ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ದಿಂಬು, ಆಭರಣ ಸೇರಿದಂತೆ ನೀವು ಬಳಸುವ ಈ ವಸ್ತುಗಳನ್ನು ಮತ್ತೊಬ್ಬರಿಗೆ ಕೊಟ್ಟು ಅದೃಷ್ಟ ಕಳೆದುಕೊಳ್ಳದಿರಿ

Vastu Tips: ದಿಂಬು, ಆಭರಣ ಸೇರಿದಂತೆ ನೀವು ಬಳಸುವ ಈ ವಸ್ತುಗಳನ್ನು ಮತ್ತೊಬ್ಬರಿಗೆ ಕೊಟ್ಟು ಅದೃಷ್ಟ ಕಳೆದುಕೊಳ್ಳದಿರಿ

Vastu Tips: ನಮ್ಮಲ್ಲಿ ಅನೇಕರು ಆತ್ಮೀಯರೊಂದಿಗೆ ನಮಗೆ ಇಷ್ಟವಾದ ವಸ್ತುಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ನಾವು ಬಳಸುವ ಕೆಲವೊಂದು ವಸ್ತುಗಳನ್ನು ಮತ್ತೊಬ್ಬರಿಗೆ ನೀಡಬಾರದು, ನಾವೂ ಪಡೆಯಬಾರದು. ಹೀಗೆ ಮಾಡಿದರೆ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತದೆ.

ದಿಂಬು, ಆಭರಣ ಸೇರಿದಂತೆ ನೀವು ಬಳಸುವ ಈ ವಸ್ತುಗಳನ್ನು ಮತ್ತೊಬ್ಬರಿಗೆ ಕೊಡಬೇಡಿ
ದಿಂಬು, ಆಭರಣ ಸೇರಿದಂತೆ ನೀವು ಬಳಸುವ ಈ ವಸ್ತುಗಳನ್ನು ಮತ್ತೊಬ್ಬರಿಗೆ ಕೊಡಬೇಡಿ (PC: Unsplash)

ವಾಸ್ತು ಟಿಪ್ಸ್: ಹುಟ್ಟುಹಬ್ಬ, ಮದುವೆ, ನಾಮಕರಣ, ಗೃಹಪ್ರವೇಶ ಹೀಗೆ ಆತ್ಮೀಯರ ಮನೆ ಕಾರ್ಯಕ್ರಮಗಳಿಗೆ ಹೋದಾಗ ಅವರಿಗೆ ಗಿಫ್ಟ್‌ ನೀಡುವುದು ಸಾಮಾನ್ಯ. ಹಾಗೇ ನೆರೆಹೊರೆಯವರು ಎಂದಾಗ ಅವರ ಬಳಿ ನಾವು ನಮ್ಮ ಬಳಿ ಅವರು ಅಡುಗೆ ಮನೆ ಸಾಮಗ್ರಿಗಳನ್ನು ಎರವಲು ಪಡೆಯುವುದು ಕೂಡಾ ಸರ್ವೇ ಸಾಮಾನ್ಯ.

ಅದೇ ರೀತಿ ಆತ್ಮೀಯರು ನಾವು ಬಳಸುವ ವಸ್ತುಗಳನ್ನು ತೆಗೆದುಕೊಂಡು ತಾವು ಬಳಸುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ಆದರೆ ವಾಸ್ತು ಪ್ರಕಾರ ನೀವು ಯಾರಿಗೂ ಕೆಲವೊಂದು ವಸ್ತುಗಳನ್ನು ನೀಡಬಾರದು. ಈ ರೀತಿ ಮಾಡುವುದು ನಿಮ್ಮ ಪ್ರಗತಿ, ಆರ್ಥಿಕ ಸ್ಥಿತಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾವ ವಿಷಯಗಳನ್ನು ಇತರರಿಗೆ ನೀಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಆಭರಣಗಳು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಭರಣಗಳು ಮತ್ತು ರತ್ನಗಳು ಧನಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ. ಆ ಆಭರಣಗಳು ಕುಟುಂಬದ ಚರಾಸ್ತಿಯಾಗಿರಲಿ ಅಥವಾ ನೀವು ಮಾಡಿಸಿದ್ದಾಗಲೀ, ಅದನ್ನು ನೀವು ಮತ್ತೊಬ್ಬರಿಗೆ ಕೊಟ್ಟರೆ ಅದು ನಿಮ್ಮ ಅದೃಷ್ಟವನ್ನು ಅವರಿಗೆ ಕೊಟ್ಟಂತೆ. ಅಂತಹ ಆಭರಣಗಳನ್ನು ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ನೀಡಿದರೆ, ನಿಮ್ಮ ಸಂಪತ್ತನ್ನು ಅವರಿಗೆ ನೀಡಿದಂತೆ ಆಗುತ್ತದೆ. ನಿಮಗೆ ಅದರಿಂದ ಭವಿಷ್ಯದಲ್ಲಿ ಹಣಕಾಸಿನ ಸಮಸ್ಯೆ ಉಂಟಾಗಬಹುದು.

ಸುಗಂಧ ದ್ರವ್ಯ

ಫರ್ಪ್ಯೂಮನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸುಗಂಧವು ನಿಮ್ಮ ವ್ಯಕ್ತಿತ್ವವನ್ನು ಇತರರಿಗೆ ತಲುಪುವಂತೆ ಮಾಡುತ್ತದೆ. ಈ ರೀತಿ ಹಂಚಿಕೊಳ್ಳುವುದು ನಿಮ್ಮ ಅದೃಷ್ಟವನ್ನು ಇತರರೊಂದಿಗೆ ಹಂಚಿಕೊಂಡಂತೆ. .

ಲಕ್ಕಿ ಚಾರ್ಮ್ ಬ್ರೇಸ್ಲೆಟ್

ಅನೇಕ ಜನರು ಬ್ರೇಸ್ಲೆಟ್‌ಗಳನ್ನು ದುರದೃಷ್ಟ ಮತ್ತು ನಕಾರಾತ್ಮಕತೆಯ ವಿರುದ್ಧ ರಕ್ಷಣಾತ್ಮಕ ಕ್ರಮವಾಗಿ ಬಳಸುತ್ತಾರೆ. ಪ್ರತಿಯೊಂದು ಬ್ರೇಸ್‌ಲೈಟ್‌ ಅಥವಾ ಕಡಗವು ನಿಮ್ಮ ಅದೃಷ್ಟವನ್ನು ಪ್ರತಿನಿಧಿಸುತ್ತದೆ. ನಿಮ್ಮ ಕಡಗವನ್ನು ಇತರರೊಂದಿಗೆ ಹಂಚಿಕೊಂಡರೆ ಅದೃಷ್ಟವನ್ನು ಇತರರೊಂದಿಗೆ ಹಂಚಿಕೊಂಡಂತೆ.

ಪೆನ್

ವಾಸ್ತು ಪ್ರಕಾರ ನೀಡಬಾರದು ಅಥವಾ ತೆಗೆದುಕೊಳ್ಳಬಾರದು ಎಂಬ ಇನ್ನೊಂದು ವಸ್ತುವೆಂದರೆ ಪೆನ್ನು. ಅನೇಕ ಜನರು ತಮ್ಮ ನೆರೆಹೊರೆಯವರಿಗೆ ಪೆನ್ ಬೇಕು ಎಂದು ಕೇಳುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ಹಿಂತಿರುಗಿಸಲಾಗುವುದಿಲ್ಲ. ಕೆಲವೊಮ್ಮೆ ಕೊಡುವುದನ್ನು ಮರೆತುಬಿಡುತ್ತೀರಿ. ಆದರೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ಈ ರೀತಿ ಮತ್ತೊಬ್ಬರು ಬಳಸುವ ಪೆನ್‌ ಕೊಡುವುದು, ಪಡೆಯುವುದು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಪಾದರಕ್ಷೆಗಳು

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಶೂ ಅಥವಾ ಚಪ್ಪಲಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶೂ ಅಥವಾ ಸ್ಯಾಂಡಲನ್ನು ಯಾರಿಗೂ ಉಡುಗೊರೆಯಾಗಿ ಕೂಡಾ ನೀಡಬಾರದು. ಶನಿಯು ಶೂ ಮತ್ತು ಚಪ್ಪಲಿಗಳ ದೇವರು ಎಂದು ನಂಬಲಾಗಿದೆ. ಪರಸ್ಪರರ ಚಪ್ಪಲಿ ಮತ್ತು ಬೂಟುಗಳನ್ನು ಧರಿಸುವುದು ಶನಿ ದೋಷವನ್ನು ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ಜೀವನದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಬೂಟುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಬಡತನ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಅವರ ಸಮಸ್ಯೆಯನ್ನು ನಿಮ್ಮ ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ.

ಗಿಡಗಳು

ಮನೆಯಲ್ಲಿರುವ ಗಿಡಗಳು ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ಕೆಲವೊಂದು ಸಸ್ಯಗಳು ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಆದರೆ ಇವುಗಳನ್ನು ಇತರರಿಗೆ ಉಡುಗೊರೆಯಾಗಿ ನೀಡುವುದು ನಿಮ್ಮ ಮನೆಯಲ್ಲಿ ಶಕ್ತಿಯನ್ನು ನೀಡಿದಂತಾಗುತ್ತದೆ. ಅದನ್ನು ಕೊಡುವುದು ಎಂದರೆ ಅದರಲ್ಲಿರುವ ಉತ್ತಮ ಶಕ್ತಿಯನ್ನು ತ್ಯಜಿಸುವುದು ಎಂದರ್ಥ. ಆದ್ದರಿಂದ ನಿರ್ದಿಷ್ಟ ಸಸ್ಯಗಳನ್ನು ಮತ್ತೊಬ್ಬರಿಗೆ ನೀಡುವುದನ್ನು ನಿಲ್ಲಿಸಿ.

ದಿಂಬು

ಆಯಾಸದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ರಾತ್ರಿ ಉತ್ತಮ ನಿದ್ರೆ ಮಾಡುವುದು ಅವಶ್ಯಕವಾಗಿದೆ. ನಾವು ಚೆನ್ನಾಗಿ ನಿದ್ದೆ ಮಾಡಲು ದಿಂಬು ಬಹಳ ಮುಖ್ಯ. ಅಂತಹ ದಿಂಬನ್ನು ಬೇರೆಯವರು ಬಳಸುವುದರಿಂದ ನಿಮ್ಮ ಅದೃಷ್ಟವನ್ನು ಇತರರಿಗೆ ನೀಡಿದಂತೆ ಆಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.