ವಾಸ್ತುಶಾಸ್ತ್ರ: ಮನೆಗೆ 7 ರಿಂದ 9 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ; ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ
ವಾಸ್ತು ಪ್ರಕಾರ ಮನೆ ಕಟ್ಟಿದರೆ ಯಶಸ್ಸು ಇರಲಿದೆ ಎಂಬ ನಂಬಿಕೆ. ಮನೆಗೆ 7 ರಿಂದ 9 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ ಎಚ್ ಸತೀಶ್, ಜ್ಯೋತಿಷಿ)

ಮನೆ ಬಾಗಿಲು ವಾಸ್ತು: ಮನೆಗಳಲ್ಲಿ ಇರುವ ಬಾಗಿಲುಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ಪರೋಕ್ಷವಾಗಿ ಇದು ಸಂಖ್ಯಾಶಾಸ್ತ್ರವನ್ನು ಆಧರಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಯನ್ನೂ ಪ್ರತ್ಯೇಕವಾದ ಗ್ರಹಗಳನ್ನು ಸೂಚಿಸುತ್ತದೆ. ಬಾಗಿಲುಗಳನ್ನು ಮರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದು ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತ್ಯೇಕವಾದ ಸಸ್ಯ ಸಂಕುಲವಿದೆ. 1 ರವಿ ಅಥವಾ ಸೂರ್ಯ, 2 ಚಂದ್ರ, 3 ಗುರು, 4 ರಾಹು, 5 ಬುಧ, 6 ಶುಕ್ರ, 7 ಕೇತು, 8 ಶನಿ ಮತ್ತು 9 ಕುಜ ಅಥವಾ ಮಂಗಳ ಗ್ರಹಗಳನ್ನು ಸೂಚಿಸುತ್ತವೆ. 10 ಸಂಖ್ಯೆಯನ್ನು 1+0 = 1 ಎಂದು ಬರೆಯಲಾಗುತ್ತದೆ. 12 ಸಂಖ್ಯೆಯನ್ನು 1+2 = 3 ಎಂದು ಬರೆಯಲಾಗುತ್ತದೆ.
7 ಕೇತುವಿನ ಸಂಖ್ಯೆಯಾಗುತ್ತದೆ. ಯಾವುದೇ ಮನೆಯಲ್ಲಿ ಏಳು ಬಾಗಿಲುಗಳು ಇದ್ದಲ್ಲಿ ಶುಭಫಲಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಆರಂಭದಲ್ಲಿ ಆಡೆ ತಡೆಗಳು ಎದುರಾಗುತ್ತವೆ. ಇಲ್ಲಿ ನೆಲೆಸುವ ಜನರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಅತಿಯಾದ ಹೆಚ್ಚಿನ ನಿರೀಕ್ಷೆ ಇವರಲ್ಲಿ ಇರುತ್ತದೆ. ಇವರನ್ನು ಒಂದು ರೀತಿಯ ಭ್ರಮೆಯು ಆವರಿಸುತ್ತದೆ. ಇವರಿಗೆ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ನೆಲೆಸಿದ್ದರು ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಇಂತಹ ಮನೆಗಳಲ್ಲಿ ಒಂದಲ್ಲ ಒಂದು ರೀತಿಯ ದುರಸ್ತಿ ಇರುತ್ತದೆ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳಲ್ಲಿ ನಿಯಂತ್ರಣ ಇರುವುದಿಲ್ಲ. ಅನಾವಶ್ಯಕವಾದ ವಿಚಾರಗಳಿಗೆ ಪರಸ್ಪರ ಮನಸ್ತಾಪ ಉಂಟಾಗಬಹುದು.
ಮನೆಯಲ್ಲಿರುವ ಹಿರಿಯರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ. ಸುಲಭವಾಗಿ ಯಾವುದಾದರೂ ಒಂದು ರೀತಿಯ ಸೋಂಕಿಗೆ ಇವರು ಒಳಗಾಗುತ್ತಾರೆ. ಆದರೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಗೇಟ್ ಅನ್ನು ಇರಿಸಿದ್ದಲ್ಲಿ ವಾಸ್ತು ದೋಷವು ಕಡಿಮೆಯಾಗುತ್ತದೆ. ಬಾಗಿಲು ಮತ್ತು ಕಿಟಕಿಗಳ ಬಾಗಿಲುಗಳ ಸಂಖ್ಯೆಯನ್ನು ಕೂಡಿದಾಗ ಮೂರು ಅಥವಾ ಏಳು ಬರಬಾರದು. ಆಗ ಇಂತಹ ಮನೆಗಳಲ್ಲಿ ತೊಂದರೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಮುಖ್ಯದ್ವಾರದ ಬಲಭಾಗದಲ್ಲಿ ಸಣ್ಣದಾದ ಗಣಪತಿಯ ವಿಗ್ರಹವನ್ನು ಸ್ಥಾಪಿಸಿ ಪೂಜಿಸಿದಲ್ಲಿ ವಾಸುವಿನ ದೋಷವು ಕಡಿಮೆಯಾಗುತ್ತದೆ. ಮುಂಭಾಗಲಿನ ಮೇಲೆ ಓಂಕಾರ ಅಥವಾ ಸ್ವಸ್ತಿಕ್ ಆಕಾರದ ಗುರುತುಗಳು ಇದ್ದರೆ ಒಳ್ಳೆಯ ಫಲಿತಾಂಶಗಳು ದೊರೆಯುತ್ತವೆ.
ವಾಸ್ತುಪ್ರಕಾರ ಒಂದು ಮನೆಗೆ 8 ಬಾಗಿಲುಗಳು ಇದ್ದರೆ ಏನಾಗುತ್ತೆ
ಯಾವುದೆ ಮನಗಳಲ್ಲಿ ಎಂಟು ಬಾಗಿಲುಗಳು ಇರುವುದು ಶುಭಕರವಾಗುತ್ತದೆ. ಇಂತಹ ಮನೆಗಳಲ್ಲಿ ನೆಲೆಸಿರುವವರ ಜೀವನದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರುತ್ತದೆ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ಆದಾಯ ಕಡಿಮೆ ಮಟ್ಟದಲ್ಲಿದ್ದರೂ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ನಿಧಾನ ಗತಿಯಲ್ಲಿ ಕೆಲಸ ಕಾರ್ಯಗಳು ಸಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿದಲ್ಲಿ ಮಾತ್ರ ಗಳಿಸಿದ ಹಣವು ಪರರ ಪಾಲಾಗುತ್ತದೆ. ಬಾಗಿಲುಗಳು, ಗೇಟ್ ನಲ್ಲಿರುವ ಬಾಗಿಲುಗಳು ಮತ್ತು ಕೀಟಕಿಯಲ್ಲಿನ ಬಾಗಿಲುಗಳ ಒಟ್ಟು ಮೊತ್ತವು 8 ಅಥವಾ 17 ಆಗಬಾರದು.
ಗೇಟ್ ನ ಬಾಗಿಲುಗಳು ಸಮಾನವಾದ ಅಳತೆಯನ್ನು ಹೊಂದಿರಬೇಕು. ಹೀಗಿದ್ದ ಪಕ್ಷದಲ್ಲಿ ಉತ್ತಮ ಫಲಿತಾಂಶಗಳು ಅಧಿಕವಾಗುತ್ತವೆ. ಮನೆಯ ಮುಂಭಾಗದಲ್ಲಿ ವಾಸ್ತು ಕನ್ನಡಿಯನ್ನು ಸ್ಥಾಪಿಸಿದರೆ ಶುಭಫಲಗಳು ದೊರೆಯುತ್ತವೆ. ಮನೆಯ ಮುಂದೆ ಒಣಗಿದ ಮರ ಗಿಡಗಳು ಇರಬಾರದು. ಹಾಗೆಯೇ ಮುಳ್ಳಿರುವ ಗಿಡಗಳನ್ನು ಬೆಳೆಸಬಾರದು. ಸಾಮಾನ್ಯವಾಗಿ ಇಲ್ಲಿ ಗಿಡಮರಗಳು ಬೆಳೆಯುವುದಿಲ್ಲ. ಚೆನ್ನಾಗಿರುವ ಗಿಡಗಳಿದ್ದಲ್ಲಿ ಇಲ್ಲಿ ನೆಲೆಸುವ ಪುರುಷರಿಗೆ ಶುಭಫಲಗಳು ದೊರೆಯುತ್ತವೆ. ಮನೆಯಲ್ಲಿನ ಪೂಜಾ ಗೃಹದಲ್ಲಿ ದೀಪವು ಬೆಳಗಿದ್ದಲ್ಲಿ ವಿಶೇಷವಾದಂತಹ ಶುಭಫಲಗಳು ದೊರೆಯುತ್ತವೆ.
ಮನೆಗೆ 9 ಬಾಗಿಲುಗಳು ಇದ್ದರೆ ಏನೆಲ್ಲಾ ಶುಭ ಫಲಗಳಿವೆ
ಒಂದು ಮನೆಗೆ 9 ಬಾಗಿಲುಗಳು ಇದ್ದರೆ, ಆ ಮನೆಯವರು ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಇರುತ್ತದೆ. ಅಧಿಕವಾದ ಅಸಹನೆ ಅಥವಾ ಕೋಪದ ಭಾವನೆ ನೆಲೆಸಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸಾಗುವುದಿಲ್ಲ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಕಂಡು ಬರುತ್ತದೆ. ಆದ್ದರಿಂದ ಮುಂಭಾಗಿಲು ತೆಗೆದ ತಕ್ಷಣ ಮನೆಗೆ ಬರುವವರಿಗೆ ದುರ್ಗೆಯ ಭಾವಚಿತ್ರ ಕಾಣುವಂತೆ ಇರಬೇಕು. ಪ್ರತಿದಿನವೂ ಗುರುಗಳ ಪೂಜೆಯನ್ನು ಮಾಡಿದಲ್ಲಿ ದೋಷಗಳು ಕಡಿಮೆ ಆಗುತ್ತದೆ. ಪೂರ್ವದಲ್ಲಿ ಇರಿಸಿರುವ ಬಾಗಿಲು ಉಳಿದ ಬಾಗಿಲುಗಳಿಗಿಂತ ಎತ್ತರವಾಗಿದ್ದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.
ನೆನಪಿರಲಿ
ಅಲಂಕಾರಕ್ಕಾಗಿ ಓರೆಯಾಗಿರುವ ಅಥವಾ ಉಬ್ಬಿರುವ ಬಾಗಿಲುಗಳನ್ನು ಇರಿಸಬಾರದು. ಮುಖ್ಯದ್ವಾರಕ್ಕೆ ಎದುರಾಗಿ ಮೆಟ್ಟಿಲುಗಳನ್ನು ಇರಿಸಬಾರದು. ಈಶಾನ್ಯ, ಆಗ್ನೇಯ, ನೈರುತ್ಯ ಮತ್ತು ವಾಯುವ್ಯ ಮೂಲೆಗಳಲ್ಲಿ ಮುಖ್ಯದ್ವಾರ ಇರಬಾರದು. ಮುಖ್ಯದ್ವಾರದ ಮುಂಭಾಗದಲ್ಲಿ ದೇವಾಲಯದ ಅಥವಾ ಅರಳಿ ಮರದ ನೆರಳು ಬೀಳಬಾರದು. ಸಾಧ್ಯವಾದಷ್ಟು ಪ್ರತಿಯೊಂದು ಬಾಗಿಲುಗಳಿಗೂ ಹೊಸಿಲನ್ನು ಇರಿಸಬೇಕು. ಒಣಗಿದ ಗಿಡಗಳಿಗೆ ನೀರನ್ನು ಹಾಕಬಾರದು. ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಶೌಚಾಲಯದ ಬಾಗಿಲು ಇರಬಾರದು. ಹಾಗೆಯೇ ಮುಖ್ಯದ್ವಾರದ ಎದುರಾಗಿ ದೇವರಕೋಣೆಯ ಬಾಗಿಲು ಇರಬಾರದು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ವಾಸ್ತು ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾಸ್ತುಶಾಸ್ತ್ರವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
