ವಿಶ್ವಾವಸು ಸಂವತ್ಸರದ ಆಷಾಢ, ಶ್ರಾವಣ, ಭಾದ್ರಪದ ಮಾಸದ ಮುಖ್ಯ ಹಬ್ಬಗಳಿವು: ಸಾಲುಸಾಲು ಹಬ್ಬಸಾಲು ಇವೆ ಈ ಮಾಸಗಳಲ್ಲಿ
ಶ್ರೀವಿಶ್ವಾವಸುನಾಮ ಸಂವತ್ಸರದ ಮುಖ್ಯ ಹಬ್ಬಗಳು: ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಗುರು ಪೂರ್ಣಿಮೆ, ಮಂಗಳಗೌರಿ ವ್ರತ, ನಾಗರ ಪಂಚಮಿ, ಭೀಮನ ಅಮಾವಾಸ್ಯೆ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಸೇರಿ ಹಲವು ಮುಖ್ಯ ಹಬ್ಬಗಳಿವೆ. ಯಾವ ದಿನದಂದು ಯಾವ ಹಬ್ಬ ಎನ್ನುವ ವಿವರ ಇಲ್ಲಿದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಸಾಲುಸಾಲು ಹಬ್ಬಗಳು ಬರುತ್ತವೆ. ಆಷಾಢ ಮಾಸದಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುವುದಿಲ್ಲವಾದರೂ, ಗುರುಪೂರ್ಣಿಮೆ ಸೇರಿದಂತೆ ಹಲವು ಮುಖ್ಯ ಹಬ್ಬಗಳು ಇವೆ. ಶ್ರೀವಿಶ್ವಾವಸುನಾಮ ಸಂವತ್ಸರದಲ್ಲಿ ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳ ವಿವರ ಇಂತಿದೆ.
ಆಷಾಢ ಮಾಸ (26-6-2025 ರಿಂದ 24-7-2025)
ಶ್ರೀ ಮಹಾಲಕ್ಷ್ಮಿ ಪೂಜೆ: ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರಗಳಂದು ಶ್ರೀ ಮಹಾಲಕ್ಷ್ಮೀಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದಿನಗಳನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಗುರುಪೂರ್ಣಿಮ (10-7-2025, ಗುರುವಾರ): ಸಕಲ ವೇದಗಳ ಸಂಕಲನಕಾರ ಮತ್ತು ಮಹಾಭಾರತವನ್ನು ರಚಿಸಿದ ವ್ಯಾಸರಾಯರ ಜನ್ಮದಿನವನ್ನು ಗುರುಪೂರ್ಣಿಮಾದ ಹೆಸರಿನಲ್ಲಿ ಆಚರಿಸುತ್ತೇವೆ.
ದಕ್ಷಿಣಾಯಣ ಪುಣ್ಯಕಾಲ (16-7-2025, ಬುಧವಾರ): ಕಟಕ ಸಂಕ್ರಮಣವನ್ನು ದಕ್ಷಿಣಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ. ಈ ದಿನದಂದು ಪುಣ್ಯಸ್ನಾನ ಮಾಡುವುದು ವಾಡಿಕೆ. ಅಸುನೀಗಿದ ವಂಶದ ಹಿರಿಯರಿಗೆ ತರ್ಪಣ ನೀಡುವುದು ಸಂಪ್ರದಾಯ. ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.
ಜ್ಯೋತಿರ್ಭೀಮೇಶ್ವರ ವ್ರತ (24–7-2025, ಗುರುವಾರ): ಈ ಹಬ್ಬವು ಸ್ತ್ರೀಯರಿಗೆ ವಿಶೇಷವಾಗಿರುತ್ತದೆ. ಪತಿಯ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ಶಿವಪಾರ್ವತಿಯ ಪೂಜೆಯನ್ನು ಮಾಡುತ್ತಾರೆ. ಇದನ್ನು ಪತಿಸಂಜೀವಿನಿ ವ್ರತ ಎಂದೂ ಕರೆಯಲಾಗುತ್ತದೆ. ಉರಿಯುತ್ತಿರುವ ಜೋಡಿ ದೀಪದ ಕಂಬಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ.
ಶ್ರಾವಣಮಾಸ (25-7-2025 ರಿಂದ 23-8-2025 )
ಮಂಗಳಗೌರಿ ವ್ರತ: ಶ್ರಾವಣ ಮಾಸದ ಪ್ರತಿ ಮಂಗಳವಾರಗಳಂದು ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಇದು ಸ್ತ್ರೀಯರಿಗೆ ಸಂಬಂಧಿಸಿದ ವ್ರತವಾಗಿದೆ. ಈ ವ್ರತಾಚರಣೆಯಿಂದ ಪತಿಗೆ ದೀರ್ಘಾಯಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.
ನಾಗ ಚತುರ್ಥಿ (28-7-2025, ಸೋಮವಾರ): ಈ ದಿನದಂದು ಹೆಣ್ಣುಮಕ್ಕಳು ನಾಗಪ್ಪನ ವಿಗ್ರಹಕ್ಕೆ ತನಿ ಎರೆಯುತ್ತಾರೆ. ಕೆಲವೆಡೆ ಉಪವಾಸ ವ್ರತವನ್ನು ಆಚರಿಸುತ್ತಾರೆ. ಇಂದಿನ ದಿನದ ಪೂಜೆಯನ್ನು ಸಹೋದರರಿಗೆ ಮೀಸಲಿಡುತ್ತಾರೆ.
ನಾಗ ಪಂಚಮಿ (29-7-2025 ಮಂಗಳವಾರ): ಈ ಹಬ್ಬದಲ್ಲಿ ಸೋದರಿಯರು ಸೋದರರಿಗೆ ಶುಭವನ್ನು ಕೋರಿ ಬೆನ್ನು ತೊಳೆಯುವ ಶಾಸ್ತ್ರವನ್ನು ಮಾಡಲಾಗುತ್ತದೆ. ಸೋದರ ಸೋದರಿಯರು ಪರಸ್ಪರ ಉಡುಗೊರೆಯನ್ನು ನೀಡುತ್ತಾರೆ. ಇಂದಿನ ಶ್ರೀನಾಗರ ಪೂಜೆಯಿಂದ ಸಹೋದರರು ಅಪಮೃತ್ಯುವಿನಿಂದ ದೂರವಾಗುತ್ತಾರೆ ಎಂಬ ನಂಬಿಕೆ ಇದೆ.
ಶ್ರೀವರಮಹಾಲಕ್ಷ್ಮಿ ವ್ರತ (8–8–2025 ಶುಕ್ರವಾರ): ಈ ದಿನದಂದು ಕಳಶದಲ್ಲಿ ಶ್ರೀ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಹೆಣ್ಣುಮಕ್ಕಳು ಪೂಜಿಸುತ್ತಾರೆ. ಈ ಪೂಜೆಯ ಫಲವಾಗಿ ಕುಟುಂಬದ ಹಣಕಾಸಿನ ತೊಂದರೆಯು ದೂರವಾಗುತ್ತದೆ. ಪೂಜೆ ಮುಗಿದ ನಂತರ ದೇವರಿಗೆ ಅರ್ಪಿಸಿದ ಗೆಜ್ಜೆ ಮತ್ತು ವಸ್ತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಾರೆ. ಇದರಿಂದ ಉತ್ತಮ ಆದಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಋಗುಪಾಕರ್ಮ (9-8–2025 ಶನಿವಾರ): ಹೊಸ ಯಜ್ಞೋಪವೀತ್ವವನ್ನು ಧರಿಸುವ ಹಬ್ಬ. ಇದರಿಂದ ಧಾರ್ಮಿಕ ಕಾರ್ಯಗಳನ್ನು ಮಾಡುವ ಅಧಿಕಾರ ದೊರೆಯುತ್ತದೆ. ಆಯುಷ್ಯವು ಹೆಚ್ಚಾಗುತ್ತದೆ.
ರಕ್ಷಾಬಂಧನ (9–8-2025 ಶನಿವಾರ): ಇದು ಸೋದರ ಸಂಬಂಧವನ್ನು ಬಲಪಡಿಸುತ್ತದೆ. ಸೋದರರಿಗೆ ಹೆಣ್ಣುಮಕ್ಕಳು ರಾಖಿ ಕಟ್ಟುತ್ತಾರೆ. ಈ ಆಚರಣೆ ಮಹಾಭಾರತದಲ್ಲಿ ಶ್ರೀಕೃಷ್ಣ ಮತ್ತು ದ್ರೌಪದಿಯರ ನಡುವೆ ಕಾಣಬಹುದು. ಶಿವಾಜಿಯ ಕತೆಯಲ್ಲಿಯೂ ಇದೇ ರೀತಿಯ ಕತೆ ಕಂಡುಬರುತ್ತದೆ. ವೀರ ಸಿಂಧೂರ ಲಕ್ಷ್ಮಣನನ್ನು ಕಾಪಾಡುವ ಹೆಣ್ಣುಮಗಳ ಕತೆಯು ನಮಗೆ ದೊರೆಯುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿ (16-8-2025 ಶನಿವಾರ): ಈ ದಿನದಂದು ಶ್ರೀ ಕೃಷ್ಣನ ಹುಟ್ಟಿದ ದಿನ. ಈ ಹಬ್ಬವನ್ನು ಗೋಕುಲಾಷ್ಟಮಿ ಎಂಬ ಹೆಸರಿಂದಲೂ ಕರೆಯುತ್ತಾರೆ. ಸಾಮಾನ್ಯವಾಗಿ ಸಂಜೆಯ ವೇಳೆ ಪೂಜೆಯನ್ನು ಮಾಡುತ್ತಾರೆ. ಪೂಜೆ ಮುಗಿಯುವವರೆಗೂ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಮಕ್ಕಳು ಇಷ್ಟಪಡುವ ತಿಂಡಿ ತಿನಿಸನ್ನು ಶ್ರೀಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಮನೆಯಲ್ಲಿ ಇರುವ ಪುಟ್ಟ ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಸಂಪ್ರದಾಯವೂ ನಮ್ಮಲ್ಲಿದೆ.
ಭಾದ್ರಪದ ಮಾಸ (24-8-2025 ರಿಂದ 21-9-2025)
ಶ್ರೀ ಸ್ವರ್ಣಗೌರಿವ್ರತ (26-8-2025 ಮಂಗಳವಾರ): ಇದು ಹೆಣ್ಣುಮಕ್ಕಳು ಆಚರಿಸುವ ಹಬ್ಬವಾಗಿದೆ. ಮೊದಲು ಅರಿಸಿನದ ಗೌರಿಯನ್ನು ಪೂಜಿಸುತ್ತಾರೆ. ನದಿಯಿಂದ ತಂದ ಮೃತ್ತಿಕೆಯಿಂದ ಗೌರಿಯ ವಿಗ್ರಹವನ್ನು ತಯಾರಿಸಿ ಪೂಜಿಸುತ್ತಾರೆ. ಹೆಣ್ಣುಮಕ್ಕಳು ಧರಿಸುವ ಗೌರಿಯ ದಾರದಲ್ಲಿ ವಿಶೇಷವಾದ ಶಕ್ತಿ ಅಡಗಿರುತ್ತದೆ. ಇದರಿಂದ ಕುಟುಂಬದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಶ್ರೀ ವರಸಿದ್ಧಿ ವಿನಾಯಕ ವ್ರತ (27-8-2025 ಬುಧವಾರ): ವಿದ್ಯಾಬುದ್ದಿಗಾಗಿ ಶ್ರೀ ಗಣಪತಿಯ ಪೂಜೆಯನ್ನು ಮಾಡಲಾಗುತ್ತದೆ. ಮೋದಕ ಮತ್ತು ಕಡುಬನ್ನು ವಿಶೇಷವಾಗಿ ದೇವರಿಗೆ ಅರ್ಪಿಸಲಾಗುತ್ತದೆ. ಈ ದಿನ ಚಂದ್ರನನ್ನು ನೋಡಿದಲ್ಲಿ ಅಪವಾದ ಬರುವುದೆಂಬ ನಂಬಿಕೆ ಇದೆ. ಆದರೆ ಶ್ರೀ ವರಸಿದ್ಧಿವಿನಾಯಕ ವ್ರತಕತೆಯನ್ನು ಕೇಳಿದಲ್ಲಿ ದೋಷ ಪರಿಹಾರವಾಗುತ್ತದೆ. ನಿತ್ಯಜೀವನದಲ್ಲಿ ಎದುರಾಗುವ ಅಪವಾದವೂ ದೂರವಾಗುತ್ತದೆ.
ಋಷಿಪಂಚಮಿ ವ್ರತ (28-8-2025, ಗುರುವಾರ): ಇದು ಕ್ಲಿಷ್ಟಕರ ವ್ರತವಾಗಿದೆ. ಇದನ್ನು ವಿವಾಹಿತೆಯರು ಮಾತ್ರ ಮಾಡಬಹುದಾಗಿದೆ. ದಿನವಿಡೀ ಉಪವಾಸ ಇರುವುದಲ್ಲದೇ ಜಾಗರಣೆ ಮಾಡಬೇಕಾಗುತ್ತದೆ. ಮನೆಗೆ ಆಗಮಿಸಿದ ದಂಪತಿಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಿ, ಅವರ ಆಶೀರ್ವಾದವನ್ನು ಪಡೆಯಬೇಕಾಗುತ್ತದೆ.
ಶ್ರೀ ಅನಂತಪದ್ಮನಾಭ ವ್ರತ (6-9-2025 ಶನಿವಾರ): ಪ್ರತಿ ಸಂವತ್ಸರದಲ್ಲಿಯೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನದಂದು ಅನಂತಪದ್ಮನಾಭ ವ್ರತ ಬರುತ್ತದೆ. ಸಂಪ್ರದಾಯದಂತೆ ಇದನ್ನು ದಂಪತಿಗಳು ಮಾತ್ರ ಪೂಜೆಯನ್ನು ಮಾಡಬೇಕು. ಆದರೆ ಕೆಲವು ಕಡೆ ಕೇವಲ ಪುರುಷರು ಮಾತ್ರ ಪೂಜೆಯನ್ನು ಮಾಡುತ್ತಾರೆ. ಎರಡು ಕಲಶಗಳನ್ನು ಇಡುತ್ತಾರೆ. ಕೆಲವೆಡೆ ಪ್ರತಿ ದಂಪತಿಗಳಿಗೆ ಒಂದೊಂದು ಕಳಶವನ್ನು ಇಟ್ಟು ಪೂಜಿಸುತ್ತಾರೆ. ಅವರವರ ಸಂಪ್ರದಾಯ ಮತ್ತು ಆಚರಣೆಯನ್ನು ಅದು ಅವಲಂಬಿಸಿರುತ್ತದೆ.
ಪಕ್ಷಮಾಸ (8–9-2025 ರಿಂದ 21-9-2025)
ವ್ಯತೀಪಾತ ಮತ್ತು ಅವಿಧವಾ ನವಮಿ (15.9.2025): ವ್ಯತೀಪಾತ ಆದ್ದರಿಂದ ತರ್ಪಣ ಕ್ರಿಯೆ ಮುಖ್ಯವಾಗುತ್ತದೆ. ಅವಿಧವಾ ನವಮಿಯಲ್ಲಿಯೂ ವೈಶಿಷ್ಟ್ಯವಿದೆ. ಇಂದಿನ ಪೂಜೆ ಪುರಸ್ಕಾರಗಳು ಗಂಡನಿಗಿಂತ ಮುಂಚೆಯೇ ಮರಣ ಹೊಂದಿದ ವಿವಾಹಿತ ಮಹಿಳೆಯರಿಗೆ ಸಂಬಂಧಪಟ್ಟಿದೆ. ಆದ್ದರಿಂದ ಅವಿಧವ ನವಮಿಯು ವಿಧುರರಿಗೆ ಅತಿ ಮುಖ್ಯವಾದ ದಿನವಾಗುತ್ತದೆ. ಇಂದಿನ ದಿನ ಧುರಿಲೋಚನ ಎಂಬ ದೇವತೆಯನ್ನು ಪೂಜೆಸುತ್ತಾರೆ. ಲೋಚನ ಎಂದರೆ ಕನ್ನಡದಲ್ಲಿ ಕಣ್ಣುಗಳು ಎಂದು ಅರ್ಥಬರುತ್ತದೆ. ಧುರಿ ಎಂದರೆ ದೂಮ ಎಂದು ಹೇಳಲಾಗಿದೆ. ಇಂದಿನ ದೇವತೆಗೆ ಅರ್ಧ ತೆರೆದಕಣ್ಣಿರುತ್ತದೆ ಎನ್ನಲಾಗಿದೆ.
ಷಡಶೀತಿ ಪುಣ್ಯಕಾಲ (17-09-2025 ಬುಧವಾರ): ಇಂದು ಕನ್ಯಾ ಸಂಕ್ರಮಣ ಇರುತ್ತದೆ. ಪಕ್ಷಮಾಸದಲ್ಲಿ ಇದು ಪ್ರಮುಖ ದಿನವಾಗಿದೆ. ಈ ದಿನ ನದಿ ಸ್ನಾನವನ್ನು ಮಾಡಿ ತರ್ಪಣ ನೀಡುವುದು ವಾಡಿಕೆ.
ಘಾತ ಚತುರ್ದಶಿ (20-9–2025 ಶನಿವಾರ): ಅಪಮೃತ್ಯುವಿಗೆ ಈಡಾದವರಿಗೆ ಈ ದಿನವನ್ನು ಮೀಸಲಾಗಿರಿಸಿದೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ ಪ್ರಾಣತ್ಯಾಗ ಮಾಡಿದವರಿಗೂ ಈ ದಿನ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ತರ್ಪಣ ನೀಡಲಾಗುತ್ತದೆ.
ಮಹಾಲಯ ಅಮಾವಾಸ್ಯೆ (21–9–2025 ಭಾನುವಾರ): ಮಹಾಲಯ ಅಮಾವಾಸ್ಯೆಯು ಪಿತೃಪಕ್ಷದ ಕೊನೆಯ ದಿನ. ಅಂದು ಹಿರಿಯರಿಗೆ ತರ್ಪಣ ನೀಡುತ್ತಾರೆ. ಜಾತಿಬೇಧವಿಲ್ಲದೆ ಎಲ್ಲರೂ ಇಹಲೋಕ ತ್ಯಜಿಸಿದ ಮನೆತನದ ಹಿರಿಯರಿಗೆ ಭಿನ್ನಭಿನ್ನ ರೀತಿಯಲ್ಲಿ ಗೌರವ ಸಲ್ಲಿಸುತ್ತಾರೆ. ಅವರ ಆಚರಣೆಗಳಲ್ಲಿ ಬದಲಾವಣೆಗಳು ಇರುತ್ತವೆ.
