ವಾಸ್ತುಶಾಸ್ತ್ರ: ಮನೆಗೆ 1 ರಿಂದ 3 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ; ಕಷ್ಟದ ಪರಿಸ್ಥಿತಿ ಸರಳವಾಗಿ ಬಗೆಹರಿಯುತ್ತೆ
ವಾಸ್ತು ಪ್ರಕಾರ ಮನೆ ಕಟ್ಟಿದರೆ ಯಶಸ್ಸು ಇರಲಿದೆ ಎಂಬ ನಂಬಿಕೆ. ಮನೆಗೆ 1 ರಿಂದ 3 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ ಎಚ್ ಸತೀಶ್, ಜ್ಯೋತಿಷಿ)

ಮನೆಗಳಲ್ಲಿ ಇರುವ ಬಾಗಿಲುಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ಪರೋಕ್ಷವಾಗಿ ಇದು ಸಂಖ್ಯಾಶಾಸ್ತ್ರವನ್ನು ಆಧರಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಯನ್ನೂ ಪ್ರತ್ಯೇಕವಾದ ಗ್ರಹಗಳನ್ನು ಸೂಚಿಸುತ್ತದೆ. ಬಾಗಿಲುಗಳನ್ನು ಮರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದು ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತ್ಯೇಕವಾದ ಸಸ್ಯ ಸಂಕುಲವಿದೆ.
1 ರವಿ ಅಥವಾ ಸೂರ್ಯ, 2 ಚಂದ್ರ, 3 ಗುರು, 4 ರಾಹು, 5 ಬುಧ, 6 ಶುಕ್ರ, 7 ಕೇತು, 8 ಶನಿ ಮತ್ತು 9 ಕುಜ ಅಥವಾ ಮಂಗಳ ಗ್ರಹಗಳನ್ನು ಸೂಚಿಸುತ್ತವೆ. 10 ಸಂಖ್ಯೆಯನ್ನು 1+0 = 1 ಎಂದು ಬರೆಯಲಾಗುತ್ತದೆ. 12 ಸಂಖ್ಯೆಯನ್ನು 1+2 = 3 ಎಂದು ಬರೆಯಲಾಗುತ್ತದೆ.
ಮನೆಗೆ ಕೇವಲ ಒಂದು ಬಾಗಿಲು ಇದ್ದರೆ ಹೆಚ್ಚಿನ ಪ್ರಮಾಣದಲ್ಲಿ ಶುಭ ಫಲಗಳನ್ನು ಪಡೆಯಬಹುದಾಗಿದೆ. ಕುಟುಂಬದಲ್ಲಿದ್ದ ಕ್ಲಿಷ್ಟಕರ ಪರಿಸ್ಥಿತಿಯು ಸರಳವಾಗಿ ಬಗೆಹರಿಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಇಂತಹ ಮನೆಯಲ್ಲಿ ವಾಸ ಮಾಡುವವರಿಗೆ ಉತ್ತಮ ಆತ್ಮವಿಶ್ವಾಸವಿರುತ್ತದೆ. ಸಾಮಾನ್ಯವಾಗಿ ತಮ್ಮ ಕೆಲಸ ಕಾರ್ಯಗಳಿಗೆ ಇವರು ಬೇರೆಯವರನ್ನು ಆಶ್ರಯಿಸುವುದಿಲ್ಲ. ಆದರೆ ಮನೆಗಳಿಗೆ ಒಂದು ಬಾಗಿಲು ಇಡುವುದು ಅಸಾಧ್ಯ.
ಮಕ್ಕಳಿಗಾಗಿ ಓದುವ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಕೊಠಡಿಯನ್ನು ಕಟ್ಟುವುದು ಸಾಮಾನ್ಯವಾಗಿದೆ. ಇಂತಹ ಕೊಠಡಿಗಳಿಗೆ ಒಂದು ಬಾಗಿಲನ್ನು ಇಟ್ಟಲ್ಲಿ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಲು ಸಾಧ್ಯವಾಗುತ್ತದೆ. ಗುರು ಹಿರಿಯರಲ್ಲಿ ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ನಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅತಿಯಾದ ಆತ್ಮವಿಶ್ವಾಸದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಿಂದ ಒಳ ಹೋಗುವಂತಿದ್ದಲ್ಲಿ ಇನ್ನಷ್ಟು ಒಳ್ಳೆಯದು.
ಮನೆಗೆ ಎರಡು ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ
ಯಾವುದೇ ಮನೆಯಲ್ಲಿ ಕೇವಲ ಎರಡು ಬಾಗಿಲು ಇದ್ದಲ್ಲಿ ಅಲ್ಲಿ ನೆಲೆಸುವ ಕುಟುಂಬದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುತ್ತದೆ. ಇಂತಹ ಮನೆಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರಿಗೆ ಅಥವಾ ಹೆಣ್ಣು ಮಕ್ಕಳಿಗೆ ವಿಶೇಷ ಆದ್ಯತೆ ದೊರೆಯುತ್ತದೆ. ಉತ್ತರ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದು ಅದಕ್ಕೆ ಎದುರಾಗಿ ಮತ್ತೊಂದು ಬಾಗಿಲನ್ನು ಇಟ್ಟಿದ್ದಲ್ಲಿ, ಕುಟುಂಬದ ಸದಸ್ಯರಲ್ಲಿ ಉತ್ತಮ ಆರೋಗ್ಯ ಕಂಡು ಬರುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳಲು ಸಾಧ್ಯವಾಗುತ್ತದೆ. ಆದರೆ ಮುಂಬಾಗಿಲು ಮತ್ತೊಂದು ಬಾಗಿಲಿಗಿಂತ ಎತ್ತರವಾಗಿರಬೇಕು. ಮನೆಯ ಮುಖ್ಯದ್ವಾರವು ಪೂರ್ವ ದಿಕ್ಕಿನಲ್ಲಿದ್ದು ಆದಕ್ಕೆ ಎದುರಿಗೆ ಮತ್ತೊಂದು ಬಾಗಿಲನ್ನು ಇಟ್ಟಲ್ಲಿ ಆರಂಭಿಸುವ ಯಾವುದೇ ಕೆಲಸ ಕಾರ್ಯದಲ್ಲಿ ಉತ್ತಮ ಯಶಸ್ಸುಗಳಿರುತ್ತದೆ. ಇವರ ಮನಸ್ಸು ಇವರ ಹಿಡಿತದಲ್ಲಿರುತ್ತದೆ.
ಈ ರೀತಿ ಮನೆಯ ಬಾಗಿಲುಗಳು ಇದ್ದಲ್ಲಿ ಅನಾವಶ್ಯಕವಾಗಿ ಬೇರೊಬ್ಬರ ಪ್ರಭಾವಕ್ಕೆ ಒಳಗಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಸಹ ಕಲಿಕೆಯಲ್ಲಿ ವಿಶೇಷವಾದ ಆಸಕ್ತಿ ಉಂಟಾಗುತ್ತದೆ. ಅವರ ಜ್ಞಾಪಕ ಶಕ್ತಿಯು ಉನ್ನತ ಮಟ್ಟದಲ್ಲಿ ಇರುತ್ತದೆ. ಮುಖ್ಯ ವಿಚಾರವೆಂದರೆ ಮುಖ್ಯ ದ್ವಾರವು ಪೂರ್ವದಲ್ಲಿದ್ದು ಎತ್ತರವಾಗಿರುವುದು ಒಳ್ಳೆಯದು. ಯಾವುದೇ ಮನೆಯ ಮುಖ್ಯದ್ವಾರವು ಅನಿವಾರ್ಯವಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇದ್ದಲ್ಲಿ ಅವಶ್ಯಕವಾಗಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮತ್ತೊಂದು ಬಾಗಿಲನ್ನು ಇಡುವುದು ಅತ್ಯವಶ್ಯಕ. ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಬಾಗಿಲುಗಳಿದ್ದಲ್ಲಿ ಆ ಮನೆಯಲ್ಲಿನ ಯಾವುದೇ ರೀತಿಯ ವಾಸ್ತು ದೋಷಗಳು ದೂರವಾಗುತ್ತವೆ.
ಮನೆಗೆ ಮೂರು ಬಾಗಿಲುಗಳು ಇದ್ದರೆ ಏನಾಗುತ್ತೆ
ಯಾವುದೇ ಮನೆಯಲ್ಲಿ ಮೂರು ಬಾಗಿಲು ಇರುವುದು ತಪ್ಪಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ವಾಸ್ತುದೋಷ ಉಂಟಾಗುತ್ತದೆ. ಉತ್ತಮ ಪ್ರಯತ್ನಗಳಿದ್ದರೂ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಅನಿವಾರ್ಯವಾಗಿ ಮೂರು ಬಾಗಿಲುಗಳನ್ನು ಇಡಲೇ ಬೇಕಾದ ಪರಿಸ್ಥಿತಿ ಎದುರಾದಲ್ಲಿ ಮುಖ್ಯದ್ವಾರವೂ ಪೂರ್ವಾ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಪೂರ್ವ ದಿಕ್ಕಿನ ಗೋಡೆಯಲ್ಲಿ ಧರ್ಮ ಗುರುಗಳ ಅಥವಾ ಗುರು ದತ್ತಾತ್ರೇಯರ ಭಾವಚಿತ್ರವನ್ನು ಇರಿಸುವುದು ಒಳ್ಳೆಯದು. ಈ ಗೋಡೆಯಲ್ಲಿ ಗುರುಗಳ ಮೂಲ ಮಂತ್ರದ ಯಂತ್ರವನ್ನು ಸಹ ಸ್ಥಾಪಿಸಬಹುದು. ಯಾವುದೇ ಕಾರಣಕ್ಕೂ ಈ ಗೋಡೆಗೆ ಸಂಬಂಧಿಸಿದಂತೆ ನೀಲಿ ಅಥವಾ ಹಸಿರು ಬಣ್ಣಗಳನ್ನು ಬಳಸಬಾರದು. ಹಾಗೆಯೇ ಅದೇ ಬಣ್ಣದ ದೀಪಗಳನ್ನು ಸಹ ಅಳವಡಿಸಬಾರದು. ಗುರುವಿನ ಸಂಖ್ಯೆಯಾದರು ಶುಭಕರವಲ್ಲ. ಇದೇ ರೀತಿ ಗುರುವಿನ ನಕ್ಷತ್ರಗಳನ್ನು ಸಹ ಅತಿ ವಿರಳವಾಗಿ ಶುಭ ಕಾರ್ಯಗಳಿಗೆ ಬಳಸುತ್ತೇವೆ.
ನೆನಪಿರಲಿ
ಅಲಂಕಾರಕ್ಕಾಗಿ ಓರೆಯಾಗಿರುವ ಅಥವಾ ಉಬ್ಬಿರುವ ಬಾಗಿಲುಗಳನ್ನು ಇರಿಸಬಾರದು. ಮುಖ್ಯದ್ವಾರಕ್ಕೆ ಎದುರಾಗಿ ಮೆಟ್ಟಿಲುಗಳನ್ನು ಇರಿಸಬಾರದು. ಈಶಾನ್ಯ, ಆಗ್ನೇಯ, ನೈರುತ್ಯ ಮತ್ತು ವಾಯುವ್ಯ ಮೂಲೆಗಳಲ್ಲಿ ಮುಖ್ಯದ್ವಾರ ಇರಬಾರದು. ಮುಖ್ಯದ್ವಾರದ ಮುಂಭಾಗದಲ್ಲಿ ದೇವಾಲಯದ ಅಥವಾ ಅರಳಿ ಮರದ ನೆರಳು ಬೀಳಬಾರದು. ಸಾಧ್ಯವಾದಷ್ಟು ಪ್ರತಿಯೊಂದು ಬಾಗಿಲುಗಳಿಗೂ ಹೊಸಿಲನ್ನು ಇರಿಸಬೇಕು. ಒಣಗಿದ ಗಿಡಗಳಿಗೆ ನೀರನ್ನು ಹಾಕಬಾರದು. ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಶೌಚಾಲಯದ ಬಾಗಿಲು ಇರಬಾರದು. ಹಾಗೆಯೇ ಮುಖ್ಯದ್ವಾರದ ಎದುರಾಗಿ ದೇವರಕೋಣೆಯ ಬಾಗಿಲು ಇರಬಾರದು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ವಾಸ್ತು ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾಸ್ತುಶಾಸ್ತ್ರವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
