ಮನೆಯಲ್ಲಿ ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿ ಇದ್ದರೆ ಏನು ಪ್ರಯೋಜನ; ತಾರಿಸಿನ ವಾಸ್ತು ಬಗ್ಗೆಯೂ ತಿಳಿಯಿರಿ
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿನ ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿ ಇರಬೇಕು, ತಾರಸಿನ ಬಗ್ಗೆಯೂ ವಾಸ್ತುವಿನಲ್ಲಿ ಹೇಳಲಾಗಿದೆ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆಗಾಗಿ ಮನೆಯಲ್ಲಿ ಮೆಟ್ಟಿಲುಗಳು ಪೂರ್ವ ಆಗ್ನೇಯ ದಿಕ್ಕಿನಲ್ಲಿರಬೇಕು.

ಜನ್ಮ ಕುಂಡಲಿಯು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧ ಪಟ್ಟಿರುತ್ತದೆ. ಆದರೆ ಒಂದು ಮನೆಯ ವಾಸ್ತು ಆ ಮನೆಯಲ್ಲಿ ನೆಲೆಸಿರುವ ಎಲ್ಲರಿಗೂ ಸಂಬಂಧ ಪಡುತ್ತದೆ. ಆದ್ದರಿಂದ ವಾಸ್ತುವಿನ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮಹಡಿಯ ಮೆಟ್ಟಿಲುಗಳು ಪೂರ್ವ ಆಗ್ನೇಯದ ಭಾಗದಲ್ಲಿ ಇರುವುದು ಒಳ್ಳೆಯದು. ಇದರಿಂದ ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಕುಟುಂಬದ ಸದಸ್ಯರ ಆರೋಗ್ಯವು ಉತ್ತಮಗೊಳ್ಳುತ್ತದೆ. ಗುರುಗಳ ಮತ್ತು ಕುಲದೈವರ ಅನುಗ್ರಹವು ದೊರೆಯುತ್ತದೆ. ಕುಟುಂಬದ ಕಿರಿಯರು ಮನೆತನದ ಹಿರಿಯರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ.
ಮಹಡಿಯ ಮೆಟ್ಟಿಲುಗಳನ್ನು ಉತ್ತರ ವಾಯುವ್ಯದ ಭಾಗದಲ್ಲಿ ಇರುವುದು ಹೆಚ್ಚು ಲಾಭದಾಯಕ. ಇಂತಹ ಮನೆಯಲ್ಲಿ ವಾಸಿಸುವ ವಯೋವೃದ್ದರ ಜೀವನದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಅವರ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಮನೆತನದಲ್ಲಿ ವಿಶೇಷ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ಇಂತಹ ಮನೆಯಲ್ಲಿ ವಾಸಿಸುವವರಿಗೆ ಸಮಾಜದಲ್ಲಿ ಉನ್ನತ ಗೌರವ ಮತ್ತು ಸ್ಥಾನ ಮಾನ ಲಭಿಸುತ್ತದೆ. ಸ್ವಂತ ವ್ಯಾಪಾರ ವ್ಯವಹಾರ ಇದ್ದಲ್ಲಿ ಜನಪ್ರಿಯತೆಯೂ ದೊರೆಯುತ್ತದೆ. ಮನೆತನದ ಹಣಕಾಸಿನ ಜವಾಬ್ದಾರಿ ಇವರಿಗೆ ದೊರೆಯುತ್ತದೆ. ಆದರೆ ತಾರಸಿಗೆ ನೇರವಾಗಿ ತೆರಳುವ ಹಾಗೆ ಮೆಟ್ಟಿಲುಗಳನ್ನು ನಿರ್ಮಿಸುವುದು ಒಳ್ಳೆಯದಲ್ಲ. ಇದರಿಂದ ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಬಂಧುಬಳಗದಲ್ಲಿ ಇವರ ಬಗ್ಗೆ ಗಮನ ಇರುವುದಿಲ್ಲ. ಸತತ ಪ್ರಯತ್ನದ ನಡುವೆಯು ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಅತಿಯಾದ ಆಸೆಯಿಂದ ಅಥವಾ ನಿರೀಕ್ಷೆಯಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಮನೆಯಲ್ಲಿ ಮೆಟ್ಟಿಲುಗಳನ್ನು ಎಲ್ ಆಕಾರದಲ್ಲಿ ನಿರ್ಮಿಸುವುದರಿಂದ ಏನೆಲ್ಲಾ ಲಾಭಗಳಿವೆ
ತಾರಸಿಗೆ ತೆರಳುವ ಮೆಟ್ಟಿಲುಗಳನ್ನು ಇಂಗ್ಲೀಷ್ ಭಾಷೆಯ L ಅಕ್ಷರದ ಆಕಾರದಲ್ಲಿ ನಿರ್ಮಿಸುವುದು ಹೆಚ್ಚು ಲಾಭಕರ. ಇದರಿಂದ ಈ ಮನೆಯಲ್ಲಿ ನೆಲೆಸಿರುವ ಜನರಿಗೆ ಎಲ್ಲರ ಸಹಾಯ ದೊರೆಯುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ಶೀಘ್ರಗತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಉನ್ನತ ಮಟ್ಟವನ್ನು ತಲುಪಲು ಇದರಿಂದ ಸಾಧ್ಯವಾಗುತ್ತದೆ. ಇದೇ ರೀತಿ ತಾರಸಿಗೆ ತೆರಳುವ ಮೆಟ್ಟಿಲುಗಳನ್ನು ವೃತ್ತಾಕಾರವಾಗಿ ನಿರ್ಮಿಸಬಹುದು. ಇದರಿಂದ ಕುಟುಂಬದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಿದರೂ ಯಶಸ್ಸು ಗಳಿಸುತ್ತದೆ. ಕುಟುಂಬದ ಹಿರಿಯರ ನಿರ್ಣಯಗಳನ್ನು ಎಲ್ಲರೂ ಗೌರವಿಸುತ್ತಾರೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಅನಿವಾರ್ಯದ ಪಕ್ಷದಲ್ಲಿ ದಕ್ಷಿಣದಲ್ಲಿ ಮಹಡಿಗೆ ತೆರಳುವ ಮೆಟ್ಟಿಲುಗಳನ್ನು ನಿರ್ಮಿಸಬಹುದು. ಆದರೆ ದಕ್ಷಿಣದಿಂದ ಉತ್ತರ ದಿಕ್ಕಿನ ಕಡೆಗೆ ನೋಡುವಂತೆ ನಿರ್ಮಿಸಬೇಕಾಗುತ್ತದೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಉಂಟಾದರೂ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಅಲ್ಲಿ ಬಳಸುವ ಸರಳುಗಳಿಗೆ ಹಸಿರು ಬಳ್ಳಿಯನ್ನು ಹಬ್ಬಿಸಬೇಕು. ಮೆಟ್ಟಲುಗಳನ್ನು ಹತ್ತುವ ಸ್ಥಳದಲ್ಲಿ ಹೂವಿನ ಗಿಡಗಳನ್ನು ಬೆಳೆಸಬೇಕು. ಸಾಧ್ಯವಾಗದೆ ಹೋದಲ್ಲಿ ಹೂ ಕುಂಡಗಳನ್ನು ಇರಿಸಬೇಕು. ಇದರಿಂದ ಶುಭಫಲಗಳನ್ನು ಹೆಚ್ಚಾಗಿ ಪಡೆಯಬಹುದಾಗಿದೆ. ಆದರೆ ಮೆಟ್ಟಿಲುಗಳನ್ನು ಹತ್ತಿ ಮನೆಯನ್ನು ಪವೇಶಿಸುವ ಮುನ್ನ ಕೈಕಾಲುಗಲುಗಳನ್ನು ಶುಭ್ರಗೊಳಿಸಬೇಕು.
ಪಶ್ಚಿಮ ಮತ್ತು ದಕ್ಷಿಣಕ್ಕೆ ಸೇರಿದಂತೆ ಮಹಡಿಯನ್ನು ತಲುಪಲು ಮೆಟ್ಟಿಲುಗಳನ್ನು ನಿರ್ಮಿಸಲೇಬೇಕಾದಲ್ಲಿ ಎಚ್ಚರಿಕೆ ವಹಿಸಬೇಕು. ಮಹಡಿಯಲ್ಲಿನ ಮನೆಯನ್ನು ಪೂರ್ವ ದಿಕ್ಕಿನಿಂದ ಪ್ರವೇಶಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಜೀವನದಲ್ಲಿನ ಕಷ್ಟ ನಷ್ಟಗಳು ಕ್ರಮೇಣವಾಗಿ ದೂರವಾಗುತ್ತವೆ. ಆದರೆ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು. ಕಪ್ಪು ಬಣ್ಣದ ಯಾವುದೇ ಪ್ರಾಣಿಯನ್ನು ಸಾಕುವುದು ಒಳ್ಳೆಯದು. ಮನೆಯ ಒಳಭಾಗದಲ್ಲಿಯೂ ಸಹ ಈ ಮೇಲಿನ ಅಂಶಗಳನ್ನೇ ಪಾಲಿಸಬೇಕು. ಮೆನೆಯ ಒಳಗೆ ಒಣಗಿದ ಸಸ್ಯಗಳನ್ನು ಇರಿಸಬಾರದು. ಮನೆಯ ಒಳಭಾಗವಾದಲ್ಲಿ ಮೆಟ್ಟಿಲುಗಳ ಕೆಳಭಾಗದಲ್ಲಿ ಅಡುಗೆಮನೆ ಕಟ್ಟಬಾರದು. ಆದರೆ ಪದಾರ್ಥಗಳನ್ನು ಸಂಗ್ರಹಿಸಲು ಚಿಕ್ಕದಾದ ಕೋಣೆಯನ್ನು ನಿರ್ಮಿಸಬಹುದು. ಮೆಟ್ಟಿಲುಗಳಿಗೆ ಗೇಟನ್ನು ಇರಿಸುವುದು ಅಶುಭದಾಯಕ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾಸ್ತುಶಾಸ್ತ್ರವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ವಾಸ್ತುಶಾಸ್ತ್ರ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).