ಲಕ್ಷ್ಮೀ ವಾಹನ ಗೂಬೆ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ? ವಾಸ್ತುಶಾಸ್ತ್ರ ಏನು ಹೇಳುತ್ತದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಲಕ್ಷ್ಮೀ ವಾಹನ ಗೂಬೆ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ? ವಾಸ್ತುಶಾಸ್ತ್ರ ಏನು ಹೇಳುತ್ತದೆ?

ಲಕ್ಷ್ಮೀ ವಾಹನ ಗೂಬೆ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ? ವಾಸ್ತುಶಾಸ್ತ್ರ ಏನು ಹೇಳುತ್ತದೆ?

Vastu Shastra: ಗೂಬೆಯನ್ನು ಕೆಲವರು ಶುಭವೆಂದೂ, ಇನ್ನೂ ಕೆಲವರು ಅಶುಭದ ಸಂಕೇತವೆಂದೂ ಪರಿಗಣಿಸುತ್ತಾರೆ. ಆದರೆ ಲಕ್ಷ್ಮೀ ವಾಹನ ಗೂಬೆ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ? ವಾಸ್ತುಶಾಸ್ತ್ರ ಏನು ಹೇಳುತ್ತದೆ? ನೋಡೋಣ.

ಲಕ್ಷ್ಮೀ ವಾಹನ ಗೂಬೆಯ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ
ಲಕ್ಷ್ಮೀ ವಾಹನ ಗೂಬೆಯ ಫೋಟೋವನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಳ್ಳಬಹುದೇ (PC: Unsplash)

ಹಿಂದೂ ಧರ್ಮದಲ್ಲಿ ಕೆಲವೊಂದು ಪ್ರಾಣಿ ಪಕ್ಷಿಗಳನ್ನು ಶುಭವೆಂದೂ, ಕೆಲವು ಅಶುಭವೆಂದೂ ನಂಬಲಾಗಿದೆ. ನವಿಲು, ನಂದಿ, ಆನೆ ಸೇರಿದಂತೆ ದೇವರ ವಾಹನಗಳಾದ ಪ್ರಾಣಿ, ಪಕ್ಷಿಗಳನ್ನು ನೋಡುವುದು, ಅವುಗಳ ಫೋಟೋವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಮನೆಗೆ ಶ್ರೇಯಸ್ಸು ಎಂದು ನಂಬಲಾಗಿದೆ. ಹಾಗಾದರೆ ಲಕ್ಷ್ಮಿಯ ವಾಹನ ಗೂಬೆಯ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆ ಕಾಡುವುದು ಸಹಜ.

ಗೂಬೆಯನ್ನು ಲಕ್ಷ್ಮಿಯ ವಾಹನವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಗೂಬೆ ಕೂಡಾ ಪವಿತ್ರ. ಆದ್ದರಿಂದ ಅನೇಕ ಜನರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗೂಬೆಯ ಫೋಟೋ ಅಥವಾ ಪ್ರತಿಮೆಯನ್ನು ಇಡುತ್ತಾರೆ. ಕಟ್ಟಡಗಳು ಮತ್ತು ಕಚೇರಿಗಳಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆದರೆ ಕೆಲವರು ಗೂಬೆಯನ್ನು ಅಶುಭ, ಅಪಶಕುನದ ಸಂಕೇತ ಎನ್ನುತ್ತಾರೆ. ಇದರ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ? ಗೂಬೆಯ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭವೋ, ಸಮಸ್ಯೆಯೋ ನೋಡೋಣ.

ಲಕ್ಷ್ಮೀ ಆಶೀರ್ವಾದ ದೊರೆತಂತೆ

ಹಿಂದೂ ಧರ್ಮದಲ್ಲಿ ಗೂಬೆಯ ಬಗ್ಗೆ ವಿವಿಧ ನಂಬಿಕೆಗಳಿವೆ. ಕೆಲವರು ಗೂಬೆಯನ್ನು ಶುಭವೆಂದು ಪರಿಗಣಿಸಿದರೆ ಇನ್ನು ಕೆಲವರು ಅಶುಭವೆಂದು ಪರಿಗಣಿಸುತ್ತಾರೆ. ಗೂಬೆ ಫೋಟೋಗಳು ಅಥವಾ ವಿಗ್ರಹಗಳು ಲಕ್ಷ್ಮಿಯ ಆಶೀರ್ವಾದವನ್ನು ತರುತ್ತವೆ ಎಂದು ನಂಬಲಾಗಿದೆ. ಆದರೆ ವಾಸ್ತುವನ್ನು ಅನುಸರಿಸಿ ಮತ್ತು ಸರಿಯಾದ ನಿರ್ದೇಶನದ ನಿಯಮಗಳನ್ನು ಅನುಸರಿಸಿ, ಈ ಪಕ್ಷಿಗಳ ಪ್ರತಿಮೆಗಳನ್ನು ಮನೆ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳಬಹುದು. ಆದರೆ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ.

ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಗೂಬೆಯ ಪ್ರತಿಮೆಯನ್ನು ಇರಿಸುವುದು ನಿಮಗೆ ಯಶಸ್ಸನ್ನು ತರುತ್ತದೆ. ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಒಂದು ಮಾರ್ಗವಾಗಿದೆ. ಇದಲ್ಲದೆ, ಕಚೇರಿಯಲ್ಲಿ ಧನಾತ್ಮಕ ಶಕ್ತಿಯ ಹರಿವಿಗೆ ಅಡೆತಡೆಗಳು ನಿವಾರಣೆಯಾಗುತ್ತವೆ. ಗೂಬೆಯ ಪ್ರತಿಮೆ ಅಥವಾ ಫೋಟೋವನ್ನು ಕಚೇರಿ ಅಥವಾ ಅಂಗಡಿಯಲ್ಲಿನ ಕೌಂಟರ್‌ನಲ್ಲಿ, ಖಾತೆ ಪುಸ್ತಕಗಳ ಬಳಿ ಅಥವಾ ನಿಮ್ಮ ಕಂಪ್ಯೂಟರ್ ಡೆಸ್ಕ್‌ನಲ್ಲಿ ಇರಿಸಬಹುದು. ಆದರೆ ಗೂಬೆಯ ವಿಗ್ರಹ ಅಥವಾ ಫೋಟೋ, ನಿಮ್ಮ ಬಲಭಾಗದಲ್ಲಿ ಇರಬೇಕು. ಹೀಗೆ ಇಡುವುದರಿಂದ ನಿಮ್ಮ ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಣೆ ಆಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುತ್ತದೆ.

ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು?

ಮನೆಯಲ್ಲಿ ಗೂಬೆಯ ಫೋಟೊ, ಪ್ರತಿಮೆಗಳನ್ನು ಇಡಬೇಕೆಂದರೆ ಲಿವಿಂಗ್ ರೂಂ, ಸ್ಟಡಿ ರೂಂನಲ್ಲಿ ಇಡಬಹುದು. ಮನೆಯಲ್ಲಿ ಗೂಬೆಯ ಪ್ರತಿಮೆ ಅಥವಾ ನಕ್ಷೆ ಇದ್ದರೆ ತುಂಬಾ ಒಳ್ಳೆಯದು. ಮನೆಯಲ್ಲಿ ಗೂಬೆಯ ಫೋಟೋ ಇದ್ದರೆ ಮನೆಗೆ ಬೀಳುವ ದೃಷ್ಟಿಯನ್ನು ತಡೆಯುತ್ತದೆ, ನಕಾರಾತ್ಮಕ ಶಕ್ತಿ ಹರಡದಂತೆ ತಡೆಯುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಗೂಬೆಯ ಫೋಟೋ ಎಲ್ಲರಿಗೂ ಕಾಣುವಂತೆ ಮನೆಯಲ್ಲಿ ಇಡಬೇಕು. ಮನೆಯ ಮುಂಬಾಗಿಲಿನಿಂದ ಕಾಣುವಂತೆ ಇಡುವುದು ತುಂಬಾ ಒಳ್ಳೆಯದು. ಕುಟುಂಬದ ಫೋಟೋ ಬಳಿ ಕೂಡಾ ಗೂಬೆಯ ಪ್ರತಿಮೆ ಅಥವಾ ಫೋಟೋವನ್ನು ಇರಿಸುವುದು ಸಹ ಪ್ರಯೋಜನಕಾರಿ ಎಂದು ನಂಬಲಾಗಿದೆ. ಇದು ಕುಟುಂಬ ಸದಸ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.