ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 12 March 2024 Zodiac Signs Kundali News Sts

Tomorrow Horoscope: ವೃತ್ತಿ ಕ್ಷೇತ್ರದಲ್ಲಿ ಅಚ್ಚರಿಯ ಘಟನೆ, ಅನಿವಾರ್ಯವಾಗಿ ಕೂಡಿಟ್ಟ ಹಣ ಖರ್ಚು; ಮಂಗಳವಾರದ ದಿನಭವಿಷ್ಯ

12 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಮಂಗಳವಾರದ ದಿನಭವಿಷ್ಯ ಹೀಗಿದೆ..

ಮಂಗಳವಾರದ ದಿನಭವಿಷ್ಯ
ಮಂಗಳವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 12 March 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಮಂಗಳವಾರ

ತಿಥಿ : ಬಿದಿಗೆ ಬೆ.10.37ರವರೆಗು ಇದ್ದು ಆನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ : ರೇವತಿ ನಕ್ಷತ್ರವು ರಾ.12.26 ರವರೆಗೆ ಇರುತ್ತದೆ. ಆನಂತರ ಅಶ್ವಿನಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.29

ಸೂರ್ಯಾಸ್ತ: ಸ.06.29

ರಾಹುಕಾಲ : ಬೆ. 03.00 ರಿಂದ ಮ.04.30

ರಾಶಿ ಫಲಗಳು

ಮೇಷ

ಎದುರಾಗುವ ಸಮಸ್ಯೆಗಳಿಗೆ ಹೆದರದೆ ಪಾಠ ಕಲಿತು ಹೊಸ ಜೀವನವನ್ನು ಆರಂಭಿಸುವಿರಿ. ಎಲ್ಲವನ್ನು ಮರೆತು ಕುಟುಂಬವು ಸಂತೋಷದಿಂದ ಇರುವಂತೆ ನೋಡಿಕೊಳ್ಳುವಿರಿ. ಹಿಂದೊಮ್ಮೆ ಯೋಚನೆಯಲ್ಲಿ ನೋಡಿದ ಹಣದ ಲಾಭ ಈಗ ದೊರೆಯುತ್ತದೆ. ಅನಿರೀಕ್ಷಿತ ಖರ್ಚುವೆಚ್ಚಗಳು ಎದುರಾಗುವ ಕಾರಣ ಆತಂಕವಿರುತ್ತದೆ. ವಿಶೇಷವಾದಂತಹ ಜನಾಕರ್ಷಕ ಶಕ್ತಿ ಇರುತ್ತದೆ. ಜನಸಾಮಾನ್ಯರಿಗೆ ಸಂಬಂಧಪಟ್ಟ ಕೆಲಸವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಎದುರಾಗಿದ್ದ ಆತಂಕವು ನಿವಾರಣೆಯಾಗುತ್ತದೆ. ಜನಸೇವೆ ಮಾಡುವ ಇಂಗಿತವನ್ನು ವ್ಯಕ್ತಪಡಿಸುವಿರಿ. ತಪ್ಪನ್ನು ಮರೆತು ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಿರಿ. ಹಿರಿಜನರ ಸಹಾಯ ಮತ್ತು ಸಹಕಾರ ದೊರೆಯುತ್ತದೆ. ಉತ್ತಮ ಆರೋಗ್ಯವಿರುತ್ತದೆ.

ಪರಿಹಾರ : ತಲೆಗೆ ಹಾಲನ್ನಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿಮಿಶ್ರಿತ ಬಿಳಿ ಬಣ್ಣ

ವೃಷಭ

ಜಾಗರೂಕತೆ ಮತ್ತು ವೇಗವಾಗಿ ಕೆಲಸ ಕಾರ್ಯಗಳನ್ನು ಮುಕ್ತಾಯಗೊಳಿಸುವಿರಿ. ಮಕ್ಕಳೊಂದಿಗೆ ಸಂಜೆ ವೇಳೆಯಲ್ಲಿ ಮನರಂಜನೆಯಲ್ಲಿ ಕಾಲ ಕಳೆಯುವಿರಿ. ಕೆಲಸ ಕಾರ್ಯಗಳು ಸಫಲವಾಗುವವರೆಗೂ ಪ್ರಯತ್ನವನ್ನು ಮುಂದುವರಿಸುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ಒಳ್ಳೆಯ ಕೆಲಸಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ಬಂಧು ಬಳಗದವರೊಂದಿಗೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಸದಸ್ಯರ ಸಹಕಾರ ದೊರೆಯುತ್ತದೆ. ಒಂಟಿತನ ಇಷ್ಟಪಡದೆ ಜನರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಇಷ್ಟಪಡುವಿರಿ. ಮಕ್ಕಳ ಸಾಧನೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

ಮಿಥುನ

ಮಾನಸಿಕ ಶಕ್ತಿಯನ್ನು ಗಳಿಸಲು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಮುನ್ನೂಡುವಿರಿ. ಇದರಿಂದ ಕುಟುಂಬದ ಜನರ ವಿರೋಧವನ್ನು ಎದುರಿಸಬೇಕಾಗುತ್ತದೆ. ಬುದ್ದಿವಂತಿಕೆಯಿಂದ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ವೃತ್ತಿ ಕ್ಷೇತ್ರದಲ್ಲಿ ಅಚ್ಚರಿಯ ಘಟನೆಯೊಂದು ನಡೆಯಲಿದೆ. ಹಿರಿಯ ಅಧಿಕಾರಿಗಳು ಬದಲಾಗುತ್ತಾರೆ. ವೃತ್ತಿ ಕ್ಶೇತ್ರದಲ್ಲಿ ಪ್ರಶಂಸೆ ಗಳಿಸುವಿರಿ. ಸದಾಕಾಲ ನಿಮ್ಮ ಸುತ್ತಮುತ್ತಲ ಆತ್ಮೀಯರ ಗುಂಪು ಇರುತ್ತದೆ. ಜನರ ಗುಂಪಿನಿಂದ ದೂರವಿದ್ದು ಏಕಾಂತದ ಜೀವನವನ್ನು ಇಷ್ಟಪಡುವಿರಿ. ಸಂಗಾತಿಯ ನಡುವಳಿಕೆಯು ಸಂತಸವನ್ನು ಉಂಟುಮಾಡುತ್ತದೆ. ಸದಾಕಾಲ ಒತ್ತಡದಲ್ಲಿ ಕೆಲಸ ಆರಂಭಿಸುವಿರಿ. ಹಣಕಾಸಿನ ಕೊರತೆ ಕಂಡು ಬರುವುದಿಲ್ಲ. ಸಂಪಾದಿಸಿದ ಹಣದ ಒಂದು ಭಾಗವನ್ನು ಜನಸಾಮಾನ್ಯರಿಗೆ ಮೀಸಲಿಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ..

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಕಟಕ

ದೈಹಿಕ ಸದೃಢತೆ ಕೆಲಸ ಕಾರ್ಯಗಳಲ್ಲಿ ಹೊಸ ಹುಮ್ಮಸ್ಸನ್ನು ಉಂಟು ಮಾಡುತ್ತದೆ. ಮನೆಯವರ ವಿರೋಧವನ್ನು ಲೆಕ್ಕಿಸದೆ ಕೆಲವು ತೀರ್ಮಾನಗಳನ್ನು ತೆಗೆದು ಕೊಳ್ಳುವಿರಿ. ಎಲ್ಲರೊಂದಿಗೆ ವಿಶ್ವಾಸದಿಂದ ನಡೆದು ಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಉದ್ಯೋಗದಲ್ಲಿ ಬೇರೆಯವರ ಅಭಿಪ್ರಾಯದಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ನೆಚ್ಚಿನ ವ್ಯಕ್ತಿಗಳ ಆಗಮನ ಕುಟುಂಬದ ಸಂತೋಷವನ್ನು ಹೆಚ್ಚಿಸುತ್ತದೆ. ಸಂಗಾತಿಯ ಜೊತೆಗೆ ಮನಸ್ತಾಪ ಉಂಟಾಗಬಹುದು. ಉದ್ಯೋಗ ಬದಲಿಸುವ ನಿರ್ಧಾರಕ್ಕೆ ಬರುವಿರಿ. ಆರೋಗ್ಯದ ಬಗ್ಗೆ ಗಮನ ನೀಡಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಕೈಗೊಳ್ಳುವಿರಿ. ಹವ್ಯಾಸಕ್ಕಾಗಿ ಆರಂಭಿಸಿದ ಸಣ್ಣ ಪ್ರಮಾಣದ ವ್ಯಾಪಾರವು ಜೀವನಕ್ಕೆ ಆಧಾರವಾಗುತ್ತದೆ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ತಿಳಿನೀಲಿ ಬಣ್ಣ

ಸಿಂಹ

ವಿಶ್ರಾಂತಿಯೇ ಇಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಹಠದ ಗುಣದಿಂದಾಗಿ ಆತ್ಮೀಯರ ಬೇಸರ ಎದುರಿಸಬೇಕಾಗುತ್ತದೆ. ಉತ್ತಮ ಆರೋಗ್ಯವಿರುತ್ತದೆ. ಬೇರೆ ದಾರಿ ಇಲ್ಲದೆ ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಹಣದ ಕೊರತೆ ಉಂಟಾಗಲಿದೆ. ಅನಿವಾರ್ಯವಾಗಿ ಕೂಡಿಟ್ಟ ಹಣವನ್ನು ಖರ್ಚು ಮಾಡುವಿರಿ. ಮಕ್ಕಳ ಆಶೋತ್ತರಗಳನ್ನು ಪೂರೈಸಲು ಹೆಚ್ಚಿನ ಹಣದ ಅವಶ್ಯಕತೆ ಇರಲಿದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ರೂಪುಗೊಳ್ಳಲಿದೆ. ಜೀವನದಲ್ಲಿ ಮರೆಯಲಾಗದ ಒಳ್ಳೆಯ ಘಟನೆ ಸಂಭವಿಸಲಿದೆ. ಉದ್ಯೋಗವನ್ನು ಬದಲಾಯಿಸುವ ಆಶಯ ವ್ಯಕ್ತಪಡಿಸುವಿರಿ. ವಾದ ವಿವಾದಗಳಿಗೆ ಎದುರಾಗದೆ ಎಲ್ಲರೊಂದಿಗೆ ಶಾಂತಿ ಸಂಯಮದಿಂದ ವರ್ತಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

ಕನ್ಯಾ

ನಿಮ್ಮಲ್ಲಿನ ಹಸನ್ಮುಖ ಎಲ್ಲರಲ್ಲಿಯೂ ಹೊಸ ಆಸೆಯನ್ನು ಉಂಟುಮಾಡುತ್ತದೆ. ವಿರೋಧಿಗಳು ನಿಮ್ಮ ಸ್ನೇಹಿತರಂತೆ ಬಾಳುತ್ತಾರೆ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸದಿರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಸಣ್ಣಪುಟ್ಟ ತಪ್ಪಿಗೂ ಬೇರೆಯವರನ್ನು ಟೀಕಿಸುವಿರಿ. ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಾರದು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಸಂತೋಷದಿಂದ ಇರಲು ಸಮಯ ನೀಡುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳಲು ವಂಶಾನುಗತವಾದ ಕೆಲಸವನ್ನು ಆವಲಂಭಿಸುವಿರಿ. ಮಕ್ಕಳ ವಿವಾಹಕ್ಕೆ ತಯಾರಿ ನಡೆಸುವಿರಿ.

ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ತುಲಾ

ಬೇರೆಯವರ ಮನಸ್ಸನ್ನು ನೋಯಿಸದೆ ನಡೆದುಕೊಳ್ಳಿ. ಕುಟುಂಬದಲ್ಲಿ ನಿಮ್ಮ ನಿರ್ಧಾರಕ್ಕೆ ಎಲ್ಲರ ಸಮ್ಮತಿ ದೊರೆಯುತ್ತದೆ. ಮಾಡಿದ ತಪ್ಪನ್ನು ಒಪ್ಪುವ ಕಾರಣ ಎಲ್ಲರ ಸಹಕಾರ ದೊರೆಯುತ್ತದೆ. ಸಣ್ಣಪುಟ್ಟ ನಿರಾಸೆಯನ್ನು ತಾಳದೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಗಡಿಬಿಡಿಯ ವಾತಾವರಣ ಉಂಟಾಗಲಿದೆ. ಅನಿವಾರ್ಯವಾಗಿ ಉದ್ಯೋಗ ಬದಲಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಎಲ್ಲರ ಪ್ರೀತಿ ವಿಶ್ವಾಸ ದೊರೆಯಲಿದೆ. ಅವಿವಾಹಿತರಿಗೆ ವಿವಾಹದ ಮಾತುಕತೆ ಆಗಲಿದೆ. ಹಿರಿಯರು ಮತ್ತು ಗೃಹಿಣಿಯರು ಕೆಲಸ ಕಾರ್ಯದ ನಡುವೆಯೂ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಆತ್ಮೀಯರೊಂದಿಗೆ ಅನಿರೀಕ್ಷಿತವಾದ ಒಪ್ಪಂದ ಏರ್ಪಡುತ್ತದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ

ವೃಶ್ಚಿಕ

ಯಾವುದೇ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವಿರಿ. ಇದರಿಂದ ಎಲ್ಲರ ಗಮನ ಗಳಿಸುವಿರಿ. ನಗುವಿನ ಮರೆಯಲ್ಲಿಯೇ ಸೋಲನ್ನು ಗೆಲುವಾಗಿ ಪರಿವರ್ತಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಯಾರೋ ಮಾಡಿದ ತಪ್ಪಿಗೆ ನೀವು ಸಂದಿಗ್ದತೆಗೆ ಸಿಲುಕುವಿರಿ. ನಿಮ್ಮದಲ್ಲದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹಠವನ್ನು ಬಿಟ್ಟು ಆತ್ಮೀಯರ ಸಲಹೆ ಒಪ್ಪಿಕೊಳ್ಳಿ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಎಚ್ಚರಿಕೆಯಿಂದ ಇರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಕೆಲಸದ ನಿಮಿತ್ತ ಕುಟುಂಬದ ಜೊತೆ ಬೆರೆಯಲು ಸಾಧ್ಯವಾಗುವುದಿಲ್ಲ. ಸಂಗಾತಿಯ ಸಹಕಾರವಿರುತ್ತದೆ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಧನಸ್ಸು

ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಹಣದ ಅವಶ್ಯಕತೆ ಇರುತ್ತದೆ. ಆಹಾರದ ವಿಚಾರದಲ್ಲಿ ಗಮನ ನೀಡಿದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು. ಹೊಸ ಆಸೆ ಆಕಾಂಕ್ಷೆಗಳಿಂದ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಗಳು ಬೇಸರ ಮೂಡಿಸುತ್ತದೆ. ಪರಿಸರಕ್ಕೆ ಹೊಂದಿಕೊಂಡು ನಡೆಯಲೇಬೇಕಾದ ಪರಿಸ್ಥಿತಿ ಎದುರಾಗಲಿದೆ. ಕುಟುಂಬದಲ್ಲಿನ ಒಗ್ಗಟ್ಟು ಮನಸ್ಸಿಗೆ ಸಮಾಧಾನ ನೀಡಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದಗಳು ಇರಲಿವೆ. ಯಾವುದೇ ವಿಚಾರವಾದರೂ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ಹಣಕಾಸಿನ ಕೊರತೆ ಉಂಟಾದಲ್ಲಿ ಎಲ್ಲರ ಮೇಲು ಕೋಪಗೊಳ್ಳುವಿರಿ. ಶಾಂತಿ ಸಹನೆಯಿಂದ ವರ್ತಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಮಕ್ಕಳ ಬೆಂಬಲ ನಿಮಗಿರುತ್ತದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ :9

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಮಕರ

ನಿಮ್ಮ ರೀತಿ ನೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಿಧಾನ ಗತಿಯ ಕೆಲಸ ನಿರ್ವಹಣೆ ಯಶಸ್ಸನ್ನು ನೀಡಲಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಕೆಲಸ ಕಾರ್ಯಗಳನ್ನು ಯಾವುದೇ ವಿವಾದಕ್ಕೆ ಸಿಲುಕದೆ ಪೂರ್ಣಗೊಳಿಸುವಿರಿ. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಸದಾ ಒಳ್ಳೆಯದನ್ನೇ ಚಿಂತಿಸುವ ಕಾರಣ ಮಾನಸಿಕ ನೆಮ್ಮದಿ ಇರಲಿದೆ. ಉತ್ತಮ ಪ್ರಯತ್ನದಿಂದಾಗಿ ತಂದೆಯವರಿಗೆ ಸಂಬಂಧಿಸಿದ ಕೆಲಸವೊಂದು ಪೂರ್ಣಗೊಳ್ಳುತ್ತದೆ. ಸಾಲದ ವ್ಯವಹಾರ ಅಸೂಯೆಗೆ ಕಾರಣವಾಗಬಹುದು. ಮಕ್ಕಳ ಜೀವನ ಶೈಲಿ ಹೊಸ ಆಸೆ ಆಕಾಂಕ್ಷಿಗೆ ಬುನಾದಿಯಾಗುತ್ತದೆ. ಮಕ್ಕಳು ಮಾಡುವ ತಪ್ಪನ್ನು ಕ್ಷಮಿಸುತ್ತಾ ಬಾಳುವಿರಿ. ಉದ್ಯೋಗವನ್ನು ಬದಲಿಸಬೇಕಾದ ಸಂದರ್ಭ ಕೂಡಿಬರಲಿದೆ. ಕಷ್ಟದ ಸಂದರ್ಭದಲ್ಲಿ ಸೋದರಿಯಿಂದ ಹಣದ ಸಹಾಯ ದೊರೆಯುತ್ತದೆ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ :4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಕುಂಭ

ಅಶಕ್ತರಪರವಾಗಿ ಹೋರಾಟ ಮಾಡುವ ನಿಶ್ಚಯಕ್ಕೆ ಬರುವಿರಿ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಕುಟುಂಬದವರ ಸಹಮತವಿರುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಸಮಾಜ ಸೇವೆಯಲ್ಲಿ ತೊಡಗಿಸುವಿರಿ. ಉದ್ಯೋಗದ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ. ಸದಾ ಮನದಲ್ಲಿ ಒಳ್ಳೆಯ ಭಾವನೆಗಳು ಮೂಡಲಿವೆ. ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಸರಿದೂಗಿಸಬಲ್ಲಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ದುಡುಕಿ ಮಾತನಾಡದೆ ಎಲ್ಲರೊಂದಿಗೆ ಸಹನಯಿಂದ ವರ್ತಿಸಿ. ನಿಮ್ಮ ಮನಸ್ಸನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಬಹುದು. ಮನೆತನಕ್ಕೆ ಸಂಬಂಧಿಸಿದ ಹಣಕಾಸಿನ ವಿಚಾರದಲ್ಲಿ ಜಯ ಲಭಿಸುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮೀನ

ವಯಸ್ಸಿನ ಅಂತರವಿಲ್ಲದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿ ಆತಂಕದ ವಾತಾವರಣವಿದ್ದರೂ ತೊಂದರೆ ಇರದು. ಉದ್ಯೋಗದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಮನದಲ್ಲಿ ಯಾವುದಾದರೂ ಒಂದು ವಿಚಾರಕ್ಕೆ ಯೋಚನೆ ಇರುತ್ತದೆ. ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯುತ್ತದೆ. ಬಂಧು ವರ್ಗದವರ ಒಡಗೂಡಿ ದೀರ್ಘಕಾಲ ಪ್ರವಾಸಕ್ಕೆ ತೆರಳುವಿರಿ. ಒಲ್ಲದ ಮನಸ್ತಿನಿಂದ ಮಾಡುವ ಕೆಲಸ ಯಶಸ್ವಿಯಾಗಲಿದೆ. ಜನರಿಗೆ ಅನುಕೂಲವಾಗುವಂತಹ ಸೇವಾಧಾರಿತ ವ್ಯವಹಾರವನ್ನು ಆರಂಭಿಸುವಿರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಮರುಕಳಿಸುತ್ತದೆ. ಸಂತಾನ ಲಾಭವಿದೆ. ಮಕ್ಕಳ ಜೀವನದಲ್ಲಿ ಕೆಲವೊಂದು ಅಸ್ವಭಾವಿಕ ಘಟನೆ ನಡೆಯಬಹುದು. ಪ್ರತಿಯೊಂದು ತೊಂದರೆಗೂ ಪರಿಹಾರವನ್ನು ಕಂಡುಹಿಡಿಯಬಲ್ಲಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕೆಂಪು ಬಣ್ಣ

--------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).