ವಾಸ್ತು ಸಲಹೆಗಳು: ಮನಸ್ಸಿಗೆ ನೆಮ್ಮದಿ ಮತ್ತು ಉತ್ತಮ ಆರೋಗ್ಯಕ್ಕಾಗಿ ವಾಸ್ತು ಪ್ರಕಾರ ಮನೆಯ ಬೆಡ್ ರೂಮ್ ಹೇಗಿರಬೇಕು
ಮಲಗುವ ಕೋಣೆ ತಪ್ಪು ದಿಕ್ಕಿನಲ್ಲಿದ್ದರೆ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತೆ. ಮನಸ್ಸಿನ ನೆಮ್ಮದಿ, ಆರೋಗ್ಯಕ್ಕಾಗಿ ವಾಸ್ತು ಪ್ರಕಾರ ಬೆಡ್ ರೂಮ್ ಹೇಗಿರಬೇಕೆಂಬುದನ್ನು ತಿಳಿಯಿರಿ.

ಪ್ರತಿಯೊಬ್ಬರ ಜೀವನದಲ್ಲಿಯೂ ವಿಶ್ರಾಂತಿಯ ಅಗತ್ಯವಿರುತ್ತದೆ. ಸುಖಾಸೀನರಾಗಿ ಕುಳಿತುಕೊಳ್ಳುವುದರಿಂದಲೂ ವಿಶ್ರಾಂತಿಯನ್ನು ಪಡೆಯಬಹುದು. ಆದರೆ ಮಾನಸಿಕ ಶಾಂತಿ ಲಭಿಸಲು ಮಾಡುವ ಕೆಲಸ ಕಾರ್ಯಗಳನ್ನು ಬದಲಿಸಲೇಬೇಕು. ನಮ್ಮ ಮನೆಯಲ್ಲಿ ವಿಶ್ರಾಂತಿಯ ಕೋಣೆ ಅಥವಾ ಮಲಗುವ ಕೋಣೆಯು ವಿಶೇಷವಾದಂತಹ ಶಕ್ತಿಯನ್ನು ವಾಸ್ತುವಿಗೆ ನೀಡುತ್ತದೆ. ಮಲಗುವ ಕೋಣೆಯಲ್ಲಿ ಮಂಗಳ ಮತ್ತು ಶುಕ್ರ ಗ್ರಹಗಳ ಪ್ರಭಾವವು ಹೆಚ್ಚಿನದಾಗಿರುತ್ತದೆ. ಅಡುಗೆಯ ಮನೆಯಲ್ಲಿ ಕುಳಿತು ಮಾಡುವ ಅಡುಗೆ ಸಂಬಂಧಿಸಿದ ಕೆಲಸಗಳಿರುತ್ತವೆ. ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಮಂಗಳ ಮತ್ತು ಗುರು ಗ್ರಹಗಳ ಸಂಯೋಗ ಇರುತ್ತದೆ. ಈ ಕಾರಣದಿಂದಲೇ ಅಡುಗೆಯನ್ನು ಮಾಡುವ ವೇಳೆ ಪೂರ್ವ ದಿಕ್ಕಿಗೆ ಮುಖಮಾಡಿರುವುದು ಒಳ್ಳೆಯದು.
ಮಲಗುವ ಕೋಣೆಯು ನಮಗೆ ವಿಶ್ರಾಂತಿ ನೀಡುವಲ್ಲಿ ಮುಖ್ಯ ಸ್ಥಳವಾಗುತ್ತದೆ. ಮಲಗುವ ಕೋಣೆಯಲ್ಲಿ ಸಾಮಾನ್ಯವಾಗಿ ಚಂದ್ರ ಮತ್ತು ಶನಿಗ್ರಹಗಳ ಪ್ರಭಾವವಿರುತ್ತದೆ. ಈ ಕಾರಣದಿಂದ ಮಲಗುವಕೋಣೆಯಲ್ಲಿ ನಿದ್ದೆಯ ಮುಖಾಂತರ ವಿಶ್ರಾಂತಿಯನ್ನು ಪಡೆಯುತ್ತೇವೆ. ಈ ಕೋಣೆಯಲ್ಲಿ ಬೆಳಕು ಅಧಿಕವಾಗಿದ್ದಲ್ಲಿ ಸೂರ್ಯನ ಪ್ರಭಾವವು ಹೆಚ್ಚಿನದಾಗಿರುತ್ತದೆ. ಹೆಚ್ಚು ಕತ್ತಲೆ ಇದ್ದಲ್ಲಿ ರಾಹುವಿನ ಪ್ರಭಾವವು ಹೆಚ್ಚಿನದಾಗಿರುತ್ತದೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಮಲಗುವ ವೇಳೆಯಲ್ಲಿ ಅಥವಾ ಮಲಗುವ ಸ್ಥಳದಲ್ಲಿ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮನದಲ್ಲಿ ಸೋಮಾರಿತನವು ಮನೆಮಾಡುತ್ತದೆ. ಆಧುನಿಕತೆಯ ಅನುಕೂಲವಿರುವ ಮಲಗುವ ಕೋಣೆಯಲ್ಲಿ ಶುಕ್ರನ ಪ್ರಭಾವವು ಇರುತ್ತದೆ. ಶುಭಫಲಗಳಿಗಾಗಿ ಮಲಗುವ ಕೋಣೆ ಹೇಗಿರಬೇಕೆಂಬುದನ್ನು ತಿಳಿಯಿರಿ.
- ದೇವರಕೋಣೆ ಮತ್ತು ಮಲಗುವಕೋಣೆಗಳಿಗೆ ಒಂದೇ ಗೋಡೆ ಇರಬಾರದು. ಇದರಿಂದ ಮನಸ್ಸಿಗೆ ನೆಮ್ಮದು ಇರುವುದಿಲ್ಲ. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಅಪಜಯ ದೊರೆಯುತ್ತದೆ. ಆರೋಗ್ಯದಲ್ಲಿ ಸಮಸ್ಯೆಯು ಕಾಣುತ್ತದೆ.
- ಓದುವ ಕೋಣೆ ಮತ್ತು ಮಲಗುವ ಕೋಣೆಗಳಿಗೆ ಒಂದೇ ಗೋಡೆ ಇದ್ದಲ್ಲಿ ಮಕ್ಕಳಲ್ಲಿ ಸೋಮಾರಿತನ ಮನೆಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವು ಮರೆಯಾಗುತ್ತದೆ. ನಿಧಾನಗತಿಯಲ್ಲಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ.
- ಓದುವ ಕೋಣೆ ಮತ್ತು ಮಲಗುವ ಕೋಣೆಗಳಿಗೆ ಸೇರಿದಂತೆ ಒಂದೇ ದೀಪ ಇರಬಾರದು. ಇದರಿಂದ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ. ದಂಪತಿ ನಡುವೆ ಪರಸ್ಪರ ಅವಿಶ್ವಾಸ ಇರುತ್ತದೆ. ಕೇವಲ ವಿದ್ಯಾಥಿಗಳಲ್ಲದೆ ದಂಪತಿಯಲ್ಲೂ ವೈರಾಗ್ಯದ ಭಾವನೆ ಉಂಟಾಗುತ್ತದೆ.
- ಚೌಶಾಲಯ ಮತ್ತು ಮಲಗುವ ಕೋಣೆಗಳಿಗೆ ಒಂದೇ ಗೋಡೆ ಇದ್ದಲ್ಲಿ ಮನದಲ್ಲಿ ತಪ್ಪು ಭಾವನೆ ನೆಲೆಸಿರುತ್ತದೆ. ಸದಾಕಾಲ ದಂಪತಿ ನಡುವೆ ಅಸಹನೆಯ ಗುಣ ನೆಲೆಸಿರುತ್ತದೆ. ದಂಪತಿಗಳಲ್ಲಿ ಉತ್ತಮ ಆರೋಗ್ಯವೂ ಇರುವುದಿಲ್ಲ. ಅತಿಯಾದ ಸ್ವಾಭಿಮಾನವು ನೆಲೆಸಿರುತ್ತದೆ. ಇದರಿಂದ ಉತ್ತಮ ಒಡನಾಟವೂ ಕಂಡುಬರುವುದಿಲ್ಲ.
- ನೈರುತ್ಯದಲ್ಲಿ ನಿರುತಿ ಎಂಬ ರಾಕ್ಷಸನಿರುತ್ತಾನೆ. ಆದ್ದರಿಂದ ನೈರುತ್ಯ ಮೂಲೆಯಲ್ಲಿ ಮನೆಯ ಮುಖ್ಯ ಯಜಮಾನನ ಮಲಗುವ ಕೋಣೆ ಇರುವುದು ಒಳ್ಳೆಯದು. ಇದರಿಂದ ಹೆಚ್ಚಿನ ವಿಶ್ರಾಂತಿ ದೊರೆಯುತ್ತದೆ. ಆದರೆ ನೈರುತ್ಯ ಮೂಲೆಯಲ್ಲಿ ತಲೆಯನ್ನು ಇಟ್ಟು ಮಲಗಬಾರದು.
- ದಕ್ಷಿಣದಲ್ಲಿ ಮಲಗುವ ಕೋಣೆ ಇದ್ದಲ್ಲಿ ದೈಹಿಕವಾದ ಮತ್ತು ಮಾನಸಿಕ ವಿಶ್ರಾಂತಿ ದೊರೆಯುತ್ತದೆ. ಆದರೆ ದಕ್ಷಿಣ ಗೋಡೆಗೆ ತಗಲುವಂತೆ ಮಂಚ ಅಥವಾ ಹಾಸಿಗೆಯನ್ನು ಹಾಕಬಾರದು. ದಕ್ಷಿಣಗೋಡೆಗೆ ತಗಲುವಂತೆ ತಲೆಯನ್ನು ಇಟ್ಟು ಮಲಗಬಾರದು.
- ಪಶ್ಚಿಮ ದಿಕ್ಕಿನಲ್ಲಿ ಮಲಗುವ ಕೋಣೆ ಇರಬಾರದು. ಇದರಿಂದ ಗುಣವಾಗದ ಅನಾರೋಗ್ಯದ ತೊಂದರೆ ಉಂಟಾಗುತ್ತದೆ.
- ಉತ್ತರ ದಿಕ್ಕಿನಲ್ಲಿ ಮಲಗುವ ಕೋಣೆ ಇರಬಾದು. ಅನಿವಾರ್ಯದ ಪರಿಸ್ಥಿತಿಯಲ್ಲಿ ಕನಿಷ್ಠ ಕುಟುಂಬದ ಯಜಮಾನನು ಉತ್ತರ ದಿಕ್ಕಿಗೆ ತಲೆಯನ್ನು ಇಟ್ಟು ನಿದ್ರಿಸಬಾರದು.
- ಪತಿಯಾಗಲಿ ಪತ್ನಿಯಾಗಲಿ ಮಾವನ ಮನೆಯಲ್ಲಿ ಪೂರ್ವ ದಿಕ್ಕಿಗೆ ಮಾತ್ರ ತಲೆಯನ್ನು ಇರಿಸಿ ಮಲಗುವುದು ಒಳ್ಳೆಯದು. ಇದರಿಂದ ಅತ್ತೆ, ಮಾವ ಮತ್ತು ಭಾವಮೈದುನರ ಪ್ರೀತಿ ವಿಶ್ವಾಸವನ್ನು ಗಳಿಸಬಹುದು. ಕೂಡು ಕುಟುಂಬ ಇದ್ದಲ್ಲಿ ಪೂರ್ವ ದಿಕ್ಕಿನಲ್ಲಿ ತಲೆಯನ್ನು ಇರಿಸಿ ನಿದ್ರಿಸುವುದು ಒಳ್ಳೆಯದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)