ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಪಾಲಿಸಿ ನೋಡಿ

Vastu Tips: ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಪಾಲಿಸಿ ನೋಡಿ

ಮದುವೆ ಆಗಬೇಕೆಂಬ ನಿರ್ಧಾರಕ್ಕೆ ಬಂದಾಗ, ಸೂಕ್ತ ವಧು ಅಥವಾ ವರ ಸಿಗುವುದಿಲ್ಲ ಎಂಬ ಗೋಳು ಹಲವರದ್ದು. ನಿರ್ಧಿಷ್ಟ ವಯಸ್ಸಿನಲ್ಲಿ ವಿವಾಹ ಜೀವನಕ್ಕೆ ಕಾಲಿಡಬೇಕೆಂಬ ಅಭಿಪ್ರಾಯ ಹೆಚ್ಚಿನ ಜನರಲ್ಲಿರುತ್ತದೆ. ಆದರೆ, ಕಂಕಣ ಭಾಗ್ಯ ಇಲ್ಲ ಎಂಬುದು ಅವರ ಸಮಸ್ಯೆ. ವಾಸ್ತುಶಾಸ್ತ್ರದಲ್ಲಿ‌ ಕಂಕಣ ಬಲ ಹೆಚ್ಚಲು ಕೆಲವೊಂದು ಸಲಹೆಗಳಿವೆ. ಅವುಗಳನ್ನು ಪಾಲಿಸಿ ನೋಡಿ.

ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಪಾಲಿಸಿ ನೋಡಿ
ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಪಾಲಿಸಿ ನೋಡಿ (pixels)

ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಅವರಿಷ್ಟದ ವಯಸ್ಸಿನಲ್ಲಿ ಮದುವೆ ಆಗಲ್ಲ. ಇನ್ನೂ ಕೆಲವರಿಗೆ ಮದುವೆ ಆಗಬೇಕು ಎನಿಸಿದಾಗ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ವಧು-ವರರ ಹುಡುಕಾಟ ನಿರಂತವಾಗಿ ಸಾಗುತ್ತಿರುತ್ತದೆ. ಉದ್ಯೋಗ, ಮನೆ ಜವಾಬ್ದಾರಿ ಅಂದುಕೊಂಡು ಕೆಲವರು ಮದುವೆ ಮುಂದೂಡುತ್ತಾ ಬಂದಿರುತ್ತಾರೆ. ಆದರೆ ಎಲ್ಲಾ ಒಂದು ಹಂತಕ್ಕೆ ಬಂದಾಗ ದಾಂಪತ್ಯ ಜೀವನಕ್ಕೆ ಕಾಲಿಡೋಣ ಅಂದರೆ ಕಂಕಣ ಭಾಗ್ಯ ಕೂಡಿ ಬರಲ್ಲ. ನಮಗಿಂತ ಕಿರಿಯ ವಯಸ್ಸಿನವರು, ಅದರಲ್ಲಿಯೂ ನಾವು ಎತ್ತಿ ಆಡಿಸಿದ ಕೆಲ ಮಕ್ಕಳೇ ನಮ್ಮ ಕಣ್ಣು ಮುಂದೆ ಮದುವೆಯಾಗಿ ಸುಖವಾಗಿರುತ್ತಾರೆ. ಆಗ, ಮದುವೆಯಾಗುವ ಇರಾದೆಯಲ್ಲಿರುವವರಿಗೆ ಚಿಂತೆ ಶುರುವಾಗುವುದು ಸಹಜ. ನಮಗಿಂತಲೂ ನಮ್ಮ ಪೋಷಕರು ಹೆಚ್ಚು ಚಿಂತೆಗೀಡಾಗುತ್ತಾರೆ. ಈ ಸಮಸ್ಯೆಗೆ ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿವೆ. ಶೀಘ್ರದಲ್ಲೇ ಮದುವೆಯಾಗಲು ಅಥವಾ ಮದುವೆಗೆ ಸಂಬಂಧಿತ ಸಿಹಿಸುದ್ದಿ ಕೇಳಲು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು, ಈ ಟಿಪ್ಸ್ ಅನುಸರಿಸಿದರೆ ನಿಮಗೆ ಸಹಾಯವಾಗಬಹುದು.

ಮಲಗುವ ದಿಕ್ಕು

ನೀವು ಪ್ರತಿದಿನ ಮಲಗುವ ದಿಕ್ಕು ಕೂಡ ನಿಮ್ಮ ಸಮಸ್ಯೆಗೆ ಕಾರಣವಿರಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಅವಿವಾಹಿತ ನಾರಿಯರು ಮನೆಯ ವಾಯುವ್ಯ ದಿಕ್ಕಿನಲ್ಲಿ ಮಲಗಬೇಕು ಮತ್ತು ಮನೆಯ ನೈಋತ್ಯ ಮೂಲೆಯಲ್ಲಿ ಮಲಗುವುದನ್ನು ತಪ್ಪಿಸಬೇಕು. ಇದು ಮದುವೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅದೇ ರೀತಿ, ಅವಿವಾಹಿತ ಪುರುಷರು ಈಶಾನ್ಯ ದಿಕ್ಕಿನಲ್ಲಿ ಮಲಗಬೇಕು ಮತ್ತು ಆಗ್ನೇಯ ದಿಕ್ಕಿನಲ್ಲಿ ಮಲಗುವುದನ್ನು ತಪ್ಪಿಸಬೇಕು.

ಬೆಡ್‌ಶೀಟ್‌ನ ಬಣ್ಣ

ಗುಲಾಬಿ, ಹಳದಿ, ತಿಳಿ ನೇರಳೆ ಅಥವಾ ಬಿಳಿಯಂತಹ ತಿಳಿ ಬಣ್ಣದ ಬೆಡ್‌ಶೀಟ್‌ನಲ್ಲಿ ಮಲಗಲು ವಾಸ್ತುಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ. ಇದು ನಿಮ್ಮ ಕೋಣೆಯೊಳಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮದುವೆಯಾಗಲು ಬಯಸುವ ವ್ಯಕ್ತಿಗೆ ಪಾಸಿಟಿವ್ ವೈಬ್ ನೀಡುತ್ತದೆ.

ಕಬ್ಬಿಣದ ವಸ್ತುಗಳು

ಶೀಘ್ರದಲ್ಲೇ ಮದುವೆಯಾಗಲು ಬಯಸುವವರು ಹಾಸಿಗೆಯ ಕೆಳಗೆ ಯಾವುದೇ ಕಬ್ಬಿಣದ ವಸ್ತುಗಳನ್ನು ಇಟ್ಟುಕೊಂಡು ಮಲಗಬಾರದು. ಕೋಣೆಯಲ್ಲಿ ಧನಾತ್ಮಕ ಶಕ್ತಿ ತುಂಬಿರಬೇಕೆಂದರೆ ನಿಮ್ಮ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಭಾರವಾದ ವಸ್ತುಗಳು

ಮನೆಯ ಮಧ್ಯ ಭಾಗದಲ್ಲಿ ಭಾರವಾದ ವಸ್ತುಗಳು ಹಾಗೂ ಮೆಟ್ಟಿಲುಗಳು ಇರಬಾರದು. ಏಕೆಂದರೆ ಇದು ಮದುವೆಯ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ವಾಸ್ತು ಪ್ರಕಾರ, ಭಾರವಾದ ವಸ್ತುಗಳು ಮದುವೆಯ ಶುಭ ಶಕ್ತಿಯು ಮನೆಯೊಳಗೆ ಬರುವುದನ್ನು ತಡೆಯುತ್ತದೆ.

ಗೋಡೆಯ ಬಣ್ಣ

ಇಡೀ ಮನೆಯು ತಿಳಿ ಬಣ್ಣದ ಗೋಡೆಗಳನ್ನು ಹೊಂದಿರಬೇಕು. ತಿಳಿ ಹಸಿರು, ತಿಳಿ ನೀಲಿ, ತಿಳಿ ನೇರಳೆ, ತಿಳಿ ನಿಂಬೆ, ಬೇಬಿ ಪಿಂಕ್ ಈ ಬಣ್ಣಗಳ ಗೋಡೆಗಳು ನಿಮ್ಮ ಮನೆಗೆ ವೈವಾಹಿಕ ಸಂಬಂಧಗಳು ಅಥವಾ ಪ್ರಪೋಸಲ್ ಬರಲು ಸಹಾಯ ಮಾಡುತ್ತವೆ. ಡಾರ್ಕ್ ಕಲರ್ ಬಣ್ಣವನ್ನು ನಿಮ್ಮ ಮನೆಯ ಗೋಡೆಗೆ ಬಳಿಯುವುದು ವಾಸ್ತು ಪ್ರಕಾರ ಅಷ್ಟೊಂದು ಒಳ್ಳೆಯದಲ್ಲ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಮೇಘನಾ ಬಿ)

ವಿಭಾಗ