ತುಮಕೂರು: ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ 6 ದಶಕದ ಬಳಿಕ ಹೊರಬೀಡು ಆಚರಣೆ; ಅಕಾಲ ಮೃತ್ಯು ತಡೆಗಾಗಿ ದೇವರಿಗೆ ವಿಶೇಷ ಪೂಜೆ
Horobeedu Festival: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ ಅಕಾಲ ಮೃತ್ಯು ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಹೊರಬೀಡು ಆಚರಣೆ ನಡೆದಿದೆ. ಆರು ದಶಕಗಳ ಬಳಿಕ ನಡೆದ ಈ ವಿಶೇಷ ಹೊರಬೀಡು ಆಚರಣೆ ಕುರಿತ ವಿವರ ಇಲ್ಲಿದೆ.(ವರದಿ- ಈಶ್ವರ್, ತುಮಕೂರು)
Horobeedu Festival: ಗ್ರಾಮದಲ್ಲಿ ಆರೋಗ್ಯ, ಸಮೃದ್ಧಿಗೆ ಕಲ್ಪಿಸಿ, ಸಾವು ನೋವು ಕಡಿಮೆಯಾಗಿ ಎಲ್ಲರೂ ಸುಖಿಯಾಗಿರಲೆಂದು ಸಂಕಲ್ಪಿಸಿ ಗ್ರಾಮದೇವತೆಯ ಆಶೀರ್ವಾದಕ್ಕಾಗಿ ಗ್ರಾಮಸ್ಥರು ಗುರುವಾರ ಬೆಳಗಿನಿಂದ ಸಂಜೆಯವರೆಗೂ ಹೊರಬೀಡು ಆಚರಿಸಿದ ಘಟನೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಆಲ್ಕೆರೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ವಿಶೇಷ ಆಚರಣೆ ಆರು ದಶಕದ ಬಳಿಕ ನಡೆದಿದ್ದು, ರಾಜ್ಯದ ಗಮನಸೆಳೆದಿದೆ.
ಅಕಾಲ ಮೃತ್ಯುವಿನಿಂದ ಕಂಗೆಟ್ಟ ಆಲ್ಕೆರೆ ಹೊಸಹಳ್ಳಿ ಜನ; ಗ್ರಾಮದೇವತೆಯನ್ನು ಒಲಿಸಲು ಹೊರಬೀಡು ಆಚರಣೆ
ಕುಣಿಗಲ್ ತಾಲೂಕು ಆಲ್ಕೆರೆಹೊಸಹಳ್ಳಿ ಗ್ರಾಮದಲ್ಲಿ 350 ಕುಟುಂಬಗಳಿವೆ. ಅಲ್ಲಿ 2024ರ ಮಾರ್ಚ್‌ನಿಂದೀಚೆಗೆ ಡಿಸೆಂಬರ್ ಕೊನೆ ತನಕ 35ಕ್ಕೂ ಹೆಚ್ಚು ಜನ ಅಕಾಲ ಮೃತ್ಯುವಿಗೆ ಬಲಿಯಾಗಿದ್ದು, ಈ ಪೈಕಿ ವಯಸ್ಸಾಗಿ ಮೃತಪಟ್ಟವರು ಕಡಿಮೆ. ಅಕಾಲ ಮೃತ್ಯುಗಳು ಹೆಚ್ಚಾಗಿ ಆಗಿರುವುದು ಗ್ರಾಮಸ್ಥರನ್ನು ಚಿಂತೆಗೆ ಈಡು ಮಾಡಿತ್ತು, ಗ್ರಾಮದ ಹಿರಿ, ಕಿರಿಯರು ಒಂದೆಡೆ ಕೂತು ಅಕಾಲ ಮೃತ್ಯು ಸೇರಿದಂತೆ ಗ್ರಾಮದಲ್ಲಿ ರೋಗ ರುಜಿನ ಬಾರದಂತೆ ಏನು ಮಾಡಬೇಕೆಂದು, ಶಾಂತಿ, ನೆಮ್ಮದಿ ನೆಲೆಸಲು ಮಾಡಬೇಕಾದ್ದು ಏನು ಎಂದು ಚರ್ಚಿಸಿದ್ದರು. ಹಿರಿಯರಾದ ನಂಜುಂಡಪ್ಪ, ನಂಜಪ್ಪ, ಗೋವಿಂದಪ್ಪ ಇತರರ ನೇತೃತ್ವದಲ್ಲಿ ಈ ಸಮಾಲೋಚನೆ ನಡೆಸಲಾಗಿ ಹಿರಿಯರು ಸುಮಾರು 60 ವರ್ಷಗಳ ಹಿಂದೆ ಪ್ಲೇಗ್ ಹಾವಳಿಯಿಂದಾಗಿ ಹೊರಬೀಡು ಆಚರಣೆ ಮಾಡಿ ಗ್ರಾಮದೇವತೆ ಮೆರವಣಿಗೆ ನಡೆಸಿದ ನಂತರ ಊರೊಳಗೆ ಬಂದು ವಾಸ ಮಾಡಿದ ನಂತರ ಪ್ಲೇಗ್ ಹಾವಳಿ ನಿಯಂತ್ರಣಗೊಂಡಿತ್ತು ಎಂಬುದನ್ನು ಸ್ಮರಿಸಿಕೊಂಡರು. ನಂತರ ಈ ಆಚರಣೆ ನಡೆದಿಲ್ಲ. ಈಗ ಸಮಸ್ಯೆಗಳು ಕಾಣಿಸಕೊಂಡಿವೆ. ಹೀಗಾಗಿ ಹೊರಬೀಡು ಆಚರಣೆ ಸೂಕ್ತ ಎಂಬ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದರು.
ಏನಿದು ಹೊರಬೀಡು ಆಚರಣೆ
ಹೊರಬೀಡು ಆಚರಣೆ ಎಂದರೆ ಊರ ಹೊರಗೆ ಆಚರಿಸುವ ದೇವರ ಪೂಜೆ ಆಚರಣೆ. ಹಿರಿಯರು ನಿರ್ಧರಿಸಿದ ಪ್ರಕಾರ, ಗುರುವಾರ (ಜನವರಿ 9) ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಗ್ರಾಮದ ಎಲ್ಲಾ ಮನೆಯವರು ತಮ್ಮ ಮನೆಗಳಿಗೆ ಬೀಗ ಹಾಕಿ ಹೊರವಲಯದಲ್ಲಿ ಹೊರಬೀಡಿಗೆ ಹೊರಟರು. ಹೊರಬೀಡಿನಲ್ಲಿ ಸೂರ್ಯಾಸ್ತದ ನಂತರ ಗ್ರಾಮ ದೇವತೆ ಲಕ್ಷ್ಮಿಪಟಲದಮ್ಮ ಪೂಜೆ, ಉತ್ಸವಕ್ಕೆ ಸಿದ್ಧತೆ ನಡೆಸಿದರು. ಕೆಲವರು ಊರಿನಿಂದ ಹೊರಗೆ ಇರುವ ತೋಟದಲ್ಲೆ ವಾಸ್ತವ್ಯ ಹೂಡಿದರೆ, ಮತ್ತೆ ಕೆಲವರು ಊರ ಹೊರ ವಲಯದ ಗ್ರಾಮದೇವತೆ ದೇವಾಲಯ ಮರದ ಕೆಳಗೆ ವಾಸ್ತವ್ಯ ಹೂಡಿ ಅಡುಗೆ ಮಾಡಿಕೊಂಡು ಗ್ರಾಮ ದೇವತೆ ಪೂಜಾ ಉತ್ಸವಗಳಿಗೆ ಸಿದ್ಧತೆ ಮಾಡಿಕೊಂಡರು, ಆರು ದಶಕಗಳ ನಂತರ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಹೊರಬೀಡು ಆಚರಣೆ ಇಂದಿನ ಪೀಳಿಗೆಯವರಿಗೆ ಹೊಸ ಅನುಭವ ತಂದರೆ, ಹಿರಿಯರಿಗೆ ಗ್ರಾಮದಲ್ಲಿ ಸಾವು, ನೋವು ಕಡಿಮೆಯಾದರೆ ಸಾಕು ಎಂಬ ಮನೋಭಾವ ಮೂಡಿತ್ತು, ಸಂಜೆ ಸೂರ್ಯಾಸ್ತದ ನಂತರ ಗ್ರಾಮ ದೇವತೆಯರ ಉತ್ಸವಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಪ್ರಸಾದ ಸ್ವೀಕರಿಸಿದ ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ಒಂದು ಹಗಲಿನ ಹೊರಬೀಡು ಆಚರಣೆ ನೆರವೇರಿಸಿ ನೆಮ್ಮದಿ ಕಂಡರು.
(ವರದಿ- ಈಶ್ವರ್, ತುಮಕೂರು)