ಉತ್ಪನ್ನ ಏಕಾದಶಿ ವ್ರತ ಮಾಡ್ತೀರಾ? ದಶಮಿ, ಏಕಾದಶಿ, ದ್ವಾದಶಿಯಂದು ಅನುಸರಿಸಬೇಕಾದ ನಿಯಮ, ಅನುಷ್ಠಾನಗಳಿವು
Utpanna Ekadashi 2024: ಇದೇ ಸೋಮವಾರ (ನವೆಂಬರ್ 25) ದಶಮಿ, ನಾಡಿದ್ದು (ನವೆಂಬರ್ 26) ಉತ್ಪನ್ನ ಏಕಾದಶಿ. ಅಂದ ಹಾಗೆ, ಈ ಸಲ ಉತ್ಪನ್ನ ಏಕಾದಶಿ ವ್ರತ ಮಾಡ್ತೀರಾ? ದಶಮಿ, ಏಕಾದಶಿ, ದ್ವಾದಶಿಯಂದು ಅನುಸರಿಸಬೇಕಾದ ನಿಯಮ, ಅನುಷ್ಠಾನಗಳಿವು.
Utpanna Ekadashi 2024: ಹಿಂದೂ ಧರ್ಮದಲ್ಲಿ ಉತ್ಪನ್ನ ಏಕಾದಶಿ ವ್ರತಾಚರಣೆಗೆ ಬಹಳ ಮಹತ್ವ ಇದೆ. ಚಂದ್ರಮಾನ ಪ್ರಕಾರ ಮಾರ್ಗಶಿರ ಮಾಸದ 11ನೇ ದಿನವೇ ಉತ್ಪನ್ನ ಏಕಾದಶಿ. ಈ ದಿನ ಮಹಾ ವಿಷ್ಣುವನ್ನು ಆರಾಧಿಸುವ, ಪೂಜಿಸುವ ಮತ್ತು ಏಕಾದಶಿ ವ್ರತಾಚರಣೆ ಕೈಗೊಳ್ಳುವ ಮೂಲಕ ಭಗವಂತನ ಒಲವು ಗಳಿಸಲು ಭಕ್ತರು ಪ್ರಯತ್ನಿಸುತ್ತಾರೆ. ಆ ಮೂಲಕ ತಮ್ಮ ಸಮಸ್ಯೆ, ಸಂಕಷ್ಟ, ಪಾಪ ನಿವಾರಿಸಿ ಆಧ್ಯಾತ್ಮ ಬಲ ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಾರೆ. ಈ ಬಾರಿ ಉತ್ಪನ್ನ ಏಕಾದಶಿಯು 2024ರ ನವೆಂಬರ್ 26 ರಂದು ಆಚರಿಸಲ್ಪಡುತ್ತಿದೆ. ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಾಚರಣೆ ಅತ್ಯಂತ ಕಠಿಣವಾದುದು ಎಂದು ಪರಿಗಣಿಸಲ್ಪಟ್ಟಿದೆ. ಏಕಾದಶಿ ವ್ರತಾಚರಣೆಗೆ ಕೆಲವು ನಿಯಮ, ವ್ರತಾನುಷ್ಠಾನಗಳ ಅಗತ್ಯವಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ್ದು ಅವಶ್ಯ ಎನ್ನುತ್ತಾರೆ ತಿಳಿದವರು. ಅದರಲ್ಲೂ ಉತ್ಪನ್ನ ಏಕಾದಶಿ ವ್ರತಾಚರಣೆ ನಡೆಸುವುದಕ್ಕಾಗಿ ಶ್ರೀಮನ್ನಾರಾಯಣನ ಭಕ್ತರು ದಶಮಿ, ಏಕಾದಶಿ ಮತ್ತು ದ್ವಾದಶಿ ದಿನ ಕೆಲವು ನಿಯಮಗಳನ್ನು ಅನುಸರಿಸುತ್ತಾರೆ. ಅವುಗಳನ್ನು ತಿಳಿಯೋಣ.
ದಶಮಿ ದಿನ ಅನುಸರಿಸುವ ನಿಯಮಗಳಿವು
1) ದಶಮಿಯಂದು ಕಂಚಿನ ಪಾತ್ರೆಗಳಲ್ಲಿ ಆಹಾರ ಅಥವಾ ನೀರನ್ನು ಸೇವಿಸುವುದನ್ನು ತಪ್ಪಿಸಿ.
2) ಸುಲಭವಾಗಿ ಏಕಾದಶಿ ವ್ರತಾಚರಣೆ ಮಾಡುವ ಸಲುವಾಗಿ ದಶಮಿ ದಿನ ಆಹಾರದಲ್ಲಿ ಮಸೂರ್ ದಾಲ್ ಬಳಸಬೇಡಿ.
3) ಮಾಂಸ ಅಥವಾ ತಾಮಸ ಆಹಾರ/ ವಸ್ತುಗಳನ್ನು ಮುಟ್ಟುವುದರಿಂದ ಅಥವಾ ಸೇವಿಸುವುದರಿಂದ ದೂರವಿರಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತಾಮಸ ಆಹಾರವನ್ನೂ ಸೇವಿಸಬೇಡಿ.
4) ಏಕಾದಶಿ ದಿನ ಆರೋಗ್ಯ ಸರಿಯಾಗಿರಬೇಕಾದ ಕಾರಣ ದಶಮಿ ದಿನ ಚನಾ ಸೇವಿಸಬೇಡಿ.
5) ದಶಮಿಯಂದು ಕೊಡೋ ಅಥವಾ ವರಗು ಅನ್ನ, ಸಿರಿ ಧಾನ್ಯಗಳಲ್ಲಿ ಹಾರಕ ಅನ್ನವನ್ನು ಸೇವಿಸಬೇಡಿ.
6) ದಶಮಿಯಂದು ಸೊಪ್ಪು ಅಥವಾ ಆ ರೀತಿ ತರಕಾರಿಗಳನ್ನು ಆಹಾರದಲ್ಲಿ ಬಳಸಬೇಡಿ
7) ಜೇನುತುಪ್ಪ ಬಳಸಬೇಡಿ. ಇತರರು ಕೊಡುವ ಆಹಾರ, ಹೊರಗಿನ ಆಹಾರ ಸೇವಿಸಬೇಡಿ. ಒಂದೇ ಹೊತ್ತು ಊಟ ಮಾಡಿ. ಏಕಾದಶಿ ವ್ರತಾಚರಣೆಗೆ ಸಿದ್ಧರಾಗಿ.
ಏಕಾದಶಿ ದಿನ ಅನುಸರಿಸಬೇಕಾದ ನಿಯಮಗಳಿವು
1) ಏಕಾದಶಿ ದಿನ ಭಗವಂತನನ್ನು ಒಲಿಸುವ ಮತ್ತು ಆತ ಒಲಿಯುವ ದಿನವಾದ ಕಾರಣ, ಆ ದಿನ ಜೂಜು ಆಡುವುದಾಗಲೀ, ಅಂತಹ ಆಟಗಳನ್ನು ನೋಡುವುದಾಗಲೀ ಮಾಡಬಾರದು. ಆಕಸ್ಮಿಕವಾಗಿ ಕೂಡ ಅದರತ್ತ ಮನಸ್ಸು ಹೋಗದಂತೆ ನೋಡಿಕೊಳ್ಳಿ.
2) ಹಗಲು ಹೊತ್ತು ನಿದ್ದೆ ಮಾಡಬೇಡಿ. ಪಾನ್ ಅಥವಾ ಬೀಡಾ ತಿನ್ನಬೇಡಿ. ಮನಸ್ಸು, ಶರೀರವನ್ನು ಶುದ್ಧವಾಗಿರಿಸಿ. ಹರಿ ನಾಮಸ್ಮರಣೆ ಮಾಡುತ್ತ ಜಾಗೃತರಾಗಿರಿ.
3) ಇತರರನ್ನು ನೋಯಿಸಬೇಡಿ. ಕೆಟ್ಟ ಮಾತು ಆಡಬೇಡಿ. ವದಂತಿಗಳನ್ನು ಹರಡುವುದಾಗಲೀ, ಗಾಸಿಪ್ ಮಾತನಾಡುವುದಾಗಲೀ ಮಾಡಬೇಡಿ. ನಾರಾಯಣ ಸ್ಮರಣೆಯೊಂದೇ ಮನಸ್ಸಿನಲ್ಲಿರಲಿ. ಸಾಧ್ಯವಾದಷ್ಟೂ ಮೌನವಾಗಿರಿ.
4) ಅನ್ಯರ ಆಸ್ತಿಗೆ ಕನ್ನ ಹಾಕಬೇಡಿ. ಕೆಟ್ಟದ್ದು ಮಾಡುವ ಆಲೋಚನೆ ಮಾಡಬೇಡಿ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ಬದುಕಿ.
5) ಹಿಂಸೆಗಿಳಿಯಬೇಡಿ, ಯಾರನ್ನೂ ಪ್ರಚೋದಿಸಬೇಡಿ. ಕೋಪಗೊಳ್ಳಬೇಡಿ. ಸ್ವಯಂ ನಿಯಂತ್ರಣ ಇರಲಿ. ಸತ್ಯದ ದಾರಿ, ಪ್ರಮಾಣಿಕವಾಗಿರುವುದು ಬದುಕಿನ ಭಾಗವಾಗಲಿ.
ಬ್ರಾಹ್ಮಿ ಮುಹೂರ್ತಕ್ಕೆ (ಸೂರ್ಯೋದಯಕ್ಕೆ ಒಂದೂವರೆ ಗಂಟೆ ಮೊದಲು) ಮೊದಲು ಎದ್ದು ಸ್ನಾನ, ನಿತ್ಯ ಕರ್ಮಗಳನ್ನು ಮುಗಿಸಿ ಶುಚೀರ್ಭೂತರಾಗಿ ಶ್ರೀಮನ್ನಾರಾಯಣ ಸ್ಮರಣೆ ಶುರುಮಾಡಬೇಕು. ನಿತ್ಯದ ಸಂಧ್ಯಾವಂದನೆ ಮುಗಿಸಿ. ಧ್ಯಾನ ಮಾಡಿ. ಸಾಧ್ಯವಾದಷ್ಟೂ ನಾರಾಯಣ ಸ್ಮರಣೆ ಮಾಡಿ. ನೀರು ಬಿಟ್ಟು ಬೇರೇನೂ ಸೇವಿಸಬೇಡಿ. ಅನಿವಾರ್ಯವಾದರೆ ಹಣ್ಣು ತಿನ್ನಬಹುದು.
ದ್ವಾದಶಿ ದಿನ ಅನುಸರಿಸಬೇಕಾದ ನಿಯಮಗಳಿವು
1) ದಶಮಿ ಮತ್ತು ಏಕಾದಶಿ ದಿನದ ವ್ರತಾನುಷ್ಠಾನದ ಬಳಿಕ ಏಕಾಕಿಯಾಗಿ ಸಿಕ್ಕಿದ್ದೆಲ್ಲ ತಿನ್ನೋದಕ್ಕೆ ಹೋಗಬಾರದು. ಖಾಲಿ ಹೊಟ್ಟೆಯಲ್ಲಿರುವ ಕಾರಣ ಕಂಚಿನ ಪಾತ್ರೆಯಲ್ಲಿ ಆಹಾರ ಅಥವಾ ನೀರು ಸೇವಿಸಬಾರದು.
2) ದ್ವಾದಶಿ ದಿನ ಮಾಂಸಾಹಾರ ನಿಷಿದ್ಧ. ಆ ದಿನ ಯಾವುದೇ ಕಾರಣಕ್ಕೂ ಮಾಂಸಾಹಾರ, ತಾಮಸ ಆಹಾರ ಸೇವಿಸಬೇಡಿ. ಮದ್ಯಪಾನ ಮಾಡಬೇಡಿ. ಜೇನುತುಪ್ಪ ತಿನ್ನಬೇಡಿ. ಮಸೂರ್ ದಾಲ್ ಹಾಕಿದ ಆಹಾರ ಸೇವಿಸಬೇಡಿ.
3) ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸದೇ ಇದ್ದರೆ ಒಳ್ಳೆಯದು. ಅದೇ ರೀತಿ ಫ್ರೈ ಮಾಡಿದ ಆಹಾರವನ್ನೂ ಸೇವಿಸಬಾರದು. ದ್ವಾದಶಿ ಊಟ ಒಂದೇ ಹೊತ್ತು ಇರಲಿ. ಶರೀರ ಹೊಂದಿಕೊಳ್ಳಬೇಕಲ್ವ ಅದಕ್ಕೆ.
4) ಏಕಾದಶಿ ವ್ರತಾಚರಣೆ ಮಾಡಿದ ಬಳಿಕ ಮಾರನೇ ದಿನವೇ ಸಿಕ್ಕಾಪಟ್ಟೆ ಶಾರೀರಿಕ ಶ್ರಮ ಅಥವಾ ವ್ಯಾಯಾಮ ಮಾಡಲು ಹೋಗಬೇಡಿ. ದೂರ ಪ್ರಯಾಣ, ಚಾರಣ ಮುಂತಾದವು ಮಾಡಬೇಡಿ.
5) ಸತ್ಯ, ನ್ಯಾಯ, ಧರ್ಮದ ಹಾದಿಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳಿ. ಅದಕ್ಕೆ ಈ ಏಕಾದಶಿ ವ್ರತಾಚರಣೆ ಒಂದು ನೆಪವಾಗಲಿ. ಎಲ್ಲರನ್ನೂ ಒಳಗೊಂಡು ಸಾಗುವ ಬದುಕಿನಲ್ಲಿ ಪ್ರೀತಿ, ಪ್ರಾಮಾಣಿಕತೆ, ಕ್ಷಮಾ ಗುಣಗಳು ಬಹಳ ಮುಖ್ಯ.