Vastu Tips: ನಿಮ್ಮ ಕೆಲಸಗಳಿಗೆ ಯಶಸ್ಸು ಸಿಗಬೇಕಂದ್ರೆ ಮನೆಯಿಂದ ಹೊರಗೆ ಹೋಗುವಾಗ ಹೀಗೆ ಮಾಡಿ
ಶಾಸ್ತ್ರ, ನಂಬಿಕೆಗಳು ಎನ್ನುವುದು ಮನುಷ್ಯನ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಹುಟ್ಟಿದ ಸಮಯದಿಂದ ಹಿಡಿದು, ಶುಭ ಕಾರ್ಯಗಳಿಗೆ, ಹೊಸತನ್ನೇನಾದರೂ ಪ್ರಾರಂಭಿಸುವ ವೇಳೆ ಹೀಗೆ ಎಲ್ಲದಕ್ಕೂ ಘಳಿಕೆ ಕೂಡಿಬರಬೇಕು ಎಂದು ನಂಬಲಾಗಿದೆ. ಯಾವುದೋ ಪ್ರಮುಖ ಕಾರ್ಯಕ್ಕೆ ಹೊರಗೆ ಹೋಗುವಾಗ ಯಶಸ್ಸಿನ ಭಯವಿದ್ದರೆ ಅದನ್ನು ಹೋಗಲಾಡಿಸಲು ವಾಸ್ತುಶಾಸ್ತ್ರದ ಪ್ರಕಾರ ಹೀಗೆ ಮಾಡಿ.
ಯಾವುದೇ ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವಾಗ ದೇವರನ್ನು ಪೂಜಿಸುತ್ತಾರೆ. ಹೀಗೆ ಮಾಡಿದರೆ ಕೆಲಸ ಸುಸೂತ್ರವಾಗುತ್ತದೆ, ಶುಭ ಸುದ್ದಿ ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಇವುಗಳ ಜೊತೆಗೆ ರಾಹುಕಾಲ, ಶುಭ ಮುಹೂರ್ತಗಳನ್ನು ನೋಡಿಕೊಳ್ಳಬೇಕು. ಅಲ್ಲದೆ, ಹೊರಗೆ ಹೋಗುವಾಗ ಪ್ರೀತಿಪಾತ್ರರ ಮುಖವನ್ನು ನೋಡುವುದು ಮುಂತಾದ ಭಾವನಾತ್ಮಕ ನಂಟುಗಳನ್ನು ಹೊಂದುವುದು ಬಹಳ ಮುಖ್ಯ.
ನೀವು ಹಣಕಾಸಿನ ಕೆಲಸ ಮತ್ತು ವಹಿವಾಟುಗಳನ್ನು ಮಾಡಲು ಬಯಸಿದರೆ, ಮನೆಯಲ್ಲಿರುವ ಲಕ್ಷ್ಮಿಅಂದರೆ ಹೆಣ್ಣುಮಕ್ಕಳಿದ್ದರೆ, ಅವರ ಹಸ್ತದಿಂದ ಹಣ ಪಡೆದರೆ ಶುಭವಾಗಲಿದೆ ಎಂಬ ನಂಬಿಕೆಯಿದೆ. ಅಲ್ಲದೆ ಕಪ್ಪು ಬೆಕ್ಕು, ನಾಯಿ ಮುಂತಾದ ಪ್ರಾಣಿಗಳು ಶುಭ ಪ್ರಯಾಣಕ್ಕೆ ಮುಂದಾಗುವ ವೇಳೆ ಎದುರಾದರೆ ಪುನಃ ಮನೆಯೊಳಗೆ ಹೋಗಿ ಸ್ವಲ್ಪ ಹೊತ್ತು ಕುಳಿತು ಮತ್ತೆ ಪ್ರಯಾಣ ಮುಂದುವರಿಸುವ ರೂಢಿಯಿದೆ.
ಈ ನಂಬಿಕೆ, ಆಚರಣೆಗಳಿಗೆ ಯಾವುದೇ ವೈಜ್ಞಾನಿಕ ತಳಹದಿಗಳಿಲ್ಲದಿದ್ದರೂ ಅವುಗಳನ್ನು ಅನುಸರಿಸಿಕೊಂಡು ಹೋಗುವುದರಿಂದ ಅನೇಕ ಬಾರಿ ಉತ್ತಮ ಫಲಿತಾಂಶಗಳನ್ನು ಕಂಡಿದ್ದೇವೆ ಎಂದು ನಂಬುತ್ತೇವೆ. ಇವುಗಳ ಹೊರತಾಗಿ ಮನೆಯಿಂದ ಹೊರಗೆ ಹೋಗುವಾಗ ಏನು ಮಾಡಬೇಕು ಎಂದು ಇಲ್ಲಿ ಸಲಹೆ ನೀಡಲಾಗಿದೆ.
ಮನೆಯಿಂದ ಹೊರಡುವ ಮುನ್ನ ಹೀಗೆ ಮಾಡಿ:
ವಾಸ್ತುಶಾಸ್ತ್ರದ ಪ್ರಕಾರ, ಮನೆಯಿಂದ ಹೊರಗೆ ಹೋಗುವಾಗ, ತೆರೆದ ಕೈಗಳಿಂದ ಭಗವಂತನನ್ನು ಪ್ರಾರ್ಥಿಸಿ ಮತ್ತು ಕೆಲವು ಮಂತ್ರಗಳನ್ನು ಪಠಿಸಿ. ಈ ರೀತಿ ಮಾಡುವುದರಿಂದ ಕಾರ್ಯಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ನಿಮ್ಮ ಪ್ರಯಾಣವೂ ಯಾವುದೇ ತೊಂದರೆಗಳಿಲ್ಲದೆ ಸುಗಮವಾಗಿರುತ್ತದೆ.
ಯಾವುದಾದರೂ ಒಳ್ಳೆಯ ಕೆಲಸಗಳಿಗಾಗಿ ಮನೆಯಿಂದ ಹೊರಡುವ ಮೊದಲು ಸ್ವಲ್ಪ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ಹಣವನ್ನು ಇಡಬೇಕು. ನಂತರ ಧೂಪದ್ರವ್ಯದೊಂದಿಗೆ ಆರತಿ ಮಾಡಿ. ಮನೆಗೆ ಬಂದ ನಂತರ ಆ ಹಣವನ್ನು ಶಿವನ ದೇವಸ್ಥಾನದಲ್ಲಿ ಅರ್ಪಿಸಬೇಕು. ಹೀಗೆ ಮಾಡಿ ಹೊರಗೆ ಹೋದರೆ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ಗಣೇಶನನ್ನು ಪೂಜಿಸಿ ಸ್ವಲ್ಪ ಬೆಲ್ಲವನ್ನು ಅರ್ಪಿಸಿ. ಪೂಜೆ ಮಾಡಿದ ನಂತರ ಆ ಬೆಲ್ಲವನ್ನು ಬಾಯಿಗೆ ಹಾಕಿಕೊಂಡು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಕೆಲವರು ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ನೈವೇದ್ಯ ಮಾಡಿ, ಪ್ರಸಾದ ಸ್ವೀಕರಿಸುವುದೂ ಇದೆ.
ಪ್ರಮುಖ ಕೆಲಸದ ಮೇಲೆ ಹೊರಗೆ ಹೋಗುವಾಗ, ಅಶ್ಲೀಲ ಪದಗಳನ್ನು ಹೇಳುವುದು ಅಥವಾ ಆಲೋಚನೆಗಳನ್ನು ಮಾಡಬಾರದು. ಯಾರೊಂದಿಗೂ ಜಗಳವಾಡಬೇಡಿ. ನಕಾರಾತ್ಮಕ ಪದಗಳನ್ನು ಮಾತನಾಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ಮಾಡುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
ಮನೆಯಿಂದ ಹೊರಗೆ ಹೋಗುವಾಗ ಬಾಗಿಲ ಮುಂದೆ ಸ್ವಲ್ಪ ಕರಿಮೆಣಸನ್ನು ಉದುರಿಸಬೇಕು. ಅವುಗಳನ್ನು ತುಳಿದು ಹೊರಗೆ ಹೋಗುವಾಗ ತಪ್ಪಿಯೂ ಹಿಂತಿರುಗಿ ನೋಡಬಾರದು. ಇದರಿಂದ ಯಾವುದೇ ಕಾರ್ಯಗಳಲ್ಲಿ ಹಿಂದಿರುಗಿ ನೋಡುವ ಅಗತ್ಯ ನಿಮಗೆಂದೂ ಬರಲಾರದು.
ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು, ಒಗೆದು ಶುಭ್ರವಾಗಿರಿಸಿದ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಅಲ್ಲದೆ ನೀವು ಹೊರಗೆ ಹೋಗುವಾಗ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ. ಹೀಗೆ ಮಾಡುವುದನ್ನು ಮಂಗಳಕರವೆಂದು ನಂಬಲಾಗುತ್ತದೆ. ಕನ್ನಡಿ ನಿಮ್ಮ ಧನಾತ್ಮಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)