ವಿಶ್ವಾವಸು ಸಂವತ್ಸರದಲ್ಲಿ ಆಶ್ವಯುಜದಿಂದ ಫಾಲ್ಗುಣ ಮಾಸದವರೆಗಿನ ಮುಖ್ಯ ಹಬ್ಬಗಳಿವು: ನವರಾತ್ರಿ, ಶಿವರಾತ್ರಿ ಎಲ್ಲವೂ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿಶ್ವಾವಸು ಸಂವತ್ಸರದಲ್ಲಿ ಆಶ್ವಯುಜದಿಂದ ಫಾಲ್ಗುಣ ಮಾಸದವರೆಗಿನ ಮುಖ್ಯ ಹಬ್ಬಗಳಿವು: ನವರಾತ್ರಿ, ಶಿವರಾತ್ರಿ ಎಲ್ಲವೂ ಇಲ್ಲಿದೆ

ವಿಶ್ವಾವಸು ಸಂವತ್ಸರದಲ್ಲಿ ಆಶ್ವಯುಜದಿಂದ ಫಾಲ್ಗುಣ ಮಾಸದವರೆಗಿನ ಮುಖ್ಯ ಹಬ್ಬಗಳಿವು: ನವರಾತ್ರಿ, ಶಿವರಾತ್ರಿ ಎಲ್ಲವೂ ಇಲ್ಲಿದೆ

ಮೈಸೂರು ದಸರಾ 2025: ಆಶ್ವಯುಜ ಮಾಸದಿಂದ ಫಾಲ್ಗುಣ ಮಾಸದವರೆಗಿನ ಹತ್ತಾರು ಹಬ್ಬಗಳ ವಿವರ ಇಲ್ಲಿದೆ. ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಆಶ್ವಯುಜ ಮಾಸದಲ್ಲಿಯೇ ನಡೆಯುತ್ತದೆ. ನವರಾತ್ರಿ, ದೀಪಾವಳಿ, ಶಿವರಾತ್ರಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳ ದಿನಾಂಕ ಮತ್ತು ಮಹತ್ವದ ವಿವರ ಇಲ್ಲಿ ನೀಡಲಾಗಿದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಮಾಸಗಳಲ್ಲಿ ಹಲವು ಮುಖ್ಯ ಹಬ್ಬಗಳು ಇವೆ.
ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಮಾಸಗಳಲ್ಲಿ ಹಲವು ಮುಖ್ಯ ಹಬ್ಬಗಳು ಇವೆ.

ಶ್ರೀವಿಶ್ವಾವಸುನಾಮ ಸಂವತ್ಸರದ ಮುಖ್ಯ ಹಬ್ಬಗಳು: ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಮಾಸಗಳಲ್ಲಿ ಹಲವು ಮುಖ್ಯ ಹಬ್ಬಗಳು ಇವೆ. ನವರಾತ್ರಿಯಲ್ಲಿ ಮೈಸೂರು ದಸರಾ ಆಚರಣೆ ಇದೆ. ದೀಪಾವಳಿ, ಶಿವರಾತ್ರಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಸಡಗರದಿಂದ ಆಚರಿಸುವ ಹಲವು ಪ್ರಮುಖ ಹಬ್ಬಗಳನ್ನು ಈ ಮಾಸಗಳಲ್ಲಿ ಆಚರಿಸಲಾಗುತ್ತದೆ.

ಆಶ್ವಯುಜ ಮಾಸ (22-9-2025 ರಿಂದ 21-10-2025)

ನವರಾತ್ರಿ (22-9-2025 ರಿಂದ 2-10-2025)

ಶ್ರೀ ಸರಸ್ವತಿ ಪೂಜೆ (29-9-2025. ಸೋಮವಾರ): ವಿದ್ಯಾದೇವತೆಯಾದ ಶ್ರೀ ಸರಸ್ವತಿಯನ್ನು ಇಂದು ಪೂಜಿಸಲಾಗುತ್ತದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ.

ದುರ್ಗಾಷ್ಟಮಿ (30-9-2025, ಮಂಗಳವಾರ): ದುರ್ಗೆಯು ಶಕ್ತಿದೇವತೆ. ಪರಬ್ರಹ್ಮರೂಪಿಣಿಯಾದ ಆದಿಪರಾಶಕ್ತಿ ಸತ್ಯ ಧರ್ಮ ಉಳಿಸುವ ಸಲುವಾಗಿ ಅವತಾರ ತಾಳುತ್ತಾಳೆ. ಮಹಿಷನನ್ನು ವಧಿಸಿ ಶಾಂತಿ ನೆಮ್ಮದಿ ನೆಲೆಸಲು ಕಾರಣಳಾಗುತ್ತಾಳೆ. ಆದ್ದರಿಂದ ನವರಾತ್ರಿಯಲ್ಲಿ ಮಾತ್ರವಲ್ಲದೆ ಜೀವನದ ಪ್ರತಿಯೊಂದು ಹಾದಿಯಲ್ಲಿಯೂ ದುರ್ಗಾಪೂಜೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಮಹಾನವಮಿ ಮತ್ತು ಆಯುಧಪೂಜೆ (1-10-2025 ಬುಧವಾರ): ಹಿಂದಿನ ಕಾಲದಲ್ಲಿ ರಾಜಮಹಾರಾಜರು ತಮ್ಮಲ್ಲಿದ್ದ ಆಯುಧಗಳಿಗೆ ಪೂಜೆಯನ್ನು ಸಲ್ಲಿಸುತ್ತಿದ್ದರು. ಇಂದಿನ ದಿನಗಳಲ್ಲಿ ಲೋಹದ ವಸ್ತುಗಳು, ಅಡುಗೆಗೆ ಉಪಯೋಗಿಸುವ ವಸ್ತು ಮುಂತಾವುಗಳನ್ನು ಪೂಜಿಸಲಾಗುತ್ತದೆ. ದಿನನಿತ್ಯ ಬಳಸುವ ವಾಹನಗಳಿಗೂ ಪೂಜೆಯನ್ನು ಸಲ್ಲಿಸಲಾಗುತ್ತದೆ.

ವಿಜಯದಶಮಿ (2-10-2025, ಗುರುವಾರ): ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದ ದಿನದಂದು ಆರಂಭಗೊಳ್ಳುವ ನವರಾತ್ರಿ ಹಬ್ಬವು ಒಟ್ಟು ಒಂಬತ್ತು ರಾತ್ರಿಗಳಲ್ಲಿ ಪೂಜೆ, ಪುನಸ್ಕಾರ, ದಾನ, ಧರ್ಮದಿಂದ ಸಂಪನ್ನವಾಗುತ್ತದೆ. ಆದರೆ ಪೂಜೆಯು ಇಲ್ಲಿಗೆ ಸಂಪೂರ್ಣವಾಗುವುದಿಲ್ಲ. ಮಾರನೆಯ ದಿನ ಅಂದರೆ ದಶಮಿಯನ್ನು ವಿಜಯದಶಮಿ ಎಂದೇ ಕರೆಯಾಗುತ್ತದೆ. ಈ ದಿನದಂದು ಎಲ್ಲೆಡೆ ಸಂತೋಷ ಸಡಗರದಿಂದ ಸಾಂಸ್ಕೃತಿಕ ಮೇಳ, ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ವೈಭವಪೂರ್ಣ ಮೆರವಣಿಗೆಯು ದೇಶದ ಹಲವೆಡೆ ನಡೆಯುತ್ತದೆ.

ವಾಲ್ಮೀಕಿ ಜಯಂತಿ (7-10-2025, ಮಂಗಳವಾರ): ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ; ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ. ಇವರ ನೆನಪಿಗಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತೇವೆ.

ನೀರು ತುಂಬುವ ಹಬ್ಬ (19-10-2025, ಭಾನುವಾರ): ದೀಪಾವಳಿಯ ಮೊದಲ ದಿನವೇ ನೀರು ತುಂಬುವ ಹಬ್ಬ. ಇಂದಿನ ದಿನ ನೀರನ್ನು ಸಂಗ್ರಹಿಸುವ ಪ್ರತಿಯೊಂದು ಪಾತ್ರೆ ಪರಿಕರಗಳನ್ನು ಶುಚಿಗೊಳಿಸುತ್ತಾರೆ. ಅವುಗಳಿಗೆ ಸುಣ್ಣವನ್ನು ಹಚ್ಚಿ ಅರಿಸಿನ ಮತ್ತು ಕುಂಕುಮದಿಂದ ಅಲಂಕರಿಸಿ ಪೂಜಿಸುತ್ತಾರೆ.

ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ ಮತ್ತು ಕೇದಾರೇಶ್ವರ ವ್ರತ (20-10-2025, ಸೋಮವಾರ): ಶ್ರೀ ಪರಮೇಶ್ವರನ ಅನುಗ್ರಹಗಳಿಸಲು ಸರಳ ಉಪಾಯವೇ ಈ ಕೇದಾರೇಶ್ವರ ವ್ರತ. ಇದು ಕೇವಲ ಸ್ತ್ರೀಯರು ಮಾಡಬೇಕೆಂಬ ನಿಯಮವಿಲ್ಲ. ಈ ವ್ರತದಿಂದ ಅನೇಕ ಋಷಿಮುನಿಗಳು ಸಹ ಉತ್ತಮ ಫಲಗಳನ್ನು ಪಡೆದಿರುವ ಉದಾಹರಣೆ ಪುರಾಣಗ್ರಂಥಗಳಿಂದ ತಿಳಿದುಬರುತ್ತವೆ. ಈ ದಿನ ನರಕಾಸುರ ಎಂಬ ರಾಕ್ಷಸನ ಸಂಹಾರ ಆದ ಕಾರಣ ಈ ದಿನವನ್ನು ನರಕ ಚತುರ್ದಶಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ದೀಪಾವಳಿ ಅಮಾವಾಸ್ಯೆ (21-10-2025, ಮಂಗಳವಾರ): ಈ ದಿನದಂದು ಕುಬೇರಲಕ್ಷ್ಮೀಯ ಪೂಜೆ ಮಾಡುವ ಸಂಪ್ರದಾಯ ಕೆಲವೆಡೆ ಕಂಡುಬರುತ್ತದೆ. ಈ ದಿನ ವ್ಯಾಪಾರಸ್ಥರಿಗೆ ವಿಶೇಷವಾದ ದಿನವಾಗಿದೆ.

ಕಾರ್ತಿಕ ಮಾಸ (22-10-2025 ರಿಂದ 20-11-2025)

ಬಲಿ ಪಾಡ್ಯಮಿ (22-10-2025 ಬುಧವಾರ): ಬಲಿಪಾಡ್ಯಮಿಯನ್ನು ಬಲಿಚಕ್ರವರ್ತಿಯ ನೆನಪಿಗಾಗಿ ಆಚರಿಸುತ್ತೇವೆ. ಬಲಿಚಕ್ರವರ್ತಿಯು ಶಕ್ತಿಶಾಲಿಯಾದಂತಹ ವ್ಯಕ್ತಿಯಾಗಿರುತ್ತಾನೆ. ಇವನನ್ನು ಯುದ್ಧದಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೂ ಸಹ ಒಮ್ಮೆ ಇಂದ್ರನು ಸೋಲಿಸುತ್ತಾನೆ. ವಾಮನನು ಒಂದು ಹೆಜ್ಜೆಯನ್ನು ಇಡೀ ಭೂಮಂಡಲವನ್ನು ಆಕ್ರಮಿಸುತ್ತಾನೆ. ಎರಡನೆಯ ಹೆಜ್ಜೆಯಿಂದ ಸ್ವರ್ಗಲೋಕವನ್ನು ಆಕ್ರಮಿಸುತ್ತಾನೆ. ಮೂರನೇ ಹೆಜ್ಜೆಗೆ ಜಾಗವೇ ಇಲ್ಲದಂತೆ ಆಗುತ್ತದೆ. ಆಗ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಅವನನ್ನು ನರಕಕ್ಕೆ ತಳ್ಳುತ್ತಾನೆ. ಅನಂತರ ಬಲಿ ಚಕ್ರವರ್ತಿಯು ಭಗವಾನ್‌ ವಿಷ್ಣುವನ್ನು ಸ್ತುತಿಸಿ ತನ್ನ ಜನರೊಂದಿಗೆ ಸ್ವರ್ಗಕ್ಕೆ ತೆರಳುತ್ತಾನೆ. ಆದ್ದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂಬ ಹೆಸರಿನಿಂದ ಹಬ್ಬವನ್ನಾಗಿ ಆಚರಿಸುತ್ತೇವೆ.

ಉತ್ಥಾನ ದ್ವಾದಶಿ (2-11-2025, ಭಾನುವಾರ): ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯ ದಿನದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನು ಉತ್ಥಾನ ದ್ವಾದಶಿ, ಕ್ಷೀರಾಬ್ಧಿವ್ರತ ಮತ್ತು ಮಥನ ದ್ವಾದಶಿ ವ್ರತ ಎಂಬ ಹೆಸರಿನಿಂದ ಕರೆಯುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ತುಳಸಿ ಪೂಜೆಗೆ ವಿಶೇಷವಾದ ಮಹತ್ವವಿದೆ. ಚರಿತ್ರೆಯಿಂದ ಇಂಗ್ಲೆಂಡ್ ಮತ್ತು ಸ್ಪೈನ್ ದೇಶದಲ್ಲಿ ಸಹ ಇದರ ಆಚರಣೆ ಇತ್ತೆಂದು ತಿಳಿದುಬರುತ್ತದೆ.

ವೈಕುಂಠ ಚತುರ್ದಶಿ (4–11–2025, ಮಂಗಳವಾರ): ಈ ದಿನದಂದು ದೇವರಿಗೆ 360 ಎಳೆಗಳ್ಳುಳ್ಳ ಬತ್ತಿಯಿಂದ ಮಾಡಿದ ದೀಪವನ್ನು ಹಚ್ಚುತ್ತಾರೆ. ಅಕ್ಕಿಹಿಟ್ಟಿನಿಂದ 360 ಪದ್ಮಗಳನ್ನು ಸ್ವಹಸ್ತದಿಂದ ಬರೆಯುತ್ತಾರೆ.

ಶ್ರೀ ಧನ್ವಂತರಿ ಜಯಂತಿ (17-11-2025, ಸೋಮವಾರ): ವೈದ್ಯ ವಿಜ್ಞಾನವು ಆರಂಭವಾದದ್ದೇ ಧನ್ವಂತರಿಯಿಂದ ಇಂದಿಗೂ ಆಯುರ್ವೇದ ಆಸ್ಪತ್ರೆಗಳಲ್ಲಿ ಶ್ರೀ ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ.

ಮಾರ್ಗಶಿರ ಮಾಸ (21-11-2025 ರಿಂದ 19-12-2025): ಪ್ರತಿ ಗುರುವಾರಗಳಂದು ಮಾರ್ಗಶಿರ ಶ್ರೀ ಲಕ್ಷ್ಮಿವ್ರತವನ್ನು ಆಚರಿಸಬೇಕು.

ದತ್ತಾತ್ರೇಯ ಜಯಂತಿ (4-12-2025, ಗುರುವಾರ): ಅತ್ರಿಮುನಿಗಳ ಸತಿ ಅನಸೂಯೆಯನ್ನು ಸೋಲಿಸಲು ಬಂದ ತ್ರಿಮೂರ್ತಿಗಳು ಸೋತು ಆಕೆಯ ಮಕ್ಕಳಾಗಿ ಉಳಿಯುತ್ತಾರೆ. ಇದರ ಸಲುವಾಗಿ ದತ್ತಾತ್ರೇಯ ಜಯಂತಿಯನ್ನು ಆಚರಿಸುತ್ತೇವೆ.

ಧನುರ್ಮಾಸ (16-12-2025 ರಿಂದ 14-1-2026)

ಪುಷ್ಯ ಮಾಸ (20-12-2025 ರಿಂದ 18-1-2026)

ವೈಕುಂಠ ಏಕಾದಶಿ (30-12-2025, ಮಂಗಳವಾರ): ವೈಕುಂಠ ಏಕಾದಶಿಯ ದಿನ ಪೂಜೆ ಪುರಸ್ಕಾರವನ್ನು ಮಾಡಿ ದಂಪತಿಗಳ ಆಶೀರ್ವಾದ ಪಡೆದರೆ ವಂಶಕ್ಕೆ ಒದಗಿರುವ ಶಾಪದಿಂದ ಪಾರಾಗಬಹುದು. ಅಷ್ಟೇ ಏಕೆ ಗತಿಸಿದ ಪಿತೃ ವರ್ಗಕ್ಕೂ ಮೋಕ್ಷ ಸಿಗುತ್ತದೆ ಎಂದು ಹೇಳಲಾಗಿದೆ. ಈ ಎಲ್ಲಾ ಕಾರಣಗಳಿಗೆ ವೈಕುಂಠ ಏಕಾದಶಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.

ಉತ್ತರಾಯಣ ಪುಣ್ಯಕಾಲ ಮತ್ತು ಸಂಕ್ರಾಂತಿ (15-1-2026, ಗುರುವಾರ): ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಉತ್ತರಾಯಣ ಪುಣ್ಯಕಾಲವಾದ ಕಾರಣ ತರ್ಪಣವನ್ನು ನೀಡುತ್ತಾರೆ.

ಮಾಘ ಮಾಸ (19-1-2026 ರಿಂದ 17-2-2026)

ರಥಸಪ್ತಮಿ (25-1-2026, ಭಾನುವಾರ): ಈ ದಿನದಂದು ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಯಾವುದೇ ಪೂಜೆ, ಹೋಮಗಳನ್ನು ಮಾಡಿದರೂ, ಅದರಿಂದ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬರುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇದ್ದಲ್ಲಿ ಪರಿಹಾರಗೊಳ್ಳುತ್ತದೆ.

ಮಹಾಶಿವರಾತ್ರಿ (15–2-2026, ಭಾನುವಾರ): ಧರ್ಮ ಗ್ರಂಥಗಳ ಪ್ರಕಾರ ಶಿವನು ಈ ದಿನದಂದು ಕೋಟಿ ಸೂರ್ಯರಿಗೆ ಸಮನಾದ ಪ್ರಭೆ ಉಳ್ಳವನಾಗಿ ಲಿಂಗ ರೂಪದಲ್ಲಿ ಭೂಮಿಯ ಮೇಲೆ ಪ್ರಕಟನಾದನು ಎಂದು ತಿಳಿದು ಬರುತ್ತದೆ. ಒಂದೇ ದಿನದಲ್ಲಿ ತ್ರಯೋದಶಿ ಮುಗಿದು ಚತುರ್ದಶಿ ಆರಂಭವಾಗಿರಬೇಕು. ಅಂದು ಶಿವರಾತ್ರಿ ಪೂಜೆ ಮಾಡಬೇಕು. ಜಾತಿಬೇಧವಿಲ್ಲದೆ ಎಲ್ಲರೂ ಶಿವನ ಪೂಜೆಯನ್ನು ಮಾಡುತ್ತಾರೆ. ಆ ದಿನದಂದು ಶಿವಲಿಂಗದ ದರ್ಶನವನ್ನು ಮಾಡಲೇಬೇಕು. ಇಲ್ಲವಾದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಜೀವನದಲ್ಲಿ ಎದುರಾಗುತ್ತವೆ. ಶಿವನ ಪೂಜೆ ಮತ್ತು ದರ್ಶನದಿಂದ ಜನ್ಮ ಜನ್ಮಾಂತರದ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಫಾಲ್ಗುಣ ಮಾಸ (18-2-2026 ರಿಂದ 19-3-2026)

ಹೋಳಿ ಹುಣ್ಣಿಮೆ (3-3-2026, ಮಂಗಳವಾರ): ಈ ಹಬ್ಬವು ಬಣ್ಣಗಳ ಹಬ್ಬವಾಗಿದೆ. ನಮ್ಮಲ್ಲಿರುವ ಅಸುರಿ ಶಕ್ತಿಗಳು ನಮ್ಮಿಂದ ದೂರವಾಗಿ, ಶಾಂತಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ತಪಸ್ಸನ್ನು ಭಂಗಗೊಳಿಸಲು ಬಂದ ಮನ್ಮಥನನ್ನು ಶ್ರೀ ಪರಮೇಶ್ವರನು ತನ್ನ ಮೂರನೇ ಕಣ್ಣಿನಿಂದ ಸುಡುತ್ತಾನೆ. ಆದ್ದರಿಂದ ಕಾಮ ಕೋದಾಗ್ನಿ ಬಯಕೆಗಳು ಇಂದಿನ ಪೂಜೆಯಿಂದ ದೂರವಾಗುತ್ತದೆ ಎಂದು ತಿಳಿದು ಬರುತ್ತದೆ.

HT Kannada Desk

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.