ಈಶಾನ್ಯದಲ್ಲಿ 3 ದಾರಿ ಕೂಡುವ ರಸ್ತೆ ಇದ್ದರೆ ಒಳ್ಳೆದಲ್ವಾ? ಮನೆ ಸಮೀಪದ ಮೂರು ದಾರಿಯ ದಿಕ್ಕಿನ ಶುಭ, ಅಶುಭ ಫಲಿತಾಂಶಗಳಿವು-vastu shastra is it good if we have 3 lane road in north east auspicious inauspicious details here sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈಶಾನ್ಯದಲ್ಲಿ 3 ದಾರಿ ಕೂಡುವ ರಸ್ತೆ ಇದ್ದರೆ ಒಳ್ಳೆದಲ್ವಾ? ಮನೆ ಸಮೀಪದ ಮೂರು ದಾರಿಯ ದಿಕ್ಕಿನ ಶುಭ, ಅಶುಭ ಫಲಿತಾಂಶಗಳಿವು

ಈಶಾನ್ಯದಲ್ಲಿ 3 ದಾರಿ ಕೂಡುವ ರಸ್ತೆ ಇದ್ದರೆ ಒಳ್ಳೆದಲ್ವಾ? ಮನೆ ಸಮೀಪದ ಮೂರು ದಾರಿಯ ದಿಕ್ಕಿನ ಶುಭ, ಅಶುಭ ಫಲಿತಾಂಶಗಳಿವು

ಮೂರು ದಾರಿ ಕೂಡುವ ದಿಕ್ಕುಗಳ ಬಗ್ಗೆ ಕೆಲವರು ಶುಭ, ಅಶುಭ ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಾರೆ. ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ಮೂರು ದಾರಿ ಸೇರಿದ ರಸ್ತೆ ಇದ್ದಲ್ಲಿ ಜೀವನದಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆಯೇ? ಎಂಬುದರ ಬಗ್ಗೆ ವಿವರಿಸಲಾಗಿದೆ. (ಬರಹ: ಜ್ಯೋತಿಷಿ ಎಚ್‌. ಸತೀಶ್‌)

ಮನೆಯ ಈಶಾನ್ಯ ದಿಕ್ಕಿನಲ್ಲಿ ಮೂರು ದಾರಿ ಸೇರುವ ಸ್ಥಳವಿದ್ದರೆ ಒಳ್ಳೆಯದಾ, ಕೆಟ್ಟದ್ದಾ ಎಂಬುದನ್ನು ತಿಳಿಯಿರಿ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಮೂರು ದಾರಿ ಸೇರುವ ಸ್ಥಳವಿದ್ದರೆ ಒಳ್ಳೆಯದಾ, ಕೆಟ್ಟದ್ದಾ ಎಂಬುದನ್ನು ತಿಳಿಯಿರಿ.

ಕೆಲವರು ತಮ್ಮ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸುತ್ತಾರೆ. ಆದರೆ ಅವರಿಗೆ ಇದಷ್ಟೇ ತೃಪ್ತಿ ನೀಡುವುದಿಲ್ಲ. ಮನೆಗೆ ಬರುವ ದಾರಿ, ಅಕ್ಕ ಪಕ್ಕದ ದಾರಿಗಳ ವಾಸ್ತುವನ್ನು ನೋಡುತ್ತಾರೆ. ಮನೆಯ ಈಶಾನ್ಯ ದಿನಕ್ಕಿನಲ್ಲಿ ಮೂರು ದಾರಿ ಸೇರುವ ಜಾಗವಿದ್ದರೆ ಅದು ಒಳ್ಳೆಯದಾ, ಕೆಟ್ಟದ್ದಾ? ಅದನ್ನು ತಿಳಿದುಕೊಳ್ಳೋಣ. ಕೆಲವೊಂದು ಬಾರಿ ಮೂರು ದಾರಿ ಅಥವಾ ರಸ್ತೆ ಸೇರುವ ಸ್ಥಳದಿಂದ ತೊಂದರೆ ಉಂಟಾಗುತ್ತದೆ. ಆದರೆ ಅದಕ್ಕೆ ಸರಿಯಾದ ಪರಿಹಾರವನ್ನು ಮಾಡಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಪರಿಸ್ಥಿಯ ಕಡೆಗಣನೆಯಿಂದ ಮಾತ್ರ ಅಸಮಂಜಸ ಫಲಿತಾಂಶಗಳನ್ನು ಪಡೆಯಬೇಕಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಮೂರು ದಾರಿ ಕೂಡುವ ವಿಚಾರಕ್ಕೆ ಸಂಬಂಧಿಸಿದಂತೆ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ಮೂರು ದಾರಿ ಸೇರಿದ ರಸ್ತೆ ಇದ್ದಲ್ಲಿ ಜೀವನದಲ್ಲಿ ಹಲವು ಬಾರಿ ಅಡ್ಡಿ ಆತಂಕಗಳು ಎದುರಾಗುತ್ತದೆ. ಪ್ರಮುಖ ಕೆಲಸ ಕಾರ್ಯಗಳಾದರೂ ಆಸಕ್ತಿಯಿಂದ ಅದನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸರಳವಾದ ಕೆಲಸ ಕಾರ್ಯಗಳಾದರೂ ಬೇರೆಯವರ ಸಹಾಯ ಅವಶ್ಯಕವಾಗುತ್ತದೆ. ಅತಿ ಮುಖ್ಯವಾದ ಕೆಲಸಗಳು ಅನಾವಶ್ಯಕವಾಗಿ ಮುಂದೂಡಲ್ಪಡುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ತನ್ನ ಸಹಪಾಠಿಗಳ ಜೊತೆಗೂಡಿ ಅಭ್ಯಾಸದಲ್ಲಿ ತೊಡಗಿದರೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇವರ ಸಹಪಾಠಿಗಳು ಸ್ವಯಂ ಪ್ರೇರಿತರಾಗಿ ಇವರಿಗೆ ಸಹಾಯ ಮಾಡುವ ಬಂದರು ಅದನ್ನು ತಿರಸ್ಕರಿಸುತ್ತಾರೆ.

ಮನೆಯ ಈಶಾನ್ಯ ದಿಕ್ಕಿನಲ್ಲಿ ಮೂರು ದಾರಿ ಕೂಡುವ ರಸ್ತೆ ಇದ್ದರೆ ಏನೆಲ್ಲಾ ಸಮಸ್ಯೆ?

ಮನೆ ಸಮೀಪ ಈಶಾನ್ಯ ದಿಕ್ಕಿಗೆ ಮೂರು ದಾರಿ ಕೂಡುವ ರಸ್ತೆ ಇದ್ದರೆ, ಸಂತಾನದ ವಿಚಾರದಲ್ಲಿ ತೊಂದರೆಯನ್ನುಎದುರಿಸಬಹುದು. ಇಂತಹ ಮನೆಯಲ್ಲಿ ವಾಸಿಸುವವರ ಮಕ್ಕಳ ಆರೋಗ್ಯದಲ್ಲಿ ಏರುಪೇರು ಇರುತ್ತೆ. ದಿನ ಕಳೆದಂತೆ ಕ್ರಮೇಣವಾಗಿ ಆರೋಗ್ಯವು ಸುಧಾರಿಸುತ್ತದೆ. ಉದ್ಯೋಗ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಒಡನೆ ಒಳ್ಳೆಯ ಸಂಬಂಧ ಇರುವುದಿಲ್ಲ. ಶಾಂತಿ ಸಹನೆಯಿಂದ ವರ್ತಿಸಿ ಬುದ್ದಿವಂತಿಕೆಯಿಂದ ಮಾತನಾಡಿದರೆ ಮಾತ್ರ ಜೀವನದಲ್ಲಿ ಕಾಣಬಹುದು. ವಂಶಕ್ಕೆ ಸಂಬಂಧಿಸಿದ ಆಸ್ತಿಯ ವಿಚಾರದಲ್ಲಿ ಅನಪೇಕ್ಷಿತ ಬೆಳವಣಿಗೆಗಳು ಕಂಡುಬರುತ್ತವೆ. ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಆದರೆ ಮನೆಯ ಒಳಭಾಗದಲ್ಲಿ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇದ್ದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಮನೆ ವಾಸ್ತು ದೋಷಕ್ಕೆ ಪರಿಹಾರಗಳು

ಮನೆಯ ಒಳ ಭಾಗದಲ್ಲಿ ದೇವ ಮೂಲೆಯಲ್ಲಿ ಪಿರಮಿಡ್ ಇಟ್ಟರೆ ವಾಸ್ತುವಿನ ದೋಷವು ಪರಿಹಾರಗೊಳ್ಳುತ್ತದೆ. ಪೂರ್ವದ ಗೋಡೆಗೆ ನೀಲಿ ಅಥವಾ ಹಾಲಿನ ಬಣ್ಣವನ್ನು ಬಳಸಬಾರದು. ಕೆಂಪು ಬಣ್ಣಕ್ಕೆ ಸಂಬಂಧಿಸಿದ ಬಣ್ಣವು ಹೆಚ್ಚು ಲಾಭದಾಯಕವಾಗಿರುತ್ತದೆ. ಈ ಗೋಡೆಗೆ ಕೇಸರಿ ಮತ್ತು ಹಳದಿ ಬಣ್ಣಗಳು ಉಪಯುಕ್ತವಾಗುತ್ತದೆ. ಮನೆಯ ಹೊರಭಾಗದಲ್ಲಿ ಪೂರ್ವದ ಗೋಡೆಯ ಬಳಿ ಹೂವಿನ ಗಿಡಗಳು ಇದ್ದಲ್ಲಿ ಅದು ಯಶಸ್ಸಿಗೆ ದಾರಿಯಾಗುತ್ತದೆ. ಇಂತಹ ಮನೆಯಲ್ಲಿ ಮೀನಿನ ತೊಟ್ಟಿ ಇಡುವುದು ಒಳ್ಳೆಯದು. ಪೂರ್ವ ದಿಕ್ಕಿನಲ್ಲಿ ಕಿಟಕಿ ಇದ್ದಲ್ಲಿ ಯಾವುದೇ ದೋಷ ಕಂಡು ಬರುವುದಿಲ್ಲ. ಮುಖ್ಯವಾದ ವಿಚಾರವೆಂದರೆ ಇವರು ದಕ್ಷಿಣ ಭಾಗದಲ್ಲಿರುವ ಗೇಟನ್ನು ಬಳಸಬಾರದು.

ಪೂರ್ವದ ರಸ್ತೆಯಲ್ಲಿ ಆಗ್ನೇಯ ಮೂಲೆಗೆ ಮೂರು ದಾರಿಗಳು ಸೇರಿದರೆ ನಿರೀಕ್ಷಿತ ಫಲಗಳು ದೊರೆಯುತ್ತವೆ. ಇಂತಹ ಕಡೆ ಇರುವ ಮನೆಯಲ್ಲಿ ವಾಸಿಸುವವರಿಗೆ ನಿರಾಸೆ ಹೆಚ್ಚಿರುತ್ತೆ. ಆರಂಭಿಸುವ ಸುಲಭವಾದ ಕೆಲಸ ಕಾರ್ಯಗಳಲ್ಲಿಯೂ ಸೋಲುಂಟಾಗಬಹುದು. ಆದರೆ ಇಂತಹ ಮನೆಗಳಲ್ಲಿನ ಹೆಣ್ಣು ಮಕ್ಕಳು ಸುಖ ಜೀವನ ನಡೆಸುತ್ತಾರೆ. ಇಲ್ಲಿರುವ ಪುರುಷರು ತಮ್ಮ ಜೀವನದ ಪ್ರತಿಯೊಂದು ಹಾದಿಯಲ್ಲಿಯೂ ಹಿನ್ನಡೆ ಪಡೆಯುತ್ತಾರೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಚಿಕ್ಕ ಪುಟ್ಟ ವಿಚಾರಗಳಿಗೂ ಸಹನೆಯನ್ನು ಕಳೆದುಕೊಂಡು ಉದ್ವೇಗದಿಂದ ವರ್ತಿಸುವರು. ಮಕ್ಕಳಿಂದ ಇವರಿಗೆ ಯಾವುದೇ ಅನುಕೂಲತೆ ದೊರೆಯುವುದಿಲ್ಲ.

ಈ ರೀತಿ ಮನೆಯನ್ನು ಹೊಂದಿರುವವರಿಗೆ ದೊರೆಯಬೇಕಾದ ಗೌರವ ಮತ್ತು ಉತ್ತೇಜನ ದೊರೆಯುವುದಿಲ್ಲ. ದುಡುಕಿ ಮಾತನಾಡುವ ಕಾರಣ ಉದ್ಯೋಗದಲ್ಲಿ ಅನಾವಶ್ಯಕವಾಗಿ ವಿವಾದಗಳು ಎದುರಾಗುತ್ತವೆ. ಸಹೋದ್ಯೋಗಿಗಳ ಕಾರಣದಿಂದ ಕಿರಿಯ ಅಧಿಕಾರಿಗಳ ಜೊತೆ ಮನಸ್ತಾಪ ಉಂಟಾಗುತ್ತದೆ. ಕುಟುಂಬದಲ್ಲಿ ಹಿರಿಯರ ಮನದಾಸೆಯನ್ನು ತೀರಿಸಲು ಹೋರಾಟ ಮಾಡಬೇಕು.ಬಾಳ ಸಂಗಾತಿಯ ಸಹಾಯ ಸಹಕಾರ ಇರುವ ಕಾರಣ ಎದುರಾಗುವ ವಿವಾದಗಳಿಂದ ದೂರವಾಗಬಹುದು. ವಿಶೇಷವಾದಂತಹ ಪ್ರತಿಭೆ ಉಳ್ಳವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ವಿಶೇಷ ಚೇತನರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ಸಹಕಾರ ದೊರೆಯುತ್ತದೆ. ಆದರೆ ಪೂರ್ವದ ಗೋಡೆಗೆ ಸಂಬಂಧಿಸಿದಂತೆ ನೈರುತ್ಯ ಕೋಣೆಯ ಕಡೆಯಲ್ಲಿ, ಮನೆಯ ಒಳಭಾಗದಲ್ಲಿ ಪಿರಮಿಡ್ ಗಳನ್ನು ಇಟ್ಟಲ್ಲಿ ಎಲ್ಲಾ ರೀತಿಯ ಅನುಕೂಲತೆಗಳು ದೊರೆಯುತ್ತವೆ. ಜೀವನದ ಕಷ್ಟ ನಷ್ಟಗಳು ಮರೆಯಾಗಿ ಸುಖವಾಗಿ ಜೀವನ ನಡೆಸಬಹುದು.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.