ಮಹಾಲಕ್ಷ್ಮೀ ಅನುಗ್ರಹಕ್ಕೆ ಹಾತೊರೆಯುವವರು ತಿಳಿದಿರಬೇಕಾದ ವಾಸ್ತು ಸಲಹೆ ಇದು; ಪೊರಕೆ ಅಂದ್ರೆ ಕಡಿಮೆ ಅಲ್ಲ
Vastu Tips for Broom: ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುವ ಪೊರಕೆಯನ್ನು ಇಡುವುದಕ್ಕೂ ಕ್ರಮವಿದೆ. ಮಹಾಲಕ್ಷ್ಮೀ ಅನುಗ್ರಹಕ್ಕೆ ನೀವು ಪಾತ್ರರಾಗಬೇಕೆಂದರೆ, ಪೊರಕೆ ಬಳಕೆಗೆ ಸಂಬಂಧಿಸಿದ ಈ ಅಂಶಗಳು ನಿಮಗೆ ತಿಳಿದಿರಬೇಕು.
ಮನೆಯನ್ನು ಸ್ವಚ್ಛಗೊಳಿಸಲು ಪ್ರತಿದಿನ ಪೊರಕೆ ಬಳಸಲಾಗುತ್ತದೆ. ಮನೆಯನ್ನು ಶುಭ್ರವಾಗಿಸುವ ಪೊರಕೆಯನ್ನು ಮನೆಯ ಒಂದು ಮೂಲೆಯಲ್ಲಿಡುವವರೇ ಹೆಚ್ಚು. ಆದರೆ, ಈ ಪೊರಕೆಯು ಮನೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಸ್ವಚ್ಛತೆಗೆ ಮಹತ್ವ ಹೆಚ್ಚು. ಈ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮನೆಯಲ್ಲಿ ಲಕ್ಷ್ಮೀ ನೆಲೆಸಬೇಕೆಂದರೆ, ಮಹಾಲಕ್ಷ್ಮೀ ಅನುಗ್ರಹ ಸಿಗಬೇಕೆಂದರೆ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಹೀಗಾಗಿ ಪೊರಕೆಗೆ ಸಂಬಂಧಿಸಿದಂತೆ ಕೆಲವು ಅಂಶಗಳ ಕುರಿತಂತೆ ಮನೆಯಲ್ಲಿ ಎಚ್ಚರದಿಂದ ಇರಬೇಕು. ಇದು ಮನೆಯಲ್ಲಿ ಸುಖ ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಜೊತೆಗೆ ಲಕ್ಷ್ಮೀ ದೇವಿಯ ಆಶೀರ್ವಾದವು ಕುಟುಂಬದ ಸದಸ್ಯರ ಮೇಲೆ ಇರುತ್ತದೆ. ಹೀಗಾಗಿ ಪೊರಕೆಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳನ್ನು ತಿಳಿದುಕೊಳ್ಳೋಣ.
ವಾಸ್ತು ಪ್ರಕಾರ, ಈಶಾನ್ಯ ದಿಕ್ಕನ್ನು ದೇವರು ಮತ್ತು ದೇವತೆಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಅದು ಹಣದ ಆಗಮನದ ಮಾರ್ಗವನ್ನು ತಡೆಯುತ್ತದೆ ಎಂದು ನಂಬಲಾಗಿದೆ.
ವಾಸ್ತು ಪ್ರಕಾರ, ಪೊರಕೆಯನ್ನು ಆಗ್ನೇಯ ದಿಕ್ಕಿನಲ್ಲಿಯೂ ಇಡಬಾರದು. ಈ ದಿಕ್ಕು ಬೆಂಕಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ಹೆಚ್ಚು ನಕಾರಾತ್ಮಕ ಆಲೋಚನೆಗಳು ಬರುತ್ತವೆ ಎಂದು ನಂಬಲಾಗಿದೆ.
ವಾಸ್ತುವಿನಲ್ಲಿ ಪೊರಕೆಯನ್ನು ಇಡಲು ಉತ್ತಮ ದಿಕ್ಕನ್ನು ವಾಯುವ್ಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಪೊರಕೆಯನ್ನು ಮನೆಯ ಅಡುಗೆ ಕೋಣೆಯಲ್ಲಿ ಮತ್ತು ಮನೆಯ ಪೂಜಾ ಕೋಣೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಪೊರಕೆಯನ್ನು ಚರಂಡಿ ಅಥವಾ ಗಲೀಜು ಇರುವ ಜಾಗದಲ್ಲಿ ಇಡಬಾರದು. ಇದೇ ವೇಳೆ ಪೊರಕೆ ಮೇಲೆ ಕಾಲು ಇಡಬಾರದು ಅಥವಾ ಕಾಲಿನಿಂದ ಅದನ್ನು ತುಳಿಯಬಾರದು.
ಪೊರಕೆಯನ್ನು ನಿಲ್ಲಿಸಿ ಇಡುವುದು ಕೂಡಾ ಸರಿಯಾದ ಕ್ರಮ ಅಲ್ಲ ಎಂದು ವಾಸ್ತು ಹೇಳುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಯಾವಾಗಲೂ ನೆಲದಲ್ಲಿ ಇಡಬೇಕು.
ವಾಸ್ತು ಪ್ರಕಾರ, ಪೊರಕೆ ಹಾಳಾದರೆ ಅಥವಾ ಸಂಪೂರ್ಣವಾಗಿ ಹಾನಿಯಾದರೆ, ಅದನ್ನು ತಕ್ಷಣ ಮನೆಯಿಂದ ಹೊರಹಾಕಬೇಕು. ಬಳಕೆಗೆ ಯೋಗ್ಯವಲ್ಲದೆ ಪೊರಕೆಯನ್ನು ಮನೆಯೊಳಗೆ ಇಡಬಾರದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.