ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಸಂಜೆ ಹೊತ್ತು ಇಂಥ ಕೆಲಸ ಮಾಡಲೇ ಬೇಡಿ; ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ

Vastu Tips: ಸಂಜೆ ಹೊತ್ತು ಇಂಥ ಕೆಲಸ ಮಾಡಲೇ ಬೇಡಿ; ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ

ಕೆಲವೊಂದು ಕೆಲಸಗಳನ್ನು ಬೆಳಗ್ಗೆ ಮಾಡುವುದು ಒಳ್ಳೆಯದಲ್ಲ. ಇದೇ ವೇಳೆ ಇನ್ನೂ ಕೆಲವು ಕೆಲಸಗಳನ್ನು ಸಂಜೆ ವೇಳೆ ಮಾಡಿದರೆ ಅಶುಭ ಎಂದು ಹೇಳಲಾಗುತ್ತದೆ. ಹಾಗಿದ್ದರೆ‌, ವಾಸ್ತು ಪ್ರಕಾರ ಸಂಜೆ ಮಾಡಬಾರದ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ.

ಸಂಜೆ ಹೊತ್ತು ಇಂಥ ಕೆಲಸ ಮಾಡಲೇ ಬೇಡಿ; ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ
ಸಂಜೆ ಹೊತ್ತು ಇಂಥ ಕೆಲಸ ಮಾಡಲೇ ಬೇಡಿ; ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ

ಮನೆ ಕಟ್ಟಿಸುವುದರಿಂದ ಹಿಡಿದು ಮನೆಗೆ ಖರೀದಿಸಿದ ವಸ್ತುಗಳನ್ನು ಸೂಕ್ತ ಜಾಗಗಳಲ್ಲಿ ಇಡುವವರೆಗೆ ಎಲ್ಲವನ್ನು ಕಟ್ಟುನಿಟಾಗಿ ವಾಸ್ತು ಪ್ರಕಾರವೇ ಮಾಡುವವರಿದ್ದಾರೆ. ವಾಸ್ತು ಶಾಸ್ತ್ರದ ಮೇಲೆ ಕೆಲವೊಬ್ಬರಿಗೆ ಗಾಢ ನಂಬಿಕೆ ಇದೆ. ಪರಿಣಾಮಕಾರಿ ಫಲಿತಾಂಶ ಕೊಡುವ ಈ ವಾಸ್ತುವಿಜ್ಞಾನವನ್ನು ಅನುಸರಿಸಿ ನಿತ್ಯ ಜೀವನದಲ್ಲಿ ಖುಷಿಯಿಂದ ಇರಬೇಕು ಎನ್ನುವುದು ಇದರ ಉದ್ದೇಶ. ಮನೆಯಲ್ಲಿ ಎಲ್ಲವೂ ವಾಸ್ತು ಪ್ರಕಾರ ಇರಬೇಕೆಂದು ಬಯಸುವ ಜನರು, ಹೆಜ್ಜೆ ಹೆಜ್ಜೆಗೂ ಅದನ್ನು ಅನುಸರಿಸುತ್ತಾರೆ. ಮನೆಯೊಳಗೆ ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಹಾಗೂ ಯಾವೆಲ್ಲಾ ವಸ್ತುಗಳನ್ನು ಮನೆಯ ಒಳಗೆ ಇಡಬಾರದು ಎಂಬ ನಿಯಮಗಳನ್ನು ವಾಸ್ತುಶಾಸ್ತ್ರ ಹೇಳುತ್ತದೆ.

ವಾಸ್ತು ಪ್ರಕಾರವೇ ಮನೆಯಲ್ಲಿ ವಸ್ತುಗಳನ್ನು ಜೋಡಿಸಿದರೆ, ಸಂತೋಷದ ಜೊತೆಗೆ ಸಮೃದ್ಧಿಯೂ ವೃದ್ಧಿಸುತ್ತದೆ. ಇಂಥಾ ವಿಚಾರದಲ್ಲಿ ಸೂಕ್ಷ್ಮವಾಗಿದ್ದರೆ ಮನೆಯಲ್ಲಿ ಲಕ್ಷ್ಮೀ ನೆಲೆಯೂರುತ್ತಾಳೆ. ಇದರೊಂದಿಗೆ ಆರೋಗ್ಯಭಾಗ್ಯ ನಿಮ್ಮದಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಕೆಲವೊಂದು ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಿದರೆ ದುರಾದೃಷ್ಟ ಎದುರಿಸಬೇಕಾಗುತ್ತದೆ. ಅದೇ ರೀತಿ ಸಂಜೆ ವೇಳೆ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂಬ ನಂಬಿಕೆ ಇದೆ. ಒಂದು ವೇಳೆ ಮಾಡಿದರೆ, ಅಶುಭವಾಗುತ್ತದೆ ಎಂದು ಹೇಳಲಾಗಿದೆ.

ಹೆಣ್ಣನ್ನು ನಿಂದಿಸದಿರಿ

ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಸ್ತ್ರೀಯನ್ನು ನಿಂದಿಸಬಾರದು. ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ಕತ್ತಲಾಗುತ್ತದೆ. ಅದು ದೀಪ ಹಚ್ಚುವ ಶುಭಸಮಯ. ಮನೆಯನ್ನು ಬೆಳಗುವ ಶುಭ ಸಮಯ ಸಂಜೆ. ಹೀಗಾಗಿ ಇಂಥಾ ಸಮಯದಲ್ಲಿ ಹೆಣ್ಣಿನ ಮನಸ್ಸು ಪ್ರಸನ್ನವಾಗಿರಬೇಕು. ಮನೆಯಲ್ಲಿ ಮಾತ್ರವಲ್ಲದೆ ಕಚೇರಿ ಸೇರಿದಂತೆ ಯಾವುದೇ ಸ್ಥಳದಲ್ಲಿ ಸಂಜೆಯ ವೇಳೆ ಮಹಿಳೆಯರಿಗೆ ಕಿರುಕುಳ, ಬೈಗುಳ ಮಾಡುವುದು ಒಳ್ಳೆಯದಲ್ಲ. ಒಂದು ವೇಳೆ ಮಾಡಿದರೆ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ.

ಕಸ ಗುಡಿಸಬೇಡಿ

ಕೆಲವೊಂದು ಮನೆಯಲ್ಲಿ ಸಂಜೆ ಸಮಯದಲ್ಲಿ ಪೊರಕೆ ಹಿಡಿದು ಗುಡಿಸಿ ಸ್ವಚ್ಛಗೊಳಿಸುವ ಪರಿಪಾಠವಿದೆ. ಸಂಜೆ ಮನೆಯನ್ನು ಸ್ವಚ್ಛಗೊಳಿಸಲು ಪೊರಕೆ ಬಳಸುವುದು ಒಳ್ಳೆಯದಲ್ಲ. ಮನೆ ಸ್ವಚ್ಛಗೊಳಿಸಲು ಇದು ಸರಿಯಾದ ಸಮಯ ಅಲ್ಲ ಎಂದು ಹೇಳಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಪೊರಕೆ ಹಿಡಿದರೆ, ಮನೆಯಲ್ಲಿ ನಡೆಯಬೇಕಾದ ಶುಭಕಾರ್ಯಗಳು ತಡವಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಅಲ್ಲದೆ ಮನೆಗೆ ಬರುವ ಲಕ್ಷ್ಮೀದೇವಿ ಕೂಡಾ ಹೊಸ್ತಿಲಿನ ಒಳಗೆ ಬರುವುದಿಲ್ಲ ಎಂಬ ನಂಬಿಕೆ ಇದೆ.

ಸಂಜೆ ಮಲಗುವ ಅಭ್ಯಾಸ ಒಳ್ಳೆಯದಲ್ಲ

ಕೆಲವೊಬ್ಬರಿಗೆ ಸಾಯಂಕಾಲ ಮಲಗುವ ಅಭ್ಯಾಸವಿರುತ್ತದೆ. ಮನೆಯಲ್ಲಿ ಹಿರಿಯರಿದ್ದರೆ, ಸಂಜೆ ಮಲಗಬಾರದು ಎಂದು ಹೇಳುವುದನ್ನೂ ನಾವು ಕೇಳಿರುತ್ತೇವೆ. ಇದಕ್ಕೆ ಹಲವು ಕಾರಣಗಳಿವೆ. ಅನಾರೋಗ್ಯದಿಂದಾಗಿ ಕೆಲವರು ಸಂಜೆ ಮಲಗುತ್ತಾರೆ. ಆದರೂ ಸಂಜೆ ಮಲಗುವುದನ್ನು ತಪ್ಪಿಸಬೇಕು. ಏಕೆಂದರೆ, ಸಂಜೆ ನಿದ್ದೆ ಹೋದರೆ ದರಿದ್ರ ಎದುರಾಗುತ್ತದೆ ಎಂಬ ನಂಬಿಕೆ. ಇದಕ್ಕೆ ಕಾರಣವೂ ಇದೆ. ಇದು ಲಕ್ಷ್ಮೀ ಪ್ರಸನ್ನಳಾಗುವ ಸಮಯವಾಗಿರುವುದರಿಂದ, ದೇವಿ ಒಲಿಯುವುದಿಲ್ಲ ಎನ್ನಲಾಗುತ್ತದೆ.

ತುಳಸಿ ಗಿಡಿ ಮುಟ್ಟಬಾರದು, ನೀರು ಹಾಕಬಾರದು

ಮಧ್ಯಾಹ್ನದ ಬಳಿಕ ತುಳಸಿ ಗಿಡ ಮುಟ್ಟಬಾರದು ಅಥವಾ ತುಳಸಿ ದಳ ಚಿವುಟಬಾರದು ಎಂದು ಹಿರಿಯರು ಹೇಳಿದ್ದನ್ನು ಕೇಳಿರುತ್ತೇವೆ. ಇದೇ ರೀತಿ ಸಂಜೆಯ ಸಮಯದಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು. ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುತ್ತಾಳೆ. ಆ ನಂತರ ಎಷ್ಟೇ ಪ್ರಯತ್ನಿಸಿದರೂ ಲಕ್ಷ್ಮೀ ದೇವಿ ಒಲಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.