ಮುಸ್ಸಂಜೆಯ ಸಮಯ ಈ ಕೆಲಸಗಳನ್ನು ಮಾಡ್ತಾ ಇದ್ರೆ, ನಿಮ್ಮ ಕಷ್ಟಗಳಿಗೆ ನೀವೇ ಆಹ್ವಾನ ನೀಡಿದಂತೆ; ಇಂದೇ ಬದಲಿಸಿಕೊಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ ಮುಸ್ಸಂಜೆಯ ಸಮಯವನ್ನು ಅತ್ಯಂತ ಮಂಗಳಕರ ಸಮಯ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯೊಳಗೆ ಪ್ರವೇಶ ಮಾಡುತ್ತಾಳೆ. ಆದರೆ ಮುಸ್ಸಂಜೆಯ ವೇಳೆಯಲ್ಲ ಮಾಡುವ ಕೆಲವು ಕೆಲಸಗಳು ಜೀವನದಲ್ಲಿ ಕಷ್ಟಗಳನ್ನು ಎದುರಿಸುವಂತೆ ಮಾಡುತ್ತದೆ. ಆ ಕೆಲಸಗಳು ಯಾವುವು ಇಲ್ಲಿದೆ ಓದಿ.

ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ, ಮುಸ್ಸಂಜೆಯ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಮುಸ್ಸಂಜೆಯ ಸಮಯವು ಬಹಳ ಮಂಗಳಕರವಾದ ಸಮಯವಾಗಿದೆ. ಆ ಸಮಯದಲ್ಲಿ ದೇವತೆಗಳು ತಮ್ಮ ಸಂಚಾರವನ್ನು ಪ್ರಾರಂಭಿಸುತ್ತವೆ. ಲಕ್ಷ್ಮಿ ದೇವಿ ಮನೆಯೊಳಗೆ ಪ್ರವೇಶಿಸುವ ಸಮಯವೆಂದು ಹೇಳಲಾಗುತ್ತದೆ. ಆ ಸಮಯದಲ್ಲಿ ದೇವರ ಧ್ಯಾನ, ಪೂಜೆ, ಭಜನೆ, ದೀಪ – ಧೂಪಗಳನ್ನು ಬೆಳಗಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಮುಸ್ಸಂಜೆಯ ಸಮಯದಲ್ಲಿ ಮನೆಯ ಮುಂದಿನ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗಿ ಕೃಪೆಯನ್ನು ತೋರುತ್ತಾಳೆ ಎಂದು ನಂಬಲಾಗಿದೆ. ಮುಸ್ಸಂಜೆಯ ಸಮಯವನ್ನು ಬಹಳ ಸೂಕ್ಷ್ಮ ಸಮಯ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಹೇಗೆ ಒಳ್ಳೆಯ ಪ್ರಯೋಜನವಾಗುತ್ತದೆಯೊ ಅದೇ ರೀತಿ ಕೆಲವು ಕೆಲಸಗಳನ್ನು ಮಾಡುವುದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮುಸ್ಸಂಜೆಯ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಏಕೆ ಮಾಡಬಾರದು ಎಂದು ತಿಳಿಯೋಣ.
ಮುಸ್ಸಂಜೆ ಅತ್ಯಂತ ಮಂಗಳಕರ ಸಮಯ
ಮುಸ್ಸಂಜೆಯ ಸಮಯ ಎಂದರೆ ಸೂರ್ಯ ಮುಳುಗವ ಸಮಯ. ಅದಕ್ಕೆ ಸುಮಾರು 45 ನಿಮಿಷಗಳ ಮೊದಲು ಹಾಗೂ ನಂತರದ ಸಮಯವನ್ನು ಪ್ರದೋಷ ಕಾಲ ಎಂದೂ ಕರೆಯುತ್ತಾರೆ. ಇದನ್ನು ಅತ್ಯಂತ ಶುಭ ಸಮಯ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅನೇಕ ವೃತಾಚರಣೆಗಳನ್ನು ಮಾಡುತ್ತಾರೆ. ಈ ಸಮಯವನ್ನು ಸಂಪತ್ತಿನ ಅಧಿದೇವತೆ ಕುಬೇರನ ಸಮಯ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಕುಟುಂಬದವರೊಂದಿಗೆ ಪೂಜೆ, ಧ್ಯಾನ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಮುಸ್ಸಂಜೆಯ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ
ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ: ಸೂರ್ಯಾಸ್ತದ ಸಮಯದಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹಾಗೆ ಮಾಡುವದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಕಷ್ಟವನ್ನು ತರಬಹುದಾಗಿದೆ. ಆರೋಗ್ಯ ಸಮಸ್ಯೆಗಳು, ಆರ್ಥಿಕ ನಷ್ಟ ಮತ್ತು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು.
ಸೂರ್ಯಾಸ್ತದ ಸಮಯದಲ್ಲಿ ಈ ಕೆಲಸ ಮಾಡಲೇಬೇಡಿ: ಸೂರ್ಯಾಸ್ತದ ಸಮಯದಲ್ಲಿ ಮನೆಯನ್ನು ಗುಡಿಸುವುದು ಅಥವಾ ಒರೆಸುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಮನೆಯೊಳೆ ಪ್ರವೇಶಿಸುತ್ತಾಳೆ. ಆದ್ದರಿಂದ ಆ ಸಮಯದಲ್ಲಿ ನಾವು ಮನೆಯನ್ನು ಸ್ವಚ್ಛಗೊಳಿಸುವುದರಿಂದ ದೇವಿಯ ಆಶೀರ್ವಾದ ನಿಲ್ಲಬಹುದು. ಹಣದ ನಷ್ಟ ಅಥವಾ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಮುಸ್ಸಂಜೆಯ ಸಮಯದಲ್ಲಿ ಗುಡಿಸುವ ಮತ್ತು ಒರೆಸುವ ಕೆಲಸ ಮಾಡಬಾರದು.
ಹಣಕಾಸಿನ ವ್ಯವಹಾರ ಮಾಡಬೇಡಿ: ವಾಸ್ತು ಶಾಸ್ತ್ರದ ಪ್ರಕಾರ ಮುಸ್ಸಂಜೆಯ ಸಮಯದಲ್ಲಿ ಹಣವನ್ನು ತೆಗೆದುಕೊಳ್ಳುವುದು ಮತ್ತು ಇತರರಿಗೆ ಕೊಡುವಂತಹ ಕೆಲಸವನ್ನು ಮಾಡಬಾರದು. ಏಕೆಂದರೆ ಈ ಸಮಯವನ್ನು ಕುಬೇರನ ಸಮಯ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಹಣವನ್ನು ಸಾಲವಾಗಿ ಪಡೆದುಕೊಂಡರೆ ಅಥವಾ ನೀಡಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವುದಿಲ್ಲ. ಆದ್ದರಿಂದ ಹಣದ ವಹಿವಾಟುಗಳನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಮಾಡುವುದು ಉತ್ತಮ.
ಮುಸ್ಸಂಜೆಯಲ್ಲಿ ಮಲಗಬೇಡಿ: ಮುಸ್ಸಂಜೆಯ ಸಮಯದಲ್ಲಿ ನಿದ್ರಿಸುವುದು ಒಳ್ಳೆಯದಲ್ಲ. ಆ ಸಮಯವು ದೇವರ ಧ್ಯಾನ ಮಾಡುವ ಸಮಯವಾಗಿದೆ. ಆ ಮಂಗಳಕರ ಸಮಯದಲ್ಲಿ ನಿದ್ರಿಸುವುದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಮುಸ್ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯೊಳಗೆ ಪ್ರವೇಶ ಮಾಡುತ್ತಾಳೆ. ಆ ಸಮಯದಲ್ಲಿ ನಿದ್ದೆ ಮಾಡಿದ್ದರೆ ಮನೆಗೆ ಬಂದ ಲಕ್ಷ್ಮಿ ದೇವಿಯು ಹೊರಟು ಹೋಗುತ್ತಾಳೆ. ಇದು ಆರ್ಥಿಕ ತೊಂದರೆಗಳಂತಹ ಸಮಸ್ಯೆಗಳನ್ನು ಉಂಟುಮಾಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)