ಅಮೆರಿಕಕ್ಕೆ ಈ ವರ್ಷ ಮತ್ತಷ್ಟು ಹಿನ್ನಡೆ, ನಾಯಕತ್ವವೇ ಇಲ್ಲದ ವಿಶ್ವದಲ್ಲಿ ಬಣಗಳ ಆಟಾಟೋಪ: ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಮೆರಿಕಕ್ಕೆ ಈ ವರ್ಷ ಮತ್ತಷ್ಟು ಹಿನ್ನಡೆ, ನಾಯಕತ್ವವೇ ಇಲ್ಲದ ವಿಶ್ವದಲ್ಲಿ ಬಣಗಳ ಆಟಾಟೋಪ: ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ

ಅಮೆರಿಕಕ್ಕೆ ಈ ವರ್ಷ ಮತ್ತಷ್ಟು ಹಿನ್ನಡೆ, ನಾಯಕತ್ವವೇ ಇಲ್ಲದ ವಿಶ್ವದಲ್ಲಿ ಬಣಗಳ ಆಟಾಟೋಪ: ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ

Yugadi Yearly Predictions: ಅಮೆರಿಕದಂಥ ದೇಶಗಳು ತಮ್ಮದೇ ಆದ ತಪ್ಪಿಗೆ ಹಿನ್ನಡೆ ಅನುಭವಿಸುತ್ತವೆ. ನಾಯಕರಲ್ಲಿ ನಾಯಕತ್ವದ ಗುಣವೂ ಮರೆಯಾಗುವ ಕಾರಣ ವಿಶ್ವವನ್ನು ಮುನ್ನಡೆಸುವ ನೇತಾರ ಇಲ್ಲದಂತಾಗುತ್ತದೆ. ಸಣ್ಣಪುಟ್ಟ ಹೋರಾಟಗಳು ವಿಶ್ವದ ನೆಮ್ಮದಿಯನ್ನು ಕಡಿಮೆ ಮಾಡುತ್ತವೆ.

ಶ್ರೀ ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ.
ಶ್ರೀ ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ.

ಯುಗಾದಿ ವಿಶ್ವ ಭವಿಷ್ಯ: ಪ್ರಿ ಓದುಗರೇ, ಶ್ರೀ ವಿಶ್ವಾವಸು ಸಂವತ್ಸರದ ಪ್ರಪಂಚದ ಭವಿಷ್ಯದ ಬಗ್ಗೆ ಬರೆಯುವ ವೇಳೆ ಒಂದು ಮಗುವಿನ ಮೂಲಕ ಕವಡೆಯನ್ನು ಹಾಕಿಸುವ ಮೂಲಕ ಲಗ್ನವನ್ನು ಪರಿಗಣಿಸಿದ್ದೇನೆ. ಇದರಲ್ಲಿಯೂ ದಶಾಭುಕ್ತಿಯನ್ನು ಮುಖ್ಯವಾಗಿ ಗಮನಿಸಿದ್ದೇನೆ. ಇಲ್ಲಿ ಗ್ರಹಗಳ ಸಂಯೋಗ ಮತ್ತು ಪರಸ್ಪರ ದೃಷ್ಟಿಯನ್ನು ಆಧರಿಸಿ ಭವಿಷ್ಯದ ಆಗುಹೋಗುಗಳನ್ನು ಲೆಕ್ಕ ಹಾಕಿದ್ದೇನೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಸೂರ್ಯನ ಪ್ರಭಾವವು ಅಧಿಕವಾಗಿರುತ್ತದೆ. ಚಂದ್ರ ಮತ್ತು ಬುಧ ಗ್ರಹಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಡೀ ಜಗತ್ತಿನಲ್ಲಿ ಕ್ರಮೇಣವಾಗಿ ಆತ್ಮೀಯತೆ ಮತ್ತು ಪ್ರೀತಿ-ವಿಶ್ವಾಸ ಕಡಿಮೆಯಾಗುತ್ತದೆ. ಒಂದು ದೇಶವು ಮತ್ತೊಂದು ದೇಶವನ್ನು ನಂಬಲು ಸಾಧ್ಯವಾಗದಂತಹ ಪರಿಸ್ಥಿತಿಯು ನಿರ್ಮಿತವಾಗುತ್ತದೆ. ಮುಂದುವರಿದ ದೇಶಗಳು ತಮ್ಮ ಸ್ವಂತ ವಿಚಾರಗಳು ಮತ್ತು ನಿರ್ಧಾರಗಳಿಗೆ ಆದ್ಯತೆ ನೀಡುತ್ತವೆ. ಈ ಕಾರಣದಿಂದ ವಿಶ್ವದಲ್ಲಿ ಸಣ್ಣಪುಟ್ಟ ಬಣಗಳು ಹುಟ್ಟಿಕೊಳ್ಳುತ್ತವೆ.

ಅಮೆರಿಕದಂಥ ದೇಶಗಳು ತಮ್ಮದೇ ಆದ ತಪ್ಪಿಗೆ ಹಿನ್ನಡೆಯನ್ನು ಅನುಭವಿಸುತ್ತವೆ. ವಿಶ್ವದ ನಾಯಕರಲ್ಲಿ ನಾಯಕತ್ವದ ಗುಣವೂ ಮರೆಯಾಗುವ ಕಾರಣ ವಿಶ್ವವನ್ನು ಮುನ್ನಡೆಸುವ ನೇತಾರ ಇಲ್ಲದಾಗುತ್ತದೆ. ಸಣ್ಣಪುಟ್ಟ ವಿವಾದಗಳನ್ನು ದೊಡ್ಡದಾಗಿ ಮಾಡುವ ಕಾರಣ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಯುದ್ಧದ ಭಯ ಕಡಿಮೆಯಾಗುತ್ತದೆ. ಸಣ್ಣಪುಟ್ಟ ಹೋರಾಟಗಳು ವಿಶ್ವದ ನೆಮ್ಮದಿಯನ್ನು ಕಡಿಮೆ ಮಾಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕಠಿಣವಾದ ಕಾನೂನುಗಳು ಜಾರಿಗೆ ಬರಲಿವೆ.

ಸಂದಿಗ್ಧಕ್ಕೆ ಸಿಲುಕಲಿದೆ ವಿಶ್ವಸಂಸ್ಥೆ

ಎಲ್ಲ ದೇಶಗಳೂ ಪರಸ್ಪರ ಒಂದರ ಮೇಲೆ ಮತ್ತೊಂದು ಅವಲಂಬಿಸುವ ಸಮಯ ಬರಲಿದೆ. ವಿಶ್ವಸಂಸ್ಥೆಯಂಥ ಜಾಗತಿಕ ಸಂಸ್ಥೆಗಳು ಸಂದಿಗ್ದಕ್ಕೆ ಸಿಲುಕಲಿವೆ. ಅಂಥ ಸಂಸ್ಥೆಗಳಿಗೆ ಕೆಲವೊಂದು ವಿಚಾರಗಳಲ್ಲಿ ಸ್ವತಂತ್ರವಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮುಂದುವರಿದ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗುತ್ತವೆ.

ಅವಸಾನದ ಹಂತದಲ್ಲಿರುವ ಸಣ್ಣ ರಾಷ್ಟ್ರವೊಂದು ಮತ್ತೊಮ್ಮೆ ಕ್ರಮೇಣವಾಗಿ ಮೊದಲಿನ ಸ್ಥಿತಿಗೆ ಬರಲಿದೆ. ರಷ್ಯಾ ದೇಶವು ಅಸಹಾಯಕ ಪರಿಸ್ಥಿತಿಯನ್ನು ಎದುರಿಸಲಿದೆ. ಕೃಷಿ ಆಧರಿತ ದೇಶಗಳು ವಿಶ್ವದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುತ್ತವೆ. ಲೋಹಗಳನ್ನು ರಪ್ತು ಮಾಡುವ ದೇಶಗಳು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುತ್ತದೆ. ಸಿದ್ಧಪಡಿಸಿದ ಉಡುಪುಗಳ ವ್ಯಾಪಾರದಲ್ಲಿ ಬರುವ ಲಾಭವು ಹಂಚಿಹೋಗುತ್ತದೆ. ಇದರಿಂದ ಬಟ್ಟೆಯ ಉದ್ಯಮವು ಕಷ್ಟಕ್ಕೆ ಸಿಲುಕಲಿದೆ. ಬೇರೆ ದೇಶವನ್ನು ಅವಲಂಬಿಸಿರುವ ದೇಶಗಳು ಆತಂಕಕ್ಕೆ ಒಳಗಾಗುತ್ತವೆ.

ಅಲಂಕಾರಕ್ಕೆ ಸಂಬಂಧಿಸಿದ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗಿರುವ ದೇಶಗಳು ಉತ್ತಮ ಆದಾಯ ಗಳಿಸುತ್ತವೆ. ಮುಂದುವರಿಯುತ್ತಿರುವ ರಾಷ್ಟ್ರಗಳು ರಕ್ಷಣಾ ಪರಿಕರಗಳನ್ನು ಕೊಳ್ಳಲು ದಿನನಿತ್ಯದ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತವೆ.

ಧರ್ಮದ ಹೆಸರಿನಲ್ಲಿ ಆಂತರಿಕ ಜಗಳ

ಧಾರ್ಮಿಕ ತಳಹದಿಯಲ್ಲಿ ಇರುವ ದೇಶಗಳು ಆಂತರಿಕ ಜಗಳಗಳಿಗೆ ಬಲಿಯಾಗುತ್ತವೆ. ದಿಢೀರ್ ಆದೇಶಗಳ ನಾಯಕತ್ವವು ಬದಲಾಗಲಿವೆ. ಜಾಗತಿಕ ಮಟ್ಟದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತದೆ. ಸಣ್ಣಪುಟ್ಟ ದೇಶಗಳ ಹಣಕಾಸಿನ ಪರಿಸ್ಥಿತಿಯು ಕೆಳಮಟ್ಟವನ್ನು ತಲುಪುತ್ತದೆ. ಇದರಿಂದಾಗಿ ಅಪರಾಧಗಳು ಎಲ್ಲೆ ಮೀರುವ ಸಾಧ್ಯತೆಗಳಿವೆ.

ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಜನಾಂಗೀಯ ದ್ವೇಷವು ಹೆಚ್ಚಲಿದೆ. ಪಾಶ್ಚಿಮತ್ಯ ದೇಶಗಳಲ್ಲಿ ದೊರೆಯುವ ಉದ್ಯೋಗಗಳು ವಿದೇಶಿ ಅಭ್ಯರ್ಥಿಗಳ ಪಾಲಾಗುತ್ತವೆ. ಸ್ಟಾಕ್ ಮತ್ತು ಷೇರು ವ್ಯವಹಾರದಲ್ಲಿ ನಿಗದಿತ ಆದಾಯ ಇರುವುದಿಲ್ಲ. ಇದರಿಂದಾಗಿ ಬಂಡವಾಳವೇ ಒಂದು ದೊಡ್ಡ ಸವಾಲಾಗುತ್ತದೆ. ಸಣ್ಣಪುಟ್ಟ ಕಂಪನಿಗಳು ಒಂದುಗೂಡಲಿವೆ.

ಮರುಕಳಿಸುವ ಕೆಲ ಹಳೆಯ ರೋಗಗಳು ಪ್ರಪಂಚವನ್ನು ಆತಂಕದ ಪರಿಸ್ಥಿತಿಗೆ ದೂಡುತ್ತವೆ. ಚೀನದಂತಹ ಮುಂದುವರಿದ ದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಲಿವೆ. ತನ್ನ ತಪ್ಪು ನಿರ್ಧಾರಗಳಿಂದ ಚೀನಾ, ರಷ್ಯಾ ಮತ್ತು ಅಮೆರಿಕ ದೇಶಗಳು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತವೆ. ಜನಸಾಮಾನ್ಯರ ಜೀವನವು ದುಸ್ತರವಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ದಿನನಿತ್ಯದ ಪದಾರ್ಥಗಳ ಬೆಲೆ ಗಗನ ಮುಟ್ಟಲಿವೆ. ವಿಶ್ವದ ಮಹಿಳಾ ನಾಯಕರು ಅಧಿಕಾರ ತ್ಯಾಗ ಮಾಡುತ್ತಾರೆ. ವರ್ಷಾಂತ್ಯಕ್ಕೆ ಯುದ್ದದ ಭಯ ಮನೆಮಾಡುತ್ತದೆ. ಶಾಂತಿಯನ್ನು ಬಯಸುತ್ತಿದ್ದ ರಾಷ್ಟ್ರಗಳೂ ಸಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿವೆ. ಒಟ್ಟಾರೆ ಇಡೀ ವಿಶ್ವಾಸದಲ್ಲಿ ಶಾಂತಿ ನೆಮ್ಮದಿಯ ಕೊರತೆ ಕಂಡುಬರಲಿವೆ.

ಯುಗಾದಿ ಹಬ್ಬದ ಸಮಗ್ರ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.