ಯುಗಾದಿ ರಾಜ್ಯ ಭವಿಷ್ಯ: ರಾಜಕೀಯ ಅಸ್ಥಿರತೆ, ರೈತರಿಗೆ ಸಂಕಷ್ಟ, ಮಾಧ್ಯಮದಿಂದ ಸಂಚಲನ; ಶ್ರೀ ವಿಶ್ವಾವಸು ಸಂವತ್ಸರದ ಕರ್ನಾಟಕ ಭವಿಷ್ಯ
Yugadi Yearly Predictions: ಪ್ರಕೃತಿ ವಿಕೋಪಗಳು ಸಂಭವಿಸಲಿವೆ. ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಮೂಹ ಮಾಧ್ಯಮಗಳು ದೇಶವೇ ಪ್ರಶಂಸಿಸುವ ಕೆಲಸವನ್ನು ಮಾಡುತ್ತವೆ. (ಬರಹ: ಸತೀಶ್ ಎಚ್.)

ಕರ್ನಾಟಕದ ಯುಗಾದಿ ವರ್ಷ ಭವಿಷ್ಯ: ಶ್ರೀ ವಿಶ್ವಾವಸು ನಾಮ ಸಂವತ್ಸರದಲ್ಲಿ ಕರ್ನಾಟಕದ ರಾಜಕೀಯದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಉಂಟಾಗಲಿವೆ ಎನ್ನುವ ಸೂಚನೆ ಸಿಗುತ್ತಿದೆ. ಕರ್ನಾಟಕ ರಾಜ್ಯದ ವರ್ಷ ಭವಿಷ್ಯ ಬರೆಯುವ ಉದ್ದೇಶದಿಂದ ನವೆಂಬರ್ 1ನೇ ತಾರೀಖು, ಬೆಳಿಗ್ಗೆ 10:30 ನ್ನು ವೇಳೆಯಾಗಿ ಪರಿಗಣಿಸಲಾಗಿದೆ. ಲಗ್ನ ದೊರೆಯದ ಕಾರಣ ಚಂದ್ರನಿರುವ ರಾಶಿಯನ್ನು ಪರಿಗಣಿಸಿದ್ದೇನೆ. ಹೀಗೆ ಮಾಡುವುದರಿಂದ ದಶಾಭುಕ್ತಿಯ ಲೆಕ್ಕಾಚಾರದಲ್ಲಿ ಕೇವಲ ಒಂದು ಅಥವಾ ಎರಡು ದಿನಗಳ ವ್ಯತ್ಯಾಸವಾಗುತ್ತದೆ. ಇದರಲ್ಲಿಯೂ ಚಂದ್ರಕಲಾನಾಡಿಯ ಸಹಾಯ ಪಡೆಯಲಾಗಿದೆ.
ಈ ವರ್ಷ ಯಾವುದೇ ರಾಜಕೀಯ ಪಕ್ಷದಲ್ಲಿ ಒಗ್ಗಟ್ಟು ಇರುವುದಿಲ್ಲ. ಹಿರಿಯ ನಾಯಕರ ಕೆಲವೊಂದು ತಪ್ಪು ನಿರ್ಧಾರಗಳು ದೊಡ್ಡಮಟ್ಟದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಿರಿಯ ರಾಜಕಾರಣಿಯೊಬ್ಬರ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ಖರ್ಚುವೆಚ್ಚಗಳು ನಿಯಂತ್ರಿಸಲು ಸಾಧ್ಯವಾಗದ ಮಟ್ಟಕ್ಕೆ ತಲುಪುತ್ತವೆ. ಇದರಿಂದಾಗಿ ನಿತ್ಯ ಜೀವನದಲ್ಲಿ ಬಳಸುವ ಪದಾರ್ಥಗಳ ಬೆಲೆಯು ಪದೇಪದೇ ಹೆಚ್ಚಾಗುತ್ತದೆ. ಕಾನೂನು ಸುವ್ಯಸ್ಥೆಯು ನಿರೀಕ್ಷಿಸಿದ ಮಟ್ಟದಲ್ಲಿ ಇರುವುದಿಲ್ಲ. ಅಪರಾಧಗಳು ಹೆಚ್ಚಾಗದಿದ್ದರೂ ಜನಸಾಮಾನ್ಯರಲ್ಲಿ ಭಯದ ವಾತಾವರಣ ಇರುತ್ತದೆ.
ರಾಜಕೀಯ ರಂಗದಲ್ಲಿ ಯುವಕರ ಪಾತ್ರವು ವಿಶೇಷವಾಗಿರುತ್ತದೆ. ಆರಂಭ ಮಾಡುವ ಯೋಜನೆ ಮತ್ತು ಯೋಚನೆಗಳು ಕಾರ್ಯಗತಗೊಳ್ಳುವುದಿಲ್ಲ. ಸಾರ್ವಜನಿಕ ಸಮಾರಂಭಗಳಿಂದ ಗಣ್ಯ ವ್ಯಕ್ತಿಗಳು ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ರಾಜಕೀಯ ವಲಯದಲ್ಲಿ ಪರಸ್ಪರ ಉತ್ತಮ ಸೌಹಾರ್ದತೆ ಇರುವುದಿಲ್ಲ. ಅಧಿಕಾರಕ್ಕಾಗಿ ಹಿರಿ ಮತ್ತು ಕಿರಿಯ ವಯಸ್ಸಿನ ವ್ಯಕ್ತಿಗಳ ನಡುವೆ ಅನಾರೋಗ್ಯಕರ ಸ್ಪರ್ಧೆ ಉಂಟಾಗುತ್ತದೆ. ವಿದ್ಯಾಭ್ಯಾಸದ ಮಟ್ಟವು ಕುಸಿಯುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಪ್ರಕೃತಿ ವಿಕೋಪ ಉಂಟಾಗುತ್ತದೆ. ವಿದೇಶಿ ಸಂಸ್ಥೆಗಳು ನಿರುದ್ಯೋಗ ಸಮಸ್ಯೆಯು ಕಡಿಮೆಯಾಗಲು ಪರೋಕ್ಷವಾಗಿ ಸಹಕಾರಿಯಾಗುತ್ತವೆ. ಬಹುದಿನ ಕಾದರೂ ಕೆಲವರಿಗೆ ಅಧಿಕಾರ ದೊರೆಯುವುದಿಲ್ಲ. ಹಿರಿಯ ನಾಯಕರಿಗೆ ಅನಾವಶ್ಯಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದಾಗಿ ಕರ್ನಾಟಕದ ರಾಜಕೀಯ ಪರಿಸ್ಥಿತಿಯು ಡೋಲಾಯಮಾನವಾಗುತ್ತದೆ.
ರಾಜಕೀಯದಲ್ಲಿ ಡೋಲಾಯಮಾನ ಪರಿಸ್ಥಿತಿ
ಚರ್ಮಕ್ಕೆ ಸಂಬಂಧಿಸಿದಂತೆ ಅನಾರೋಗ್ಯವು ಜನರನ್ನು ಬಾಧಿಸುತ್ತದೆ. ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಉತ್ತಮ ಸಂಬಂಧ ಬೆಳೆಯುವುದಿಲ್ಲ. ಅತಿ ಅವಶ್ಯಕವಾದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ರಾಜಕೀಯ ವಲಯದ ಮಿತ್ರಪಕ್ಷಗಳಲ್ಲಿ ನಂಬಿಕೆ ಕಡಿಮೆಯಾಗುತ್ತದೆ. ಪ್ರಭಾವಿ ವ್ಯಕ್ತಿಗಳು ರಾಜಕೀಯ ವಲಯದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೂ ನನಸಾಗುವ ಸಾಧ್ಯತೆ ಕಡಿಮೆ. ಆಡಳಿತ ಪಕ್ಷಕ್ಕೆ ತಮ್ಮದೇ ಪಕ್ಷದವರ ಜೊತೆಗೂಡಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಮೂಹ ಮಾಧ್ಯಮಗಳು ದೇಶವೇ ಪ್ರಶಂಸಿಸುವ ಕೆಲಸವನ್ನು ಮಾಡುತ್ತವೆ.
ಸಾರ್ವಜನಿಕ ಸೇವೆಯಲ್ಲಿರುವ ಹಿರಿಯರೊಬ್ಬರು ನಮ್ಮಿಂದ ದೂರವಾಗುವ ಸಾಧ್ಯತೆಗಳಿವೆ. ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಆತಂಕದ ಪರಿಸ್ಥಿತಿ ಎದುರಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡು ಬರುವುದಿಲ್ಲ. ರೈತರು ಮತ್ತೊಮ್ಮೆ ಕಷ್ಟಕ್ಕೆ ಸಿಲುಕುತ್ತಾರೆ. ಹಣದ ವಿಚಾರದಲ್ಲಿ ಜನಸಾಮಾನ್ಯರು ಮೋಸ ಹೋಗುವ ಸಾಧ್ಯತೆ ಕಡಿಮೆ. ನೆರೆಹೊರೆಯ ರಾಜ್ಯದ ಜೊತೆ ಉತ್ತಮ ಅನುಬಂಧ ಸಾಧಿಸಲು ಭಾಗಶಃ ಸಾಧ್ಯವಾಗುತ್ತದೆ. ಹಾಲು, ಮೊಸರಿನಂತಹ ಹೈನು ಪದಾರ್ಥಗಳು ಮತ್ತು ಹೈನು ಉತ್ಪನ್ನಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಹೊರ ರಾಜ್ಯದ ವ್ಯಾಪಾರಸ್ಥರು ನಮ್ಮ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಲಿದ್ದಾರೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೊಡ್ಡಮಟ್ಟದ ಕಾರ್ಯಕ್ರಮವು ಆಯೋಜಿತವಾಗಲಿದೆ.
ಕಾನೂನು ಸುವ್ಯವಸ್ಥೆಯ ಮೇಲೆ ಕಾರ್ಮೋಡ
ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾದ ಯೋಜನೆಗಳು ರೂಪುಗೊಳ್ಳಲಿವೆ. ದೊಡ್ಡ ಬಂಡವಾಳದ ವ್ಯಾಪಾರಸ್ಥರು ನಷ್ಟವನ್ನು ಅನುಭವಿಸಲಿದ್ದಾರೆ. ಜನಸಾಮಾನ್ಯರು ಹಿಂದಿನ ಕಾಲದ ಜೀವನಶೈಲಿಗೆ ಮಾರುಹೋಗುತ್ತಾರೆ. ಬೀದಿ ವ್ಯಾಪಾರಸ್ಥರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಶೃಂಗಾರ ಸಾಧನೆಗಳ ತಯಾರಿಕೆ ಮತ್ತು ಮಾರಾಟದಲ್ಲಿ ಹೆಚ್ಚಿನ ಲಾಭವಿರುತ್ತದೆ. ಹೋಟೆಲ್ ಉದ್ಯಮಕ್ಕೆ ಹಿನ್ನೆಡೆ ಉಂಟಾಗುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಂಡುಬಂದರೂ ನಿರೀಕ್ಷಿತ ವರಮಾನ ಕಂಡುಬರುವುದಿಲ್ಲ. ಖಾಸಗಿ ನರ್ಸಿಂಗ್ ಹೋಂಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಸರ್ಕಾರಿ ಆಸ್ಪತ್ರೆಗಳು ನವೀಕರಣಗೊಳ್ಳಲಿದೆ. ಕೇಂದ್ರ ಸರ್ಕಾರದ ಅನುಕಂಪ ರಾಜ್ಯಕ್ಕೆ ದೊರೆಯುವ ಸಾಧ್ಯತೆ ಕಡಿಮೆ. ಮನರಂಜನಾ ಮಾಧ್ಯಮವು ಕಷ್ಟಕ್ಕೆ ಸಿಲುಕಲಿದೆ. ಕಾನೂನು ಸುವ್ಯವಸ್ಥೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಅಸಾಧ್ಯವಾಗುತ್ತದೆ. ಮೇ ಮತ್ತು ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಮಹತ್ವ ಪೂರ್ಣ ಬದಲಾವಣೆಗಳು ಉಂಟಾಗಲಿವೆ.
ಬರಹ: ಸತೀಶ್ ಎಚ್.
(ಗಮನಿಸಿ: ಈ ಬರಹವು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದೆ. ಈ ಬರಹವನ್ನು ದೃಗ್ಗಣಿತ ರೀತ್ಯಾ ವೃತ್ತಿಪರ ಜ್ಯೋತಿಷ್ಯರೇ ಬರೆದಿದ್ದಾರೆ. ಯಾವುದೇ ಅನುಮಾನಗಳಿದ್ದಲ್ಲಿ ತಮ್ಮ ಗುರುಗಳು ಹಾಗೂ ಹಿರಿಯರ ಮಾರ್ಗದರ್ಶನವನ್ನು ಓದುಗರು ಪಡೆದುಕೊಳ್ಳಬೇಕು)
