ಮೆಟ್ಟಿಲುಗಳ ಕೆಳಗೆ ಸ್ನಾನಗೃಹ ನಿರ್ಮಿಸುವುದು ಶುಭವೋ ಅಶುಭವೋ: ವಾಸ್ತು ಹೇಳುವುದನ್ನೊಮ್ಮೆ ಕೇಳಿ
ವಾಸ್ತು ಪ್ರಕಾರ ಮನೆ ಕಟ್ಟುವಾಗ ಮನೆಯ ಎಲ್ಲಾ ಕೊಠಡಿಗಳು ವಾಸ್ತು ಪ್ರಕಾರವೇ ಇವೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಅದರಲ್ಲಿ ಸ್ನಾನಗೃಹವನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಬೇಕು ಎಂಬುದನ್ನು ಕೂಡಾ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರೀತಿಯಿಂದ ಕಟ್ಟಿಸಿದ ಮನೆ ಕುಟುಂಬದ ಎಲ್ಲ ಸದಸ್ಯರಿಗೂ ಸಂತೋಷವನ್ನುಂಟು ಮಾಡುತ್ತಿರಬೇಕು. ಅಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳಿಗೆ ಜಾಗವಿರಕೂಡದು. ಧನಾತ್ಮಕ ಶಕ್ತಿ ಮನೆಯಲ್ಲಿ ತುಂಬಿರುವಂತಿರಬೇಕು. ಆದ್ದರಿಂದ ಸಾಮಾನ್ಯವಾಗಿ ಎಲ್ಲರೂ ವಾಸ್ತು ಪ್ರಕಾರವೇ ಮನೆ ಕಟ್ಟಲು ಮುಂದಾಗುತ್ತಾರೆ. ವಾಸ್ತು ಶಾಸ್ತ್ರವನ್ನು ಸರಿಯಾಗಿ ಪಾಲಿಸುವುದರಿಂದ ಸದ್ಯದ ಸಮಸ್ಯೆಗಳು ಸಹ ದೂರವಾಗುತ್ತವೆ. ಮನೆ ಕಟ್ಟುವಾಗ ಮನೆಯ ಪ್ರತಿ ಕೊಠಡಿ, ಮುಂಭಾಗ, ಕಿಟಕಿ ಎಲ್ಲವನ್ನು ವಾಸ್ತು ಪ್ರಕಾರವೇ ನಿರ್ಮಿಸಲಾಗುತ್ತದೆ. ಭಾರವಾದ ವಸ್ತುವನ್ನು ಯಾವ ದಿಕ್ಕಿಗೆ ಇಡಬೇಕು, ಹಾಸಿಗೆ ಯಾವ ದಿಕ್ಕಿಗೆ ಇರಬೇಕು, ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು, ಹೀಗೆ ಪ್ರತಿಯೊಂದನ್ನು ಪರಿಗಣಿಸಲಾಗುತ್ತದೆ. ಆದರೂ ಕೆಲವು ತಪ್ಪುಗಳನ್ನು ತಿಳಿದೋ ಅಥವಾ ತಿಳಿಯದೆಯೋ ಮಾಡಲಾಗುತ್ತದೆ. ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ಅವುಗಳನ್ನು ಸರಿಪಡಿಸಿದರೆ ತೊಂದರೆಯಿಂದ ಹೊರಬರಬಹುದು. ಬಹಳಷ್ಟು ಮನೆಗಳಲ್ಲಿ ಎಲ್ಲವನ್ನು ವಾಸ್ತು ಪ್ರಕಾರ ನಿರ್ಮಿಸಿ, ಸ್ನಾನಗೃಹವನ್ನು ಮಾತ್ರ ತಮ್ಮ ಮನಸ್ಸಿಗೆ ಬಂದಂತೆಯೋ ಅಥವಾ ಜಾಗವಿದ್ದಲ್ಲೋ ನಿರ್ಮಿಸಲಾಗುತ್ತದೆ. ಅದರಲ್ಲಿ ಮೆಟ್ಟಿಲುಗಳ ಕೆಳಗೆ ಸ್ನಾನಗೃಹ ನಿರ್ಮಿಸುವುದು ಒಂದು. ಹಾಗೆ ಮೆಟ್ಟಿಲುಗಳ ಕೆಳಗೆ ಸ್ನಾನಗೃಹವನ್ನು ನಿರ್ಮಿಸುವುದು ಒಳ್ಳೆಯದೋ ಅಥವಾ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅದಕ್ಕೆ ವಾಸ್ತು ಏನು ಹೇಳುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಮೆಟ್ಟಿಲುಗಳ ಕೆಳಗೆ ಸ್ನಾನಗೃಹ
ವಾಸ್ತು ಪ್ರಕಾರ ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿದ್ದರೆ ಒಳ್ಳೆಯದೇ? ಅನೇಕ ಮನೆಗಳಲ್ಲಿ ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿರುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿರುವುದು ಒಳ್ಳೆಯದೋ ಅಲ್ಲವೋ ಎಂಬ ವಿಷಯಕ್ಕೆ ಬಂದಾಗ, ಮೆಟ್ಟಿಲುಗಳ ಕೆಳಗೆ ಸ್ನಾನಗೃಹವನ್ನು ನಿರ್ಮಿಸುವುದು ತೂಕ ಮತ್ತು ಒತ್ತಡವನ್ನು ಪ್ರತಿನಿಧಿಸುತ್ತದೆ. ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿರುವುದು ಎಂದರೆ ನಕಾರಾತ್ಮಕ ಶಕ್ತಿಯನ್ನು ಎದುರಿಸಬೇಕಾಗುತ್ತದೆ. ಇದು ಮನೆಯವರ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯವೂ ಹದಗೆಡುವ ಸಾಧ್ಯತೆಯಿದೆ. ಅದೇ ರೀತಿ, ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿದ್ದರೆ, ಆರ್ಥಿಕ ಸ್ಥಿರತೆ ಮತ್ತು ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ. ಹಣವನ್ನು ಪಡೆಯುವಲ್ಲಿ ಅಡೆತಡೆಗಳು ಉಂಟಾಗುತ್ತವೆ. ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿದ್ದರೆ, ಆರೋಗ್ಯ ಸಮಸ್ಯೆಗಳೂ ಇರಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ, ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿದ್ದರೆ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಕುಟುಂಬ ಸದಸ್ಯರ ನಡುವೆ ತಪ್ಪು ತಿಳುವಳಿಕೆ ಮತ್ತು ಭಿನ್ನಾಭಿಪ್ರಾಯಗಳ ಸಾಧ್ಯತೆಯೂ ಇರುತ್ತದೆ. ಹಾಗಾದರೆ ಈ ಸಮಸ್ಯೆಗೆ ಸಮಾಧಾನವೇನು?
ಮೆಟ್ಟಿಲುಗಳ ಕೆಳಗೆ ಸ್ನಾನಗೃಹ ಸಮಸ್ಯೆಗೆ ಪರಿಹಾರ
ಮೆಟ್ಟಿಲುಗಳ ಕೆಳಗೆ ಇರುವ ಸ್ನಾನಗೃಹದಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ನೀವು ಈ ಪರಿಹಾರಗಳನ್ನು ಪ್ರಯತ್ನಿಸಬಹುದು.
- ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿರುವುದರಿಂದ ಅದು ಕತ್ತಲೆಯಿಂದ ಕೂಡಿರುತ್ತದೆ. ಗಾಳಿಯೂ ಅಷ್ಟಾಗಿ ಓಡಾಡುವುದಿಲ್ಲ. ಅದರಿಂದ ಅಲ್ಲಿ ಸಕಾರಾತ್ಮಕ ಶಕ್ತಿಯ ಕೊರತೆ ಕಾಣಿಸಬಹುದು. ಆಗ ಅದನ್ನು ಕಾಲಕಾಲಕ್ಕೆ ಸ್ವಚ್ಛವಾಗಿಡಬೇಕು ಹಾಗೂ ಸ್ನಾನಗೃದಲ್ಲಿ ಶುದ್ಧ ಗಾಳಿಯಾಡುವಂತೆ ನೋಡಿಕೊಳ್ಳಬೇಕು.
- ಮೆಟ್ಟಿಲುಗಳ ಕೆಳಗೆ ಸ್ನಾನಗೃಹವಿದ್ದರೆ, ಅದಕ್ಕೆ ತಿಳಿ ಬಣ್ಣಗಳ ಪೇಂಟ್ ಮಾಡಿಸುವುದು ಉತ್ತಮ. ಅದು ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ಸ್ನಾನಗೃಹದ ಕಿಟಕಿಯ ಬಳಿ ಅಥವಾ ಸ್ನಾನಗೃಹದ ಹೊರಗೆ ಅಶೋಕ ಗಿಡವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯವಾಗುತ್ತದೆ. ಈ ಸಣ್ಣ ಪರಿಹಾರವು ನಿಮ್ಮ ಸಮಸ್ಯೆಯನ್ನು ದೂರಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)