ್ಕ ಬಂಡವಾಳದ ಉದ್ದಿಮೆಯೊಂದನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ ಮತ್ತು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿದ್ದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರಜಾದಿನದ ಸವಿಯನ್ನು ಸವಿಯಲು ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ.

ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಮಕರ

ಲೋಹಗಳಿಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಬೇರೆಯವರ ಹಣಕಾಸಿನ ವಿವಾದದಲ್ಲಿ ಮಧ್ಯವರ್ತಿಗಳಾದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಸಂಗಾತಿಯೊಂದಿಗೆ ಕಿರುಪ್ರವಾಸಕ್ಕೆ ತೆರಳುವಿರಿ. ಕುಟುಂಬದ ಹಿರಿಯರ ಜೊತೆಗಿನ ಮನಸ್ತಾಪ ಕೊನೆಗೊಳ್ಳುವುದು.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಕುಂಭ

ಉದ್ಯೋಗದಲ್ಲಿ ಕೊಂಚ ತಡವಾದರೂ ಪ್ರಯತ್ನಕ್ಕೆ ತಕ್ಕಂತೆ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರದು. ವಿದ್ಯಾರ್ಥಿಗಳು ಮನ ಬಿಚ್ಚಿ ಮಾತನಾಡಿದರೆ ಸುಲಭವಾಗಿ ತಮ್ಮ ಗುರಿ ತಲುಪಲಿದ್ದಾರೆ. ಮಕ್ಕಳ ಇಷ್ಟಾರ್ಥವನ್ನು ಪೂರೈಸಲು ಸಫಲರಾಗುವಿರಿ. ಆತ್ಮೀಯರ ಜೊತೆಗಿನ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಕುಟುಂಬದವರ ಜೊತೆಯಲ್ಲಿ ಪ್ರವಾಸದ ಯೋಜನೆ ರೂಪಿಸುವಿರಿ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮೀನ

ಸಮಾಜದ ಸಂತಸ ಮತ್ತು ನೆಮ್ಮದಿಗೆ ಉತ್ತಮ ಕೊಡುಗೆ ನೀಡುವಿರಿ. ಉದ್ಯೋಗದಲ್ಲಿ ನಿಮ್ಮ ಮಾತನ್ನು ಎಲ್ಲರೂ ಗೌರವಿಸುತ್ತಾರೆ. ಬಡ್ತಿ ದೊರೆತು ಅಧಿಕಾರದ ಗದ್ದುಗೆ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಮುಂದುವರೆಯುತ್ತಾರೆ. ಸೋಲು ಗೆಲುವನ್ನು ಒಂದೇ ಭಾವನೆಯಿಂದ ಒಪ್ಪಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).