ವಾಸ್ತುಶಾಸ್ತ್ರ: ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ; ಹೀಗಿವೆ ಶುಭ, ಅಶುಭ ಫಲಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾಸ್ತುಶಾಸ್ತ್ರ: ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ; ಹೀಗಿವೆ ಶುಭ, ಅಶುಭ ಫಲಗಳು

ವಾಸ್ತುಶಾಸ್ತ್ರ: ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ; ಹೀಗಿವೆ ಶುಭ, ಅಶುಭ ಫಲಗಳು

ವಾಸ್ತು ಪ್ರಕಾರ ಮನೆ ಕಟ್ಟಿದರೆ ಯಶಸ್ಸು ಇರಲಿದೆ ಎಂಬ ನಂಬಿಕೆ. ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ ಎಚ್ ಸತೀಶ್, ಜ್ಯೋತಿಷಿ)

ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭ, ಅಶುಭ ಫಲಗಳಿವೆ ಎಂಬುದನ್ನು ವಿವರಿಸಲಾಗಿದೆ
ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭ, ಅಶುಭ ಫಲಗಳಿವೆ ಎಂಬುದನ್ನು ವಿವರಿಸಲಾಗಿದೆ

ಮನೆಗಳಲ್ಲಿ ಇರುವ ಬಾಗಿಲುಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ಪರೋಕ್ಷವಾಗಿ ಇದು ಸಂಖ್ಯಾಶಾಸ್ತ್ರವನ್ನು ಆಧರಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಯನ್ನೂ ಪ್ರತ್ಯೇಕವಾದ ಗ್ರಹಗಳನ್ನು ಸೂಚಿಸುತ್ತದೆ. ಬಾಗಿಲುಗಳನ್ನು ಮರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದು ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತ್ಯೇಕವಾದ ಸಸ್ಯ ಸಂಕುಲವಿದೆ. 1 ರವಿ ಅಥವಾ ಸೂರ್ಯ, 2 ಚಂದ್ರ, 3 ಗುರು, 4 ರಾಹು, 5 ಬುಧ, 6 ಶುಕ್ರ, 7 ಕೇತು, 8 ಶನಿ ಮತ್ತು 9 ಕುಜ ಅಥವಾ ಮಂಗಳ ಗ್ರಹಗಳನ್ನು ಸೂಚಿಸುತ್ತವೆ. 10 ಸಂಖ್ಯೆಯನ್ನು 1+0 = 1 ಎಂದು ಬರೆಯಲಾಗುತ್ತದೆ. 12 ಸಂಖ್ಯೆಯನ್ನು 1+2 = 3 ಎಂದು ಬರೆಯಲಾಗುತ್ತದೆ.

ಒಂದು ಮನೆಯಲ್ಲಿ ನಾಲ್ಕು ಬಾಗಿಲುಗಳನ್ನು ಇಡಬಹುದು. ನಾಲ್ಕು ರಾಹುವಿನ ಸಂಖ್ಯೆಯಾದರೂ ಅಶುಭಕರವಲ್ಲ. ಆದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಹೆಚ್ಚಿನ ಸಂಖ್ಯೆಯ ಬಾಗಿಲುಗಳನ್ನು ಇಡಬಾರದು. ಈ ದಿಕ್ಕುಗಳಲ್ಲಿ ಒಂದು ಬಾಗಿಲು ಇದ್ದಲ್ಲಿ ದೋಷಗಳು ಕಡಿಮೆ ಇರುತ್ತವೆ. ಎಲ್ಲಾ ರೀತಿಯಲ್ಲೂ ಉತ್ತಮ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗಳಲ್ಲಿ ಎರಡು ಬಾಗಿಲುಗಳು ಇದ್ದಲ್ಲಿ ಶುಭ ಮತ್ತು ಅಶುಭ ಫಲಗಳು ಮಧ್ಯಮ ವಾಗಿರುತ್ತದೆ. ಲಾಭ ನಷ್ಟಗಳು ಸಮ ಪ್ರಮಾಣದಲ್ಲಿ ಇರುತ್ತವೆ. ಇದರಿಂದ ಇಂತಹ ಮನೆಯಲ್ಲಿ ವಾಸಿಸುವವರು ಅನಿವಾರ್ಯವಾಗಿ ಸರಳ ಜೀವನಕ್ಕೆ ಹೊಂದಿಕೊಳ್ಳಬೇಕು. ಉತ್ತರ ದಿಕ್ಕಿನ ಗೋಡೆಗೆ ನಾಗಾಲೋಟದಲ್ಲಿ ಓಡುತ್ತಿರುವ ಬಿಳಿ ಬಣ್ಣದ ಕುದುರೆಗಳ ಭಾವಚಿತ್ರವನ್ನು ಇರಿಸಬಹುದು. ಇದರಿಂದ ಶುಭ ಫಲಗಳು ಹೆಚ್ಚುತ್ತವೆ. ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಸಹ ಇರಿಸಬಹುದು. ಆದರೆ ಆ ಕನ್ನಡಿಯು ನಮ್ಮ ತಲೆಯಿಂದ ಸೊಂಟದವರೆಗಿನ ಅಳತೆಗೆ ಇರಬೇಕು. ಅದನ್ನು ಮೀರಬಾರದು.

ಮನೆಗೆ 5 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭ ಅಶುಭ ಫಲಗಳಿವೆ

ಒಂದು ಮನೆಗೆ 5 ಬಾಗಿಲುಗಳು ಇದ್ದಲ್ಲಿ ಅನಿರೀಕ್ಷಿತವಾಗಿ ಜೀವನದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಲಭಿಸುತ್ತದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಅಸಾಧ್ಯವಾಗುತ್ತದೆ. ಆರೋಗ್ಯದಲ್ಲಿ ತೊಂದರೆಯೂ ಇರುತ್ತದೆ. ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ವಾದ ವಿವಾದಗಳಿರುತ್ತವೆ. ಕುಟುಂಬದ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನೈರುತ್ಯದಲ್ಲಿ ಟ್ಯಾಂಕನ್ನು ನಿರ್ಮಿಸಬೇಕು. ಅಲ್ಲದೆ ಈಶಾನ್ಯದ ಮೂಲೆಯಲ್ಲಿ ದೇವರ ಗೋಡೆಯನ್ನು ನಿರ್ಮಿಸಬೇಕು. ಸಾಧ್ಯವಾಗದ ಪಕ್ಷದಲ್ಲಿ ಪೂರ್ವ ದಿಕ್ಕಿನಲ್ಲಿ ಆಗ್ನೇಯಕ್ಕೆ ಸೇರದಂತೆ ದೇವರ ಗೂಡನ್ನು ನಿರ್ಮಿಸಬೇಕು. ಬಾಗಿಲುಗಳು ಪೂರ್ವದಿಂದ ಪಶ್ಚಿಮ ಅಥವಾ ದಕ್ಷಿಣದಿಂದ ಉತ್ತರಕ್ಕೆ ತೆರೆಯುವಂತೆ ಇರಬೇಕು. ಇಂತಹ ಮನೆಗಳಲ್ಲಿ ತುಳಸಿ ಗಿಡವನ್ನು ಇಟ್ಟು ಪ್ರತಿದಿನ ಪೂಜಿಸಬೇಕು. ಪಶ್ಚಿಮ ದಿಕ್ಕಿನಲ್ಲಿ ಕಬ್ಬಿಣ ಅಥವಾ ಭಾರದ ವಸ್ತುಗಳನ್ನು ಇರಿಸುವುದು ಬಲು ಮುಖ್ಯವಾಗುತ್ತದೆ. ಮನೆಯ ಹೊರಭಾಗದ ಅಂಗಳದಲ್ಲಿ ನೀಲಿ ಬಣ್ಣದ ದೀಪವನ್ನು ಅಳವಡಿಸಬೇಕು. ಇಂತಹ ಸಂದರ್ಭದಲ್ಲಿ ವಾಸ್ತುವಿನ ದೋಷವು ಕಡಿಮೆಯಾಗುತ್ತದೆ. ಯಾವುದೇ ಕಾರಣಕ್ಕೂ ಪುನರ್ವಸು ನಕ್ಷತ್ರದಲ್ಲಿ ಗೃಹಪ್ರವೇಶವನ್ನು ಮಾಡಬಾರದು.

ಮನೆಗೆ 6 ಬಾಗಿಲುಗಳು ಇಡಬಹುದೇ? ಏನೆಲ್ಲಾ ಶುಭ ಫಲಗಳಿವೆ

6 ಶುಕ್ರನ ಸಂಖ್ಯೆಯಾಗುತ್ತದೆ. ಆದ್ದರಿಂದ ಮನೆಗೆ ಆರು ಬಾಗಿಲುಗಳನ್ನು ಇಡಬಹುದಾಗಿದೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆ ಮನೆಗಳಲ್ಲಿ ಮಕ್ಕಳ ಅಥವಾ ಹಿರಿಯರ ವಿಚಾರದಲ್ಲಿ ಒಂದೇ ರೀತಿಯ ಪ್ರೀತಿ ವಿಶ್ವಾಸ ಮತ್ತು ನಡವಳಿಕೆ ಇರುತ್ತದೆ. ಗಂಡು ಮಕ್ಕಳಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ಇಂತಹ ಮನೆಗಳಲ್ಲಿ ಉನ್ನತ ಮಟ್ಟದ ಶುಭಫಲಗಳನ್ನು ಗಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ದಂಪತಿ ನಡುವೆ ಉತ್ತಮ ಬಾಂಧವ್ಯ ಸದಾ ಕಾಲ ಇರುತ್ತದೆ. ಮನೆಯನ್ನು ಶುಭ್ರವಾಗಿ ಇರಿಸಲು ಹೆಚ್ಚಿನ ಹಣ ಖರ್ಚಾಗುತ್ತದೆ. ಮನೆ ಇರುವಷ್ಟೇ ವಿಶಾಲವಾಗಿ ಅಲ್ಲಿ ನೆಲೆಸುವ ಜನರ ಮನಸ್ಸು ವಿಶಾಲವಾಗಿರುತ್ತದೆ. ಉತ್ತಮ ಆರೋಗ್ಯದ ಇರುತ್ತದೆ. ಆದರೆ ರುಚಿಯಾದ ಆಹಾರಕ್ಕೆ ಮಾರುಹೋದಲ್ಲಿ ಆರೋಗ್ಯದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತೊಂದರೆ ಕಂಡು ಬರುತ್ತದೆ. ಆದ್ದರಿಂದ ಆಹಾರ ಮತ್ತು ಖರ್ಚು ವೆಚ್ಚದ ಬಗ್ಗೆ ನಿಯಂತ್ರಣ ಇರಬೇಕು.

ಈ ಮನೆಯಲ್ಲಿ ಅವಶ್ಯಕವಾಗಿ ಪೂರ್ವ ದಿಕ್ಕಿನಲ್ಲಿ ಗುರುದತ್ತರ ಭಾವಚಿತ್ರವನ್ನು ಅಳವಡಿಸಬೇಕು. ಉತ್ತರ ದಿಕ್ಕಿನ ಗೋಡೆಗೆ ಕುಟುಂಬದ ಎಲ್ಲಾ ಸದಸ್ಯರಿರುವ ಭಾವಚಿತ್ರವನ್ನು ಹಾಕಬೇಕು. ಮನೆಯ ಅಂಗಳದಲ್ಲಿ ಈಶಾನ್ಯ ದಿಕ್ಕಿನಲ್ಲಿ ತೂಗು ಗಂಟೆಯನ್ನು ಇರಿಸಬೇಕು. ಇದರಿಂದಾಗಿ ಕುಟುಂಬದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ. ವಾಸ್ತುದೋಷವಿದ್ದರೂ ಅದರ ಪ್ರಭಾವವು ಕಡಿಮೆಯಾಗುತ್ತದೆ. ಕನಿಷ್ಠ ಪಕ್ಷ ಮೂರು ಕಿಟಕಿಗಳಿದ್ದು ಪ್ರತಿಯೊಂದು ಕಿಟಕಿಗಳಿಗೂ ಎರಡು ಬಾಗಿಲುಗಳು ಇರಬೇಕು. ಉತ್ತಮ ಗುಣಮಟ್ಟದ ಬಾಗಿಲುಗಳನ್ನು ನಿರ್ಮಿಸಿ ಬಾದಾಮಿ ಬಣ್ಣವನ್ನು ಬಳಿಸಬೇಕು.

ನೆನಪಿರಲಿ

ಅಲಂಕಾರಕ್ಕಾಗಿ ಓರೆಯಾಗಿರುವ ಅಥವಾ ಉಬ್ಬಿರುವ ಬಾಗಿಲುಗಳನ್ನು ಇರಿಸಬಾರದು. ಮುಖ್ಯದ್ವಾರಕ್ಕೆ ಎದುರಾಗಿ ಮೆಟ್ಟಿಲುಗಳನ್ನು ಇರಿಸಬಾರದು. ಈಶಾನ್ಯ, ಆಗ್ನೇಯ, ನೈರುತ್ಯ ಮತ್ತು ವಾಯುವ್ಯ ಮೂಲೆಗಳಲ್ಲಿ ಮುಖ್ಯದ್ವಾರ ಇರಬಾರದು. ಮುಖ್ಯದ್ವಾರದ ಮುಂಭಾಗದಲ್ಲಿ ದೇವಾಲಯದ ಅಥವಾ ಅರಳಿ ಮರದ ನೆರಳು ಬೀಳಬಾರದು. ಸಾಧ್ಯವಾದಷ್ಟು ಪ್ರತಿಯೊಂದು ಬಾಗಿಲುಗಳಿಗೂ ಹೊಸಿಲನ್ನು ಇರಿಸಬೇಕು. ಒಣಗಿದ ಗಿಡಗಳಿಗೆ ನೀರನ್ನು ಹಾಕಬಾರದು. ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಶೌಚಾಲಯದ ಬಾಗಿಲು ಇರಬಾರದು. ಹಾಗೆಯೇ ಮುಖ್ಯದ್ವಾರದ ಎದುರಾಗಿ ದೇವರಕೋಣೆಯ ಬಾಗಿಲು ಇರಬಾರದು.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ವಾಸ್ತು ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾಸ್ತುಶಾಸ್ತ್ರವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.