ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 16 March 2024 Zodiac Signs Kundali News Sts

Tomorrow Horoscope: ಉದ್ಯೋಗದಲ್ಲಿನ ಕಷ್ಟನಷ್ಟಗಳು ದೂರ, ಆಸ್ತಿಯಲ್ಲಿ ಸಿಂಹಪಾಲು: ಶನಿವಾರದ ದಿನಭವಿಷ್ಯ

16 March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಶನಿವಾರದ ದಿನಭವಿಷ್ಯ ಹೀಗಿದೆ..

ಶನಿವಾರದ ದಿನಭವಿಷ್ಯ
ಶನಿವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 16 March 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಶನಿವಾರ

ತಿಥಿ : ಸಪ್ತಮಿ ರಾ.02.35 ರವರೆಗು ಇರುತ್ತದೆ. ಆನಂತರ ಅಷ್ಠಮಿ ಆರಂಭವಾಗುತ್ತದೆ.

ನಕ್ಷತ್ರ : ರೋಹಿಣಿ ನಕ್ಷತ್ರವು ರಾ.08.55 ರವರೆಗೆ ಇರುತ್ತದೆ. ಆನಂತರ ಮೃಗಶಿರ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.26

ಸೂರ್ಯಾಸ್ತ: ಸ.06.29

ರಾಹುಕಾಲ : ಬೆ.09.00 ರಿಂದ ಬೆ.10.30

ರಾಶಿ ಫಲಗಳು

ಮೇಷ

ಕುಟುಂಬದಲ್ಲಿನ ಪರಸ್ಪರ ವಿಶ್ವಾಸ ಹೊಸ ನಿರೀಕ್ಷೆಯನ್ನು ಉಂಟುಮಾಡಲಿದೆ. ಆತ್ಮೀಯತೆಯಿಂದ ವ್ಯವಹರಿಸಿದರೆ ಹಣದ ಕೊರತೆಯಿಂದ ಪಾರಾಗುವಿರಿ. ಸಂದರ್ಭಕ್ಕೆ ತಕ್ಕ ನಡೆನುಡಿಯಿಂದ ಉದ್ಯೋಗದ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಹಿಡಿಯುವಿರಿ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯದ ಚಿಂತೆ ಇರುತ್ತದೆ. ಪೋಷಕರ ಸಹಾಯದಿಂದ ಧನಾತ್ಮಕ ಚಿಂತನೆ ಮೂಡಲಿದೆ. ರಜೆಯ ಸವಿ ಸವಿಯಲು ಎಲ್ಲರೊಂದಿಗೆ ಕಿರು ಪ್ರವಾಸಕ್ಕೆ ತೆರಳುವಿರಿ. ಸಾಮಾಜಿಕ ಸಭೆ ಸಮಾರಂಭಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆಗಳು ಇವೆ. ಷ್ಟಾಕ್ ಮತ್ತು ಷೇರುಗಳಲ್ಲಿ ಹೂಡಿದ್ದ ಹಣಕ್ಕೆ ಉತ್ತಮ ಲಾಭ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆದಾಯಕ್ಕೆ ಕೊರತೆ ಉಂಟಾಗದು.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 09

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

ವೃಷಭ

ನಿಮ್ಮಲ್ಲಿನ ಸಹಕಾರದ ಮನೋಭಾವನೆಯಿಂದ ಗೌರವಕ್ಕೆ ಪಾತ್ರರಾಗುವಿರಿ. ಉದ್ಯೋಗದಲ್ಲಿ ದೊರೆವ ಯಶಸ್ಸು ಸಂತಸಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ನಿರಾತಂಕವಾಗಿ ಎಲ್ಲರೊಡನೆ ಬಾಳುವರು. ಸ್ನೇಹಿತರಿಗೆ ನೀಡಿದ್ದ ಹಣವು ಮರಳಿ ಕೈ ಸೇರುವುದು. ವೃತ್ತಿಕ್ಷೇತ್ರದಲ್ಲಿ ಆತಂಕದ ಪರಿಸ್ಥಿತಿ ಎದುರಾದರೂ ತೊಂದರೆ ಉಂಟಾಗದು. ಆತ್ಮೀಯರ ಸಹಾಯದಿಂದ ಯೋಜನೆಯೊಂದರಲ್ಲಿ ಹಣವನ್ನು ಹೂಡುವಿರಿ. ಸಹೋದ್ಯೋಗಿಗಳನ್ನು ಗೌರವಿಸುವ ಕಾರಣ ಉದ್ಯೋಗದಲ್ಲಿನ ಕಷ್ಟ ನಷ್ಟಗಳು ದೂರವಾಗುತ್ತವೆ. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಕ್ಕೆ ಹೊರಡುವಿರಿ. ದಾಂಪತ್ಯ ಜೀವನದಲ್ಲಿ ಬೇಸರದ ವಿಚಾರಗಳು ದೂರವಾಗಲಿವೆ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಉಂಟಾಗಲಿದೆ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಕಂದು ಬಣ್ಣ

ಮಿಥುನ

ಆರೋಗ್ಯವನ್ನು ಉಳಿಸಿಕೊಳ್ಳಲು ಶಿಸ್ತುಬದ್ಧ ಜೀವನ ಆರಂಭಿಸುವಿರಿ. ಯೋಗ ಪ್ರಾಣಯಾಮಗಳಿಗೆ ಹೆಚ್ಚಿನ ವೇಳೆಯನ್ನು ಮೀಸಲಿಡುವಿರಿ. ಹಿಂದಿನ ದಿನಗಳಲ್ಲಿ ಮಾಡಿದ ಹಣದ ಹೂಡಿಕೆಯಿಂದ ಉತ್ತಮ ಲಾಭ ಗಳಿಸುವಿರಿ. ನಿಧಾನಗತಿಯಲ್ಲಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಅನಾವಶ್ಯಕವಾಗಿ ವಾದದಲ್ಲಿ ತೊಡಗುವಿರಿ. ಬೇರೆಯವರ ಕೆಲಸ ಕಾರ್ಯಗಳನ್ನು ಟೀಕಿಸದಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಲಿದೆ. ಸಂಗಾತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ಪ್ರೀತಿ ತೋರುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ಫಲಗಳು ದೊರೆಯಲಿವೆ. ಒತ್ತಡದ ನಡುವೆ ಕೆಲಸ ಕಾರ್ಯಗಳ ಬಗ್ಗೆ ತಪ್ಪು ನಿರ್ಧಾರ ಕೈಗೊಳ್ಳುವಿರಿ. ಸಹನೆಯಿಂದ ವಿಚಾರಗಳನ್ನು ತಿಳಿದು ಮುಂದುವರೆಯುವಿರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಕಟಕ

ಸಹನೆ ಮರೆಯಾಗಿ ವಾದ ವಿವಾದದಲ್ಲಿ ನಿರತರಾಗುವಿರಿ. ಸಹಾಯ ಮಾಡಲು ಬಂದ ಸ್ನೇಹಿತರೊಬ್ಬರನ್ನು ನಿರಾಸೆಗೊಳಿಸುವಿರಿ. ಆತುರದಲ್ಲಿ ತಪ್ಪನ್ನು ಮಾಡಿ ನಂತರ ಪಶ್ಚಾತಾಪ ಪಡುವಿರಿ. ತಪ್ಪು ಮಾಹಿತಿಗಳನ್ನು ನಂಬಿ ಕಷ್ಟಕ್ಕೆ ಸಿಲುಕುವಿರಿ. ಉದ್ಯೋಗದಲ್ಲಿ ಯಾವುದೇ ಹಿನ್ನಡೆ ಲಭಿಸುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯಲಿದೆ. ನಿಮ್ಮ ಸುಖಮಯ ಜೀವನದಿಂದ ತಂದೆ ತಾಯಿಗಳಿಗೆ ಹರುಷ ದೊರೆಯುತ್ತದೆ. ಯಾವುದೇ ಸನ್ನಿವೇಶ ಎದುರಾದರೂ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಆಸೆಯಿಂದ ಯೋಜಿಸಿದ್ದ ಪ್ರವಾಸವನ್ನು ರದ್ದು ಪಡಿಸಬೇಕಾಗುತ್ತದೆ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಸಿಂಹ

ಅನಾವಶ್ಯಕವಾಗಿ ಮನಸ್ಸಿನಲ್ಲಿ ಹತಾಶೆಯ ಭಾವನೆ ಮೂಡಲಿದೆ. ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡಿದಲ್ಲಿ ಸಂತೋಷ ಸಂಭ್ರಮ ಮನೆಮಾಡುತ್ತದೆ. ಕುಟುಂಬದ ಕೆಲಸ ಕಾರ್ಯಗಳು ನಿಮ್ಮ ಮನದ ಇಚ್ಛೆಯಂತೆ ನಡೆಯಲಿದೆ. ಹಣಕಾಸಿನ ವಿಚಾರದಲ್ಲಿ ಅತಿಯಾದ ಆಸೆ ಇರುವುದಿಲ್ಲ. ಬಳಿ ಇರುವ ಹಣಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬಲ್ಲಿರಿ. ಉತ್ತಮ ಗಳಿಕೆ ಕಂಡು ಬರುತ್ತದೆ. ಕುಟುಂಬದ ಎಲ್ಲರೊಡನೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಉದ್ಯೋಗದ ಸಲುವಾಗಿ ಸಂಗಾತಿ ಮತ್ತು ಮಕ್ಕಳಿಂದ ಕೆಲದಿನಗಳು ದೂರವಿರಬೇಕಾಗುತ್ತದೆ. ದುಡುಕುತನದಿಂದ ತೆಗೆದುಕೊಳ್ಳುವ ನಿರ್ಧಾರಗಳು ಸಂಗಾತಿಯ ಮನಸಿನಲ್ಲಿ ಬೇಸರ ಮೂಡಿಸುತ್ತದೆ. ಅತಿಯಾದ ವಾದ ವಿವಾದ ಮಾಡದಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ನಸುಗೆಂಪು ಬಣ್ಣ

ಕನ್ಯಾ

ಉತ್ತಮ ಆರೋಗ್ಯ ಇರುವ ಕಾರಣ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಸರಳ ಜೀವನ ನಡೆಸುವಿರಿ. ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಹೋದರು ಅನಾವಶ್ಯಕವಾಗಿ ನಿರ್ಧಾರಗಳನ್ನುಬದಲಾಯಿಸುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಸಾಹಸದ ಕೆಲಸಗಳನ್ನು ಮಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುವಿರಿ. ಪ್ರಯೋಜನವಿಲ್ಲದ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಎಲ್ಲರೂ ಮೆಚ್ಚಿರುವಂತಹ ನಡವಳಿಕೆಯನ್ನು ತೋರುವಿರಿ. ಸಣ್ಣದಾದ ಕೆಲಸ ಕಾರ್ಯಗಳನ್ನು ಹೆಚ್ಚಿನ ಉತ್ಸಾಹದಿಂದ ಮಾಡುವಿರಿ. ದಂಪತಿಗಳ ನಡುವಿನ ಮನಸ್ತಾಪವು ಮರೆಯಾಗುತ್ತದೆ. ನಿಮ್ಮ ಮನದ ಆಸೆ ಅಭಿಲಾಷಿಗಳು ಪೂರ್ಣಗೊಳ್ಳಲಿವೆ. ಸೋಂಕಿನಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮಲ್ಲಿರುವ ವಿಶೇಷ ಪ್ರತಿಭೆಗೆ ತಕ್ಕ ಪ್ರಶಂಸೆಯು ದೊರೆಯುತ್ತದೆ.

ಪರಿಹಾರ : ತಲೆಗೆ ಹಾಲನ್ನಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ತುಲಾ

ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಸಾಲದ ವ್ಯವಹಾರಗಳಿಂದ ದೂರವಿರುವಿರಿ. ಕುಟುಂಬದಲ್ಲಿ ಸಂತಸ ಸಂಭ್ರಮ ನೆಲೆಸಿರುತ್ತದೆ. ವಿದ್ಯಾರ್ಥಿಗಳು ಸಮಯ ಕಳೆಯಲೆಂದು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಸಂಯಮದಿಂದ ತೆಗೆದುಕೊಳ್ಳುವ ನಿರ್ಧಾರಗಳು ಆಶಾದಾಯಕವಾಗಿರುತ್ತದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಸಂಗಾತಿಯೊಂದಿಗೆ ಹೆಚ್ಚಿನ ಆತ್ಮೀಯತೆ ಇರಲಿದೆ. ಮನ ಗೆದ್ದವರಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಕ್ಲಿಷ್ಟಕರ ಪರಿಸ್ಥಿತಿಯೊಂದರಲ್ಲಿ ಸಂಗಾತಿಯಿಂದ ಉತ್ತಮ ಸಲಹೆ ದೊರೆಯುತ್ತದೆ. ಹಣಕಾಸಿನ ವಿವಾದವೊಂದರಲ್ಲಿ ಕಾನೂನಾತ್ಮಕ ಜಯವನ್ನು ಗಳಿಸುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹೊಗೆಯಬಣ್ಣ

ವೃಶ್ಚಿಕ

ಹಿರಿಯರ ಅಥವಾ ಅನುಭವಸ್ಥರ ಮಾರ್ಗದರ್ಶನದಿಂದ ಜೀವನದಲ್ಲಿ ಮುಂದುವರೆಯಿರಿ. ಸರಿ ಇಲ್ಲದ ಹವ್ಯಾಸಗಳಿಂದ ದೂರವಿರುವುದು ಒಳ್ಳೆಯದು. ನಿಮಗೆ ಇಷ್ಟವಾಗಿರುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಹೊರಾಂಗಣ ಕ್ರೀಡೆಗಳಲ್ಲಿ ಆಸಕ್ತಿ ಉಂಟಾಗಲಿದೆ. ಒಮ್ಮೆ ಯೋಚಿಸಿದ ನಂತರ ಹಣಕಾಸಿನ ವಿಚಾರದಲ್ಲಿ ತೀರ್ಮಾನಗಳನ್ನು ತಿಳಿದುಕೊಳ್ಳಿರಿ. ಆತ್ಮೀಯರ ಜೊತೆ ಹಣಕಾಸಿನ ಯೋಜನೆಯಲ್ಲಿ ಹಣವನ್ನು ಹೂಡುವಿರಿ. ತಿಳಿವಳಿಕೆಯ ಇಲ್ಲದೆ ಮಾಡಿದ ತಪ್ಪಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ

ಧನಸ್ಸು

ದೈಹಿಕ ನಿಶ್ಯಕ್ತಿಯಿಂದ ಪಾರಾಗಲು ಪ್ರಯತ್ನಿಸುವಿರಿ. ಅವಿರಥ ಪ್ರಯತ್ನದಿಂದ ಮಾತ್ರ ನಿರೀಕ್ಷಿತ ಫಲಗಳನ್ನು ಪಡೆಯಲು ಸಾಧ್ಯ. ಮನರಂಜನೆಯನ್ನು ಅರಸಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿಸುತ್ತಿದ್ದ ಅನುಕೂಲತೆಗಳು ಕಂಡು ಬರುತ್ತದೆ. ಮಕ್ಕಳು ನಿಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿದ್ದಾರೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅನುರಾಗವಿರುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸಿದಲ್ಲಿ ತೊಂದರೆ ಇರುತ್ತದೆ. ಮಕ್ಕಳ ವಿವಾಹ ನಿಶ್ಚಯವಾಗುತ್ತದೆ. ಕೋಪ ಬಂದರೆ ಬಹುಕಾಲ ಉಳಿಯುವುದಿಲ್ಲ. ಹತ್ತಿರದ ಬಂಧು ಬಳಗದವರಿಗೆ ಸಹಾಯ ಮಾಡುವಿರಿ. ಕುಟುಂಬದ ಕೆಲಸ ಕಾರ್ಯದಲ್ಲಿ ತೊಂದರೆ ಇದ್ದಲ್ಲಿ ಕೋಪದಿಂದ ವರ್ತಿಸುವಿರಿ. ನಿಮ್ಮ ತಂದೆ ಅಥವಾ ತಾಯಿಯಿಂದ ಅನಾವಶ್ಯಕ ಟೀಕೆಗಳನ್ನು ಎದುರಿಸಬೇಕಾಗುತ್ತದೆ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಮಕರ

ವಿಶ್ವಾಸದಿಂದ ನಡೆದುಕೊಂಡಲ್ಲಿ ಜೀವನದ ಕಷ್ಟ ನಷ್ಟಗಳು ಕಡಿಮೆಯಾಗುತ್ತವೆ. ಆರೋಗ್ಯವನ್ನು ಗಳಿಸಲು ಪ್ರಾಕೃತಿಕ ವೈದ್ಯ ಪದ್ಧತಿಯನ್ನು ಅವಲಂಬಿಸುವಿರಿ. ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್​​ಗಳಲ್ಲಿ ಹಣವನ್ನು ಹೂಡಿ ಉತ್ತಮ ಲಾಭ ಗಳಿಸುವಿರಿ. ಅಶಕ್ತರಿಗೆ ಸಹಾಯ ಮಾಡುವುದನ್ನು ಕರ್ತವ್ಯ ಎಂದು ಭಾವಿಸುವಿರಿ. ಮಕ್ಕಳ ಜೊತೆ ಸಂತಸದಿಂದ ದಿನ ಕಳೆಯುವಿರಿ. ನಿಮ್ಮ ಕಠಿಣ ವರ್ತನೆ ಆತ್ಮೀಯರಲ್ಲಿಯೂ ಬೇಸರ ಮೂಡಿಸುತ್ತದೆ. ನಿಮ್ಮಲ್ಲಿರುವ ಆತ್ಮೀಯತೆಯ ಗುಣ ಸ್ನೇಹ ಸಂಬಂಧವನ್ನು ಬಹುಕಾಲ ಉಳಿಸುತ್ತದೆ. ಸನ್ನಿವೇಶವನ್ನು ಅರಿತು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿರಿ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಸಂಗಾತಿಗೆ ಸಂಭಸಿದ ಕೆಲಸ ಕಾರ್ಯಗಳು ಸಂಪೂರ್ಣಗೊಳ್ಳಲಿವೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಕುಂಭ

ಕುಟುಂಬದ ಸದಸ್ಯರ ಮಧ್ಯೆ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ. ಉದ್ಯೋಗದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಕಂಡುಬರುವುದಿಲ್ಲ. ಹಳೆಯ ಹಣಕಾಸಿನ ವಿವಾದವೊಂದು ಸುಖಾಂತ್ಯ ಗೊಳ್ಳುತ್ತದೆ. ವಂಶದ ಆಸ್ತಿಯಲ್ಲಿ ಸಿಂಹಪಾಲು ದೊರೆಯುತ್ತದೆ. ಸಂಬಂಧಿ ಒಬ್ಬರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ಹಳೆಯ ಮನೆಯಯನ್ನು ನವೀಕರಿಸಲು ಹಣದ ಕೊರತೆ ಎದುರಾಗಲಿದೆ. ಹೊಸ ವ್ಯಾಪಾರ ಆರಂಭಿಸಲು ಯಾವುದೇ ಸಹಕಾರ ದೊರೆಯುವುದಿಲ್ಲ. ಮರ ಗಿಡಗಳ ಸಂರಕ್ಷಣೆಯಲ್ಲಿ ಬಿಡುವಿನ ವೇಳೆ ಕಳೆಯುವಿರಿ.

ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಮೀನ

ಆತ್ಮೀಯರ ಆಗಮನ ಮನೆಯಲ್ಲಿ ಹೊಸತನವನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ಆಡುವ ಮಾತಿಗೆ, ಮಾಡುವ ಕೆಲಸಕ್ಕೆ ಸೂಕ್ತ ಸ್ಥಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ವಿದ್ಯಾರ್ಥಿಗಳು ಹೊಸತನದ ನಿರೀಕ್ಷೆಯಲ್ಲಿ ಇರಲಿದ್ದಾರೆ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳದೆ ಹೋದಲ್ಲಿ ತೊಂದರೆ ಉಂಟಾಗುತ್ತದೆ. ವಿವಾಹದ ಬಗ್ಗೆ ಮಾತುಕತೆ ನಡೆಯುತ್ತದೆ. ಬಹುದಿನದಿಂದ ನಡೆಯದಿದ್ದ ಕೆಲಸವೊಂದು ಸುಲಭವಾಗಿ ಕೈಗೂಡಲಿದೆ. ದಂಪತಿಗಳ ನಡುವೆ ಅನ್ಯೋನ್ಯತೆ ಇರುತ್ತದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿಯು ದೊರೆಯುತ್ತದೆ. ಜನಸಾಮಾನ್ಯರಿಗೆ ನೀರಿನ ವ್ಯವಸ್ಥೆ ಮಾಡುವಿರಿ. ಸಾಲದ ವ್ಯವಹಾರ ಮಾಡದಿರಿ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ರಕ್ತದ ಬಣ್ಣ

----------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).