Triyuginarayan Temple: ಶಿವ ಪಾರ್ವತಿ ಮದುವೆ ಆಗಿದ್ದು ಇದೇ ಸ್ಥಳದಲ್ಲಿ; ಉತ್ತರಾಖಂಡದ ರುದ್ರ ಪ್ರಯಾಗದಲ್ಲಿರುವ ದೇವಸ್ಥಾನ ಇದು-triyuginarayan temple is the witness of shiva parvati marriage which situated in rudraprayag district uttarakhand rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Triyuginarayan Temple: ಶಿವ ಪಾರ್ವತಿ ಮದುವೆ ಆಗಿದ್ದು ಇದೇ ಸ್ಥಳದಲ್ಲಿ; ಉತ್ತರಾಖಂಡದ ರುದ್ರ ಪ್ರಯಾಗದಲ್ಲಿರುವ ದೇವಸ್ಥಾನ ಇದು

Triyuginarayan Temple: ಶಿವ ಪಾರ್ವತಿ ಮದುವೆ ಆಗಿದ್ದು ಇದೇ ಸ್ಥಳದಲ್ಲಿ; ಉತ್ತರಾಖಂಡದ ರುದ್ರ ಪ್ರಯಾಗದಲ್ಲಿರುವ ದೇವಸ್ಥಾನ ಇದು

Triyuginarayan Temple: ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ಶಿವ ಪಾರ್ವತಿಯವರ ಮದುವೆ ನೆರವೇರಿತು ಎಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿರುವ ಹೋಮ ಕುಂಡವನ್ನು 3 ಯುಗಗಳಿಂದಲೂ ಆರದಂತೆ ಉರಿಸಲಾಗುತ್ತಿದೆ.

ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ತ್ರಿಯುಗಿ ನಾರಾಯಣ ದೇವಸ್ಥಾನ
ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ತ್ರಿಯುಗಿ ನಾರಾಯಣ ದೇವಸ್ಥಾನ (PC: @mamatarsingh, @HimalyanClub)

Triyuginarayan Temple: ಶಿವ ಹಾಗೂ ಪಾರ್ವತಿಯನ್ನು ಮೂಲ ದಂಪತಿಗಳು ಎಂದು ಕರೆಯಲಾಗುತ್ತದೆ. ಶಿವ ಪಾರ್ವತಿಯನ್ನು ಅನೇಕ ಭಕ್ತರು ಆರಾಧಿಸುತ್ತಾರೆ. ಉತ್ತರಾಖಂಡದ ರುದ್ರ ಪ್ರಯಾಗ ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ಶಿವ ಪಾರ್ವತಿಯರ ಕಲ್ಯಾಣ ನಡೆಯಿತು ಎಂಬ ಕಥೆ ಪ್ರಚಲಿತದಲ್ಲಿದೆ.

ಶಿವನಿಂದ ವರ ಪಡೆದ ತಾರಕಾಸುರ

ದಂತಕಥೆಯ ಪ್ರಕಾರ, ರಾಕ್ಷಸ ತಾರಕಾಸುರನು ತಪಸ್ಸು ಮಾಡಿ ಶಿವನ ಮಗನನ್ನು ಹೊರತುಪಡಿಸಿ ಬೇರೆ ಯಾರ ಕೈಯಲ್ಲಿ ಸಾವು ಬರಬಾರದು ಎಂಬುದಾಗಿ ಬ್ರಹ್ಮನಿಂದ ವರ ಪಡೆಯುತ್ತಾನೆ. ಹೀಗೆ ವರ ಪಡೆದ ತಾರಕಾಸುರನು ಅಹಂಕಾರದಿಂದ ದೇವತೆಗಳಿಗೆ ಹಿಂಸಿಸುತ್ತಾನೆ. ಅದೇ ಸಮಯದಲ್ಲಿ ಸತಿಯ ಮೃತದೇಹವನ್ನು ಹೊತ್ತು ಶಿವನು ತನ್ನ ಭುಜದ ಮೇಲೆ ಹಾಕಿಕೊಂಡು ತಾಂಡವ ನೃತ್ಯ ಆಡುತ್ತಾ ಪ್ರಪಂಚದ ರಕ್ಷಣೆಯನ್ನು ಮರೆತುಬಿಡುತ್ತಾನೆ. ತನ್ನ ಕರ್ತವ್ಯವನ್ನು ನೆನಪಿಸುವಂತೆ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ತುಂಡುಗಳಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಪ್ರತಿಯೊಂದು ಭಾಗವು ಒಂದೊಂದು ಸ್ಥಳದಲ್ಲಿ ಬೀಳುತ್ತದೆ. ಅದನ್ನೇ ಇಂದು ಶಕ್ತಿ ಪೀಠಗಳಾಗಿ ಗುರುತಿಸಿಲಾಗಿದೆ.

ಶಿವನನ್ನು ವರಿಸಲು ತಪಸ್ಸು ಮಾಡಿದ್ದ ಪಾರ್ವತಿ

ತಾರಕಾಸುರನಿಂದ ಮುಕ್ತಿ ಹೊಂದಲು ದೇವತೆಗಳು ಶಿವ ಪಾರ್ವತಿಯರನ್ನು ಮದುವೆ ಮಾಡಲು ನಿರ್ಧರಿಸುತ್ತಾರೆ. ಏಕೆಂದರೆ ಪಾರ್ವತಿ ದೇವಿಯು ಶಿವನನ್ನು ವರಿಸುವ ಬಯಕೆಯಿಂದ ಹಲವು ವರ್ಷಗಳಿಂದ ತಪಸ್ಸು ಮಾಡುತ್ತಿದ್ದಳು. ಆಕೆಯ ಅಚಲವಾದ ಭಕ್ತಿ ಮತ್ತು ತಪಸ್ಸಿನಿಂದ ಪ್ರಭಾವಿತನಾದ ಶಿವನು ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ಪಾರ್ವತಿ ದೇವಿಯನ್ನು ವಿವಾಹವಾದನು ಎಂದು ಶಿವ ಪುರಾಣ ಹೇಳುತ್ತದೆ. ಈ ದೇವಾಲಯದಲ್ಲಿ ಪವಿತ್ರ ಹೋಮವನ್ನು ಏರ್ಪಡಿಸಿ ವಿವಾಹವನ್ನು ನಡೆಸಲಾಯಿತು. ಬ್ರಹ್ಮ ಮತ್ತು ವಿಷ್ಣುವೇ ಈ ವಿವಾಹವನ್ನು ನೆರವೇರಿಸಿದರು ಎಂದು ಹೇಳಲಾಗುತ್ತದೆ. ಶಿವ ಪಾರ್ವತಿಯರ ವಿವಾಹದ ದಿನದಂದು ಬೆಳಗಿದ ಅಖಂಡ ಹೋಮವು ಆ ಸ್ಥಳದಲ್ಲಿ ಇಂದಿಗೂ ಬೆಳಗುತ್ತಿರುವುದು ಈ ಸ್ಥಳದ ವಿಶೇಷ.

ಪಾರ್ವತಿಯ ಅಣ್ಣನಾಗಿ ಮದುವೆ ಮಾಡಿದ ವಿಷ್ಣು

ತ್ರಿಯುಗಿ ನಾರಾಯಣ ದೇವಸ್ಥಾನವು ಶೈವರು ಮತ್ತು ವಿಷ್ಣು ಭಕ್ತರಿಗೆ ಬಹಳ ವಿಶೇಷವಾಗಿದೆ. ತ್ರಿಯುಗಿ ನಾರಾಯಣ ಎಂದರೆ ಮೂರು ಯುಗಗಳು ಎಂದರ್ಥ, ನಾರಾಯಣ ಎಂದರೆ ವಿಷ್ಣುವಿನ ಆಕೃತಿ. ಶಿವ ಪಾರ್ವತಿಯರ ಮದುವೆಯಲ್ಲಿ ವಿಷ್ಣು ಪ್ರಮುಖ ಪಾತ್ರ ವಹಿಸಿದ್ದರು. ಮದುವೆ ಸಮಯದಲ್ಲಿ ವಿಷ್ಣುವು ಪಾರ್ವತಿ ಅಣ್ಣನ ಸ್ಥಾನದಲ್ಲಿ ನಿಂತು ವಧುವಿನ ಸಹೋದರನು ಮಾಡಬೇಕಾದ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸುತ್ತಾನೆ.

ಮದುವೆಗೆ ಪೌರೋಹಿತ್ಯ ವಹಿಸಿದ್ದ ಬ್ರಹ್ಮ

ಶಿವ ಪಾರ್ವತಿಯರ ಮದುವೆಗೆ ಬ್ರಹ್ಮ ದೇವರು ಪೌರೋಹಿತ್ಯ ವಹಿಸಿದ್ದನೆಂದು ಪುರಾಣದಲ್ಲಿ ಹೇಳಲಾಗಿದೆ. ಮದುವೆಗೂ ಮುನ್ನ ಶಿವ ಪಾರ್ವತಿಯರು ದೇವಾಲಯದ ಒಳಗಿನ ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡಿದರು. ಹಾಗಾಗಿಯೇ ಈ ಸ್ಥಳಕ್ಕೆ ಬ್ರಹ್ಮ ಕುಂಡ ಎಂಬ ಹೆಸರು ಬಂದಿದೆ.

ದೇವಾಲಯದಲ್ಲಿರುವ ಬ್ರಹ್ಮ ಶಿಲೆ ಹಾಗೂ ಮೂರು ತೀರ್ಥ ಕುಂಡಗಳು

ತ್ರಿಯುಗಿ ನಾರಾಯಣ ದೇವಾಲಯದಲ್ಲಿ ರುದ್ರ ಕುಂಡ, ವಿಷ್ಣು ಕುಂಡ ಮತ್ತು ಬ್ರಹ್ಮ ಕುಂಡ ಎಂಬ 3 ಕುಂಡಗಳನ್ನು ಹೊಂದಿದೆ. ಇವು ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಾಗಿವೆ. ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಲು ಬಯಸುವವರು ಅದಕ್ಕೂ ಮೊದಲು ಈ ಕುಂಡಗಳಲ್ಲಿ ಸ್ನಾನ ಮಾಡಬೇಕು ಎಂದು ಸ್ಥಳೀಯರು ಹೇಳುತ್ತಾರೆ. ದೇವಾಲಯದ ಬಳಿ ಬ್ರಹ್ಮ ಶಿಲಾ ಎಂಬ ವಿಶೇಷ ಬಂಡೆಯಿದೆ. ಅಲ್ಲಿ ವಿವಾಹ ಸಮಾರಂಭಗಳು ನಡೆಯುತ್ತಿದ್ದವು ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ. ಈ ದೇವಾಲಯದ ಮಧ್ಯಭಾಗದಲ್ಲಿ ಚಿಕ್ಕ ಪೀಠದ ಮೇಲೆ ಶಿವಲಿಂಗವಿದೆ. ಆ ಪೀಠದಲ್ಲಿಯೇ ಮದುವೆ ನಡೆದಿದೆ ಎನ್ನಲಾಗಿದೆ.

3 ಯುಗಗಳಿಂದ ಉರಿಯುತ್ತಿರುವ ಹೋಮ ಕುಂಡ

ಶಿವ ಪಾರ್ವತಿಯರ ವಿವಾಹದ ಸಂದರ್ಭದಲ್ಲಿ ಬೆಳಗಿದ ಹೋಮ ಕುಂಡವನ್ನು ಈಗಲೂ ಅಲ್ಲಿ ಬೆಳಗಿಸಲಾಗುತ್ತದೆ. ಅಲ್ಲಿನ ಜನರು ಸುಮಾರು ಮೂರು ಯುಗಗಳವರೆಗೂ ಬೆಂಕಿಯನ್ನು ಉರಿಯಲು ಸೌದೆ, ತುಪ್ಪ ಮುಂತಾದ ವಸ್ತುಗಳನ್ನು ಹಾಕಿ ನೋಡಿಕೊಳ್ಳುತ್ತಲೇ ಇದ್ದಾರೆ. ಈ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಆಹ್ಲಾದಕರವಾಗಿರುತ್ತದೆ. ಸುತ್ತಲೂ ಹಿಮಭರಿತ ಬೆಟ್ಟಗಳು ಕಾಣಸಿಗುತ್ತವೆ. ತ್ರಿಯುಗಿ ನಾರಾಯಣ ದೇವಾಲಯವು ಕೇದಾರನಾಥ ದೇವಾಲಯವನ್ನು ಹೋಲುತ್ತದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.