ಜನವರಿ 5ಕ್ಕೆ ತುಳುವ ಷಷ್ಠಿಯಂದೇ ಘಾಟಿ ಸುಬ್ರಹ್ಮಣ್ಯ ರಥೋತ್ಸವ, ಕಿರುಷಷ್ಠಿ ದಿನ ಸುಬ್ರಹ್ಮಣ್ಯ ಸ್ವಾಮಿ, ನಾಗಾರಾಧನೆಯಿಂದ ಜೀವನ ಸಂಕಷ್ಟ ದೂರ
Tuluva Shashti 2025: ಕರ್ನಾಟಕದಲ್ಲಿ ಸುಬ್ರಹ್ಮಣ್ಯ ದೇವರ ತುಳುವ ಷಷ್ಠಿ ಈ ಬಾರಿ ಜನವರಿ 5ಕ್ಕೆ ಬಂದಿದೆ. ಇದೇ ಷಷ್ಠಿಯನ್ನು ತುಳುಷಷ್ಠಿ, ಕಿರುಷಷ್ಠಿ ಎಂದೂ ಹೇಳುತ್ತಾರೆ. ಘಾಟಿ ಸುಬ್ರಹ್ಮಣ್ಯ ರಥೋತ್ಸವ ಇದೇ ದಿನ ಇದ್ದು, ಸುಬ್ರಹ್ಮಣ್ಯ ಸ್ವಾಮಿ, ನಾಗಾರಾಧನೆಯಿಂದ ಜೀವನ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇದೆ. (ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು)
Tuluva Shashti 2025: ಸುಬ್ರಹ್ಮಣ್ಯ ಷಷ್ಠಿ ನಂತರ ಬರುವ ಷಷ್ಠಿ ಕಿರು ಷಷ್ಠಿ. ಈ ಷಷ್ಠಿಯನ್ನು ತುಳುಷಷ್ಠಿ, ತುಳುವ ಷಷ್ಠಿ ಎಂದೂ ಕರೆಯುವುದುಂಟು. ಈ ಬಾರಿ ತುಳುವ ಷಷ್ಠಿ ಜನವರಿ 5 ರಂದು ಬಂದಿದೆ. ಇದೇ ದಿನ ಘಾಟಿ ಸುಬ್ರಹ್ಮಣ್ಯ ರಥೋತ್ಸವ ನಡೆಯುತ್ತದೆ. ಈ ದಿನವು ಶ್ರೀ ಸುಬ್ರಹ್ಮಣ್ಯಸ್ವಾಮಿಯ ಮತ್ತು ನಾಗಾರಾಧನೆಯಿಂದ ಜೀವನದ ಬಹುರೀತಿಯ ಸಮಸ್ಯೆಗಳು ದೂರವಾಗುತ್ತವೆ. ಕುಂಡಲಿಯಲ್ಲಿ ಕುಜದೋಷವಿದ್ದಲ್ಲಿ, ಸರ್ಪದೋಷವಿದ್ದಲ್ಲಿ, ರಾಹು-ಕೇತುಗಳ ತೊಂದರೆ ಇದ್ದಲ್ಲಿ ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವುದು ಒಳ್ಳೆಯ ಫಲಗಳಿಗೆ ನಾಂದಿಯಾಗುತ್ತದೆ. ಕುಜನಿಗೆ ರವಿ ಮತ್ತು ಗುರುಗ್ರಹಗಳು ಮಿತ್ರರಾಗುತ್ತಾರೆ. ಆದ್ದರಿಂದ ಜೋತಿಷ್ಯದ ಪ್ರಕಾರ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಭಾನುವಾರ, ಮಂಗಳವಾರ ಮತ್ತು ಗುರುವಾರಗಳು ಶ್ರೇಷ್ಠ ದಿನಗಳಾಗಿವೆ. ಆದರೆ ಇನ್ನುಳಿದ ದಿನಗಳಲ್ಲಿ ಷಷ್ಠಿಯ ತಿಥಿ ಬಂದರೆ ವಾರವನ್ನು ಪರಿಗಣಿಸದೆ ಆ ದಿನದಂದೆ ಶ್ರೀಸುಬ್ರಹ್ಮಣ್ಯ ಸ್ವಾಮಿಯ ಪೂಜೆಯನ್ನು ಮಾಡಬೇಕಾಗುತ್ತದೆ.
ಸುಬ್ರಹ್ಮಣ್ಯ ಸ್ವಾಮಿ, ನಾಗಾರಾಧನೆಯಿಂದ ಜೀವನ ಸಂಕಷ್ಟ ದೂರ
ಕುಜನ ದೋಷವಿದ್ದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವುದು ಬಹುಮುಖ್ಯ. ಕುಜದೋಷ ಪರಿಹಾರಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುವಂತೆ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯನ್ನು ಸಹ ಆರಾಧಿಸಬಹುದು. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ಲಗ್ನ ಅಥವಾ ರಾಶಿಗಳಲ್ಲಿ ಜನಿಸಿದವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವುದರಿಂದ ತ್ವರಿತಗತಿಯ ಫಲಗಳನ್ನು ಪಡೆಯುತ್ತಾರೆ. ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನ ಅಥವಾ ರಾಶಿಗಳಲ್ಲಿ ಜನಿಸಿದವರು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಪೂಜೆಯನ್ನು ಮಾಡುವ ಮೂಲಕ ಶ್ರೀಘ್ರ ಶುಭಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀಲಕ್ಷ್ಮಿನರಸಿಂಹ ಸ್ವಾಮಿ ಒಂದೇ ಶಿಲೆಯಲ್ಲಿ ಉದ್ಭವವಾಗಿವೆ. ಆದ್ದರಿಂದ ಇಲ್ಲಿ ವಿಶೇಷವಾದ ಮತ್ತು ವಿಭಿನ್ನವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಪುರಾಣ
ಘಾಟಿ ಕ್ಷೇತ್ರದಲ್ಲಿನ ದೇವರಿಗೆ 600 ವರ್ಷಗಳ ಇತಿಹಾಸವಿದೆ. ಸರಳ ಜೀವನ ನಡೆಸುತ್ತಿದ್ದ ವ್ಯಾಪಾರಿ ಒಬ್ಬನಿದ್ದ. ಅನೇಕ ಊರುಗಳನ್ನು ಸುತ್ತಿ ತಾನು ಬೆಳೆದ ವೀಳ್ಯದೆಲೆಯನ್ನು ಮಾರಾಟ ಮಾಡ್ತಾ ಇದ್ದ. ಬಂದ ಆದಾಯದಲ್ಲಿ ಒಂದು ಪಾಲನ್ನು ಧಾರ್ಮಿಕ ಸೇವೆ, ಜನಸೇವೆ ಮೀಸಲಿಟ್ಟು ಜೀವನ ನಡೆಸುತ್ತಿದ್ದ. ಕೈಲಾದ ರೀತಿಯಲ್ಲಿ ಜನ ಸೇವೆ ಮಾಡುತ್ತ ಬದುಕಿದ್ದ. ಒಮ್ಮೆ ವ್ಯಾಪಾರ ಮುಗಿಸಿ ಬರುವಾಗ, ಅತಿಯಾದ ಓಡಾಟದಿಂದ ದೈಹಿಕವಾಗಿ ಬಳಲುತ್ತಾನೆ. ಅಲ್ಲೊಂದು ನೀರಿರುವ ತಾಣವೊಂದು ಕಾಣುತ್ತಾನೆ. ತನ್ನ ದಣಿವನ್ನು ಕಡಿಮೆ ಮಾಡುವ ಸಲುವಾಗಿ ಸಣ್ಣ ಪ್ರದೇಶವನ್ನು ಪ್ರವೇಶಿಸುತ್ತಾನೆ. ಆ ಪ್ರದೇಶವೇ ಶ್ರೀ ಘಾಟಿಕ್ಷೇತ್ರ. ನೀರಿನ ತಾಣವೇ ಕುಮಾರತೀರ್ಥ. ತಾನು ತಂದಿದ್ದ ಆಹಾರವನ್ನು ಸೇವಿಸುತ್ತಾನೆ. ದಣಿವಾರಿಸಿಕೊಳ್ಳಲು ಅಲ್ಲಿಯೇ ಇದ್ದ ಕಲ್ಲುಬಂಡೆಯ ಮೇಲೆ ಮಲಗುತ್ತಾನೆ.
ಆ ಕ್ಷಣದಲ್ಲಿಯೇ ಅವನನ್ನು ನಿದ್ರೆ ಆವರಿಸುತ್ತದೆ. ಆಗ ಅವನಿಗೆ ನೀನು ಈ ಬಂಡೆಯ ಮೇಲೆ ಭಾರವಾಗಿ ಮಲಗಿರುವೆ ಏಳು. ಇದು ನಿನ್ನ ವಿಶ್ರಾಂತಿಯ ತಾಣವಲ್ಲ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತದೆ. ಆದರೆ ಆ ವ್ಯಾಪಾರಿಯು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೊಂದು ದಿನ ಆ ವ್ಯಾಪಾರಿಯು ಅದೇ ಸ್ಥಳದಲ್ಲಿ ಮಲಗಿದ್ದಾಗ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ನಾಗ ರೂಪದಲ್ಲಿ ಅವನ ಕನಸಿನಲ್ಲಿ ಕಾಣಿಸಿ ಕೊಳ್ಳುತ್ತಾನೆ. ಭಯಗೊಂಡ ವ್ಯಾಪಾರಿಯು ಶಿಲೆಯನ್ನು ಪರೀಕ್ಷಿಸಿದಾಗ ಏಳು ಹೆಡೆಗಳು ಕಂಡುಬರುತ್ತದೆ. ಒಬ್ಬ ವಿಪ್ರನ ಜೊತೆಯಲ್ಲಿ ಹೋಗಿ ಸಂಡೂರಿನ ಮಹಾರಾಜನಿಗೆ ಇದರ ಬಗ್ಗೆ ತಿಳಿಸುತ್ತಾನೆ. ತಾವಿಬ್ಬರೂ ಏಳುಹೆಡೆಯ ಸರ್ಪವನ್ನು ನೋಡಿರುವುದಾಗಿ ತಿಳಿಸುತ್ತಾರೆ. ಆದರೆ, ಇವರ ಮಾತಿನ ಮೇಲೆ ರಾಜನಿಗೆ ನಂಬಿಕೆ ಬರುವುದಿಲ್ಲ. ಇವರನ್ನು ಒಪ್ಪುವುದು ಇಲ್ಲ ಹಾಗೆಯೆ ತಿರಸ್ಕರಿಸುವುದು ಇಲ್ಲ.
ಕತ್ತಲಾದ ಕಾರಣ ವ್ಯಾಪಾರಿ ಮತ್ತು ವಿಪ್ರನು ಬೇರೆ ದಾರಿ ಕಾಣದೆ ಅದೇ ಊರಿನಲ್ಲಿ ತಂಗಲು ನಿರ್ಧರಿಸುತ್ತಾರೆ. ಅದೆ ದಿನದ ರಾತ್ರಿ ಮಹಾರಾಜನ ಕನಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಉಗ್ರ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ತನ್ನ ಸೇವೆ ಮಾಡಲು ತಿರಸ್ಕರಿದ ರಾಜನನ್ನು, ನಿನ್ನ ಖಜಾನೆಯು ಬರಿದಾಗಿ ನಿನ್ನ ಸಾಮ್ರಾಜ್ಯವು ಕಷ್ಟಕ್ಕೆ ಸಿಲುಕಲಿದೆ ಎಂದ ಹೇಳುತ್ತಾನೆ. ನಿನ್ನ ಕುಟುಂಬಕ್ಕೂ ಇದರಿಂದ ತೊಂದರೆ ಆಗಲಿದೆ ಎಂಬ ಸಂದೇಶ ದೊರೆಯುತ್ತದೆ. ಇದರಿಂದ ಭಯಭೀತನಾದ ರಾಜನು ನಿದ್ದೆಯಿಂದ ಎಚ್ಚೆತ್ತು ದೇವರಲ್ಲಿ ಕ್ಷಮೆ ಯಾಚಿಸುತ್ತಾನೆ. ವೀಳ್ಯದೆಲೆಯ ವ್ಯಾಪಾರಿ ಮತ್ತು ವಿಪ್ರನ ಜೊತೆಗೂಡಿ ಘಾಟಿಗೆ ಪ್ರಯಾಣ ಬೆಳೆಸುತ್ತಾನೆ. ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಪ್ರತಿಷ್ಠಾಪನೆಯನ್ನು ನೆರವೇರಿಸಿ, ಗುಡಿಗೋಪುರವನ್ನು ಕಟ್ಟಿಸಿದ ಎಂಬುದು ಐತಿಹ್ಯ.
ಅನ್ನದಾನಿ ಸುಬ್ರಹ್ಮಣ್ಯನ ಆರಾಧನೆಯಿಂದ ಹಲವು ತೊಂದರೆ ನಿವಾರಣೆ
ವಿಷ್ಣು ಸ್ವರೂಪಿಯಾದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯು ಬುಧಗ್ರಹದಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತಾನೆ. ಆದ್ದರಿಂದ ಇಲ್ಲಿ ಪೂಜೆ ಸಲ್ಲಿಸುವುದರಿಂದ ವಿದ್ಯಾಭ್ಯಾಸ ಮತ್ತು ಹಣಕಾಸಿನಲ್ಲಿನ ತೊಂದರೆಯಿಂದ ಪಾರಾಗಬಹುದು. ವಿರೋಧಿಗಳ ಉಪಟಳದಿಂದಲೂ ಪಾರಾಗಬಹುದು. ಋಣಮುಕ್ತರಾಗಬಹುದು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಅನ್ನದಾನಿ ಸುಬ್ರಹ್ಮಣ್ಯ ಎಂದೇ ಕರೆಯುತ್ತೇವೆ. ಆದ್ದರಿಂದ ಇಲ್ಲಿನ ಪ್ರಸಾದವನ್ನು ಸ್ವೀಕರಿಸಿದಲ್ಲಿ ಕುಟುಂಬದಲ್ಲಿ ಆಹಾರದ ಕೊರತೆ ಇರುವುದಿಲ್ಲ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ ಕುಜದೋಷದಿಂದಲೂ ಪಾರಾಗಬಹುದು. ಧೈರ್ಯದ ಗುಣವೂ ಹೆಚ್ಚಲಿದೆ. ಈ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮಾಡುವುದರಿಂದ ಸಂತಾನದೋಷವು ಪರಿಹಾರವಾಗುತ್ತದೆ. ಸೋದರರ ನಡುವಿನ ಮನಸ್ತಾಪವು ಮರೆಯಾಗುತ್ತದೆ. ಹೆಣ್ಣುಮಕ್ಕಳಿಗೆ ತವರಿನ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಉಂಟಾಗುತ್ತದೆ. ಒಟ್ಟಾರೆ ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವುದರಿಂದ ಶಾಂತಿ-ನೆಮ್ಮದಿಯಿಂದ ಕೂಡಿದ ಸುಖಮಯ ಜೀವನ ನಿರೀಕ್ಷಿಸಬಹುದು.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope