ಯುಗಾದಿಯ ದಿನ ಬೇವು - ಬೆಲ್ಲ ತಿನ್ನುವಾಗ ಹೇಳಬೇಕಾದ ಶ್ಲೋಕ ಯಾವುದು; ಅದರ ಅರ್ಥ ಮತ್ತು ಮಹತ್ವ ಏನು
ಯುಗಾದಿ ಹಬ್ಬದ ದಿನಕ್ಕೆ ಸಿದ್ದತೆ ನಡೆದಿರುವ ಹೊತ್ತು ಇದು. ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸುವ ಕೆಲಸವೂ ಭರದಿಂದ ಸಾಗಿರುವ ಸಮಯ. ಅಂದ ಹಾಗೆ, ಯುಗಾದಿಯ ದಿನ ಬೇವು - ಬೆಲ್ಲ ತಿನ್ನುವಾಗ ಹೇಳಬೇಕಾದ ಶ್ಲೋಕ ಯಾವುದು; ಅದರ ಅರ್ಥ ಮತ್ತು ಮಹತ್ವ ಏನು ಎಂಬುದನ್ನು ಅರಿತುಕೊಳ್ಳುವುದಕ್ಕೂ ಈ ಹೊತ್ತು ಸೂಕ್ತ.

ಕರ್ನಾಟಕದಲ್ಲಿ ಬಹುತೇಕ ಜನರು ಚಾಂದ್ರಮಾನ ಪದ್ಧತಿಯ ಕಾಲಗಣನೆ ಪರಿಗಣಿಸುತ್ತಿದ್ದು, ಇದರಂತೆ ಈ ಬಾರಿ ಮಾರ್ಚ್ 30ರ ಭಾನುವಾರ ಯುಗಾದಿ ಹಬ್ಬ. ಅಂದರೆ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೊದಲ ದಿನ. ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮದೇವನು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ. ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ವಾರಗಳು, ದಿನಗಳು ಮತ್ತು ತಿಂಗಳನ್ನು ಸೃಷ್ಟಿಸಿದನು. ಆದ್ದರಿಂದ, ಯುಗಾದಿಯ ದಿನವನ್ನು ಬ್ರಹ್ಮಾಂಡದ ಸೃಷ್ಟಿಪ್ರಕ್ರಿಯೆ ಪ್ರಾರಂಭವಾದ ಮೊದಲ ದಿನವೆಂದು ಪರಿಗಣಿಸಲಾಗಿದೆ. ಹಿಂದೆ ದಕ್ಷಿಣ ಭಾರತವನ್ನು ಆಳುತ್ತಿದ್ದ ಶಾಲಿವಾಹನನು ತನ್ನ ವಿಜಯದ ಸಂಕೇತವಾಗಿ ಶಾಲಿವಾಹನ ಶಕೆ ಪ್ರಾರಂಭಿಸಿದ್ದು ಕೂಡ ಇದೇ ದಿನ. ಶಿಶಿರಋತು ಕಳೆದು ಹೊಸಚಿಗುರು, ಎಲೆ, ಹೂವುಗಳಿಗೆ ಕಾರಣವಾಗಿ ಚೈತ್ರದ ಆಗಮನವು ಸಂತಸದ ಸಮಯವನ್ನು ಬಿಂಬಿಸುತ್ತದೆ.
ಈ ದಿನದ ಬೇವು ಬೆಲ್ಲದ ಸೇವನೆ ಅರ್ಥಪೂರ್ಣವಾದದ್ದು .ಜೀವನದ ಸಿಹಿಕಹಿಗಳಲ್ಲೂ, ಸುಖ ದುಃಖಗಳಲ್ಲೂ ಸಂಯಮಿಯೂ, ಸಮದರ್ಶಿಯೂ, ಸ್ಥಿತಿಪ್ರಜ್ಞನೂ ಆಗಬೇಕೆಂದು ತಿಳಿಸುತ್ತದೆ. ಯುಗಾದಿಯ ದಿನ ಬೇವು ಬೆಲ್ಲ ತಿನ್ನುವ ವಿಚಾರದಲ್ಲಿ ಪ್ರಸ್ತಾಪವಾಗುವ ಸಂಸ್ಕೃತದ ಶ್ಲೋಕ ಇದು.
ಯದ್ವರ್ಷಾದೌ ನಿಂಬಾ ಸುಮಂ ಶರ್ಕರಾಮ್ಲ ಘೃತೈರ್ಯುತಂ |
ಭಕ್ಷಿತಂ ಪೂರ್ವ ಯಾಮೇತು ಪ್ರದತಾತಿ ಸುಖಂ ಪರಂ ||
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ ||
ಯುಗಾದಿಯ ದಿನ ಬೇವು ಬೆಲ್ಲ ತಿನ್ನುವಾಗ ಹೇಳಲೇಬೇಕಾದ ಶ್ಲೋಕ
ಬೇವು ಬೆಲ್ಲ ಸ್ವೀಕರಿಸುವಾಗ ಮೇಲಿನ ಶ್ಲೋಕದ ಪೈಕಿ ಕೊನೆಯ ಎರಡು ಸಾಲನ್ನಾದರೂ ಕಡ್ಡಾಯವಾಗಿ ಹೇಳಬೇಕು ಎನ್ನುತ್ತಾರೆ ಬಲ್ಲವರು.
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ ||
ಶ್ಲೋಕದ ಈ ಸಾಲುಗಳ ಅರ್ಥ ಇಷ್ಟೆ- ನೂರು ವರ್ಷ ಆಯುಸ್ಸು, ವಜ್ರದಂತೆ ಬಲಿಷ್ಠ ಶರೀರ, ಸರ್ವಸಂಪತ್ತು ಸರ್ವಾರಿಷ್ಟನಾಶಕ್ಕಾಗಿ ಬೇವು ಬೆಲ್ಲ ಸೇವಿಸಬೇಕು.
ಯುಗಾದಿ ದಿನ ಬೇವು ಬೆಲ್ಲ ಮಾತ್ರವಲ್ಲದೆ, ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವ ಪದ್ಧತಿ ರೂಢಿಯಲ್ಲಿದೆ.
ಹಾಗೆ ಯುಗಾದಿಯಂದು ಇಷ್ಟು ಮಾಡಿದ ಬಳಿಕವೇ ಪಂಚಾಂಗ ಶ್ರವಣ ಮಾಡಬೇಕು. ಸಾಮಾನ್ಯವಾಗಿ ಬೆಳಿಗ್ಗೆ ಪೂಜೆ ಮುಗಿಸಿ ಪಂಚಾಂಗ ಶ್ರವಣ ಮಾಡುತ್ತಾರೆ. ಸಾರ್ವಜನಿಕವಾಗಿ ಯುಗಾದಿಯ ಸಂಜೆ ಹೊತ್ತು ದೇವಸ್ಥಾನಗಳಲ್ಲಿ ಪಂಚಾಂಗ ಶ್ರವಣ ಏಪರ್ಡಿಸಿರುತ್ತಾರೆ. ಅಲ್ಲೂ ಕುಳಿತು ಪಂಚಾಂಗ ಶ್ರವಣ ಮಾಡಬಹುದು. ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಮನೆಗಳಲ್ಲೂ, ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳೂ, ಪಂಚಾಂಗ ಶ್ರವಣವೂ ನಡೆಯುತ್ತದೆ. ಮಹಾರಾಷ್ಟ್ರದಲ್ಲಿ ಈ ದಿನವನ್ನು ಗುಡಿ ಪಾಡ್ವಾ ಎಂದೂ, ಪಂಜಾಬ್‌ನಲ್ಲಿ ಬೈಸಾಖಿ ಎಂದೂ, ಸಿಂಧಿಗಳಲ್ಲಿ ಚೈತಿ ಚಂದ್ ಎಂದೂ ಆಚರಿಸುತ್ತಾರೆ.
