ಅದೃಷ್ಟ ರತ್ನಗಳು; ಸುಖ-ಶಾಂತಿ, ನೆಮ್ಮದಿ ತರುವ ನೀಲಿ ನೀಲಮಣಿಯಿಂದ ಪುಷ್ಯರಾಗದ ತನಕ 7 ಅಗ್ರ ಹರಳುಗಳು- Gemstones
Gemstones: ಬದುಕಿನಲ್ಲಿ ಸಂಕಷ್ಟಗಳು ಸಹಜ, ಸಾಮಾನ್ಯ. ಜ್ಯೋತಿಷ್ಯಶಾಸ್ತ್ರದ ಮೇಲೆ ನಂಬಿಕೆ ಇರುವಂಥವರು ಅನೇಕ ಪರಿಹಾರ ಉಪಕ್ರಮಗಳನ್ನು ಮೊದಲೇ ಕೈಗೊಳ್ಳುತ್ತಾರೆ. ಅಂತಹ ಉಪಕ್ರಮಗಳಲ್ಲಿ ಕೆಲವು ಅದೃಷ್ಟ ರತ್ನಗಳು ಕೂಡ ಇವೆ. ಈ ಪೈಕಿ ಸುಖ-ಶಾಂತಿ, ನೆಮ್ಮದಿ ತರುವ ನೀಲಿ ನೀಲಮಣಿಯಿಂದ ಪುಷ್ಯರಾಗದ ತನಕ 7 ಅಗ್ರ ಹರಳುಗಳು ಗಮನಸೆಳೆಯುತ್ತವೆ. (ಬರಹ- ಪ್ರಿಯಾಂಕಾ, ಬೆಂಗಳೂರು)
ಶತಮಾನಗಳಿಂದ ರತ್ನದ ಹರಳುಗಳು ಬೆರಗುಗೊಳಿಸುವ ಅವುಗಳ ಸೌಂದರ್ಯದ ಕಾರಣಕ್ಕಾಗಿ ಜನರನ್ನು ಆಕರ್ಷಿಸುತ್ತಿದೆ. ಈ ರತ್ನಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ. ಇದರಲ್ಲಿ ಆಧ್ಯಾತ್ಮಿಕ ಗುಣಶಕ್ತಿಗಳೂ ಇದ್ದು, ಧಾರ್ಮಿಕ, ಗ್ರಹಗತಿ ದೋಷ ಪರಿಹಾರದ ಹರಳುಗಳಾಗಿಯೂ ಬಳಕೆಯಲ್ಲಿವೆ. ಈ ಹರಳುಗಳು ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ, ವೃತ್ತಿಜೀವನದ ಯಶಸ್ಸು ಸೇರಿ ಜೀವನದ ವಿವಿಧ ಅಂಶಗಳನ್ನು ಪ್ರಭಾವಿಸುವ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ. ಈ ಅಮೂಲ್ಯ ರತ್ನಾಭರಣಗಳು ಸವಾಲುಗಳನ್ನು ಸುಲಭವಾಗಿ ಜಯಿಸಲು, ಆಶಾವಾದ ಮತ್ತು ತಾಳ್ಮೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಗ್ರಹಗತಿಗಳ ದೋಷ ಪರಿಹಾರಕ್ಕಾಗಿ, ನೆಮ್ಮದಿಯ ಬದುಕಿಗೆ, ಉದ್ಯೋಗ, ಕೆಲಸ ಕಾರ್ಯಗಳ ಪ್ರಗತಿಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಭರಣದಲ್ಲಿ ಜೋಡಿಸಿ ಧರಿಸುವಂತೆ ಸೂಚಿಸುವುದೂ ಇದೆ. ಆ ರೀತಿಯಾಗಿ, ಸವಾಲುಗಳನ್ನು ಜಯಿಸಲು, ಸುಖ-ಶಾಂತಿ, ನೆಮ್ಮದಿಗಾಗಿ ಮತ್ತು ವೃತ್ತಿಪರ ಅದೃಷ್ಟವನ್ನು ತರಲು ಸಹಾಯ ಮಾಡುವ ಏಳು ವಿಧದ ರತ್ನಗಳ ಕುರಿತಾದ ಮಾಹಿತಿ ಇಲ್ಲಿದೆ.
1. ನೀಲಿ ನೀಲಮಣಿಯಿಂದ ಖಿನ್ನತೆ ದೂರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀಲಿ ನೀಲಮಣಿ ರತ್ನವು ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿದೆ. ಈ ರತ್ನವು ಮಾನಸಿಕ ಶಾಂತಿ, ವೃತ್ತಿಜೀವನದ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಗುಣಗಳನ್ನು ಹೊಂದಿದೆ. ಅಲ್ಲದೆ ಇದು ಶಾಂತಿಯ ಭಾವವನ್ನು ನೀಡುತ್ತದೆ. ಇದು ಯಾವುದೇ ವ್ಯಕ್ತಿಯ ವೃತ್ತಿಜೀವನದ ಪ್ರಗತಿ ಮತ್ತು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಕೆಲಸದಲ್ಲಿ ಯಾವುದೇ ಅಡೆತಡೆಗಳಿದ್ದರೆ ಅದನ್ನು ಸುಲಭವಾಗಿ ಜಯಿಸಲು ಸಹಾಯ ಮಾಡುತ್ತದೆ. ಇದು ಖಿನ್ನತೆಯ ಭಾವನೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.
2. ಗೋಲ್ಡ್ ನೀಲಮಣಿ - ಯಶಸ್ಸಿನ ರತ್ನ
ವಿಶೇಷವಾಗಿ ಚೀನೀ ಸಂಸ್ಕೃತಿಯ ಪ್ರಕಾರ ಸಿಟ್ರಿನ್ ರತ್ನದ ಕಲ್ಲು ಕೂಡ ಅದೃಷ್ಟದ ರತ್ನ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೊಂದು ಯಶಸ್ಸಿನ ರತ್ನ ಅಂತಾನೇ ಪರಿಗಣಿಸಲಾಗಿದೆ. ಇದು ಹಳದಿ ಬಣ್ಣದಲ್ಲಿದ್ದು, ಪ್ರಕಾಶಮಾನವಾದ ದೀಪಗಳನ್ನು ಪ್ರತಿಫಲಿಸುತ್ತದೆ. ಈ ರತ್ನದ ಕಲ್ಲನ್ನು ಧರಿಸಿದವರಿಗೆ ಸಂತೋಷವನ್ನು ತರುತ್ತದೆ. ನೀವು ಎಲ್ಲಿಗೆ ಹೋದರೂ ಸಕಾರಾತ್ಮಕತೆ ನಿಮ್ಮಲ್ಲಿ ಉಳಿಯಲು ಇದು ಸಹಾಯ ಮಾಡುತ್ತದೆ.
3. ಮಂದಗೆಂಪಿನ ರತ್ನ(ಕಾರ್ನೆಲಿಯನ್)- ಅದೃಷ್ಟ ಶಿಲೆ
ಕಾರ್ನೆಲಿಯನ್ ಹರಳನ್ನು ಅದೃಷ್ಟದ ಶಿಲೆ ಎಂದು ಪರಿಗಣಿಸಲಾಗುತ್ತದೆ. ಇದು ಸ್ವಾಭಿಮಾನ, ಸೃಜನಶೀಲತೆ, ಪ್ರೇರಣೆ, ಪ್ರೀತಿ, ಉತ್ಸಾಹ ಮತ್ತು ಧೈರ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಧರಿಸುವ ವ್ಯಕ್ತಿಗೆ ಸಮೃದ್ಧಿ, ಸಂಪನ್ಮೂಲ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
4. ಸ್ಫಟಿಕ ಶಿಲೆ - ಸಮಾಧಾನ ತರುವ ಅಧ್ಯಾತ್ಮದ ಹರಳು
ಸ್ಫಟಿಕ ಶಿಲೆಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಇದನ್ನು ಶಕ್ತಿಯ ಕೆಲಸದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವರು ಇದನ್ನು ತಮ್ಮ ಕೈಗಳಲ್ಲಿ ತೊಟ್ಟರೆ, ಇನ್ನೂ ಕೆಲವರು ತಮ್ಮ ಕತ್ತಿನಲ್ಲಿ ಧರಿಸುತ್ತಾರೆ. ಇದು ಎಲ್ಲರಿಗೂ ಸರಿಹೊಂದುತ್ತದೆ ಎಂದು ಹೇಳಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಧರಿಸಿದರೆ ಶಕ್ತಿ ವೃದ್ಧಿಸುತ್ತದೆ ಎಂದು ನಂಬಲಾಗಿದೆ.
5. ಚಂದ್ರಕಾಂತ ಮಣಿ/ ಚಂದ್ರ ಶಿಲೆ - ವೃತ್ತಿಜೀವನದ ಉತ್ತುಂಗ ತೋರುವ ರತ್ನ
ಹೆಸರೇ ಸೂಚಿಸುವಂತೆ ಈ ಮಣಿಯು ಚಂದ್ರನಂತಿರುವ ಕ್ಷೀರ ಬಿಳಿ ಕಲ್ಲು ಬಣ್ಣದಲ್ಲಿದೆ. ಹಿಂದೂಗಳ ನಂಬಿಕೆ ಪ್ರಕಾರ, ಇದು ಚಂದ್ರನ ಬೆಳದಿಂಗಳಿನಿಂದ ರೂಪುಗೊಳ್ಳುತ್ತವೆಯಂತೆ. ನೀವು ಎಲ್ಲಿಗಾದರೂ ಪ್ರಯಾಣಿಸುವಾಗ ಇದನ್ನು ಧರಿಸಿದರೆ ಅಪಾಯಗಳಿಂದ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಸಹ ಇದೆ. ಈ ಹರಳು ಧರಿಸಿದವರಿಗೆ ಅದೃಷ್ಟ, ವೃತ್ತಿಜೀವನದ ಉತ್ತುಂಗ, ಕಾಳಜಿ, ಸುರಕ್ಷತೆಯನ್ನು ತರುತ್ತದೆ ಎಂದು ನಂಬಲಾಗಿದೆ.
6. ದೈಹಿಕ. ಮಾನಸಿಕ ನೆಮ್ಮದಿಯ ಪದ್ಮರಾಗ
ಪದ್ಮರಾಗ ರತ್ನವು ಶನಿ ಗ್ರಹದ ಉಪರತ್ನವಾಗಿದ್ದು, ಇದು ಗಾಢ ನೇರಳೆ ಬಣ್ಣವನ್ನು ಹೊಂದಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸೇರಿದಂತೆ ಉತ್ತಮ ಆರೋಗ್ಯವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ ಒತ್ತಡ ಮತ್ತು ತಲೆನೋವುಗಳನ್ನು ಕಡಿಮೆ ಮಾಡುತ್ತದೆ. ಈ ರತ್ನವೇನಾದರೂ ಮಂಕಾಯಿತು ಎಂದಾದರೆ ಏನಾದರೂ ಅಪಾಯದ ಮುನ್ಸೂಚನೆಯನ್ನು ಇದು ನೀಡುತ್ತದೆ. ಇದನ್ನು ಧರಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
7. ಪುಷ್ಯರಾಗ - ಅನಾರೋಗ್ಯ ದೂರ
ಅಮೂಲ್ಯ ರತ್ನಗಳಲ್ಲೊಂದಾದ ಹಳದಿ ನೀಲಮಣಿ ರತ್ನವನ್ನು ಪುಷ್ಯರಾಗ ಎಂದು ಸಹ ಕರೆಯುತ್ತಾರೆ. ಇದು ಗುರು ಗ್ರಹದಿಂದ ಆಳಲ್ಪಡುತ್ತದೆ. ಮಹಿಳೆಯರಿಗೆ, ಕಾನೂನು ಮತ್ತು ಬೋಧನೆಯಂತಹ ಕ್ಷೇತ್ರಗಳಲ್ಲಿರುವವರಿಗೆ ಮತ್ತು ಒತ್ತಡ ಪರಿಹಾರವನ್ನು ಬಯಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹಳದಿ ನೀಲಮಣಿ ಅನಾರೋಗ್ಯವನ್ನು ಗುಣಪಡಿಸುವ ಗುಣಗಳನ್ನು ಸಹ ಹೊಂದಿದೆ. ಮೂತ್ರಪಿಂಡದ ಸಮಸ್ಯೆ, ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಇದರ ಹಳದಿ ಬಣ್ಣವು ಧನಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಖ್ಯವಾಗಿ ಸೆಪ್ಟೆಂಬರ್ ನಲ್ಲಿ ಜನಿಸಿದವರಿಗೆ ಅದೃಷ್ಟ ರತ್ನ ಎಂದು ನಂಬಲಾಗಿದೆ.
ಇನ್ನು, ಈ ರತ್ನಗಳನ್ನು ನೀವು ಧರಿಸಲು ಬಯಸುವಿರಾದರೆ ಮೊದಲು ಜ್ಯೋತಿಷಿಗಳ ಸಲಹೆ ಪಡೆಯುವುದು ಮುಖ್ಯ. ಕೆಲವೊಂದು ರತ್ನಗಳು ನಿಮ್ಮ ರಾಶಿಗೆ ಸರಿಹೊಂದಿಲ್ಲವಾದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಜ್ಯೋತಿಷಿಗಳ ಸಲಹೆಯಂತೆ ನಿಮಗೆ ಯಾವ ರತ್ನ ಸರಿಹೊಂದುತ್ತದೆ ಎಂದು ತಿಳಿದುಕೊಂಡು ಧರಿಸಿ.
(ಬರಹ- ಪ್ರಿಯಾಂಕಾ, ಬೆಂಗಳೂರು)
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.