ಕನ್ನಡ ಸುದ್ದಿ  /  Astrology  /  Ugadi Amavasya 2023 To Get Rid Of Pitru And Kalsarp Defects, Do These Special Measures On Chaitra Amavasya, Sorrows And Pains Will Go Away

Ugadi Amavasya 2023: ಇಂದು ಯುಗಾದಿ ಅಮಾವಾಸ್ಯೆ; ಜಾತಕದಲ್ಲಿ ಕಾಳಸರ್ಪ ದೋಷ, ಪಿತೃ ದೋಷ ಇರುವಂಥವರಿಗೆ ವಿಶೇಷ ದಿನ ಇದು

Ugadi Amavasya 2023: ಈ ದಿನ ಅಮಾವಾಸ್ಯೆ. ಇದನ್ನು ಚೈತ್ರ ಅಮಾವಾಸ್ಯೆ/ ಯುಗಾದಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಹಿಂದು ಧರ್ಮದಲ್ಲಿ ಚೈತ್ರ ಅಮಾವಾಸ್ಯೆಗೆ ಬಹಳ ಮಹತ್ವ ಇದೆ. ಪಿತೃ ಮತ್ತು ಕಾಳಸರ್ಪ ದೋಷ ಇರುವಂಥವರು ಈ ದಿನ ಕೆಲವು ದೋಷ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ, ಧಾರ್ಮಿಕ ಪರಿಣತರು ಸಲಹೆ ನೀಡುತ್ತಾರೆ.

ಇಂದು ಅಮಾವಾಸ್ಯೆ (ಸಾಂಕೇತಿಕ ಚಿತ್ರ)
ಇಂದು ಅಮಾವಾಸ್ಯೆ (ಸಾಂಕೇತಿಕ ಚಿತ್ರ) (unsplash)

ಹಿಂದು ಧರ್ಮದ ಕ್ಯಾಲೆಂಡರ್‌ ಪ್ರಕಾರ ನಾಳೆಯಿಂದ ಹೊಸ ವರ್ಷ. ನಾಳೆ ವರ್ಷದ ಮೊದಲ ದಿನ - ಯುಗಾದಿ. ಈ ಯುಗಾದಿ ಹಬ್ಬದ ಮುನ್ನಾ ದಿನ ಅಂದರೆ ಇಂದು ಮಾರ್ಚ್‌ 21ರಂದು ಅಮಾವಾಸ್ಯೆ ಬಂದಿದೆ. ಈ ಅಮಾವಾಸ್ಯೆಗೆ ಚೈತ್ರ ಅಮಾವಾಸ್ಯೆ, ಯುಗಾದಿ ಅಮಾವಾಸ್ಯೆ, ಫಾಲ್ಗುಣ ಅಮಾವಾಸ್ಯೆ, ಭೌಮಾವತಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

ಹಿಂದು ಧಾರ್ಮಿಕ ವಿಧಿ-ವಿಧಾನಗಳ ಅನುಸರಣೆಯಲ್ಲಿ ಈ ಅಮಾವಾಸ್ಯೆಗೆ ಹೆಚ್ಚಿನ ಮಹತ್ವ ಇದೆ. ಪಿತೃ ದೋಷ, ಕಾಳಸರ್ಪ ದೋಷ ಇರುವಂಥವರು ಅನುಸರಿಸಬೇಕಾದ ಕೆಲವೊಂದು ದೋಷ ಪರಿಹಾರ ಕ್ರಮವನ್ನು ಇದೇ ಅಮಾವಾಸ್ಯೆ ದಿನ ನೆರವೇರಿಸುವಂತೆ ಧರ್ಮ-ಕರ್ಮ ಮತ್ತು ಜ್ಯೋತಿಷ್ಯ ಪರಿಣತರು ಸಲಹೆ ನೀಡುವುದುಂಟು.

ಕಾಳಸರ್ಪ ದೋಷ ಮತ್ತು ಪರಿಹಾರ

ಹಿಂದು ಧರ್ಮದಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಎಲ್ಲ ಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಬಂದಾಗ, ಕಾಳಸರ್ಪ ದೋಷವು ರೂಪುಗೊಳ್ಳುತ್ತದೆ. ಕಾಳಸರ್ಪ ದೋಷದಿಂದಾಗಿ, ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಾನಾ ರೀತಿಯ ಸಮಸ್ಯೆಗಳನ್ನು, ಜೀವನ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಈ ದೋಷವನ್ನು ಹೋಗಲಾಡಿಸಲು ಅಮಾವಾಸ್ಯೆಯ ಶುಭ ದಿನದಂದು ಶಿವನ ಆರಾಧನೆಯನ್ನು ಮಾಡಬೇಕು. ಈ ದಿನ ಮಹಾದೇವನಿಗೆ ಹಾಲು, ಗಂಗಾಜಲ ಇತ್ಯಾದಿಗಳಿಂದ ಅಭಿಷೇಕ ಮಾಡಿ. ಶಂಕರನಿಗೆ ನೈವೇದ್ಯವನ್ನು ಅರ್ಪಿಸಿ ಮತ್ತು ಆರತಿ ಮಾಡಿ ಪೂಜೆ ನೆರವೇರಿಸಬೇಕು. ಶಿವನ ಆರಾಧನೆಯಿಂದ ಕಾಳಸರ್ಪ ದೋಷದಿಂದ ಮುಕ್ತಿ ಪಡೆಯಬಹುದು.

ಪಿತೃದೋಷ ಮತ್ತು ಪರಿಹಾರ

ಜ್ಯೋತಿಷ್ಯ ಶಾಸ್ತ್ರ ಪರಿಣತರು ಹೇಳುವ ಪ್ರಕಾರ, ವ್ಯಕ್ತಿಯ ಜಾತಕದ ಎರಡು, ನಾಲ್ಕನೇ, ಐದನೇ, ಏಳನೇ, ಒಂಬತ್ತನೇ ಮತ್ತು ಹತ್ತನೇ ಮನೆಗಳಲ್ಲಿ ಸೂರ್ಯ, ರಾಹು ಅಥವಾ ಶನಿಯ ಸಂಯೋಗವು ಉಂಟಾದರೆ, ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗೆ ಪಿತೃದೋಷ ಉಂಟಾಗಿದೆ ಎಂದು ಅರ್ಥ. ಇದರೊಂದಿಗೆ, ರಾಹು ಲಗ್ನದಲ್ಲಿರುವಾಗ, ಲಗ್ನದ ಅಧಿಪತಿ ಆರನೇ, ಎಂಟನೇ, ಹನ್ನೆರಡನೇ ಮನೆಯಲ್ಲಿರುತ್ತಾನೆ. ಆಗ ಪಿತೃದೋಷ ಕಂಡುಬರುತ್ತದೆ. ತುಲಾ ರಾಶಿಯಲ್ಲಿ ಸೂರ್ಯ ಈ ದೋಷದ ಪರಿಣಾಮವು ಉಳಿದುಕೊಂಡಾಗ ಅಥವಾ ರಾಹು ಅಥವಾ ಶನಿಯ ಜತೆಯಲ್ಲಿದ್ದಾಗ ಈ ದೋಷದ ಪರಿಣಾಮ ಹೆಚ್ಚಾಗುತ್ತದೆ.

ಪಿತೃದೋಷದಿಂದಾಗಿ, ವ್ಯಕ್ತಿಯ ಜೀವನವು ತೊಂದರೆಗಳಿಂದ ತುಂಬಿರುತ್ತದೆ. ಈ ದೋಷವನ್ನು ಹೋಗಲಾಡಿಸಲು ಚೈತ್ರ ಅಮಾವಾಸ್ಯೆಯ ದಿನ ಪಿತೃಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕು. ಪಿತೃಗಳನ್ನು ಸ್ಮರಿಸಿ ಅವರ ಬಳಿ ತಪ್ಪುಗಳಿಗೆ ಕ್ಷಮೆ ಯಾಚಿಸುವ ಮೂಲಕ ಪಿಂಡದಾನ ಮಾಡಬೇಕು.

ಅಮಾವಾಸ್ಯೆ ಮಹೂರ್ತ

ಚೈತ್ರ, ಕೃಷ್ಣ ಅಮಾವಾಸ್ಯೆ ಆರಂಭ ಮಾರ್ಚ್‌ 21 - 01:47 AM

ಚೈತ್ರ, ಕೃಷ್ಣ ಅಮಾವಾಸ್ಯೆ ಕೊನೆಗೊಳ್ಳುವುದು ಮಾರ್ಚ್‌ 21 - 10:52 PM

ಅಮಾವಾಸ್ಯೆ ದಿನ ಏನು ಮಾಡಬೇಕು?

  • ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ಈ ದಿನ ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಿದರೆ ಅದಕ್ಕೆ ಇರುವಂತಹ ಮಹತ್ವ ಅಪಾರವಾದುದು.
  • ಮನೆಯಲ್ಲೇ ಇರುವುದಾದರೆ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನವನ್ನೂ ಮಾಡಬಹುದು.
  • ಸ್ನಾನದ ನಂತರ ದೇವರಕೋಣೆಯಲ್ಲಿ ದೀಪವನ್ನು ಹಚ್ಚಿ. ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ.
  • ಉಪವಾಸ ಮಾಡಿ ವ್ರತಾಚರಣೆ ಮಾಡುವವರಾದರೆ, ಈ ದಿನ ಉಪವಾಸ ಮಾಡಬಹುದು.
  • ಈ ದಿನ ಪಿತೃಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬೇಕು. ಶ್ರಾದ್ಧ ಮುಂತಾದ ಕಾರ್ಯ ನೆರವೇರಿಸಬಹುದು. ಪಿತೃಗಳ ಹೆಸರಿನಲ್ಲಿ ದಾನ ಧರ್ಮಾದಿ ಕರ್ಮಗಳನ್ನು ಮಾಡಬಹುದು.
  • ಈ ಶುಭ ದಿನದಂದು ಕಾಳಸರ್ಪ ದೋಷ ಇರುವಂಥವರು ಶಿವನ ಆರಾಧನೆ ಮಾಡಿದರ ಶುಭಫಲ.
  • ಪಿತೃದೋಷ ಇರುವಂಥವರು ಭಗವಾನ್‌ ಮಹಾವಿಷ್ಣುವನ್ನು ಆರಾಧಿಸಿದರೆ ಶುಭಫಲ. ಈ ಮಂಗಳಕರ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ.

ವಿಭಾಗ