ಗಣೇಶನ ವಿಗ್ರಹ, ಜೋಡಿ ಆನೆ ಸೇರಿದಂತೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಸಂತೋಷ, ಸಂಪತ್ತು ನೆಲೆಸುತ್ತದೆ
ವಾಸ್ತು ಶಾಸ್ತ್ರದಲ್ಲಿ ವಾಸ್ತು ದೋಷಗಳ ಪರಿಹಾರಕ್ಕೆ ಮತ್ತು ಆರ್ಥಿಕ ಸ್ಥಿರತೆಯನ್ನು ಸುಧಾರಿಸಿಕೊಳ್ಳಲು ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ. ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದಲೂ ಆರ್ಥಿಕ ಲಾಭ ಹಾಗೂ ಸಂತೋಷ ಸಿಗುತ್ತದೆ ಎಂದು ವಾಸ್ತು ಹೇಳುತ್ತದೆ. ಹಾಗಾದ್ರೆ ಆ ವಸ್ತುಗಳು ಯಾವುವು ಇಲ್ಲಿದೆ ಓದಿ. (ಬರಹ: ಅರ್ಚನಾ ವಿ ಭಟ್)

ಇಂದಿನ ಆಧುನಿಕ ಜೀವನ ಮತ್ತು ಕೆಲಸದ ಒತ್ತಡದ ದಿನಗಳ ನಡುವೆ ಮನೆಯಲ್ಲಿ ಸಂತೋಷ ಮತ್ತು ಸಕಾರಾತ್ಮಕ ಶಕ್ತಿಗಳು ತುಂಬಿರುವುದು ಬಹಳ ಮುಖ್ಯವಾಗಿದೆ. ಮನೆಯಲ್ಲಿ ಸುಖ, ಸಂಪತ್ತು ತುಂಬಿದ್ದರೆ ಜೀವನ ಸುಂದರವಾಗಿರುತ್ತದೆ. ಆದರೆ ಅನೇಕ ಬಾರಿ ನಾವು ತಿಳಿಯದೇ ಮಾಡುವ ತಪ್ಪುಗಳು ವಾಸ್ತು ದೋಷಗಳಿಗೆ ಕಾರಣವಾಗುತ್ತದೆ.
ಮದುವೆ, ಗೃಹಪ್ರವೇಶ, ಜನ್ಮದಿನ, ವಾರ್ಷಿಕೋತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು ನೀಡುವುದು ವಾಡಿಕೆ. ಕೆಲವು ಉಡುಗೊರೆಗಳನ್ನು ನೀಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಆರ್ಥಿಕ ಸ್ಥಿತಿಗತಿಗಳು ಹೆಚ್ಚುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದರಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಾಗಾದರೆ ಯಾವ ವಸ್ತುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ ಇಲ್ಲಿದೆ ಓದಿ.
ಮನೆಗೆ ಮಂಗಳ ಉಂಟುಮಾಡುವ ವಸ್ತುಗಳು
1) ಗಣೇಶನ ವಿಗ್ರಹ
ವಾಸ್ತು ಪ್ರಕಾರ, ಗಣೇಶನ ವಿಗ್ರಹವನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ. ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತದೆ. ಬುದ್ಧಿಯನ್ನು ಕರುಣಿಸುವ ದೇವರಾದ ಗಣೇಶನು ಪ್ರಥಮ ಪೂಜ್ಯನಾಗಿದ್ದಾನೆ. ಗಣೇಶ ವಿಗ್ರಹವು ಮನೆಯಲ್ಲಿರುವುದು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗೃಹ ಪ್ರವೇಶದಂತಹ ಶುಭ ಸಂದರ್ಭದಲ್ಲಿ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು ಶುಭವೆಂದು ನಂಬಲಾಗಿದೆ.
2) ಕ್ರಿಸ್ಟಲ್ ಲೋಟಸ್
ಕ್ರಿಸ್ಟಲ್ ಲೋಟಸ್ ಅಥವಾ ಸ್ಫಟಿಕದ ಕಮಲವನ್ನು ವಾಸ್ತು ಶಾಸ್ತ್ರದಲ್ಲಿ ಶಾಂತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಮತ್ತು ಮನೆಯಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಸ್ಫಟಿಕದ ಕಮಲವನ್ನು ಲಿವಿಂಗ್ ರೂಮಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದೇ ರೀತಿ ಇದನ್ನು ಉಡುಗೊರೆಯಾಗಿ ನೀಡುವುದರಿಂದಲೂ ಆರ್ಥಿಕ ಸ್ಥಿತಿಗತಿಗಳು ಸುಧಾರಿಸುತ್ತವೆ ಎಂದು ನಂಬಲಾಗಿದೆ.
3) ವಾಸ್ತು ಯಂತ್ರ
ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ಯಂತ್ರವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ಈ ವಾಸ್ತು ಯಂತ್ರವು ಬಹಳ ಉಪಯುಕ್ತವಾಗಿದೆ. ಇದನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
4) ಜೋಡಿ ಆನೆಗಳು
ಆನೆಯನ್ನು ಸುಖ, ಸಂತೋಷ ಮತ್ತು ಸಂಪತ್ತುಗಳ ಪ್ರತೀಕ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಯಾರಿಗಾದರೂ ಜೋಡಿ ಆನೆಗಳನ್ನು ಉಡುಗೊರೆಯಾಗಿ ನೀಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಬೆಳ್ಳಿ, ಹಿತ್ತಾಳೆ ಅಥವಾ ಮರದಿಂದ ಮಾಡಿದ ಸುಂದರ ಜೋಡಿ ಆನೆಗಳನ್ನು ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ಬರಹ: ಅರ್ಚನಾ ವಿ ಭಟ್
