Vaikunta ekadashi: 2025 ರಲ್ಲಿ ವೈಕುಂಠ ಏಕಾದಶಿ ಆಚರಣೆ ಯಾವಾಗ, ವಿಷ್ಣುವನ್ನು ಪೂಜಿಸಲು ಶುಭ ಮುಹೂರ್ತ ಯಾವುದು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vaikunta Ekadashi: 2025 ರಲ್ಲಿ ವೈಕುಂಠ ಏಕಾದಶಿ ಆಚರಣೆ ಯಾವಾಗ, ವಿಷ್ಣುವನ್ನು ಪೂಜಿಸಲು ಶುಭ ಮುಹೂರ್ತ ಯಾವುದು?

Vaikunta ekadashi: 2025 ರಲ್ಲಿ ವೈಕುಂಠ ಏಕಾದಶಿ ಆಚರಣೆ ಯಾವಾಗ, ವಿಷ್ಣುವನ್ನು ಪೂಜಿಸಲು ಶುಭ ಮುಹೂರ್ತ ಯಾವುದು?

Vaikunta Ekadashi 2025: ಜನವರಿ 10 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ. ಈ ದಿನ ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಶುಭದಿನದಂದು ಸ್ವರ್ಗದ ಬಾಗಿಲು ತೆರೆಯಲಿದ್ದು ದೇವಸ್ಥಾನಗಳಲ್ಲಿ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಪಡೆದಲ್ಲಿ ಕಷ್ಟಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿ 2025ರ ದಿನಾಂಕ, ಶುಭ ಮುಹೂರ್ತ
ವೈಕುಂಠ ಏಕಾದಶಿ 2025ರ ದಿನಾಂಕ, ಶುಭ ಮುಹೂರ್ತ

ವೈಕುಂಠ ಏಕಾದಶಿ 2025: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಏಕಾದಶಿ ತಿಥಿಗೆ ಬಹಳ ಮಹತ್ವ ಇದೆ. ಈ ಶುಭದಿನದಂದು ಉಪವಾಸವಿದ್ದು ವಿಷ್ಣುವನ್ನು ಪೂಜಿಸಿದರೆ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ. ಅಲ್ಲದೆ ಪಿತೃದೋಷ ಕೂಡಾ ನಿವಾರಣೆ ಆಗಲಿದೆ ಎಂಬ ನಂಬಿಕೆ ಇದೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮುನ್ನ ಪ್ರತಿ ವರ್ಷ ಬರುವ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ.

2025 ವೈಕುಂಠ ಏಕಾದಶಿ ದಿನಾಂಕ, ಶುಭ ಮುಹೂರ್ತ

ಪುರಾಣಗಳ ಪ್ರಕಾರ ವಿಷ್ಣುವು ಗರುಡ ವಾಹನದ ಮೇಲೆ ಮುಕ್ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದ್ದರಿಂದಲೇ ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುತ್ತಾರೆ. ಈ ಶುಭ ದಿನದಂದು ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿ ದಿನ ತಿರುಪತಿ ಮಾತ್ರವಲ್ಲದೆ ಹಲವು ದೇವಾಲಯಗಳಲ್ಲಿ ಉತ್ತರ ದ್ವಾರದ ಮೂಲಕ ಭಕ್ತರಿಗೆ ವಿಶೇಷ ದರ್ಶನ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಮಾಡುವ ಪೂಜೆಯು ಸಾವಿರಾರು ವರ್ಷಗಳ ತಪಸ್ಸಿನ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. 2025 ವೈಕುಂಠ ಏಕಾದಶಿ ಯಾವಾಗ? ಶುಭ ಮುಹೂರ್ತ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ತಿಳಿಯೋಣ.

2025 ರಲ್ಲಿ ಪುಷ್ಯ ಮಾಸದ ಏಕಾದಶಿಯನ್ನು ಪ್ರಥಮ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಪಂಚಾಂಗದ ಪ್ರಕಾರ ಏಕಾದಶಿ ತಿಥಿಯು ಜನವರಿ 9, 2025 ರ ಗುರುವಾರ ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗಿ ಮರುದಿನ, ಅಂದರೆ 10 ಶುಕ್ರವಾರ 2025 ಬೆಳಗ್ಗೆ 10:19 ವರೆಗೆ ಇರುತ್ತದೆ. ಸೂರ್ಯರಶ್ಮಿಯು ಭೂಮಿಯನ್ನು ಸ್ಪರ್ಶಿಸುವ ಸಂದರ್ಭದಲ್ಲಿ ಇದ್ದ ತಿಥಿಯ ಲೆಕ್ಕದಂತೆ ವೈಕುಂಠ ಏಕಾದಶಿಯನ್ನು ಜನವರಿ 10 ರಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಉಪವಾಸ ಆಚರಿಸಲಾಗುತ್ತದೆ. ಮರುದಿನ ಅಂದರೆ ಜನವರಿ 11 ರಂದು ದ್ವಾದಶಿಯ ದಿನ ಉಪವಾಸ ದೀಕ್ಷೆಯನ್ನು ಮುರಿಯಬೇಕು. ಆಹಾರ ಸೇವನೆಯ ಮೂಲಕ ಉಪವಾಸ ಮುರಿಯುವ ಕ್ರಮವನ್ನು ‘ಪಾರಣೆ’ ಎನ್ನುತ್ತಾರೆ. ದ್ವಾದಶಿಯ ಪಾರಣೆಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಒಳ್ಳೆಯದು ಎನ್ನುವ ನಂಬಿಕೆಯಿದೆ.

ಮುಕ್ಕೋಟಿ ಏಕಾದಶಿ ಎಂದರೇನು?

ತಿರುಪತಿಯಲ್ಲಿ ಜನವರಿ 10 ರಿಂದ 19 ರವರೆಗೆ ಉತ್ತರ ದ್ವಾರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಮೋಕ್ಷವನ್ನು ಪಡೆಯಬೇಕಾದರೆ ಉತ್ತರ ದ್ವಾರಕ್ಕೆ ಭೇಟಿ ನೀಡಬೇಕು ಎಂಬ ನಂಬಿಕೆ ಇದೆ. ಪುಷ್ಯ ಮಾಸದ ಶುದ್ಧದಲ್ಲಿ, ಅಂದರೆ ಹುಣ್ಣಿಮೆಗೂ ಮುನ್ನ ಬರುವ ಏಕಾದಶಿಯನ್ನು ಉತ್ತರ ದ್ವಾರ ದರ್ಶನ ಏಕಾದಶಿ, ಮುಕ್ಕೋಟಿ ಏಕಾದಶಿ, ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಶುಭ ದಿನದಂದು ಎಲ್ಲಾ ದೇವಾಲಯಗಳಲ್ಲಿ ಉತ್ತರದ ಬಾಗಿಲಿನಿಂದ ಭಕ್ತರಿಗೆ ದರ್ಶನ ಸೌಲಭ್ಯ ಮಾಡಲಾಗುತ್ತದೆ. ದೇವಾಲಯಗಳಿಗೆ ಭೇಟಿ ನೀಡಿದವರು ಮೋಕ್ಷ ಪಡೆಯುತ್ತಾರೆ ಎಂಬ ನಂಬಿಕೆ ಇರುವುದರಿಂದ ಇದನ್ನು ಮೋಕ್ಷದಾ ಏಕಾದಶಿ ಎಂದೂ ಕರೆಯುತ್ತಾರೆ. ಏಕಾದಶಿ ಎಂದರೆ 11 ಎಂದು ಅರ್ಥ. ಅಂದರೆ ಐದು ಕರ್ಮೇಂದ್ರಿಯಗಳು, ಪಂಚೇಂದ್ರಿಯಗಳು ಮತ್ತು ಮನಸ್ಸು ಸೇರಿ ಒಟ್ಟು 11. ಇವುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ವ್ರತ ದೀಕ್ಷೆಯನ್ನು ಮಾಡಬೇಕು ಎನ್ನುವುದು ಏಕಾದಶಿಯ ಅಂತರಾರ್ಥವಾಗಿದೆ.

ವೈಕುಂಠ ಏಕಾದಶಿ ಮಹತ್ವವೇನು, ಆಚರಣೆ ಹೇಗೆ?

ವೈಕುಂಠ ಏಕಾದಶಿಯಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಉಪವಾಸ ಆರಂಭಿಸಿ ದೇವರ ಮುಂದೆ ತುಪ್ಪ ಬೆಳಗಿಸಿ ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸಬೇಕು. ಇಡೀ ದಿನ ಉಪವಾಸ ಮಾಡಲು ಸಾಧ್ಯವಾಗದೆ ಇರುವವರು ಹಣ್ಣುಗಳನ್ನು ಸೇವಿಸಬಹುದು. ಏಕಾದಶಿ ಮರುದಿನ ಬಡವರಿಗೆ ಅನ್ನದಾನ ಮಾಡಬೇಕು.

ವೈಕುಂಠ ಏಕಾದಶಿ ದಿನದಂದು ಉತ್ತರ ದ್ವಾರದಿಂದ ಶ್ರೀ ಮಹಾವಿಷ್ಣುವಿನ ದರ್ಶನ ಪಡೆಯಲು ಭಕ್ತರು ಕಾಯುತ್ತಿರುತ್ತಾರೆ. ವೈಕುಂಠದ ಬಾಗಿಲು ತೆರೆಯುವ ಈ ದಿನ ಶ್ರೀ ಹರಿಯು ಮೂರು ಕೋಟಿ ದೇವತೆಗಳೊಂದಿಗೆ ಭೂಮಿಗೆ ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಪುರಾಣಗಳ ಪ್ರಕಾರ ರಾಕ್ಷಸರ ಹಿಂಸೆಯನ್ನು ಸಹಿಸಲಾಗದೆ, ದೇವತೆಗಳು ಉತ್ತರ ದ್ವಾರದ ಮೂಲಕ ವಿಷ್ಣುವನ್ನು ಭೇಟಿಯಾಗಿ ತಮ್ಮ ಕಷ್ಟವನ್ನು ಪರಿಹರಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಆಗ ವಿಷ್ಣುವು ಮುರಾ ಎಂಬ ರಾಕ್ಷಸನನ್ನು ತನ್ನ ಏಕಾದಶ ಎಂಬ ಆಯುಧದಿಂದ ಸಂಹಾರ ಮಾಡಿ ದೇವತೆಗಳನ್ನು ರಕ್ಷಿಸುತ್ತಾನೆ. ಅಂದಿನಿಂದ, ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.