Vastu Tips: ವಾಸ್ತುವಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾನಸಿಕ ನೆಮ್ಮದಿ ಹೆಚ್ಚಾಗುತ್ತೆ; ಗಮನಿಸಬೇಕಾದ ಅಂಶಗಳಿವು
ವಾಸ್ತು ಪ್ರಕಾರ ಕಟ್ಟಿದ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತೋಷ ಹಾಗೂ ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ಕೆಲವು ಮೂಲೆಗಳಿಗೆ ತುಂಬಾ ಮಹತ್ವ ಇರುತ್ತದೆ. ಈ ದಿಕ್ಕುಗಳಲ್ಲಿ ಯಾವುದೇ ಕಾರಣಕ್ಕೂ ಕೆಲವೊಂದು ವಸ್ತುಗಳನ್ನು ಇಡಬಾರದು. ಇದು ಮಾನಸಿಕ ನೆಮ್ಮದಿಗೆ ಅಡ್ಡಿಯಾಗುತ್ತದೆ. (ವರದಿ: ಎಚ್ ಸತೀಶ್, ಜ್ಯೋತಿಷಿ)

ಜನ್ಮ ಕುಂಡಲಿಯಲ್ಲಿ ಚಂದ್ರ ಅಥವಾ ಚತುರ್ಥ ಅಧಿಪತಿಯು ದೂಷಿತನಾಗಿದ್ದಲ್ಲಿ ಮಾನಸಿಕ ನೆಮ್ಮದಿಯು ಇರುವುದಿಲ್ಲ. ಇದೇ ರೀತಿಯಲ್ಲಿ ವಾಸ್ತುವಿನ ವಿಚಾರದಲ್ಲಿಯೂ ನಾವು ಮಾಡುವ ಕೆಲವು ತಪ್ಪಿನಿಂದಾಗಿ ಮಾನಸಿಕ ನೆಮ್ಮದಿಯು ದೂರವಾಗುತ್ತದೆ. ಆದರೆ ಸರಳ ಪರಿಹಾರದಿಂದ ವಾಸ್ತುವಿನ ದೋಷವನ್ನು ನಿವಾರಿಸಬಹುದು. ಇದರಿಂದ ಸುಲಭವಾಗಿ ಮಾನಸಿಕ ಒತ್ತಡದಿಂದ ದೂರವಾಗಬಹುದು. ಯಾವುದೇ ಮನೆಯಲ್ಲಿನ ಈಶಾನ್ಯ ಮೂಲೆಯನ್ನು ದೇವಮೂಲೆ ಎಂದು ಕರೆಯುತ್ತೇವೆ. ಈಶಾನ್ಯದಲ್ಲಿ ಸದಾಕಾಲ ಶಾಖವಿರುವ ವಸ್ತುಗಳನ್ನು ಅಥವಾ ಪರಿಕರಗಳನ್ನು ಇಡುವುದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಅಡುಗೆಮನೆಯು ಅಗ್ನಿ ಮೂಲೆಯಲ್ಲಿಯೇ ಇದ್ದರೂ ಆ ಕೋಣೆಯಲ್ಲಿ ಎಡಭಾಗದ ಮೂಲೆಯಲ್ಲಿ ಬಿಸಿ ಉಂಟುಮಾಡುವ ವಸ್ತುಗಳನ್ನು ಇಡಬಾರದು.
ಮುಖ್ಯವಾಗಿ ಈಶಾನ್ಯ ಮೂಲೆಯಲ್ಲಿ ಕೆಂಪುಮೆಣಸಿನಕಾಯಿ ಅಥವಾ ಮೆಣಸಿನಪುಡಿಯನ್ನು ಇಡಬಾರದು. ಇದರಿಂದ ಕುಟುಂಬದಲ್ಲಿನ ಮಾನಸಿಕ ನೆಮ್ಮದಿ ಮರೆಯಾಗುತ್ತದೆ. ಈ ಮೂಲೆಯಲ್ಲಿ ನಿಂತು ಅಡುಗೆ ಮಾಡಬಾರದು. ಅಡುಗೆ ಮನೆಯಲ್ಲಿ ದೇವರನ್ನು ಇರಿಸಿದ್ದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಆದರೆ ಅಡುಗೆ ಮನೆಯ ಬಾಗಿಲ ಮೇಲ್ಭಾಗದಲ್ಲಿ ಅನ್ನಪೂರ್ಣೇಶ್ವರಿಯ ಭಾವಚಿತ್ರವನ್ನು ಇರಿಸಬಹುದು. ಹುಣ್ಣಿಮೆಯ ದಿನ ಅಥವಾ ಅಮಾವಾಸ್ಯೆಯ ದಿನ ಅಡುಗೆ ಮನೆಯಲ್ಲಿ ಮೊಸರಿನಲ್ಲಿ ಕಲಿಸಿದ ಅನ್ನವನ್ನು ಉಳಿಸಬಾರದು. ಅನಿವಾರ್ಯವಾದ ಪಕ್ಷದಲ್ಲಿ ಮೊಸರಿನ ಅನ್ನದಲ್ಲಿ ಒಂದೆರಡು ಹಸಿ ಮೆಣಸಿನಕಾಯಿಯನ್ನು ಇರಿಸಬೇಕು.
ಕೆಲವು ಮನೆಗಳಲ್ಲಿ ದೇವರ ಗುಡಿಯು ಎದೆಯ ಮಟ್ಟಕ್ಕಿರುತ್ತದೆ. ಮನೆಗೆ ಸೇರಿದ ಜನರು ಅಥವಾ ಹೊರಗಿನ ಜನರು ಅರಿವಿಲ್ಲದೆ ಕುಡಿದ ಲೋಟ ಅಥವಾ ತಿಂದ ತಟ್ಟೆಗಳನ್ನು ದೇವರ ಗುಡಿಯ ಮೇಲ್ಭಾಗದಲ್ಲಿ ಇರಿಸುತ್ತಾರೆ. ಇದರಿಂದಲೂ ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಮಾನಸಿಗ ನೆಮ್ಮದಿಗಾಗಿ ಮನೆಯಲ್ಲಿ ಈ ಕೆಲಸಗಳನ್ನು ತಪ್ಪಿಸಬೇಕು.
- ದೇವರ ಗುಡಿಯ ಮೇಲ್ಭಾಗವನ್ನುಮನೆಯನ್ನು ಗುಡಿಸುವ ಕಸಪೊರಕೆಯಿಂದ ಗುಡಿಸಬಾರದು. ಅದಕ್ಕಾಗಿಯೇ ಶುಭ್ರವಾದ ಬಟ್ಟೆಯನ್ನು ಉಪಯೋಗಿಸುವುದು ಒಳ್ಳೆಯದು. ಇದರಿಂದಲೂ ಸಹ ಮಾನಸಿಕ ನೆಮ್ಮದಿ ಇರುವುದಿಲ್ಲ.
ಇದನ್ನೂ ಓದಿ: ಸಂಪತ್ತು ಗಳಿಸಲು ಪ್ರತಿದಿನ ಈ 5 ಕೆಲಸ ಮಾಡಿ; ಸಂತೋಷ, ಸಮೃದ್ಧಿ ಹೆಚ್ಚಿಸಿಕೊಳ್ಳಲು ವಾಸ್ತು ಸಲಹೆ
- ದೇವರ ಗುಡಿಯ ಮೇಲ್ಭಾಗದಲ್ಲಿ ತೂಕದ ವಸ್ತುಗಳನ್ನು ಇಡಬಾರದು. ಬದಲಾಗಿ ದೇವರ ಪೂಜೆಗೆ ಬಳಸುವ ಪಾತ್ರೆ, ವಸ್ತುಗಳನ್ನು ಶುಚಿಗೊಳಿಸಿ ಆ ಭಾಗದಲ್ಲಿ ಇಡುವುದು ಸೂಕ್ತ
- ದೇವರ ಗುಡಿಯ ಮೇಲ್ಭಾಗದಲ್ಲಿ ನೀರು ಚುಮುಕಿಸಿ ಒರಿಸಬಾರದು. ಅದರ ಬದಲು ಒದ್ದೆ ಬಟ್ಟೆಯಿಂದ ಶುಚಿಗೊಳಿಸುವುದು ಒಳ್ಳೆಯದು
- ಮುಂಭಾಗದಿಂದ ಹೊಸಲಿನ ಮೇಲೆ ದಿಂಬನ್ನು ಇರಿಸಿ ವಿಶ್ರಾಂತಿ ಪಡೆಯುವುದು ಒಳ್ಳೆಯದಲ್ಲ. ಇದರಿಂದ ಮಾನಸಿಕ ಒತ್ತಡವು ಹೆಚ್ಚುತ್ತದೆ
ಇದನ್ನೂ ಓದಿ: ಏಳು ಕುದುರೆಗಳ ಮೇಲೆ ಸೂರ್ಯ ದೇವರ ಸವಾರಿ, ಈ ಚಿತ್ರಪಟವನ್ನು ಮನೆಯಲ್ಲಿ ವಾಸ್ತು ಪ್ರಕಾರ ಹೀಗೆ ಇಡಿ
- ಕುಟುಂಬದ ಸದಸ್ಯರು ಒಟ್ಟಾರೆ ಕುಳಿತು ಮಾತನಾಡುವ ವೇಳೆ ಕೆಲವರು ಕೆಂಪು ಬಣ್ಣದ ದೀಪವನ್ನು ಬಳಸುತ್ತಾರೆ. ಇದರಿಂದ ಬಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾತುಕತೆ ಆಡುವ ಸ್ಥಳದಲ್ಲಿ ಹಾಲು ಬಣ್ಣದ ಬೆಳಕಿನ ದೀಪವನ್ನು ಬಳಸುವುದು ಒಳ್ಳೆಯದು
- ಪೂರ್ವ ದಿಕ್ಕಿನಲ್ಲಿ ಗುರು ಗ್ರಹವಿರುತ್ತದೆ. ಶನಿ ಮತ್ತು ರಾಹುವಿನ ಮಾದರಿಯಲ್ಲಿ ಗುರುವು ಒಳ್ಳೆಯ ಯೋಚನೆ ಮತ್ತು ಒಳ್ಳೆಯ ಕನಸುಗಳಿಗೆ ಕಾರಕನಾಗುತ್ತಾನೆ. ಆದ್ದರಿಂದ ಮಲಗುವ ವೇಳೆ ಪೂರ್ವ ದಿಕ್ಕಿಗೆ ನಮ್ಮ ತಲೆ ಇರುವುದು ಒಳ್ಳೆಯದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಲಾಭದಾಯಕ. ಪಶ್ಚಿಮ ದಿಕ್ಕಿಗೆ ತಲೆಯನ್ನು ಇಟ್ಟು ಮಲಗಿದ್ದಲ್ಲಿ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ
ಇದನ್ನೂ ಓದಿ: ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು; ಶುಭಫಲಗಳಿಗಾಗಿ ಈ 5 ನಿಯಮಗಳನ್ನು ತಪ್ಪದೇ ಪಾಲಿಸಿ
- ನೀವು ಮಲಗುವ ಸ್ಥಳಕ್ಕೆ ಸರಿಯಾಗಿ ಮೇಲ್ಭಾಗದಲ್ಲಿ ಬಚ್ಚಲ ಮನೆ ಇರಬಾರದು. ಹಾಗಿದ್ದ ಪಕ್ಷದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ
- ಮಲಗಿದಾಗ ನಮ್ಮ ತಲೆಯ ಹಿಂಭಾಗದಲ್ಲಿ ಕನ್ನಡಿ ಇದ್ದರೆ ತೊಂದರೆ ಇರುವುದಿಲ್ಲ. ಆದರೆ ನಾವು ಮಲಗಿದಾಗ ಕನ್ನಡಿಯಲ್ಲಿ ನಮ್ಮ ಮುಖವು ಕಾಣುವಂತೆ ಇರಬಾರದು
- ಹಾಸಿಗೆಯ ಕೆಳಗೆ ದೇವರ ಭಾವಚಿತ್ರಗಳನ್ನು ಕೆಲವರು ಇರಿಸುತ್ತಾರೆ. ಇನ್ನೂ ಕೆಲವರು ದೇವಸ್ಥಾನದಿಂದ ತಂದ ಕುಂಕುಮವನ್ನು ಇರಿಸುತ್ತಾರೆ. ಇದರಿಂದ ಮಾನಸಿಕ ನೆಮ್ಮದಿಯು ಇಲ್ಲವಾಗುತ್ತದೆ
